Andolana originals

ಯರಿಯೂರು ಸೀಮೆಯ ಹಾಡುಗಾತಿ ಮಾಳಗರಸಮ್ಮ

• ಅಕ್ಷತಾ ಯಳಂದೂರು

ಮಾಳಗರಸಮ್ಮ ಅವರಿಗೆ ಹಾಡೆಂದರೆ ‘ಶಿವನ ಸ್ವರ’. ಇವರು ಚಾಮರಾಜನಗರ ಜಿಲ್ಲೆಯ ಯಳಂದೂರಿನ ಯರಿಯೂರು ಸೀಮೆಯ ಜಾನಪದ ಹಾಡುಗಾರ್ತಿ. ಮಂಟೇಸ್ವಾಮಿ, ಮಲೆಮಹದೇಶರ, ಬಿಳಿಗಿರಿರಂಗ ಸೇರಿದಂತೆ ಬಹುತೇಕ ಜಾನಪದ ಕಥನ ಗೀತೆಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ತನ್ನ ಆಶು ಕವಿತ್ವದ ಮೂಲಕ ಅನೇಕ ಜಾನಪದ ಹಾಡುಗಳು ಮತ್ತು ತತ್ವಪದಗಳನ್ನು ತತ್‌ಕ್ಷಣಕ್ಕೆ ಕಟ್ಟಿ, ರಾಗ ತುಂಬಿ ಹಾಡುತ್ತಾರೆ. ಅಪ್ಪಟ ಹಳ್ಳಿ ಸೊಗಡಿನ ಮಾತು, ಬದುಕಿನ ಕಥೆಗಳನ್ನು ಬೆರಗುಹುಟ್ಟಿಸುವಂತೆ ಹೇಳುತ್ತಾರೆ.

ಮಾಳಗರಸಮ್ಮ ಅವರ ತಂದೆ ದಾಸಯ್ಯ ಮತ್ತವರ ತಂದೆ ರಂಗಯ್ಯ ಅವರೂ ಕೂಡ ಬಿಳಿಗಿರಿರಂಗನ ದಾಸ ಒಕ್ಕಲಾಗಿ, ಊರೂರು ಭಿಕ್ಷೆ ಬೇಡುತ್ತಾ, ಬದುಕು ಕಟ್ಟಿಕೊಂಡವರು. ಯಳಂದೂರಿನಲ್ಲಿದ್ದ ಕರೆಂಟು ಮನೆಯಲ್ಲಿ ಅನೇಕ ವರ್ಷಗಳ ಕಾಲ ಜೀತಕ್ಕಿದ್ದವರು. ಮಾಳಗರಸಮ್ಮ ಎಂಬುದು ಕುಲ ದೇವತೆ ಹೆಸರು. ದಾಸ ಒಕ್ಕಲರಿಗೆ ಆರಾಧ್ಯ ದೇವತೆ, ಮಾಳಿಗೆಯ ಮೇಲಿರುವ ಮಾಳಗರಸಮ್ಮ. ಕುಟುಂಬಕ್ಕೆ ಮೊದಲಿಗಳಾಗಿ ಹುಟ್ಟಿದ ಇವರಿಗೆ ಮಾಳಗರಸಮ್ಮ ಎಂದು ಹೆಸರಿಟ್ಟರು.

ತಂದೆ ದಾಸಯ್ಯ ಅವರು ತೀರಿಹೋದಾಗ ಇವರಿಗೆ ಕೇವಲ ಹದಿನೈದು ವರ್ಷ. ಹಿರಿಯಕ್ಕಳಾದ ಮಾಳಗರಸಮ್ಮ ಅವರ ಹೆಗಲಿಗೆ ಇಡೀ ಕುಟುಂಬದ ಜವಾಬ್ದಾರಿಬಿತ್ತು. ಊಟಕ್ಕಾಗಿ ಪಟ್ಟ ಪರದಾಟವನ್ನು ಹೇಳುವಾಗ ಮಾಳಗರಸಮ್ಮ ಅವರ ಕಣ್ಣು ತುಂಬಿತ್ತು. ಜೀವನ ಕಷ್ಟವಾಗಿತ್ತಾದರೂ, ಸಾಗಿಸುವುದು ಅನಿವಾರ್ಯವಾಗಿತ್ತು. ಇಂತಹ ಹಸಿವಿನ ಪರಿಸರ, ಸಾಂಸಾರಿಕ ಒತ್ತಡದಲ್ಲಿದ್ದರೂ ಮಾಳಗರಸಮ್ಮ ಅವರು ಹಾಡುಗಾರ್ತಿಯಾಗಿದ್ದು ಅಚ್ಚರಿಯೇ ಸರಿ.

