ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ವಿವಾದಗಳು ಯಾಕೋ ಬಿಡುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ವಿಷಯಕ್ಕೆ ದರ್ಶನ್ ಕಾಂಟ್ರವರ್ಸಿಯಲ್ಲಿ ಇದ್ದೇ ಇರುತ್ತಾರೆ. ಕೆಲ ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣ ಅರೆಸ್ಟ್ ಆದ ಬೆನ್ನಲ್ಲೇ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೊವೊಂದು ವೈರಲ್ ಆಗಿತ್ತು ಹಾಗೂ ದರ್ಶನ್ ಅವರನ್ನು ಯಾವಾಗ ಬಂಧಿಸುತ್ತೀರ ಎಂಬ ಪ್ರಶ್ನೆಗಳೂ ಸಹ ಎದ್ದಿದ್ದವು.
ಹೀಗೆ ಈ ವಿವಾದದಲ್ಲಿ ದರ್ಶನ್ ಅವರ ಹೆಸರು ತಳುಕಿ ಹಾಕಿಕೊಂಡದ್ದು ಮರೆಯಾಗುವ ಮುನ್ನವೇ ದರ್ಶನ್ ಅವರ ಹೆಸರು ಮತ್ತೊಂದು ವಿವಾದದಲ್ಲಿ ಕೇಳಿ ಬರುತ್ತಿದೆ. ಹೌದು, ರಾಜ್ಯೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ದರ್ಶನ್ ಬೆಳ್ಳಿ ಲಾಂಗ್ ಹಿಡಿದು ಪ್ರದರ್ಶಿಸಿದ ಕಾರಣ ಅವರನ್ನು ಬಂಧಿಸಲಾಗುತ್ತದೆ ಎನ್ನಲಾಗುತ್ತಿದೆ.
ಬೆಂಗಳೂರಿನ ಜಯನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ವೇದಿಕೆ ಮೇಲೆ ದರ್ಶನ್ ಅವರನ್ನು ಸನ್ಮಾನಿಸಿದ ಅಭಿಮಾನಿಗಳು ಬೆಳ್ಳಿಯ ಕಿರೀಟ ಹಾಗೂ ಬೆಳ್ಳಿ ಮಚ್ಚನ್ನು ಉಡುಗೊರೆಯನ್ನಾಗಿ ನೀಡಿದರು. ಅಭಿಮಾನಿಗಳು ನೀಡಿದ ಲಾಂಗ್ ಅನ್ನು ದರ್ಶನ್ ಎತ್ತಿ ಹಿಡಿದು ಪೋಸ್ ನೀಡಿದರು.
ಇನ್ನು ದರ್ಶನ್ ಲಾಂಗ್ ಹಿಡಿದ ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ದರ್ಶನ್ ಅರೆಸ್ಟ್ ಏನಾದರೂ ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಮಾತನಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು “ಅದು ನಿಜವಾದಾ ಮಚ್ಚಾ ಅಥವಾ ನಕಲಿನ ಎಂಬುದನ್ನು ಪರಿಶೀಲಿಸುತ್ತೇವೆ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ದರ್ಶನ್ ತಪ್ಪು ಮಾಡಿದ್ರೆ ಖಂಡಿತವಾಗಿ ಶಿಕ್ಷೆ ಆಗುತ್ತೆ ಎಂದು ಬಿ ದಯಾನಂದ್ ಪರೋಕ್ಷವಾಗಿ ಹೇಳಿದ್ದಾರೆ.