ಆಂದೋಲನ ಪುರವಣಿ

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಂಬ ನಿರಂತರ ಜವಾಬ್ದಾರಿ

ನಾಳೆ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ

• ಡಾ.ಹೆಚ್.ಸಿ.ಮಹದೇವಪ್ಪ,

ಬುದ್ಧನ ಕಾಲದ ಸಂಘ ಮತ್ತು ಗಣ ಎಂಬ ವ್ಯವಸ್ಥೆಯ ಮೂಲಕ ಭಾರತಕ್ಕೆ ಪರಿಚಿತವಾದ ಪ್ರಜಾಪ್ರಭುತ್ವ ಕಲ್ಪನೆಯು ಮತ್ತೊಮ್ಮೆ ಅಧಿಕೃತವಾಗಿ ಜಾರಿಯಾಗಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಬರಬೇಕಾಯಿತು.

ಮಾನವ ಶಾಸ್ತ್ರಜ್ಞರ ಪ್ರಕಾರ ಬೇಟೆಯಾಡಿಕೊಂಡು ಕೇವಲ ಹಸಿವು, ನಿದ್ರೆ, ಬಾಯಾರಿಕೆ ಹಾಗೂ ಸಂತಾನೋತ್ಪತ್ತಿಯಂತಹ ನೈಸರ್ಗಿಕ ಕ್ರಿಯೆಗಳ ಆಧಾರದಲ್ಲಿ ಬದುಕುತ್ತಿದ್ದ ಮನುಷ್ಯ ಹೇಗೆ ತನ್ನ ಮೂಲ ಸ್ವಭಾವವನ್ನು ಬದಲಿಸಿಕೊಂಡು, ಅಸ್ತಿತ್ವಕ್ಕಾಗಿ ಇನ್ನೊಬ್ಬರ ಮೇಲೆ ಸವಾರಿ ಮಾಡದೇ ಹೊಂದಾಣಿಕೆಯಿಂದ, ನಿಯಮಾವಳಿಗಳಿಗೆ ಅನುಸಾರವಾಗಿ ಬದುಕುವ
ರೂಢಿ ಮಾಡಿಕೊಂಡ ಎಂಬ ಒಟ್ಟು ಚಿತ್ರಣವನ್ನು ಪ್ರಜಾಪ್ರಭುತ್ವದ ಬೆಳವಣಿಗೆ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆ ಎಂದು ಗುರುತಿಸಲಾಗುತ್ತದೆ.

ಬುಡಕಟ್ಟು ಲಕ್ಷಣಗಳನ್ನು ಹೊಂದಿದ್ದ ಮೂಲ ನಿವಾಸಿಗಳ ಸ್ಥಿತಿಯಿಂದ ಹಳ್ಳಿಗಳಲ್ಲಿ ನಡೆದ ಮುಖಾಮುಖಿ ಚರ್ಚೆಗಳು, ಸಭೆಗಳು, ತಮ್ಮ ವಾಸಸ್ಥಳದ ಅಭಿವೃದ್ಧಿಗಾಗಿ ತಮ್ಮ ಗುಂಪಿನ ನಾಯಕರೊಂದಿಗೆ ನಡೆಸಿದ ಮಾತುಕತೆ ಹಾಗೂ ಇನ್ನಿತರೆ ವ್ಯಕ್ತಿ ಭಾಗವಹಿಸುವಿಕೆಯ ಎಲ್ಲ ಅಂಶಗಳನ್ನೂ ಪ್ರಜಾ ಪ್ರಭುತ್ವದ ಆರಂಭಿಕ ಲಕ್ಷಣ ಎಂದು ಮಾನವಶಾಸ್ತ್ರದಲ್ಲಿ ಗುರುತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬುದ್ಧನ ಕಾಲದಲ್ಲಿ ಆರಂಭಗೊಂಡ ಸಾರ್ವಜನಿಕ ಚರ್ಚೆಗಳು ಅತ್ಯಂತ ಮಹತ್ವ ಪಡೆದಿವೆ.

