ಕೆ.ಎಂ.ಅನುಚೇತನ್
೬ ಸಾವಿರ ಅರ್ಜಿಗಳಲ್ಲಿ ಶೇ.೯೦ರಷ್ಟು ಮಂದಿ ತರಬೇತಿಗೆ ಗೈರು
ಅತ್ಯಾಧುನಿಕ ತಂತ್ರಜ್ಞಾನದ ಕೃತಕ ಬುದ್ಧಿಮತ್ತೆ(ಎಐ)ಗೆ ಬೇಡಿಕೆ
ಮೈಸೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಫಲಾನುಭವಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಆಯೋಜಿಸುವ ಕೌಶಲ ತರಬೇತಿಗೆ ಫಲಾನುಭವಿಗಳು ನಿರಾಸಕ್ತಿ ತೋರುತ್ತಿದ್ದಾರೆ.
ಯುವ ಜನತೆ ಹಾಗೂ ಉನ್ನತ ಶಿಕ್ಷಣ ಪಡೆದವರಿಗಾಗಿ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಸಹಾಯ ಧನ ನೀಡುತ್ತಿದೆ. ಅಲ್ಲದೇ ಯುವಕರು ಉದ್ಯಮಗಳಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ಶಿಕ್ಷಣದ ಜತೆಗೆ ಕೌಶಲದವೂ ಮುಖ್ಯವಾಗಿದೆ. ಅಂತಹ ಕೌಶಲ ತರಬೇತಿ ನೀಡಲು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಿಗೆ ಸರ್ಕಾರ ನಿರ್ದೇಶನ ನೀಡಿ ಉಚಿತ ಕೌಶಲ ತರಬೇತಿ ನೀಡಲು ನಿರ್ಧರಿಸಿತ್ತು. ಆದರೆ, ಆರಂಭದಲ್ಲಿ ಆಸಕ್ತಿ ತೋರಿದ್ದ ಯುವ ನಿಧಿ ಫಲಾನುಭವಿಗಳು, ಇದೀಗ ತರಬೇತಿಗೆ ಹಾಜರಾಗಲು ಆಸಕ್ತಿ ತೋರದ ಸ್ಥಿತಿ ಎದುರಾಗಿದೆ.
ಮೈಸೂರಿನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಸೇರಿದಂತೆ ರಾಜ್ಯದಲ್ಲಿ ೭ ಕೇಂದ್ರಗಳಲ್ಲಿ ಈ ಕೌಶಲ ತರಬೇತಿ ನೀಡಲು ಸರ್ಕಾರ ಮುಂದಾಗಿದ್ದು, ಇಲ್ಲಿ ಇಂಜಿನಿಯರಿಂಗ್, ಡಿಪ್ಲೊಮೋ ಪದವೀಧರರಿಗೆ ತರಬೇತಿ ನೀಡಲಾಗುತ್ತಿದೆ. ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆಗೆ ಮಾಸಾಶನದ ಜತೆಗೆ ತರಬೇತಿಯನ್ನು ನೀಡಿ ಉದ್ಯೋಗ ಕೊಡಿಸುವ ಜವಾಬ್ದಾರಿಯನ್ನು ಇಲಾಖೆಗಳಿಗೆ ವಹಿಸಿದ್ದು,ಇದರಿಂದ ಫಲಾನುಭವಿಗಳಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರೂಪಿಸಿದೆ.
ತರಬೇತಿ ನಿರಾಸಕ್ತಿಗೆ ಕಾರಣವೇನು?: ಕರ್ನಾಟಕ ಜರ್ಮನ್ ಸ್ಟಾಟಂ ತಾಂತ್ರಿಕ ತರಬೇತಿ ಸಂಸ್ಥೆಯು, ಡಿಪ್ಲೊಮೊ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ೮ ಕೋರ್ಸ್ ಗಳ ತರಬೇತಿ ನೀಡುತ್ತಿದೆ. ಅದರಲ್ಲಿ ಪಿಎಲ್‌ಸಿ, ಸ್ಕಾಡಾ, ಎಚ್ ಎಂಎ ತರಬೇತಿ ಒಳಗೊಂಡಿವೆ. ಇದೇ ಮಾದರಿಯಲ್ಲಿ ೩ ತಿಂಗಳುಗಳ ತರಬೇತಿಯನ್ನು ಯುವನಿಧಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ತರಬೇತಿ ಆರಂಭಿಸಲಾಗಿದ್ದು, ಸಂಸ್ಥೆಯ ಅಧಿಕಾರಿಗಳೇ ಯುವ ನಿಧಿ ಫಲಾನುಭವಿಗಳ ಮಾಹಿತಿ ಪಡೆದು ೬ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕರೆ ಮಾಡಿ ಕೌಶಲ ತರಬೇತಿ ಮಾಹಿತಿ ನೀಡಿ, ತರಬೇತಿಗೆ ಆಹ್ವಾನಿಸಿದ್ದಾರೆ.
