ಮುಂಬೈ: ಇದೇ ವರ್ಷ ವಿವಾಹವಾದ ಹಿಂದಿ ಚಿತ್ರರಂಗದ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಜೀವ ಬೆದರಿಕೆಯೊಡ್ಡಿದ್ದು, ಈ ಕುರಿತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿ, ತನಿಖೆ ಶುರುಮಾಡಲಾಗಿದೆ. ಕೊಲೆ ಬೆದರಿಕೆಯ ಸುದ್ದಿ ಕೇಳಿಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ಆತಂಕ ಆಗಿದೆ. ಅಲ್ಲದೇ, ಅವರ ಕುಟುಂಬದವರಿಗೆ ಚಿಂತೆ ಶುರುವಾಗಿದೆ. ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ನಂತರ ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕುವ ಪ್ರಕರಣ ಹೆಚ್ಚುತ್ತಿದೆ. ಇತೀಚೆಗೆ ನಟ ಸಲ್ಮಾನ್ ಖಾನ್, ನಟಿ ಸ್ವರಾ ಭಾಸ್ಕರ್ ಮುಂತಾದವರಿಗೆ ಕೊಲೆ ಬೆದರಿಕೆ ಹಾಕಿದ್ದು ಬೆಳಕಿಗೆ ಬಂದಿತ್ತು.
ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುವ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಕತ್ರಿನಾ ಕೈಫ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯರಾಗಿರುತ್ತಾರೆ. ಕಿಡಿಗೇಡಿಗಳು ಇನ್ಸ್ಟಾಗ್ರಾಮ್ ಮೂಲಕವೇ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆರೋಪಿಯು ಹಲವು ದಿನಗಳಿಂದ ಕತ್ರಿನಾ ಕೈಫ್ ಅವರನ್ನು ಫಾಲೋ ಮಾಡುತ್ತಿದ್ದಾನೆ ಎಂದು ಕೂಡ ಪೊಲೀಸರು ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಈ ದಂಪತಿಯನ್ನು ಟಾರ್ಗೆಟ್ ಮಾಡಲಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪರಸ್ಪರ ಪ್ರೀತಿಸುತ್ತಿದ್ದ ವಿಚಾರವನ್ನು ಬಹಳ ದಿನಗಳವರೆಗೆ ಮುಚ್ಚಿಟ್ಟಿದ್ದರು. 2021ರ ಡಿಸೆಂಬರ್ನಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ನಡುವೆ ಕೊಲೆ ಬೆದರಿಕೆಯ ಬಂದಿರುವುದು ಆತಂಕಕ್ಕೆ ಕಾರಣ ಆಗಿದೆ.
ತನಿಖೆಯ ನಂತರ ಬೆದರಿಕೆಯ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ. ಸದ್ಯಕ್ಕೆ ದಂಪತಿಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.