Why is this happening at IndusInd Bank
ಪ್ರೊ. ಆರ್.ಎಂ. ಚಿಂತಾಮಣಿ
ಭಾರತ ಮೂಲದ ಹಿಂದುಜಾ ಕುಟುಂಬ ಇಂಗ್ಲೆಂಡಿನಲ್ಲಿಯ ದೊಡ್ಡ ಶ್ರೀಮಂತ ಕುಟುಂಬಗಳಲ್ಲಿ ಒಂದು. ಇದು ಭಾರತ ಮತ್ತು ಸ್ವಿಟ್ಸರ್ಲಾಂಡ್ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ವಿವಿಧ ಉದ್ಯಮಗಳಲ್ಲಿ ಕಂಪೆನಿಗಳನ್ನು ಹೊಂದಿದೆ. ನಾಲ್ಕು ಜನ ಹಿಂದುಜಾ ಸಹೋದರರ ಮುಂದಿನ ತಲೆಮಾರಿನ ಪೀಳಿಗೆಯವರೂ ಉದ್ಯಮಗಳಲ್ಲಿ ತೊಡಗಿಸಿಕೊಂಡು ಮುನ್ನಡೆಸುತ್ತಿದ್ದಾರೆ. ದೇಶದ ದೊಡ್ಡ ಆಟೋ ಮೊಬೈಲ್ ಕಂಪೆನಿಗಳಲ್ಲಿ ಒಂದಾದ ಅಶೋಕ್ ಲೇಲ್ಯಾಂಡ್ ಕಂಪೆನಿಯಲ್ಲಿ ಹಿಂದುಜಾಗಳು ದೊಡ್ಡ ಪಾತ್ರ ಹೊಂದಿದ್ದಾರೆ.
ಇಂಥ ಹಿಂದುಜಾಗಳು ಭಾರತದಲ್ಲಿ ೧೯೯೧ರ ಆರ್ಥಿಕ ಸುಧಾರಣೆಗಳ ನಂತರ ಖಾಸಗಿ ವಾಣಿಜ್ಯ ಬ್ಯಾಂಕುಗಳ ಸ್ಥಾಪನೆಗೆ ಅವಕಾಶ ದೊರೆತ ಕೆಲವೇ ವರ್ಷಗಳಲ್ಲಿ ಇಂಡಸ್ ಇಂಡ್ ಬ್ಯಾಂಕನ್ನು ಪ್ರವರ್ತನೆ ಮಾಡಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈಗ ಈ ಬ್ಯಾಂಕು ದೇಶಾದ್ಯಂತ ಶಾಖೆಗಳನ್ನು ಹೊಂದಿದ್ದು ದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿದೆ. ಎಲ್ಲ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ. ಇಂಥ ಬ್ಯಾಂಕಿನಲ್ಲಿ ಎಲ್ಲವೂ ಸರಿ ಇದೆಯೇ ಎಂದು ಪ್ರಶ್ನಿಸಬಹುದಾದ ವರದಿಗಳು ಇತ್ತೀಚೆಗೆ ಕೇಳಿ ಬರುತ್ತಿವೆ.
ವಿವರಗಳಿಗೆ ಹೋಗುವ ಮೊದಲು ಬ್ಯಾಂಕಿಂಗ್ ಸಿದ್ಧಾಂತದ ಬಗ್ಗೆ ಒಂದೆರಡು ಮಾತು. ಬ್ಯಾಂಕುಗಳು ಇತರರ (ಬೇರೆಯವರ ) ಹಣದ ಮೇಲೆ ವ್ಯವಹಾರ ಮಾಡುವ ಸಂಸ್ಥೆಗಳು ಎಂದು ವಾಕರರವರು ಬಹಳ ಹಿಂದೆಯೇ ಹೇಳಿರುತ್ತಾರೆ. ಆ ಮಾತು ಇಂದಿಗೂ ಸತ್ಯ, ನಾಳೆಯೂ ಸತ್ಯ ಬ್ಯಾಂಕುಗಳನ್ನು ನಂಬಿ ಠೇವಣಿದಾರರು ಇಟ್ಟಿರುವ ಮೊತ್ತಗಳನ್ನೇ ಬ್ಯಾಂಕರರು ಸಾಲ ಕೊಡಲು ಮತ್ತು ಹೂಡಿಕೆಗಳನ್ನು ಮಾಡಲು ಬಳಸುತ್ತಾರೆ. ಅದರಿಂದ ಬಡ್ಡಿ, ಆದಾಯ ಗಳಿಸುತ್ತಾರೆ. ಆ ಆದಾಯದಲ್ಲಿ ಠೇವಣಿದಾರರಿಗೆ ಒಪ್ಪಿಕೊಂಡಂತೆ ಬಡ್ಡಿ ಕೊಡುತ್ತಾರೆ. ಠೇವಣಿದಾರರು ಕೇಳಿದಾಗ ಮತ್ತು ಸ್ವೀಕೃತ ಅವಧಿ ಮುಗಿದಾಗ ಠೇವಣಿಗಳನ್ನು ಮರುಪಾವತಿ ಮಾಡುತ್ತಾರೆ. ಹೀಗೆ ಬ್ಯಾಂಕುಗಳೂ ಬೆಳೆಯುತ್ತವೆ. ಠೇವಣಿದಾರರಿಗೂ ಅನುಕೂಲವಾಗುತ್ತದೆ. ಇದೆಲ್ಲ ಸಂಶಯಾತೀತ ನಂಬಿಕೆಯ ಆಧಾರದಲ್ಲಿ ನಡೆಯುವ ವ್ಯವಹಾರ, ಬ್ಯಾಂಕಿಂಗ್ ವ್ಯವಹಾರ.
