SANDALWOOD: 1995ರಲ್ಲಿ ಶಿವರಾಜ್ ಕುಮಾರ್ ನಟನೆಯ ಓಂ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಇದೊಂದು ಎವರ್ಗ್ರೀನ್ ಮೂವಿ. ಉಪೇಂದ್ರ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾ ಸಾಕಷ್ಟು ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಶಿವಣ್ಣ – ಉಪ್ಪಿ ಕಾಂಬಿನೇಷನ್ ಸಿನಿಪ್ರಿಯರ ಮನಗದ್ದಿತ್ತು. ಆಕ್ಷನ್ ಸೀಕ್ವೇನ್ಸ್ ಜೊತೆ ಭಾವನೆಗಳನ್ನು ಹೊತ್ತು ಸಾಗುವ ಓಂ ಸಿನಿಮಾ ಈಗಲೂ ಬಹುಬೇಡಿಕೆಯ ಚಿತ್ರ. ಈ ಸಿನಿಮಾ ರಿಲೀಸ್ ಆದ ಬಳಿಕ ಸ್ಯಾಂಡಲ್ವುಡ್ನಲ್ಲಿ ಹತ್ತು ಹಲವು ದಾಖಲೆಗಳನ್ನು ಸೃಷ್ಟಿ ಮಾಡಿತ್ತು. ಸಾಕಷ್ಟು ದಿನಗಳ ಕಾಲ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು.
ಓಂ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ವಿಭಿನ್ನ ಪಾತ್ರ ಎಲ್ಲೆಲ್ಲೂ ಮೋಡಿ ಮಾಡಿತ್ತು. ಕನ್ನಡದಲ್ಲಿ ಓಂ ಸಿನಿಮಾದ ಮೂಲಕವೇ ಗ್ಯಾಂಗ್ ಸ್ಟಾರ್ ಸಿನಿಮಾಗಳ ಎರಾ ಶುರುವಾಗಿದ್ದು ವಿಶೇಷ. 1995 ಮೇ 19 ರಂದು ಭಾರೀ ನಿರೀಕ್ಷೆಗಳೊಂದಿಗೆ ಓಂ ಚಿತ್ರ ರಿಲೀಸ್ ಆಗಿತ್ತು. ಇದೀಗ ಓಂ ಸಿನಿಮಾ ಬಿಡುಗಡೆಯಾಗಿ 28 ವರ್ಷಗಳು ಕಳೆದಿವೆ. ಭೂಗತ ಲೋಕದ ಕಥೆ ಇಟ್ಟುಕೊಂಡು ಮಾಡಲಾದ ಓಂ ಸಿನಿಮಾ ಮರು ಬಿಡುಗಡೆಯಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಸೃಷ್ಟಿಸಿದೆ. 28 ವರ್ಷಗಳಲ್ಲಿ ಕನ್ನಡದ ಈ ಕಲ್ಟ್ ಸಿನಿಮಾ ತನ್ನ ವರ್ಚಸ್ಸನ್ನು ಮಾತ್ರ ಕಳೆದುಕೊಂಡಿಲ್ಲ. ಇದು ವರೆಗೂ ಸುಮಾರು 550 ಬಾರಿ ಮರು ಬಿಡುಗಡೆ ಆಗಿದ್ದು ದಾಖಲೆ.
ಓಂ ಸಿನಿಮಾ ಬೆಂಗಳೂರಿನ ಯಾವುದಾದರೂ ಒಂದು ಥಿಯೇಟರ್ನಲ್ಲಿ ರಿ-ರಿಲೀಸ್ ಆಗ್ತಾನೇ ಇರುತ್ತದೆ. ಅದೇ ರೀತಿ ಈ ಚಿತ್ರ ಇದೀಗ ಮತ್ತೊಮ್ಮೆ ಮರು ಬಿಡುಗಡೆಯಾಗಲಿದೆ. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಸತ್ಯ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ, ನಟಿ ಪ್ರೇಮಾ ಮಧು ಪಾತ್ರದಲ್ಲಿ ಜನರನ್ನು ಸೆಳೆದಿದ್ದಾರೆ. ಈ ಜೋಡಿಗೆ ಅದ್ಭುತ ಹಾಡುಗಳೂ ಸಾಥ್ ನೀಡಿವೆ. ಹಂಸಲೇಖ ಸಂಗೀತ ಸಂಯೋಜನೆಯೂ ಈ ಸಿನಿಮಾ ಪ್ಲಸ್ ಪಾಯಿಂಟ್ ಆಗಿದೆ.
ಸಿನಿ ದುನಿಯಾದಲ್ಲಿ ಹೊಸ ದಾಖಲೆಯನ್ನೇ ಬರೆದ ಓಂ ಸಿನಿಮಾ ಇಂದು ರಿ-ರಿಲೀಸ್ ಆಗುತ್ತಿದೆ. ಬೆಂಗಳೂರಿನ ಕಪಾಲಿ ಥಿಯೇಟರ್ ಒಂದರಲ್ಲೇ ಈಗಾಗಲೇ 30 ಬಾರಿ ಓಂ ರಿ-ರಿಲೀಸ್ ಆಗಿದೆ. ಈ ಚಿತ್ರವನ್ನ ಅಂದು ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದರು. ರಿಲೀಸ್ ಆದ ಬಳಿಕ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಈ ಬಾರಿ ಓಂ ಸಿನಿಮಾ ವೀರೇಶ್ ಸಿನಿಮಾಸ್ನಲ್ಲಿ ಮರು ಬಿಡುಗಡೆಯಾಗುತ್ತಿದೆ. ಮಾರ್ಚ್ 23 ರಂದು ಅಂದರೆ ಇಂದು ಓಂ ಸಿನಿಮಾ ಮೂರು ಶೋ ಪ್ರದರ್ಶನ ಕಾಣಲಿದೆ.