ಬೆಂಗಳೂರು: ಹೃದಯಾಘಾತದಿಂದಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್ ನಟ ನಂದಮೂರಿ ತಾರಕ ರತ್ನ(39) ಅವರು ಕೊನೆಯುಸಿರೆಳೆದಿದ್ದಾರೆ.
ತೆಲುಗಿನ ಖ್ಯಾತ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನ ಅವರಿಗೆ ಜ.29ರಂದು ಪಾದಯಾತ್ರೆ ವೇಳೆ ತೀವ್ರ ಹೃದಯಾಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಯಶಸ್ವಿಯಾಗಿ ಆಂಜಿಯೋಗ್ರಾಮ್ ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಆದರೂ ಕಳೆದ 23 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಜೊತೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದಾರೆ.
ತಾರಕರತ್ನ ನಿಧನದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಹೈದರಾಬಾದ್ ಆಸ್ಪತ್ರೆಗೆ ನಟ ತಾರಕ ರತ್ನ ಶಿಫ್ಟ್ ಮಾಡಿದ್ದಾರೆ.