Andolana originals

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್

ಕೆ.ಬಿ.ರಮೇಶ್‌ನಾಯಕ

ರತ್ನಖಚಿತ ಸಿಂಹಾಸನದಲ್ಲಿ ೧೧ನೇ ವರ್ಷ ದರ್ಬಾರ್ ನಡೆಸಿದ ರಾಜವಂಶಸ್ಥ

ಮೈಸೂರು: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ನಗರದ ಅಂಬಾವಿಲಾಸ ಅರಮನೆಯಲ್ಲಿ ಸೋಮವಾರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಿದರು. ಇದರಿಂದ ಅವರು ಸತತ ೧೧ನೇ ವರ್ಷ ಖಾಸಗಿ ದರ್ಬಾರ್ ನಡೆಸಿದಂತಾಯಿತು.

ಮುತ್ತಿನ ಮಣಿಯ ವಿನ್ಯಾಸವುಳ್ಳ, ತಿಳಿ ನೇರಳೆ ವರ್ಣದ ಮೈಸೂರು ಪೇಟ, ರೇಷ್ಮೆ ಖುರ್ತಾ-ಪೈಜಾಮ -ಶಲ್ಯವನ್ನೊಳಗೊಂಡ ರಾಜ ಪೋಷಾಕು, ರಾಜ ಲಾಂಛನ ಗಂಡಭೇರುಂಡ ಒಳಗೊಂಡ ರತ್ನಖಚಿತಸರ, ಪರಂಪರಾಗತವಾದ ಆಭರಣಗಳನ್ನು ಧರಿಸಿ, ರಾಜಮನೆತನದ ಪಟ್ಟದ ಕತ್ತಿ ಹಿಡಿದು ಸಿಂಹಾಸನವೇರಿ ಮಧ್ಯಾಹ್ನ ೧೨.೪೨ರಿಂದ ೧೨.೫೮ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ದರ್ಬಾರ್ ನಡೆಸಿದರು.

ಯದುವೀರ್ ಅವರು ಸಿಂಹಾಸನಾರೋಹಣಕ್ಕೆ ಆಗಮಿಸುತ್ತಿದ್ದಂತೆಯೇ ಹೊಗಳುಭಟ್ಟರ ಜಯ ಘೋಷ, ಸೇವಕರಿಂದ ಉಡಾಸ್ ಸೇವೆ, ಮಂಗಳವಾದ್ಯ ಮೊಳಗಿತು. ರಾಜಭಟರು, ರಾಜಾಽರಾಜ, ರಾಜ ಮಾರ್ತಾಂಡ, ಸಾರ್ವಭೌಮ, ಯದುಕುಲತಿಲಕ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಪರಾಕ್, ಬಹುಪರಾಕ್, ಬಹುಪರಾಕ್ ಎಂದು ಜಯಘೋಷ ಮೊಳಗಿಸಿದರು. ದರ್ಬಾರ್ ಸಭಾಂಗಣ ಪ್ರವೇಶಿಸಿದ ಯದುವೀರ್, ಕೆಲಕಾಲ ಸಿಂಹಾಸನಾ ರೋಹಣ ಮಾಡಿದರು. ಅರಮನೆಯ ಆಸ್ಥಾನ ಧರ್ಮಾಧಿಕಾರಿಗಳ ಮಾರ್ಗ ದರ್ಶನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು. ದರ್ಬಾರ್ ಹಾಲ್‌ನಲ್ಲಿ ಆಯೋಜಿಸಿದ್ದ ನವಗ್ರಹ ಪೂಜೆ, ಸಿಂಹಾಸನದ ಮುಂದೆ ಇರಿಸಿದ್ದ ಸಿಂಹದ ಮುಖ ಮತ್ತು ಕಲಶಕ್ಕೆ ಪೂಜೆ ಸಲ್ಲಿಸಿದರು. ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿಂಹಾಸನಾರೋಹಣ ಮಾಡಿದರು.

ಈ ವೇಳೆ ಕರ್ನಾಟಕ ಪೊಲೀಸ್ ಬ್ಯಾಂಡ್ ಸಿಬ್ಬಂದಿ ‘ಕಾಯೌ ಶ್ರೀ ಗೌರಿ’ ಗೀತೆಯನ್ನು ನುಡಿಸಿ ಗೌರವ ಸಲ್ಲಿಸಿದರು. ಅಲ್ಲದೆ ಶ್ರೀ ಮಹಾಗಣಪತಿಂ, ಸರಸ್ವತಿ ಭಗವತಿಂ, ಸರಸ್ವತಿ, ಬ್ರಹ್ಮಮುರಾರಿ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ, ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಗಳನ್ನು ನುಡಿಸಿದರು. ಸುಮಾರು ಅರ್ಧಗಂಟೆ ಕಾಲ ಸಿಂಹಾಸನದಲ್ಲಿ ಕುಳಿತ ಯದುವೀರ್ ಚಾಮುಂಡಿಬೆಟ್ಟ, ಪರಕಾಲಮಠ, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಸೇರಿದಂತೆ ೨೩ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫಲ ಪ್ರಸಾದ ಸ್ವೀಕರಿಸಿದರು.