ಊರಿನವರೆಲ್ಲ ಹಾಡೆಂದು ಎಷ್ಟು ಹೇಳಿದರೂ ದೇವರ ಹಾಡುಗಳನ್ನು ಹೇಗೆ ಹಾಡಬೇಕೆಂದು ತಿಳಿಯದೆ, ಧೈರ್ಯ ಸಾಲದೇ ಸುಮ್ಮನಿದ್ದರು. ಒಮ್ಮೆ ಹೀಗೆ ಮಲಗಿರುವಾಗ, ಬಿಳಿಗಿರಿರಂಗ ಕನಸಿನಲ್ಲಿ ಕಂಡು, ‘ಹಾಡು ನನ್ ಕಂದ. ನಿನ್ ಹೃದಯದಲ್ಲಿ ನಾನಿರ್ತೀನಿ. ಹೆದ್ರಕಬೇಡ, ನಾನಿದ್ದೆ’ ಎಂದದ್ದು ಹಾಡಿಗೆ ಪ್ರೇರಣೆ ಆಯಿತು. ದೂರದಲ್ಲಿ ಹೆಂಗಸೊಬ್ಬಳು ಹಾಡುತ್ತಿದ್ದ ಜಾನಪದ ಹಾಡುಗಳು ಕಿವಿಗೆ ಬೀಳುತ್ತಿತ್ತು. ಅದನ್ನು ಕೇಳುತ್ತಿದ್ದಂತೆ ತಾನೂ ಹಾಡಬೇಕೆಂಬ ಒತ್ತಾಸೆ ಮೂಡಿತು. ಎಷ್ಟರಮಟ್ಟಿಗೆಂದರೆ ಮನೆ ಕೆಲಸ ಮಾಡುತ್ತಿರುವಾಗೆಲ್ಲ ತಾನೇಕೆ ಹಾಡಬಾರದೆಂದು ಮತ್ತೆ ಮತ್ತೆ ಅನಿಸುತ್ತಿತ್ತು.

ಪದ ಕಲಿಯಲೆಂದು ಹೊರಟರೆ ಮಾಳಗರಸಮ್ಮ ಅವರಿಗೆ ಹೇಳಿಕೊಡುವವರು ಯಾರು? ಇವರು ಎದುರು ಬಂದ ತಕ್ಷಣವೇ ಪದ ಹಾಡುತ್ತಿದ್ದವರೆಲ್ಲ ಸುಮ್ಮನಾಗುತ್ತಿದ್ದರು. ತಮ್ಮ ಕಿವಿ ಮೇಲೆ ಬಿದ್ದ ಪದಗಳನ್ನು ಗುನುಗುತ್ತಾ ಹಾಡುವುದೇ
ನಿತ್ಯದ ಅಭ್ಯಾಸವಾಯಿತು. ಹಸು ಮೇಯಿಸುವುದಕ್ಕೆಂದು ಹೋದಾಗೆಲ್ಲ ತಮಗೆ ತೋಚಿದಂತೆ ಹಾಡುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಸೋದರಮಾವ ಇವರ ಬಳಿ ಬಂದು ‘ನನ್ನ ಮಗಳ ಮದುವೆಯಲ್ಲಿ ನೀನೆ ಸೋಬಾನೆ ಪದ ಹಾಡಬೇಕು’ ಎಂದರು. ಹದಿನೈದು ವರ್ಷದ ಹುಡುಗಿಯಾದ ಮಾಳಗರಸಮ್ಮ ಅವರಿಗೆ ತೀರದ ಸಂಭ್ರಮ.

ಇದಾದ ಮೇಲೆ ನಾಟಿಗೆಂದು ಹೋಗುತ್ತಿರುವಾಗ ದಾರಿಯಲ್ಲಿ ಊರಿನ ಕೆಲವರು ಸಿಕ್ಕಿ, ‘ದನಿ ಚಂದಾಗದೆ, ರಾಗ ಬತ್ತದೆ. ದೇವ ಹಾಡುಗಳನ್ ಹಾಡಮ್ಮಾ’ ಎಂದರು. ಪ್ರಯತ್ನಿಸೋಣ ಎಂದು ತನ್ನಿಷ್ಟದ ಬಿಳಿಗಿರಿ ರಂಗಸ್ವಾಮಿಯ ಕುರಿತು ಪದ ಕಟ್ಟಿ ಹಾಡೇಬಿಟ್ಟರು! ಇವತ್ತಿಗೂ ಯಾರೇ ಕರೆಯಲಿ, ಸಂತೋಷದಲ್ಲಿ ಹೋಗಿ ಪದ ಹಾಡಿಬರುತ್ತಾರೆ. ಸೋಬಾನೆ ಪದ, ಸೀಮಂತ ಪದ, ಜೋಗುಳ ಪದ ಸೇರಿದಂತೆ ಇವರ ಕಂಠದಲ್ಲಿ ಅನೇಕ ಹಾಡುಗಳು ಜೀವಂತವಾಗಿವೆ.

