ಮೈಸೂರು: ಅರಮನೆ ಆವರಣದಲ್ಲಿ ಅರಮನೆ ಮಂಡಳಿ ವತಿಯಿಂದ ಆಯೋಜಿಸಿರುವ ಯುಗಾದಿ ಸಂಗೀತೋತ್ಸವದಲ್ಲಿ ಶುಕ್ರವಾರ ಗಾಯಕ ವಾಸುಕಿ ವೈಭವ್ ಅವರು ಸಹೃದಯರನ್ನು ಸಂಗೀತದ ಅಲೆಯಲ್ಲಿ ತೇಲಿಸಿದರು.
ಗಾಯನದ ಮೋಡಿಗೆ ಯುವ ಸಮೂಹ ಹುಚ್ಚೆದ್ದು ಕುಣಿದರೆ, ಹಿರಿಯರು ಮಾಧುರ್ಯ ಗೀತೆಗಳಿಗೆ ಮನಸೋತರು.
ಸಂಗೀತೋತ್ಸವದ ಕಡೇ ದಿನವಾದ ಶುಕ್ರವಾರ ವಾಸುಕಿ ವೈವಿಧ್ಯದ ಗಾನ ಲಹರಿ ಹರಿಸಿದರು. ಮಾತುಗಳಲ್ಲೂ ಮೋಡಿ ಮಾಡಿದ್ದು ವಿಶೇಷ!
‘ಮೈಸೂರು ಎಂದರೆ ಸಾಂಸ್ಕೃತಿಕ ನಗರಿ. ಇಲ್ಲಿ ರಂಗಾಯಣ ಮತ್ತು ನಮ್ಮ ಗುರುಗಳಾದ ಬಿ.ವಿ.ಕಾರಂತರು ನೆನೆಪಾಗುತ್ತಾರೆ’ ಎನ್ನುತ್ತಲೇ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ‘ಹಯವದನ’ ನಾಟಕದ ಬಿ.ವಿ.ಕಾರಂತ ಸಂಗೀತ ನೀಡಿರುವ ‘ಗಜವದನ ಹೇರಂಭ’ ರಂಗಗೀತೆ ಹಾಡುವ ಮೂಲಕ ಎಲ್ಲರನ್ನು ಸೆಳೆದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ‘ಅರರೇ ಅವಳ ನಗೆಯಾ’… ಎಂದು ಹಾಡಲು ಆರಂಭಿಸುತ್ತಿದ್ದಂತೆ ಯುವ ಸಮೂಹ ಶಿಳ್ಳೆ, ಚಪ್ಪಾಳೆಗಳ ಮಳೆ ಸುರಿಸಿತು. ನಂತರ ಶಂಕರ್ ನಾಗ್ ನಟಿಸಿರುವ ಎಸ್.ಪಿ.ಸಾಂಗ್ಲಿಯಾನ ಚಿತ್ರದ ‘ಗೀತಾಂಜಲಿ’ ಹಾಡಿ ಸಮ್ಮೋಹನಗೊಳಿಸಿದರು.
ಅರಮನೆಯ ಆವರಣದಲ್ಲಿ ತಂಪಾಗಿ ಬೀಸುತ್ತಿದ್ದ ಗಾಳಿಯ ನಡುವೆ ವಾಸುಕಿ ವೈಭವ್ ತಮ್ಮದೇ ಸಂಗೀತ ನಿರ್ದೇಶನ ಬಡವ ರಾಸ್ಕಲ್, ಕರಿಮಾಯಿ ನಾಟಕ, ಇನ್ನೇನೂ ಬೇಕಾಗಿದೆ ಸೇರಿದಂತೆ 10ಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ಗಾಯಕರಾದ ದರ್ಶನ್ ನಾರಾಯಣ್, ಭರತ್ ನಾಯಕ್, ಮಾಧುರಿ ಶೇಷಾದ್ರಿ ಸಾಥ್ ನೀಡಿದರು.
ಇದಕ್ಕೂ ಮೊದಲು ಕರ್ನಾಟಕ ಪೊಲೀಸ್ ಬ್ಯಾಂಡ್ ತಂಡವೂ ಬ್ಯಾಂಡ್ ಮಾಸ್ಟರ್ ಮಂಜುನಾಥ್ ಅವರ ಸಾರಥ್ಯದಲ್ಲಿ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜೈ ಹೋ.. ಮೇಡ್ ಇನ್ ಇಂಡಿಯಾ.. ಮತ್ತು ಶಂಕರ್ ನಾಗ್ ಚಿತ್ರದ ನೋಡಿ ಸ್ವಾಮಿ ನಾವಿರೋದು ಹೀಗೆ.. ಗೀತೆಗಳನ್ನು ನುಡಿಸಿದರು.