Andolana originals

ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ

ಕೃಷ್ಣ ಸಿದ್ದಾಪುರ

ಸ್ಥಳೀಯರು ಜೀವಭಯದಿಂದ ವಾಸಿಸಬೇಕಾದ ಪರಿಸ್ಥಿತಿ; ಶಾಶ್ವತ ಪರಿಹಾರಕ್ಕೆ ಒತ್ತಾಯ

ಸಿದ್ದಾಪುರ: ಕೊಡಗು ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಸ್ಥಳೀಯರು ಜೀವಭಯದೊಂದಿಗೆ ವಾಸಿಸುವಂತಾಗಿದೆ. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಮಾಲ್ದಾರೆ, ಕರಡಿಗೋಡು, ನಾಲ್ವತೆಕ್ರೆ, ನೆಲ್ಯಹುದಿಕೇರಿ, ಗುಹ್ಯ, ಅರೆಕಾಡು, ಕಾಟಿಬಾಣೆ, ಬೆಟ್ಟದಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಕಾಡಿನಿಂದ ನಾಡಿಗೆ ಬರುತ್ತಿರುವ ಆನೆಗಳು, ಕಾಫಿ ತೋಟ, ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಗಳಲ್ಲಿ ದಾಂದಲೆ ನಡೆಸುತ್ತಿವೆ.

ಕಳೆದ ಕೆಲ ವಾರಗಳಿಂದ ವಿವಿಧೆಡೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಕಾಫಿ ತೋಟಗಳಲ್ಲಿ ರಾತ್ರಿ ವೇಳೆ ಬೀಡುಬಿಡುವ ಆನೆಗಳು ಬೆಳಗಿನ ಜಾವವೂ ಅಲ್ಲಿಯೇ ಉಳಿಯುತ್ತಿರುವುದರಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ.

ಕಾಡಾನೆಗಳ ಉಪಟಳದಿಂದ ಕಾಫಿ, ಬಾಳೆ, ಅಡಕೆ, ತೆಂಗು, ಮೆಣಸು ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದೆ. ಬೆಳೆ ನಷ್ಟದ ಜೊತೆಗೆ ಮನೆಗಳ ಆವರಣ, ನೀರಿನ ಟ್ಯಾಂಕ್‌ಗಳು, ಕೃಷಿ ಉಪಕರಣಗಳು ಹಾಗೂ ಬೇಲಿಗಳೂ ಧ್ವಂಸಗೊಳ್ಳುತ್ತಿವೆ. ವರ್ಷ ಪೂರ್ತಿ ಶ್ರಮಿಸಿ ಬೆಳೆದ ಬೆಳೆಗಳು ಹಾಳಾಗುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟಕ್ಕೆ ಸಮರ್ಪಕ ಹಾಗೂ ಶೀಘ್ರ ಪರಿಹಾರ ವಿತರಣೆ ಯಾಗಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಅರಣ್ಯ ಇಲಾಖೆ ನಿರಂತರ ಗಸ್ತು, ಕಾಟಿ ಕಾರ್ಯಾಚರಣೆ, ಸಾಕಾನೆಗಳ ಬಳಕೆ, ಡ್ರೋನ್ ಮೂಲಕ ನಿಗಾ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕೆಲಸಗಳನ್ನು ನಡೆಸುತ್ತಿದೆ. ಆದರೂ ಕಾಡಾನೆಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ, ಅರಣ್ಯ ಪ್ರದೇಶಗಳ ಮೇಲಿನ ಒತ್ತಡ ಹಾಗೂ ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಲ್ಲಿ ಉಂಟಾಗಿರುವ ಅಡಚಣೆಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