ಈ ವರ್ಷದ ಆರಂಭದಿಂದಲೂ ಇಂಡಸ್‌ಇಂಡ್ ಬ್ಯಾಂಕು ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿಯಲ್ಲಿದೆ. ಮೊದಲು ವಿದೇಶಿ ವಿನಿಮಯ ಡೆರಿವೇಟಿವ್ ಖರೀದಿ ಮಾರಾಟದಲ್ಲಿ ತಪ್ಪುಗಳಾಗಿವೆ ಬ್ಯಾಂಕಿಗೆ ನಷ್ಟವಾಗಿದೆ ಎಂಬ ವರದಿಗಳು ಬಂದವು. ಈ ಪ್ರಕರಣವನ್ನು ತನಿಖೆಗಾಗಿ ಜಗತ್ತಿನ ನಾಲ್ಕು ಪ್ರಮುಖ ಆಡಿಟ್ ಮತ್ತು ಹಣಕಾಸು ತನಿಖಾ ಸಂಸ್ಥೆಗಳಲ್ಲಿ ಒಂದಾದ ಆರ್ನ್ಸ್ ಅಂಡ್ ಯಂಗ್ ಸಂಸ್ಥೆಗೆ ವಹಿಸಲಾಗಿತ್ತು. ಅಂತಿಮ ವರದಿ ಬರಬೇಕಿದೆ. ನಂತರ ಬ್ಯಾಂಕಿನ ಮುಖ್ಯ ನಿರ್ವಹಣಾಽಕಾರಿ ಮರು ನೇಮಕಾತಿಯನ್ನು ರಿಸರ್ವ್ ಬ್ಯಾಂಕ್ ಕೇವಲ ಒಂದು ವರ್ಷಕ್ಕಾಗಿ ಮಾತ್ರ ಅನುಮತಿ ಕೊಟ್ಟಿತು. ಕೆಲವೇ ದಿನಗಳ ನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (Chief Executive Officer ಸಿಇಒ) ಮತ್ತು ಉಪ ಸಿಇಒ ರಾಜೀನಾಮೆ ಕೊಟ್ಟರು.
ಬ್ಯಾಂಕು ಲಘು ಹಣಕಾಸು ಸಂಸ್ಥೆಗಳಿಗೆ (Micro Finance Institutions) ಕೊಟ್ಟಿರುವ ಸಾಲಗಳ ಮೇಲಿನ ಬಡ್ಡಿ ಲೆಕ್ಕ ಹಾಕುವಲ್ಲಿ ೨೦೨೪-೨೫ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ರೂ. ೬೭೪ ಕೋಟಿಯಷ್ಟು ತಪ್ಪಾಗಿತ್ತು. ಅದನ್ನು ಇದೇ ಜನವರಿ ತಿಂಗಳಲ್ಲಿ ಸರಿಪಡಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಇದೂ ಒಂದು ದೊಡ್ಡ ಲೋಪವೇ.
