ಸೆ. ೧೦ರಿಂದ ೨೦ರ ನಡುವೆ ಕಾರ್ಯಕ್ರಮ ಆಯೋಜನೆ
೩೦೦ಕ್ಕೂ ಹೆಚ್ಚು ಕಾಲೇಜುಗಳ ತಂಡಗಳು
೭ ರಿಂದ ೮ ದಿನಗಳು ಸಂಭ್ರಮದ ರಸದೌತಣ
ಸಂಭ್ರಮಕ್ಕಾಗಿ ಹಲವು ಬಗೆಯ ಥೀಮ್‌ಗಳು
ಕೆ.ಬಿ.ರಮೇಶನಾಯಕ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೂ ಮುನ್ನವೇ ಯುವ ಸಮುದಾಯಕ್ಕೆ ಜೋಶ್ ನೀಡುವ ‘ಯುವ ಸಂಭ್ರಮ’ಕ್ಕೆ ಈ ಬಾರಿ ಮತ್ತಷ್ಟು ರಂಗು ನೀಡಲು ಯುವ ಸಂಭ್ರಮ ಉಪ ಸಮಿತಿ ಯೋಜನೆ ರೂಪಿಸಿದೆ. ಚಾಮರಾಜನಗರದಿಂದ ಬೀದರ್‌ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲು ಉಪ ಸಮಿತಿ ಮುಂದಾಗಿದೆ.
ದಸರಾ ಮಹೋತ್ಸವದ ಮುನ್ನುಡಿ ಎಂದೇ ಬಿಂಬಿತವಾಗಿರುವ ‘ಯುವ ಸಂಭ್ರಮ’ಕ್ಕೆ ಈಗಾಗಲೇ ಅಗತ್ಯ ತಯಾರಿ ಆರಂಭವಾಗಿದೆ. ಉಪ ಸಮಿತಿಯ ಪದಾಧಿಕಾರಿಗಳು ಒಂದು ಹಂತದ ಸಭೆ ನಡೆಸಿದ್ದು, ರೂಪರೇಷೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇತ್ತ ಯುವ ಸಂಭ್ರಮದಲ್ಲಿ ನೃತ್ಯ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಕೂಡ ಭರ್ಜರಿ ತಯಾರಿಗೆ ಮುಂದಾಗಿದ್ದಾರೆ. ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.೧೦ರಿಂದ ೨೦ರ ನಡುವೆ ೭ ರಿಂದ ೮ ದಿನಗಳ ಕಾಲ ಯುವ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸುವ ಚಿಂತನೆ ನಡೆದಿದೆ.
ದಸರಾಗೂ ಯುವ ಸಂಭ್ರಮಕ್ಕೂ ಅವಿನಾಭಾವ ಸಂಬಂಧವಿದೆ. ದಸರಾ ಬಂತೆಂದರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಪ್ರತಿಭೆಗಳಿಗೆ ಏನೋ ಸಂಭ್ರಮ. ರಾಜ್ಯದಾದ್ಯಂತ ವಿವಿಧ ಕಾಲೇಜುಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಯುವಕ, ಯುವತಿಯರು ಬಯಲು ರಂಗಮಂದಿರದಲ್ಲಿ ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಸಕ್ತರಿಗೆ ರಸದೌತಣವನ್ನು ಉಣಬಡಿಸುತ್ತವೆ.
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲು ಸಮಿತಿಯು ಸಿದ್ಧತೆ ನಡೆಸಿದೆ. ರಾಜ್ಯದ ಬಹುತೇಕ ಎಲ್ಲ ಪಿಯು, ಪದವಿ ಕಾಲೇಜುಗಳು, ಐಟಿಐ, ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಈ ಎಲ್ಲ ಕಾಲೇಜುಗಳು ತಲಾ ಒಂದು ತಂಡವನ್ನು ಆಯ್ಕೆ ಮಾಡಿ ಕಳುಹಿಸಿಕೊಡಲಿವೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ರಾಜ್ಯದಲ್ಲಿರುವ ೨೦ ವಿಶ್ವವಿದ್ಯಾಲಯಗಳ ಕಾಲೇಜುಗಳಿಂದ ವಿದ್ಯಾರ್ಥಿಗಳ ತಂಡಗಳು ಯುವ ಸಂಭ್ರಮದಲ್ಲಿ ಪ್ರತಿಭಾ ಪ್ರದರ್ಶನ ನೀಡಲಿವೆ. ಮುಖ್ಯವಾಗಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಿಂದ ತಲಾ ಒಂದು ತಂಡಕ್ಕೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ.