” ಕಾರ್ಯಾಚರಣೆ ಮೂಲಕ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಲಾಗುತ್ತಿದೆ. ೧೬-೧೮ ಆನೆಗಳಿರುವ ಗುಂಪಿನಲ್ಲಿ ಮರಿಯಾನೆಯೂ ಇರುವುದರಿಂದ ಹೆಚ್ಚು ದೂರ ಅಟ್ಟಲು ಸಾಧ್ಯವಾಗುತ್ತಿಲ್ಲ. ಒಂದು ತಿಂಗಳಿಗಿಂತಲೂ ಕಡಿಮೆ ಅವಽಯ ಮರಿಯಾನೆಯೂ ಜೊತೆಗಿದೆ. ಡ್ರೋನ್ ಮೂಲಕ ಅವುಗಳ ಚಲನವಲನದ ಮೇಲೆ ಗಮನಹರಿಸಲಾಗುತ್ತಿದೆ. ಮಡಿಕೇರಿ ಭಾಗದಿಂದ ಹೊಳೆ ದಾಟಿ ಸಿದ್ದಾಪುರ ಭಾಗಕ್ಕೆ ಈ ಗುಂಪು ಬಂದಿದ್ದು, ಇದನ್ನು ಮತ್ತೆ ಆ ಭಾಗಕ್ಕೆ ಅಟ್ಟಲು ಸಾಧ್ಯವಾಗುವುದಿಲ್ಲ. ಅದನ್ನು ಯಡೂರು, ಗುಹ್ಯ, ಕರಡಿಗೋಡು ಮೂಲಕ ದುಬಾರೆ ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳೆ ನಾಶಕ್ಕೂ ಪರಿಹಾರ ನೀಡಲಾಗುತ್ತಿದೆ.”

-ತಹಾಸೀನ್ ಬಾನು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

” ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಗಂಭೀರಸ್ವರೂಪ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತಾತ್ಕಾಲಿಕ ಕಾರ್ಯಾಚರಣೆ ಗಳ ಜೊತೆಗೆ ಆನೆ ಕಾರಿಡಾರ್‌ಗಳ ಸಂರಕ್ಷಣೆ, ಬಲಿಷ್ಠ ಸೌರ ಬೇಲಿ, ಬೆಳೆ ನಷ್ಟಕ್ಕೆ ತ್ವರಿತ ಪರಿಹಾರ ನೀಡುವಂತಹ ಶಾಶ್ವತ ಕ್ರಮಗಳನ್ನು ಸರ್ಕಾರ ಕೈಗೊಳ್ಳು ವುದು ಅಗತ್ಯವಾಗಿದೆ. ಜನರ ಸುರಕ್ಷತೆ ಮತ್ತು ವನ್ಯಜೀವಿಗಳ ಸಂರಕ್ಷಣೆ ಎರಡಕ್ಕೂ ಸಮಾನ ಆದ್ಯತೆ ನೀಡಿದಾಗ ಮಾತ್ರ ಮಾನವ- ಕಾಡಾನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸಾಧ್ಯವಾಗುತ್ತದೆ”

-ಹೆಚ್.ಬಿ.ರಮೇಶ್, ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ)

” ಕಾಡಾನೆಗಳ ಉಪಟಳದಿಂದ ಕಾಫಿ ಇನ್ನಿತರೆ ಬೆಳೆಗಳಿಗೆ ನಿರಂತರವಾಗಿ ಹಾನಿಯಾಗುತ್ತಿದ್ದು, ತೋಟಗಳಿಗೆ ತೆರಳುವುದಕ್ಕೂ ಭಯವಾಗುತ್ತಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಇಂತಹ ಕಾರ್ಯಾ ಚರಣೆಗಳನ್ನು ನಿರಂತರವಾಗಿ ನಡೆಸುವುದರ ಜೊತೆಗೆ ಶಾಶ್ವತ ಪರಿಹಾರಕ್ಕಾಗಿ ಬಲಿಷ್ಠ ಸೌರ ಬೇಲಿ, ಆನೆ ತಡೆ ಕ್ರಮಗಳು ಹಾಗೂ ಬೆಳೆ ನಷ್ಟಕ್ಕೆ ತ್ವರಿತ ಪರಿಹಾರವನ್ನು ಸರ್ಕಾರ ಒದಗಿಸಬೇಕು.”

-ಸುಬ್ರಹ್ಮಣಿ, ಬೆಳೆಗಾರ, ಸಿದ್ದಾಪುರ

ಬೇಕಿದೆ ವೈಜ್ಞಾನಿಕ ಪರಿಹಾರ: ಕಾಡಾನೆ ಮತ್ತು ಮಾನವ ಸಂಘರ್ಷ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಕೇವಲ ತಾತ್ಕಾಲಿಕ ಕಾರ್ಯಾಚರಣೆಗಳಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಅರಣ್ಯ ಇಲಾಖೆ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಸಮುದಾಯದ ಸಮನ್ವಯದೊಂದಿಗೆ ವೈಜ್ಞಾನಿಕ ಮತ್ತು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಾಗ ಮಾತ್ರ ಮಾನವ-ಕಾಡಾನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸಾಧ್ಯ

 

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

1 hour ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

3 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

4 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

6 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

7 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

7 hours ago