ಕನ್ನಡದಲ್ಲಿ ‘ಗಂಟೆ ಬಾರಿಸುವವರು’ ಎಂಬ ಪದ ಗುಚ್ಛವಿದೆ. ಇದರ ಅರ್ಥ ಎಚ್ಚರಿಸುವವರು ಎಂದು. ಇದೇ ರೀತಿ ಇಂಗ್ಲಿಷ್‌ನಲ್ಲಿ ( (Whistle blowers) ( ಸೀಟಿ ಊದುವವರು) ಎಂಬ ಒಂದು ಪದವಿದೆ. ಇದನ್ನು ತಪ್ಪನ್ನು ಎತ್ತಿ ತೋರಿಸುವವರು ಎಂದು ಹೇಳಬಹುದು. ಇವರು ಒಳಗಿನವರಿರಬಹುದು, ಹೊರಗಿನವರಿರಬಹುದು. ಇವರು ಈ ಬಗ್ಗೆ ಅನಾಮಧೇಯ ಪತ್ರಗಳನ್ನು ಬರೆದಿರಲೂಬಹುದು. ಇಂಥ ಸೀಟಿ ಊದುವವರ ಪತ್ರದ ಪ್ರಕಾರ ‘ಬ್ಯಾಂಕಿನಲ್ಲಿ ಇತರ ಆಸ್ತಿಗಳು’ ಮತ್ತು ‘ಇತರ ಜವಾಬ್ದಾರಿಗಳು’ ಬಾಬಿನಲ್ಲಿ ಸುಮಾರು ೭೦೦ ಕೋಟಿ ರೂ. ನಷ್ಟು ತಪ್ಪುಗಳು ನಡೆದಿವೆ, ಸರಿಪಡಿಸಲಾಗಿದೆ ಎಂದು ನಂತರ ಹೇಳಿದರೂ ತಪ್ಪು ತಪ್ಪೇ. ತನಿಖೆಯಿಂದ ಎಲ್ಲ ಗೊತ್ತಾಗಬೇಕು.
ಹೀಗೇಕೆ ತಪ್ಪುಗಳಾಗುತ್ತಿವೆ? ಆಂತರಿಕ ಆಡಿಟ್ ವ್ಯವಸ್ಥೆ ಇರುತ್ತದೆ. ತಪ್ಪು ಅಚಾತುರ್ಯದಿಂದ ಅಥವಾ ಕಣ್ತಪ್ಪಿನಿಂದ ಆಗಿದ್ದರೆ ಅದನ್ನು ಆಗಿಂದಾಗ್ಗೆ ಸರಿಪಡಿಸಲು ಆಡಳಿತ ವ್ಯವಸ್ಥೆಯಲ್ಲಿ ಸರಿಪಡಿಸುವ ಸ್ವಯಂ ವ್ಯವಸ್ಥೆ ಇರುತ್ತದೆ. ಆಡಳಿತದಲ್ಲಿ ಹಂತ ಹಂತದಲ್ಲಿ ನಿಯಂತ್ರಣದಲ್ಲಿರುತ್ತವೆ. ನಿರ್ದೇಶಕರ ಮಂಡಳಿಯಲ್ಲಿ ವಿವಿಧ ಸಮಿತಿಗಳಿರುತ್ತವೆ. ಆಡಿಟ್ ಸಮಿತಿಯೇ ಇರುತ್ತದೆ. ಇಷ್ಟೆಲ್ಲ ಮೀರಿ ತಪ್ಪುಗಳು ಹೊರಬರುತ್ತಿವೆ ಎಂದರೆ ಇಲ್ಲಿ ಏನೋ ದೊಡ್ಡ ಸಮಸ್ಯೆ ಇದೆ ಎಂದರ್ಥ. ಬ್ಯಾಂಕು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ಬ್ಯಾಂಕಿನ ಆಡಳಿತ ಯಂತ್ರ ಇನ್ನಷ್ಟು ಚುರುಕುಗೊಳ್ಳಬೇಕು. ದುರುದ್ದೇಶದಿಂದ ತಪ್ಪು ಮಾಡಿದ್ದರೆ ಅಂಥವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ನಿರ್ದಾಕ್ಷಿಣ್ಯವಾಗಿ ಕಠಿಣ ಆಡಳಿತ ಕ್ರಮಗಳನ್ನು ಜಾರಿಗೊಳಿಸಬೇಕು. ನಿರ್ದೇಶಕರ ಮಂಡಳಿಯು ವಿಶೇಷ ಗಮನ ಹರಿಸಿ ನಿತ್ಯದ ವ್ಯವಹಾರಗಳನ್ನು ಪರಿಶೀಲಿಸಬೇಕಾಗುತ್ತದೆ. ತಪ್ಪುಗಳನ್ನು ಮೂಲದಲ್ಲಿಯೇ ಸರಿಪಡಿಸುವಂತೆ ನೋಡಿಕೊಳ್ಳಬೇಕು. ಇದು ಬ್ಯಾಂಕಿನ ಗೌರವದ ಪ್ರಶ್ನೆ. ಬ್ಯಾಂಕಿಂಗ್ ಅತಿ ಸೂಕ್ಷ್ಮ ವ್ಯವಹಾರ. ಮೊದಲೇ ಹೇಳಿದಂತೆ ಠೇವಣಿದಾರರ ವಿಶ್ವಾಸ ಮುಖ್ಯ . ಅದಕ್ಕೆ ಎಂದೂ ಧಕ್ಕೆಯಾಗಬಾರದು. ಈ ಬ್ಯಾಂಕು ನಮ್ಮ ಹೆಮ್ಮೆ ಪಡುವಂಥ ಖಾಸಗಿ ಬ್ಯಾಂಕುಗಳಲ್ಲಿ ಒಂದು . ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಾನ್ವಿತ ಕುಟುಂಬದವರು ಸ್ಥಾಪಿಸಿದ ಬ್ಯಾಂಕಿದು. ಕಳಂಕರಹಿತವಾಗಿ ಮುನ್ನಡೆಯಬೇಕು. ನೌಕರರು ಮತ್ತು ಆಡಳಿತಗಾರರಲ್ಲಿ ವೃತ್ತಿಪರತೆ ಇರಬೇಕಾದದ್ದು ಮಹತ್ವದ್ದು. ಸಂಬಂಧಪಟ್ಟ ಎಲ್ಲರಿಗೂ ಬ್ಯಾಂಕಿನ ಸುಸ್ಥಿರತೆಯ ಹೊಣೆಗಾರಿಕೆ ಇದೆ.