ಆದರೆ, ಇದರಲ್ಲಿ ಶೇ.೯೦ಕ್ಕೂ ಹೆಚ್ಚಿನ ಫಲಾನುಭವಿಗಳು ಕೌಶಲ ತೆರಬೇತಿ ಬಗ್ಗೆ ಆಸಕ್ತಿ ತೋರಿಲ್ಲ. ಹೆಚ್ಚಿನದಾಗಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಈ ತರಬೇತಿಯನ್ನು ನಿರಾಕರಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದಂತೆ ತರಬೇತಿ ಸೌಲಭ್ಯವಿಲ್ಲ. ಸಂಸ್ಥೆಯ ಕೋರ್ಸ್‌ಗಳ ತರಬೇತಿಗೆ ಬದಲಾಗಿ, ಫಲಾನುಭವಿಗಳು ತಮಗೆ ಬೇಕಾದ ಕೋರ್ಸ್‌ಗಳ ತರಬೇತಿಗೆ ಬೇಡಿಕೆ ಇಡುತ್ತಿದ್ದಾರೆ. ಕೆಲವರು ಉನ್ನತ ಶಿಕ್ಷಣದ ಮೊರೆ ಹೋಗಿದ್ದಾರೆ. ಹಲವರು ಸಿಕ್ಕ ಉದ್ಯೋಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೊಂದಷ್ಟು ಮಂದಿ ತಮ್ಮಿಷ್ಟದ ಕೋಸ್ ಗಳ ತರಬೇತಿಯನ್ನು ಬೇರೆಡೆ ಪಡೆಯುತ್ತಿದ್ದಾರೆ.
ಇದುವರೆಗೂ ಪ್ರತಿ ಬ್ಯಾಚ್‌ನಲ್ಲಿ ೨೦ ಫಲಾನುಭವಿಗಳು ಭಾಗವಹಿಸಿದರೆ ಅದೇ ಹೆಚ್ಚು ಎಂದು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಮೈಸೂರು ನಿರ್ದೇಶಕ ರಾಜು ಪಾಟೀಲ್ ತಿಳಿಸಿದ್ದಾರೆ.
ಎಐ ಕೌಶಲ ತರಬೇತಿಗೆ ಬೇಡಿಕೆ:
ಇಂದಿನ ಕೈಗಾರಿಕಾ ಕ್ಷೇತ್ರ ಹಾಗೂ ಉದ್ಯಮಗಳು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದು, ಅದಕ್ಕನುಗುಣವಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆಯ ಕೌಶಲ ತರಬೇತಿಗೆ ಫಲಾನುಭವಿಗಳು ಬೇಡಿಕೆಯಿಡುತ್ತಿದ್ದಾರೆ. ಈ ಮೂಲಕ ಎಐ ಆಧಾರಿತ ತರಬೇತಿಗಳಿಂದ ಭವಿಷ್ಯದಲ್ಲಿ ಉತ್ತಮವಾದ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಫಲಾನುಭವಿಗಳ ಆಶಯ. ಇದೀಗ ಸಂಸ್ಥೆಯು ಫಲಾನುಭವಿಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು, ಎಐ ಆಧಾರಿತ ತರಬೇತಿಗೆ ಸಿದ್ಧತೆ ನಡೆಸುತ್ತಿದೆ.
” ಫಲಾನುಭವಿಗಳಿಂದ ಎಐ ಕೌಶಲ ತರಬೇತಿಗೆ ಬೇಡಿಕೆಯಿದೆ. ಸರ್ಕಾರಕ್ಕೆಮ ಮಾಹಿತಿ ನೀಡಲಾಗಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಎಐ ಕೌಶಲ ತರಬೇತಿ ಪ್ರಾರಂಭಿಸಲಾಗುವುದು.”
-ರಾಜು ಪಾಟೀಲ್, ನಿರ್ದೇಶಕ, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ, ಮೈಸೂರು
ರಾಜ್ಯ ಸರ್ಕಾರದಿಂದ ಅನುದಾನ ವಿಳಂಬ; ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯುತ್ತಿರುವ ರೋಗಿಗಳು ಮಂಡ್ಯ: ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ…
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…