ಮಾಳಗರಸಮ್ಮ ಅವರು ಮನೆಮಕ್ಕಳಲ್ಲಿ ಹಿರಿಯರು. ಒಡಹುಟ್ಟಿದ ಮೂವರು ತಂಗಿಯರಿಗೆ ಇವರು ಅಮ್ಮನಂತೆ. ಹುಟ್ಟಿದ ದಿನದ ಬಗ್ಗೆ ತಿಳಿದಿಲ್ಲ ಆದರೆ, ತಮ್ಮ ವಯಸ್ಸು 75 ಆಗಿದೆ ಎನ್ನುತ್ತಾರೆ. ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡ ಕುಟುಂಬ, ಮದುವೆಯ ವಯಸ್ಸು ಸಮೀಪಿಸುತ್ತಿದ್ದಂತೆ ಮನೆಮಂದಿಯೆಲ್ಲ ಮದುವೆಯಾಗು ಎಂದು ಒತ್ತಾಯಿಸಿದರು. ಏನು ಹೇಳಿದರೂ ತಾನು ಮಾತ್ರ ಮದುವೆಯಾಗಲು ಒಲ್ಲೆ ಎಂದ ದಿಟ್ಟೆ.

ತನ್ನ ಎರಡನೇ ತಂಗಿಯ ಮಗನನ್ನು ತನ್ನ ಸ್ವಂತ ಮಗನಾಗಿ ಬೆಳೆಸಿದ್ದರು. ಅನಿರೀಕ್ಷಿತವಾಗಿ ಆತನನ್ನು ಕಳೆದುಕೊಂಡ ಮೇಲೆ ಬದುಕು ಶೂನ್ಯವೆನಿಸಿತು. ಅಕ್ಷರ ತಿಳಿಯದ ಮಾಳಗರಸಮ್ಮ ಅವರು ಪದ ಹಾಡುತ್ತಿದ್ದರೆ ಈ ಮಗ ಅದನ್ನು ಬರೆಯುತ್ತಿದ್ದ. ತಾವೆಲ್ಲಿಗೇ ಹೋಗಬೇಕಾಗಿದ್ದರೂ ಆತ ಜೊತೆಯಾಗುತ್ತಿದ್ದ. ಜೀವವೇ ಆಗಿದ್ದ ಮಗ ತಮ್ಮನ್ನು ಅಗಲಿದ ದುಃಖವನ್ನು ಮನಸ್ಸು ಅರಗಿಸಿಕೊಂಡು ಸಮಸ್ಥಿತರಾಗಲು ಬಹಳಷ್ಟು ಸಮಯ ತೆಗೆದುಕೊಂಡರು. ತನ್ನೊಳಗಿನ ಪದಗಳನ್ನು ಹಾಡಾಗಿಸಬೇಕು ಎಂಬ ಛಲತೊಟ್ಟು, ಈಗ ಅದೇ ಕಾಯಕದಲ್ಲಿದ್ದಾರೆ. ಜೊತೆಗೆ, ಆಕಾಶವಾಣಿಯ ಧ್ವನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಾನಪದ ಕಲಾವಿದರಾಗಿದ್ದಾರೆ.

ಸಾಹಿತ್ಯದ ಯಾವ ತತ್ವಪದಕಾರರನ್ನೂ ಇವರು ಓದಿಕೊಂಡಿಲ್ಲ, ಹೆಸರುಗಳನ್ನೂ ತಿಳಿದುಕೊಂಡಿಲ್ಲ. ಆದರೆ, ಮಾಳಗರಸಮ್ಮ ಅವರು ತಮಗೆ ತಿಳಿದಂತೆ ತತ್ವಪದಗಳನ್ನು ಕಟ್ಟುತ್ತಾರೆ; ಹಾಡಾಗಿಸುತ್ತಾರೆ. ನೆನಪಿನ ಶಕ್ತಿಯ ಹಿಂದಿರುವ ಗುಟ್ಟೇನು ಎಂದು ಕೇಳಿದರೆ, ಪದಗಳೆಲ್ಲ ಬಾಯಿಯಲ್ಲಿದ್ದರೆ ಮರೆತುಹೋಗುತ್ತಿತ್ತು. ಆದರೆ ಶಿವ ಅದನ್ನೆಲ್ಲ ಮನಸ್ಸಿನಲ್ಲಿರಿಸಿದ್ದಾನೆ ಎನ್ನುತ್ತಾ ತೃಪ್ತರಾಗುತ್ತಾರೆ.

ಆಂದೋಲನ ಡೆಸ್ಕ್

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago