Andolana originals

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್

ಕೆ.ಬಿ.ರಮೇಶ್‌ನಾಯಕ

ರತ್ನಖಚಿತ ಸಿಂಹಾಸನದಲ್ಲಿ ೧೧ನೇ ವರ್ಷ ದರ್ಬಾರ್ ನಡೆಸಿದ ರಾಜವಂಶಸ್ಥ

ಮೈಸೂರು: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ನಗರದ ಅಂಬಾವಿಲಾಸ ಅರಮನೆಯಲ್ಲಿ ಸೋಮವಾರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಿದರು. ಇದರಿಂದ ಅವರು ಸತತ ೧೧ನೇ ವರ್ಷ ಖಾಸಗಿ ದರ್ಬಾರ್ ನಡೆಸಿದಂತಾಯಿತು.

ಮುತ್ತಿನ ಮಣಿಯ ವಿನ್ಯಾಸವುಳ್ಳ, ತಿಳಿ ನೇರಳೆ ವರ್ಣದ ಮೈಸೂರು ಪೇಟ, ರೇಷ್ಮೆ ಖುರ್ತಾ-ಪೈಜಾಮ -ಶಲ್ಯವನ್ನೊಳಗೊಂಡ ರಾಜ ಪೋಷಾಕು, ರಾಜ ಲಾಂಛನ ಗಂಡಭೇರುಂಡ ಒಳಗೊಂಡ ರತ್ನಖಚಿತಸರ, ಪರಂಪರಾಗತವಾದ ಆಭರಣಗಳನ್ನು ಧರಿಸಿ, ರಾಜಮನೆತನದ ಪಟ್ಟದ ಕತ್ತಿ ಹಿಡಿದು ಸಿಂಹಾಸನವೇರಿ ಮಧ್ಯಾಹ್ನ ೧೨.೪೨ರಿಂದ ೧೨.೫೮ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ದರ್ಬಾರ್ ನಡೆಸಿದರು.

ಯದುವೀರ್ ಅವರು ಸಿಂಹಾಸನಾರೋಹಣಕ್ಕೆ ಆಗಮಿಸುತ್ತಿದ್ದಂತೆಯೇ ಹೊಗಳುಭಟ್ಟರ ಜಯ ಘೋಷ, ಸೇವಕರಿಂದ ಉಡಾಸ್ ಸೇವೆ, ಮಂಗಳವಾದ್ಯ ಮೊಳಗಿತು. ರಾಜಭಟರು, ರಾಜಾಽರಾಜ, ರಾಜ ಮಾರ್ತಾಂಡ, ಸಾರ್ವಭೌಮ, ಯದುಕುಲತಿಲಕ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಪರಾಕ್, ಬಹುಪರಾಕ್, ಬಹುಪರಾಕ್ ಎಂದು ಜಯಘೋಷ ಮೊಳಗಿಸಿದರು. ದರ್ಬಾರ್ ಸಭಾಂಗಣ ಪ್ರವೇಶಿಸಿದ ಯದುವೀರ್, ಕೆಲಕಾಲ ಸಿಂಹಾಸನಾ ರೋಹಣ ಮಾಡಿದರು. ಅರಮನೆಯ ಆಸ್ಥಾನ ಧರ್ಮಾಧಿಕಾರಿಗಳ ಮಾರ್ಗ ದರ್ಶನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು. ದರ್ಬಾರ್ ಹಾಲ್‌ನಲ್ಲಿ ಆಯೋಜಿಸಿದ್ದ ನವಗ್ರಹ ಪೂಜೆ, ಸಿಂಹಾಸನದ ಮುಂದೆ ಇರಿಸಿದ್ದ ಸಿಂಹದ ಮುಖ ಮತ್ತು ಕಲಶಕ್ಕೆ ಪೂಜೆ ಸಲ್ಲಿಸಿದರು. ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿಂಹಾಸನಾರೋಹಣ ಮಾಡಿದರು.