ಪ್ರಜಾಪ್ರಭುತ್ವ ಅರಸೊತ್ತಿಗೆಯಂತೆ ನಿರಂಕುಶ ಪ್ರಭುತ್ವವಲ್ಲ ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ, ಇದು ಪ್ರಜೆಗಳ ರಾಜ್ಯ, ಲೋಕವಾಣಿಯೇ ದೇವವಾಣಿ ಎಂದು ಪ್ರತಿಪಾದಿಸುವ ಪದ್ಧತಿ ಇದು. ಸಾರ್ವಜನಿಕರ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಮೂಲ ತತ್ವಗಳಲ್ಲಿ ಒಂದು. ಆದರೆ ಭಾರತದ ವಿಭಿನ್ನ ಸಾಮಾಜಿಕ ಸಂದರ್ಭವನ್ನು ಗಮನಿಸಿದಾಗ, ಇಲ್ಲಿ ಜಾತಿಯ ಮೇಲರಿಮೆ ಮತ್ತು ವಿವಿಧ ಕಾರಣಗಳಿಗೆ ಶಿಕ್ಷಣ, ಉದ್ಯೋಗ, ಸಮಾಜ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಇವರ ಭಾಗವಹಿಸುವಿಕೆಯು ಅಸಾಧ್ಯವಾದ ಸಂಗತಿ ಆಗಿತ್ತು. ಆದರೆ ಸಂವಿಧಾನದ ಮೂಲಕ ಸಾರ್ವಜನಿಕರ ಹಕ್ಕುಗಳನ್ನು ಖಾತರಿಪಡಿಸಿದ ನಂತರದಲ್ಲಿ ಎಲ್ಲರಿಗೂ ಸಮಾನವಾಗಿ ಭಾಗವಹಿಸುವಿಕೆ ಸಾಧ್ಯವಾಯಿತು. ಇದನ್ನು ಆಧುನಿಕ ಕಾಲದ ಸಂದರ್ಭದಲ್ಲಿ ಮತ್ತೆ ನಾವು ನಿಜದ ಅರ್ಥದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿದೆವು ಎನ್ನಬಹುದು.

ಹಿಂದೊಮ್ಮೆ ಜೆ.ಹೆಚ್.ಪಟೇಲರು ಸದನದಲ್ಲಿ ಮಾತನಾಡುತ್ತಾ, ಬುದ್ಧಿವಂತಿಕೆಗೆ ಸಂಬಂಧಿಸಿದಂತೆ ಬಿ.ರಾಚಯ್ಯನವರ ಮಾತನ್ನು ಉದ್ದೇಶಿಸಿ “ರೀ ರಾಚಯ್ಯನವರೇ ಮೇಲ್ವರ್ಗಗಳಿಗೆ 2,000 ವರ್ಷಗಳ ಇತಿಹಾಸವಿದೆ, ಆದರೆ ನಿಮ್ಮ ಇತಿಹಾಸ ಶುರುವಾಗಿದ್ದೇ, ಅಂಬೇಡ್ಕರ್ ಸಂವಿಧಾನ ಬಂದ ನಂತರ’ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಸಮಾಜ ಕೆಳ ವರ್ಗಗಳನ್ನು ಹೊರಗಿಟ್ಟಿದ್ದನ್ನು ಅವರು ಅವರು ಆ ದಿನ ಹೇಳಿದ್ದನ್ನು ಈ ವೇಳೆ ನಾವು ನೆನಪಿಸಿಕೊಳ್ಳಬಹುದು.