ಸ್ವಾತಂತ್ರ್ಯಾನಂತರ ನಮ್ಮ ಬ್ಯಾಂಕಿಂಗ್ ಸಂಸ್ಥೆಗಳನ್ನು ಸುವ್ಯವಸ್ಥಿತವಾಗಿ ಬೆಳೆಸಿಕೊಂಡು ಬರಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಸಮರ್ಥವಾಗಿ ನಿಯಂತ್ರಿಸುತ್ತಿದೆ. ಯಾವ ವಾಣಿಜ್ಯ ಬ್ಯಾಂಕನ್ನೂ ಮುಳುಗಲು ಬಿಟ್ಟಿಲ್ಲ. ತೀವ್ರ ಸಮಸ್ಯೆಗಳಿರುವ ಬ್ಯಾಂಕುಗಳನ್ನು ಸದೃಢ ಮತ್ತು ಆಸಕ್ತ ಬ್ಯಾಂಕುಗಳಲ್ಲಿ ವಿಲೀನಗೊಳಿಸಲಾಗಿದೆ. ಇದಕ್ಕೊಂದು ಇತ್ತೀಚಿನ ಉದಾಹರಣೆ ಗ್ಲೋಬಲ್ ಟ್ರಸ್ಟ್ ಬ್ಯಾಂಕು. ಸರ್ಕಾರ ಮತ್ತು ರಿಸರ್ವ್ ಬ್ಯಾಂಕು ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ಬೆಳೆಯಲು ಪೂರಕವಾದ ವಾತಾವರಣ ನಿರ್ಮಿಸಿವೆ. ಖಾಸಗಿ ಬ್ಯಾಂಕುಗಳು ಸರ್ಕಾರಿ ಬ್ಯಾಂಕುಗಳಿಗೆ ಸಮನಾಗಿ ಬೆಳೆಯುತ್ತಿವೆ. ಆಡಳಿತ ಪಾರದರ್ಶಕವಾಗಿರಬೇಕು.
ಇಂಡಸ್ ಇಂಡ್ ಬ್ಯಾಂಕು ಈ ಸಣ್ಣಪುಟ್ಟ ಸಮಸ್ಯೆಗಳಿಂದ ಹೊರಬಂದು ಇನ್ನಷ್ಟು ದೊಡ್ಡದಾಗಿ ಬೆಳೆಯಲಿ ಎಂಬುದೇ ಎಲ್ಲ ಭಾರತೀಯರ ಆಶಯ.
” ಬ್ಯಾಂಕಿನ ಆಡಳಿತ ಯಂತ್ರ ಇನ್ನಷ್ಟು ಚುರುಕುಗೊಳ್ಳಬೇಕು. ದುರುದ್ದೇಶದಿಂದ ತಪ್ಪು ಮಾಡಿದ್ದರೆ ಅಂಥವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ನಿರ್ದಾಕ್ಷಿಣ್ಯವಾಗಿ ಕಠಿಣ ಆಡಳಿತ ಕ್ರಮಗಳನ್ನು ಜಾರಿಗೊಳಿಸಬೇಕು. ನಿರ್ದೇಶಕರ ಮಂಡಳಿಯು ವಿಶೇಷ ಗಮನ ಹರಿಸಿ ನಿತ್ಯದ ವ್ಯವಹಾರಗಳನ್ನು ಪರಿಶೀಲಿಸಬೇಕಾಗುತ್ತದೆ. ತಪ್ಪುಗಳನ್ನು ಮೂಲದಲ್ಲಿಯೇ ಸರಿಪಡಿಸುವಂತೆ ನೋಡಿಕೊಳ್ಳಬೇಕು. ಇದು ಬ್ಯಾಂಕಿನ ಗೌರವದ ಪ್ರಶ್ನೆ”
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…