ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿ ಅನೇಕ ತಿಂಗಳುಗಳೇ ಆಗಿತ್ತು. ಇದೀಗ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕ ಬಹಿರಂಗವಾಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನದ ಉದ್ಘಾಟನೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಈ ವಿಚಾರ ಬಹಿರಂಗ ಪಡಿಸಿದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಫಲ ಪುಷ್ಪಪ್ರದರ್ಶನ ಪ್ರಾರಂಭವಾಗಿದೆ. ಸಸ್ಯಕಾಶಿಯಲ್ಲಿ ಹೂಗಳ ಸುಂದರ ಲೋಕ ತಲೆಯೆತ್ತಲಿದೆ. ಈ ಬಾರಿಯ ವಿಶೇಷ ಎಂದರೆ ಡಾ.ಪುನೀತ್ ರಾಜ್ ಕುಮಾರ್ ಹಾಗೂ ಡಾ. ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ.
ಕಬ್ಬನ್ ಪಾರ್ಕ್ ಹಾಗೂ ಊಟಿ ಸಸ್ಯತೋಟ ಸೇರಿ ದೇಶ-ವಿದೇಶದಿಂದ ಬಂದ ಅಲಂಕಾರಿಕ ಹೂಗಳು ರಾರಾಜಿಸುತ್ತಿವೆ. ಈ ಬಾರಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಫ್ಲವರ್ ಶೋಗೆ ಆಗಮಿಸುವ ನಿರೀಕ್ಷೆ ಇದೆ. ಇಂದು (ಆಗಸ್ಟ್ 5) ನಡೆದ ಉದ್ಘಾಟನ ಸಮಾರಂಭದಲ್ಲಿ ರಾಜ್ ಕುಟುಂಬದ ಸದಸ್ಯರು ಹಾಗೂ ಶಕ್ತಿಧಾಮದ ಮಕ್ಕಳೂ ಸಹ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಶಾಸಕ ಉದಯ್ ಬಿ. ಗರುಡಾಚಾರ್,ಡಾ. ಶಿವರಾಜ್‍ಕುಮಾರ್, ಡಾ. ರಾಘವೇಂದ್ರ ರಾಜ್‍ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು.
‘ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ವರ್ಷ ಡಾ ರಾಜ್ ಮತ್ತು ಪುನೀತ್ ಸ್ಮರಣಾರ್ಥವಾಗಿ ಮಾಡುತ್ತಿದೆ. ಈ ಬಾರಿಯ ಪ್ಲವರ್ ಶೋ ಉತ್ತಮವಾಗಿದೆ. ಜನ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬರಬೇಕು’ ಎಂದರು.