ಈ ದೇಶದಲ್ಲಿ ರಾಮ ಮನೋಹರ ಲೋಹಿಯಾ ಆದಿಯಾಗಿ ಜವಾಹರ್ ಲಾಲ್ ನೆಹರೂ ಅಂತಹ ಅನೇಕ ನಾಯಕರು ಪ್ರಜಾಪ್ರಭುತ್ವದ ಕನಸನ್ನು ಕಂಡು, ತಮಗೆ ಅಧಿಕಾರದ ಅವಕಾಶ ಸಿಕ್ಕಾಗ ಅದನ್ನು ಕಾನೂನಾತ್ಮಕವಾಗಿ ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಅದರಲ್ಲೂ ನೆಹರೂ ಅಂತಹವರು ಅತ್ಯಂತ ಜ್ಞಾನಿ ಮತ್ತು ಸಮಾಜದ ಎಲ್ಲ ಅಸಮಾನತೆ, ನೋವು, ದೌರ್ಜನ್ಯಗಳ ಬಗ್ಗೆ ತಿಳಿವಳಿಕೆ ಹೊಂದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅಂತಹ ಮಹನೀಯರ ಕೈಗೆ ಸಂವಿಧಾನದ ರಚನೆಯ ಜವಾಬ್ದಾರಿಯನ್ನು ನೀಡದೇ ಹೋಗಿದ್ದರೆ, ನಾವು ಬಯಸಿದ ಪ್ರಜಾಪ್ರಭುತ್ವಕ್ಕೆ ಈ ಮಟ್ಟಿನ ಅರ್ಥ ಬರುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು, ಸಮರ್ಥ ನಾಯಕತ್ವ, ವ್ಯಕ್ತಿ ಗೌರವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ನಡವಳಿಕೆಗಳು ಪ್ರಜಾಪ್ರಭುತ್ವದ ಮೂಲಸೂತ್ರಗಳಾಗಿವೆ. ಈ ಪೈಕಿ ಸಮಾನತೆಯು ಮೊದಲನೇ ಸೂತ್ರವಾಗಿದ್ದು, ರಾಷ್ಟ್ರ ಶಕ್ತಿ ಮತ್ತು ಪರಮಾಧಿಕಾರ ರಚನೆಯು ಸಮಾನತೆ ಮತ್ತು ಘನತೆಯ ಆಧಾರದ ಮೇಲೆ ಕಟ್ಟಲು ಸಾಧ್ಯವೇ ಹೊರತು ಅಸಮತೆ ಮತ್ತು ದೌರ್ಜನ್ಯದ ಮೇಲಲ್ಲ ಎಂಬ ತತ್ವವನ್ನು ಅದು ಪ್ರಧಾನವಾಗಿ ಸಾರುತ್ತದೆ.

ಎರಡನೆಯ ಸೂತ್ರವಾಗಿ ಸ್ವಾತಂತ್ರವನ್ನು ಗುರುತಿಸಲಾಗಿದೆ. 18ನೇ ಶತಮಾನದಲ್ಲಿ ಸರ್ಕಾರದ ಕಲಾಪಗಳಲ್ಲಿ ಸಾಮಾನ್ಯ ಪ್ರಜೆಗಳು ಭಾಗವಹಿಸಬೇಕಾದರೆ ಅದನ್ನು ಕ್ರಾಂತಿಯಿಂದಲೇ ಸಾಧಿಸಬೇಕೆಂಬ ಭಾವನೆ ತೀವ್ರವಾಗಿತ್ತು. ಆದರೆ 19ನೇ ಶತಮಾನದಲ್ಲಿ ಪ್ರಜೆಗಳು ಮತ ಚಲಾಯಿಸುವ ಅಧಿಕಾರವನ್ನು ಪಡೆದ ಮೇಲೆ ಅವರಿಗೆ ವಾಕ್ ಸ್ವಾತಂತ್ರ್ಯ, ಆಸ್ತಿ ಹೊಂದುವ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯವು ದೊರೆಯಿತು. ಆದರೆ ಈ ದಿನ ಇಂತಹ ಸ್ವಾತಂತ್ರ್ಯದ ಕಲ್ಪನೆಗೆ ಸಂವಿಧಾನ ಗಡಿ ಮೀರಿದ ಕಂಟಕಗಳು ಎದುರಾಗುತ್ತಿದ್ದು, ನೀನು ಇಂತಹದ್ದನ್ನೇ ತಿನ್ನಬೇಕು, ಇಂತಹದ್ದನ್ನೇ ಧರಿಸಬೇಕು, ಇಂತಹದ್ದನ್ನೇ ಆಚರಿಸಬೇಕು, ಇಂತಹದ್ದನ್ನೇ ಬೆಂಬಲಿಸಬೇಕು ಎಂಬ ಸಂಗತಿಗಳು ಪ್ರಜಾಪ್ರಭುತ್ವದ ಮೂಲ ಸೂತ್ರಗಳಲ್ಲಿ ಒಂದಾದ ಸ್ವಾತಂತ್ರ್ಯದ ತತ್ವಕ್ಕೆ ವಿರುದ್ಧವಾದ ಸಂಗತಿ ಆಗಿದೆ.