ಇದಕ್ಕೂ ಮುನ್ನ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಂಪ್ರದಾಯದಂತೆ ಯದುವೀರ್ ಪೂಜೆಗೆ ಅಣಿಯಾದರು. ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿ ಪೂಜೆ, ಕಲಶಪೂಜೆ, ಕಂಕಣಪೂಜೆ ನಡೆಸಿ ಕಂಕಣ ಧಾರಣೆ ಮಾಡಲಾಯಿತು. ಮತ್ತೊಂದೆಡೆ ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ವಾಣಿವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಿ ಚಾಮುಂಡೇಶ್ವರಿ ಮತ್ತು ಗಣಪತಿಗೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯ ಸಾವಿರ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸುವನ್ನು ಕರೆತಂದು ಯದುವೀರ್ ಪೂಜೆ ಸಲ್ಲಿಸಿದರು. ಖಾಸಗಿ ದರ್ಬಾರ್ ಬಳಿಕ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಉತ್ಸವ ಹಿಂದಿರುಗಿತು. ಖಾಸಗಿ ದರ್ಬಾರ್ ಮುಗಿಸಿ ಅರಮನೆಗೆ ಹಿಂದಿರುಗಿದ ಯದುವೀರ್ ಅವರನ್ನು ಬೆಳ್ಳಿಯ ಆಸನದ ಮೇಲೆ ಕೂರಿಸಿ ಪಾದಪೂಜೆ ನೆರವೇರಿಸಲಾಯಿತು. ಮತ್ತೆ ಸಂಜೆಯೂ ಖಾಸಗಿ ದರ್ಬಾರ್ ನಡೆಯಿತು. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ೨ರವರೆಗೂ ಅರಮನೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಮಂಗಳವಾರದಿಂದ ಸೆ.೨೯ರವರೆಗೆ ಪ್ರತಿದಿನ ಸಂಜೆ ವೇಳೆ ದರ್ಬಾರ್ ನಡೆಯಲಿದೆ. ಅರಮನೆಯಲ್ಲಿ ನಿತ್ಯ ಪ್ರಮೋದಾದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಸಂಸದರಾದ ಬಳಿಕ ೨ನೇ ದರ್ಬಾರ್ ಮೈಸೂರು: ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತರೆ, ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್‌ನೊಂದಿಗೆ ನವರಾತ್ರಿ ಆಚರಣೆಗೆ ಚಾಲನೆ ಲಭಿಸಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾದ ಬಳಿಕ ಎರಡನೇ ಬಾರಿಗೆ ದರ್ಬಾರ್ ಹಾಲ್‌ನಲ್ಲಿ ರತ್ನ ಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸಿದರು.

ಆಂದೋಲನ ಡೆಸ್ಕ್

Recent Posts

ವಿಮಾನ ಪತನಕ್ಕೂ ಮುನ್ನ ಅಜಿತ್‌ ಪವಾರ್‌ ಕೊನೆಯ ಪೋಸ್ಟ್‌ ವೈರಲ್‌

ಬಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರಿಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತ ಸಂಭವಿಸುವ ಕೇವಲ 23 ನಿಮಿಷಗಳ ಮೊದಲು…

24 mins ago

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ನಿಧನಕ್ಕೆ ಗಣ್ಯಾತಿಗಣ್ಯರ ಸಂತಾಪ

ಬೆಂಗಳೂರು: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್‌ ಪವಾರ್‌ ನಿಧನರಾಗಿದ್ದು, ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.…

54 mins ago

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ದುರ್ಮರಣ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್‌ ಪವಾರ್‌ ನಿಧನರಾಗಿದ್ದಾರೆ. ಅಜಿತ್‌…

1 hour ago

ಮಹಾರಾಷ್ಟ್ರದಲ್ಲಿ ಖಾಸಗಿ ವಿಮಾನ ಪತನ: ಡಿಸಿಎಂ ಅಜಿತ್‌ ಪವಾರ್‌ ಸೇರಿ 5 ಮಂದಿ ದುರ್ಮರಣ

ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…

2 hours ago

ಓದುಗರ ಪತ್ರ: ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…

6 hours ago

ಓದುಗರ ಪತ್ರ: ಡಿಕೆಶಿಯವರ ನಿಲುವು ಸ್ವಾಗತಾರ್ಹ

ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…

6 hours ago