ಈ ವೇಳೆ ಕರ್ನಾಟಕ ಪೊಲೀಸ್ ಬ್ಯಾಂಡ್ ಸಿಬ್ಬಂದಿ ‘ಕಾಯೌ ಶ್ರೀ ಗೌರಿ’ ಗೀತೆಯನ್ನು ನುಡಿಸಿ ಗೌರವ ಸಲ್ಲಿಸಿದರು. ಅಲ್ಲದೆ ಶ್ರೀ ಮಹಾಗಣಪತಿಂ, ಸರಸ್ವತಿ ಭಗವತಿಂ, ಸರಸ್ವತಿ, ಬ್ರಹ್ಮಮುರಾರಿ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ, ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಗಳನ್ನು ನುಡಿಸಿದರು. ಸುಮಾರು ಅರ್ಧಗಂಟೆ ಕಾಲ ಸಿಂಹಾಸನದಲ್ಲಿ ಕುಳಿತ ಯದುವೀರ್ ಚಾಮುಂಡಿಬೆಟ್ಟ, ಪರಕಾಲಮಠ, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಸೇರಿದಂತೆ ೨೩ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫಲ ಪ್ರಸಾದ ಸ್ವೀಕರಿಸಿದರು.

ಇದಕ್ಕೂ ಮುನ್ನ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಂಪ್ರದಾಯದಂತೆ ಯದುವೀರ್ ಪೂಜೆಗೆ ಅಣಿಯಾದರು. ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿ ಪೂಜೆ, ಕಲಶಪೂಜೆ, ಕಂಕಣಪೂಜೆ ನಡೆಸಿ ಕಂಕಣ ಧಾರಣೆ ಮಾಡಲಾಯಿತು. ಮತ್ತೊಂದೆಡೆ ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ವಾಣಿವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಿ ಚಾಮುಂಡೇಶ್ವರಿ ಮತ್ತು ಗಣಪತಿಗೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯ ಸಾವಿರ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸುವನ್ನು ಕರೆತಂದು ಯದುವೀರ್ ಪೂಜೆ ಸಲ್ಲಿಸಿದರು. ಖಾಸಗಿ ದರ್ಬಾರ್ ಬಳಿಕ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಉತ್ಸವ ಹಿಂದಿರುಗಿತು. ಖಾಸಗಿ ದರ್ಬಾರ್ ಮುಗಿಸಿ ಅರಮನೆಗೆ ಹಿಂದಿರುಗಿದ ಯದುವೀರ್ ಅವರನ್ನು ಬೆಳ್ಳಿಯ ಆಸನದ ಮೇಲೆ ಕೂರಿಸಿ ಪಾದಪೂಜೆ ನೆರವೇರಿಸಲಾಯಿತು. ಮತ್ತೆ ಸಂಜೆಯೂ ಖಾಸಗಿ ದರ್ಬಾರ್ ನಡೆಯಿತು. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ೨ರವರೆಗೂ ಅರಮನೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಮಂಗಳವಾರದಿಂದ ಸೆ.೨೯ರವರೆಗೆ ಪ್ರತಿದಿನ ಸಂಜೆ ವೇಳೆ ದರ್ಬಾರ್ ನಡೆಯಲಿದೆ. ಅರಮನೆಯಲ್ಲಿ ನಿತ್ಯ ಪ್ರಮೋದಾದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಸಂಸದರಾದ ಬಳಿಕ ೨ನೇ ದರ್ಬಾರ್ ಮೈಸೂರು: ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತರೆ, ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್‌ನೊಂದಿಗೆ ನವರಾತ್ರಿ ಆಚರಣೆಗೆ ಚಾಲನೆ ಲಭಿಸಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾದ ಬಳಿಕ ಎರಡನೇ ಬಾರಿಗೆ ದರ್ಬಾರ್ ಹಾಲ್‌ನಲ್ಲಿ ರತ್ನ ಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸಿದರು.

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

1 hour ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

2 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

3 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

3 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

8 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

8 hours ago