ಇನ್ನು ಮತ್ತೊಂದು ಅಂಶವಾದ ಭ್ರಾತೃತ್ವವೂ ಕೂಡ ದೇಶದ ಐಕ್ಯತೆಗೆ ಮೂಲ ಸೂತ್ರವಾಗಿದ್ದು, ಜಾತಿ, ಧರ್ಮ, ಬಣ್ಣ, ಲಿಂಗ, ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗೆ ಪರಸ್ಪರ ಒಡಕು ಮೂಡಿಸದಂತೆ, ಪರಸ್ಪರ ವ್ಯಕ್ತಿ ಗೌರವ, ಪ್ರೀತಿ ಮತ್ತು ನಂಬಿಕೆಯನ್ನು ಹೊಂದಬೇಕೆಂದು ಬಯಸುತ್ತದೆ. ಆದರೆ ಈ ದಿನ ಇಂತಹ ಭ್ರಾತೃತ್ವದ ಕಲ್ಪನೆಯನ್ನು ಮೀರಿ ಧರ್ಮದ ಹೆಸರಲ್ಲಿ ವಿಷವು ಹೆಚ್ಚು ಹಬ್ಬುತ್ತಿರುವ ಕಾರಣ, ನಾವು ಭ್ರಾತೃತ್ವದ ಮೌಲ್ಯವನ್ನು ಮತ್ತೆ ಮತ್ತೆ ನೆನೆಯಬೇಕಾಗಿದೆ.

ಇನ್ನು ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯ ಜನಸೇವೆಯ ಉದ್ದೇಶದಿಂದ ದುಡಿಯುವ ಸಾರ್ವಜನಿಕ ನಾಯಕತ್ವವು ಪ್ರಜಾಪ್ರಭುತ್ವದ ಪ್ರಮುಖ ಮತ್ತು ಅಗತ್ಯವಾದ ಸಂಗತಿ ಆಗಿದ್ದು, ನಾಯಕತ್ವ ಇಲ್ಲದೇ ಹೋದರೆ ಸಮುದಾಯ ಗಳು ಮತ್ತು ಸರ್ಕಾರ ಅನಾಥವಾಗುತ್ತವೆ. ಆದರೆ ಈಗಿನ ಸಂದರ್ಭವನ್ನು ಸಮಗ್ರವಾಗಿ ನೋಡುವಾಗ ನಾಯಕತ್ವದಸ್ಥಿತಿಯು ಬಹಳ ದುರ್ಬಲವಾಗಿದ್ದು, ಸಾರ್ವಜನಿಕ ಜೀವನದ ಮಹತ್ವವನ್ನು ಅರಿಯದವರು, ವ್ಯಾಪಾರಿಗಳು, ಭೂಗಳ್ಳರು ಮತ್ತು ಬಂಡವಾಳಶಾಹಿಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭದಲ್ಲಿ ಒಂದಾಗಿರುವ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದು, ಇವರು ಪ್ರಜಾಪ್ರಭುತ್ವಕ್ಕೆ ನಿಜಕ್ಕೂ ಮಾರಕವಾಗಿದ್ದಾರೆ. ಸಾಲದು ಎಂಬಂತೆ ಜನಪರ ದನಿಗಳನ್ನೂ ಅಡಗಿಸಿ ಕೊನೆಗಾಣಿಸಲು ಒಂದಿಲ್ಲೊಂದು ರೀತಿಯಲ್ಲಿ ನಿರಂತರವಾದ ಪ್ರಯತ್ನಗಳನ್ನು ಮಾಡುವುದನ್ನು ನಾವು ಕಾಣಬಹುದಾಗಿದ್ದು, ಇದು ಪ್ರಜಾಪ್ರಭುತ್ವದ ಆಶಯಗಳ ಮೇಲೆ ಮಾಡುತ್ತಿರುವ ನೇರವಾದ ದಾಳಿ ಆಗಿದ್ದು ಈ ಬಗ್ಗೆ ನಾವೆಲ್ಲಾ ಸದಾ ಎಚ್ಚರದಿಂದ ಇರಬೇಕು.