ನಾನಾ ಥೀಮ್: ಈ ಬಾರಿ ಯುವ ಸಂಭ್ರಮದಲ್ಲಿ ಅನೇಕ ಥೀಮ್‌ಗಳನ್ನು ನೀಡಲು ಉಪ ಸಮಿತಿ ಚರ್ಚೆ ನಡೆಸುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು, ಕಾನೂನು ಸುವ್ಯವಸ್ಥೆ, ಸಂವಿಧಾನ ಮತ್ತು ಶಾಸನ-ಹಕ್ಕು ಮತ್ತು ಕರ್ತವ್ಯಗಳು, ಮಾದಕ ವ್ಯಸನ ಮುಕ್ತ ಸಮಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ದಸರಾ, ಡಾ.ಬಿ.ಆರ್. ಅಂಬೇಡ್ಕರ್, ಕರ್ನಾಟಕ ಜಾನಪದ ವೈವಿಧ್ಯತೆ-ಪರಂಪರೆ, ಕನ್ನಡ ಸಾಹಿತ್ಯ-ಕವಿ, ಕರ್ನಾಟಕ ಸಾಹಿತ್ಯ ಪರಂಪರೆ, ದೇಶಭಕ್ತಿ, ಸ್ವಾತಂತ್ರ್ಯ ಚಳವಳಿ-ಹೋರಾಟಗಾರರ ಕೊಡುಗೆ, ಭಾರತೀಯ ಯೋಧರ ಪಾತ್ರ, ವಿವಿಧತೆಯಲ್ಲಿ ಏಕತೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆ ಪಾತ್ರ, ಮಾನವ ಮತ್ತು ಪ್ರಾಣಿ ಸಂಘರ್ಷ, ಅರಣ್ಯ ಮತ್ತು ಸಸ್ಯ ಸಂರಕ್ಷಣೆ, ಕರ್ನಾಟಕ ಪೊಲೀಸರ ಪಾತ್ರ- ಕಾನೂನು ಸುವ್ಯವಸ್ಥೆ, ಸಂಚಾರ, ಸ್ವಚ್ಛತೆ- ಸಾಮಾಜಿಕ ಸ್ವಚ್ಛತೆ, ಆರ್ಥಿಕ-ಸಾಮಾಜಿಕ ಸಬಲೀಕರಣ-ರಕ್ಷಣೆ, ಆಡಳಿತದೊಂದಿಗೆ ಜನರ ಪಾತ್ರ, ಮತದಾನ ಮತ್ತು ಪ್ರಜಾಪ್ರಭುತ್ವ, ಮೊಬೈಲ್-ಯುವ ಜನರ ಮೇಲೆ ಪರಿಣಾಮ, ತಂತ್ರಜ್ಞಾನ ಮತ್ತು ಯುವ ಜನತೆ, ಪೌರಾಣಿಕ, ಶಿಕ್ಷಣ ಸೇರಿದಂತೆ ಹಲವು ಥೀಮ್ ಗಳನ್ನು ಈ ಬಾರಿ ವಿದ್ಯಾರ್ಥಿಗಳಿಗೆ ನೀಡಲು ಸಮಿತಿಯು ಆಲೋಚನೆ ನಡೆಸಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ:
ಮೈಸೂರು: ಸೆ.೨೨ರಿಂದ ದಸರಾ ಮಹೋತ್ಸವ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಕಲಾವಿದರು, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೆ.೨೨ರಿಂದ ಅ.೨ರವರೆಗೆ ನವರಾತ್ರಿ ದಿನಗಳಂದು ಸಾಂಸ್ಕೃತಿಕ ಉಪಸಮಿತಿಯಿಂದ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಹಾಗೂ ಇತರೆ ವೇದಿಕೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರು, ಕಲಾತಂಡಗಳು ಆ.೨೦ರಿಂದ ಸೆ.೫ರವರೆಗೆ ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು-೫೭೦೦೦೫ ಇಲ್ಲಿಗೆ ನೇರವಾಗಿ ಅಥವಾ ಅಂಚೆಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಹೆಚ್ಚಿನ ಮಾಹಿತಿ ಗಾಗಿ ಕಚೇರಿ ದೂರವಾಣಿ ಸಂಖ್ಯೆ: ೦೮೨೧-೨೫೧೩೨೨೫ಗೆ ಸಂಪರ್ಕಿಸಲು ತಿಳಿಸಿದೆ. ಕಲಾವಿದರಿಗೆ ಕಾರ್ಯಕ್ರಮ ಕೊಡಿಸುವುದಾಗಿ ಯಾವುದೇ ಮಧ್ಯವರ್ತಿಗಳು ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಲ್ಲಿ ತಕ್ಷಣ ಮಾಹಿತಿ ಸಮೇತ ಸಹಾಯಕ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಸಾಂಸ್ಕೃತಿಕ ಉಪಸಮಿತಿ ಕಾರ್ಯದರ್ಶಿ ಡಾ.ಎಂ.ಡಿ.ಸುದರ್ಶನ್ ತಿಳಿಸಿದ್ದಾರೆ.
” ಯುವ ಸಂಭ್ರಮಕ್ಕೆ ಅಗತ್ಯ ತಯಾರಿ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿ ಆರಂಭವಾಗಲಿದೆ. ಸೆ.೧೦ ರಿಂದ ೨೦ರ ನಡುವೆ ೭ ರಿಂದ ೮ ದಿನಗಳು ಯುವ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.”
ಅಶ್ವಥ ಪ್ರಸಾದ್, ಸಹ ಕಾರ್ಯಾಧ್ಯಕ್ಷ ಯುವ ಸಂಭ್ರಮ ಉಪ ಸಮಿತಿ
ಯುವ ದಸರಾದಲ್ಲಿ ಅವಕಾಶ: ರಾಜ್ಯ ವಿವಿಧ ಭಾಗಗಳಿಂದ ೩೦೦ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿದಿನ ತಲಾ ೩೦ ರಿಂದ ೪೦ ತಂಡಗಳು ಕಾರ್ಯಕ್ರಮ ಸಾದರಪಡಿಸಲು ಅವಕಾಶ ಕಲ್ಪಿಸಲು ಯೋಜಿಸಲಾಗಿದೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳನ್ನು ಯುವ ದಸರಾಕ್ಕೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಪ್ರತಿದಿನ ೨ ಅಥವಾ ೩ರಂತೆ ಆಯ್ಕೆಯಾಗುವ ತಂಡಗಳು ಯುವ ದಸರಾದಲ್ಲಿ ಪ್ರದರ್ಶನ ನೀಡಲಿವೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…