ಸರ್ಕಾರ ಮತ್ತು ಪ್ರಜಾಪ್ರಭುತ್ವ: ಪ್ರಜಾಪ್ರಭುತ್ವದಲ್ಲಿ ಜನ ಸಾಮಾನ್ಯರಿಂದ ಆಯ್ಕೆಯಾದ ಸರ್ಕಾರಗಳು, ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದ್ದು, ಅದು ಜನರ ಹಕ್ಕುಗಳ ಸಮಾನ ರಕ್ಷಣೆಯ ಜೊತೆಗೆ ಸಾಮಾಜಿಕ ನ್ಯಾಯದ ಮೂಲಕ ಎಲ್ಲರಿಗೂ ಬದುಕುವ ವಾತಾವರಣವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಈ ಹಿನ್ನೆಲೆಯಲ್ಲಿ ನೋಡುವುದಾದರೆ 2013ರಿಂದ 2018ರವರೆಗೆ ಅಸ್ತಿತ್ವದಲ್ಲಿದ್ದ ನಮ್ಮ ಸರ್ಕಾರವು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ‘ದಾಸೋಹ’ ಮತ್ತು ‘ನುಡಿದಂತೆ ನಡೆ’ ಎನ್ನುವ ತತ್ವಕ್ಕೆ ಬದ್ಧವಾಗಿ ಸಾಕಷ್ಟು ಜನೋಪಯೋಗಿ ಕೆಲಸವನ್ನು ಮಾಡಿತು. ಬಡವರು, ರೈತರು, ಮಕ್ಕಳು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಲವಾರು ಸೌಲಭ್ಯಗಳನ್ನು ನೀಡಿದ್ದ ಸರ್ಕಾರವು ಆರ್ಥಿಕ ಶಿಸ್ತಿಗೆ ಒಳಪಟ್ಟು ಆಡಳಿತ ನೀಡಿತು.

2023ರಲ್ಲಿ ಜನರ ಪೂರ್ಣ ಬಹುಮತದ ಬೆಂಬಲದಿಂದ ಆಯ್ಕೆಯಾದ ನಮ್ಮ ಸರ್ಕಾರವು ‘ಸಂವಿಧಾನದ ಆಶಯಗಳನ್ನು 5 ಗ್ಯಾರಂಟಿಗಳ ರೂಪದಲ್ಲಿ ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನದ ಮೂಲಕ ಈ ದಿನ ಎಲ್ಲ ಸಮುದಾಯಗಳ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಘನತೆಯ ಬದುಕನ್ನು ಖಾತರಿಪಡಿಸಿದ್ದು, ಈ ಆಲೋಚನೆಯು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಪೂರಕವಾಗಿದೆ ಎಂಬುದು ನನ್ನ ಭಾವನೆ. ಇಂತಹ ಯೋಜನೆ ಗಳ ಬಗ್ಗೆ ನಾವು ಆರ್ಥಿಕತೆ ಕಾರಣಕ್ಕೆ ವಿಮರ್ಶೆಗಳನ್ನು ಸ್ವೀಕರಿಸಿ, ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದೇ ವಿನಾ, ಯೋಜನೆಗಳೇ ಬೇಡ ಎಂಬ ಅಸಹನೆಯನ್ನು ಜನ ಸಾಮಾನ್ಯರ ಬದುಕನ್ನು ಗಮನದಲ್ಲಿ ಇಟ್ಟುಕೊಂಡು ತಿರಸ್ಕರಿಸಬೇಕು. ಈ ಹಿಂದೆ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರು 20 ಅಂಶಗಳ ಕಾರ್ಯಕ್ರಮ ಮತ್ತು ಉಳುವವನೇ ಹೊಲದೊಡೆಯ ಕಾರ್ಯಕ್ರಮದ ಮೂಲಕ ಜನರ ಬದುಕಿಗೆ ನೆರವಾಗಿದ್ದರು ಎಂಬುದನ್ನು ಈ ವೇಳೆ ನೆನೆಯಲು ಬಯಸುತ್ತೇನೆ.

ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆ ಅಧಿಕಾರ ನಡೆಸುವ ಯಾವುದೇ ಪಕ್ಷಗಳು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾದ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು ಇದೊಂದು ನಿರಂತರವಾದ ಪ್ರಕ್ರಿಯೆ ಆಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ 2023ರಿಂದ ಸಂವಿಧಾನದ ಪೀಠಿಕೆಯ ವಾಚನದ ಮೂಲಕ ಆರಂಭಗೊಂಡ ನಮ್ಮ ಸರ್ಕಾರದ ಪ್ರಯತ್ನಗಳು ಹಲ ಬಗೆಯಲ್ಲಿ ಸಾಗಿವೆ. ಇದೀಗ ನಮ್ಮ ಸರ್ಕಾರವು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 15 ಸೆಪ್ಟೆಂಬರ್ 2024ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಯೋಜಿಸುತ್ತಿದ್ದು, ದಿನ ಬೀದರ್‌ನಿಂದ ಚಾಮರಾಜನಗರದವರೆಗೆ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಮಾನವ ಸರಪಳಿ ರಚಿಸುವ ಮೂಲಕ ಸಮಾನತೆ ಮತ್ತು ಐಕ್ಯತೆಯ ಸಂದೇಶವನ್ನು ದೇಶಕ್ಕೆ ಸಾರಲಿದ್ದಾರೆ. ದೇಶದ ಪ್ರಜೆಗಳಾಗಿ ನಾವೆಲ್ಲರೂ ಆ ದಿನ ಸಕ್ರಿಯವಾಗಿ ಭಾಗವಹಿಸೋಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಮುನ್ನಡೆಯೋಣ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು, ಸಮರ್ಥ ನಾಯಕತ್ವ, ವ್ಯಕ್ತಿ ಗೌರವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ನಡವಳಿಕೆಗಳು ಪ್ರಜಾಪ್ರಭುತ್ವದ ಮೂಲ ಸೂತ್ರಗಳಾಗಿವೆ. ಈ ಪೈಕಿ ಸಮಾನತೆಯು ಮೊದಲನೆಯ ಸೂತ್ರವಾಗಿದ್ದು, ರಾಷ್ಟ್ರ ಶಕ್ತಿ ಮತ್ತು ಪರಮಾಧಿಕಾರ ರಚನೆಯು ಸಮಾನತೆ ಮತ್ತು ಘನತೆಯ ಆಧಾರದ ಮೇಲೆ ಕಟ್ಟಲು ಸಾಧ್ಯವೇ ಹೊರತು ಅಸಮತೆ ಮತ್ತು ದೌರ್ಜನ್ಯದ ಮೇಲಲ್ಲ ಎಂಬ ತತ್ವವನ್ನು ಅದು ಪ್ರಧಾನವಾಗಿ ಸಾರುತ್ತದೆ.

(ಲೇಖಕರು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು )

ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago