Andolana originals

ಇಂಡಿಗನತ್ತ ಗ್ರಾಮ – ಮೆಂದಾರೆ ಪೋಡು: ಸೋದರರಂತಿದ್ದವರು ಇಂದು ಹಗೆಗಳಾಗಿದ್ದೇಕೆ?

• ಅಬ್ರಹಾಂ ಡಿ’ಸಿಲ್ವ

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕುಗ್ರಾಮ ಇಂಡಿಗನತ್ತದ ಗ್ರಾಮಸ್ಥರು ಲೋಕಸಭಾ ಚುನಾವಣೆ ನಡೆದ ಏಪ್ರಿಲ್ 26ರಂದು ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಚುನಾವಣೆಗೆ ಬಹಿಷ್ಕಾರ ಹಾಕಿದ್ದರು. ನೆರೆಗ್ರಾಮದ ಮಂದಾರೆ ಪೋಡಿನ ಸೋಲಿಗರು ಇವರೊಂದಿಗೆ ಕೈ ಜೋಡಿಸಿದ್ದರು. ಆದರೆ ಅಧಿಕಾರಿಗಳ ಮನವೊಲಿಕೆಗೆ ಮಣಿದು ಮತ ಹಾಕಲು ಬಂದ ಮಂದಾರೆ ಗ್ರಾಮಸ್ಥರು ಇಂಡಿಗನತ್ತ ಗ್ರಾಮಸ್ಥರ ಹಲ್ಲೆಗೆ ಗುರಿಯಾಗಬೇಕಾಯಿತು. ಇವಿಎಂ ಧ್ವಂಸ, ಅಧಿಕಾರಿಗಳ ಮೇಲಿನ ಹಲ್ಲೆ ಮತ್ತು ಕಲ್ಲು ತೂರಾಟದ ಕಾರಣದಿಂದ ರಾತ್ರಿ ಬೆಳಗಾಗುವುದರಲ್ಲಿ ಇಂಡಿಗನತ್ತದ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಆದರೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಬೇಡಗಂಪಣರದು ಹಾಗೂ ಸೋಲಿಗರದು ಅನ್ನೋನ್ಯ ಸಂಬಂಧ, ಸಹೋದರರಂತೆ ಬದುಕಿದವರು ಇಂದು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವಂತಾಗಿದೆ.

ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಬೇಡಗಂಪಣರದು ಹಾಗೂ ಸೋಲಿಗರದು ಅನ್ನೋನ್ಯ ಸಂಬಂಧ ಬೇಡಗಂಪಣರು ಬೆಟ್ಟದ ಕುಗ್ರಾಮಗಳಾದ ಇಂಡಿಗನತ್ತ, ಮೆದಗನಾಣೆ, ಪಡಸಲನತ್ತ, ತುಳಸಿಕೆರೆ, ಕೊಕ್ಕೆಬರೆ, ತೇಕಣೆ, ದೊಡ್ಡಾಣೆ, ತೋಕೆರೆ ಕೊಂಬುಡಿಕ್ಕಿ ಮುಂತಾದ 23 ಕಡೆ ವಾಸಿಸುತ್ತಾರೆ. ಈ ಕುಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಮೆಂದಾರೆ, ಮೆದಗನಾಣೆ, ಕೊಂಬುಡಿಕ್ಕಿ, ಹಣೆಹೊಲ, ಕೀರ್ನಹೊಲ, ಗೊರಸಾಣೆ ಮುಂತಾದ ಪೋಡುಗಳಲ್ಲಿ ಸೋಲಿಗರು ಬದುಕು ಕಟ್ಟಿಕೊಂಡಿದ್ದಾರೆ. ಇಬ್ಬರೂ ಬುಡಕಟ್ಟು ಜನಾಂಗದವರು. ಈ ಹಿಂದೆ ಇಬ್ಬರೂ ಬೇಟೆಯಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದರು.

ಕತ್ತಲ ರಾಜ್ಯಕ್ಕೆ ಬಂದ ಮಹದೇಶ್ವರರು ಬೇಡಗಂಪಣರನ್ನು ಪರಿವರ್ತಿಸಿದರು. ಅಂದಿನಿಂದ ಬೇಟೆ ಬಿಟ್ಟು ಮಾಂಸಾಹಾರ ತ್ಯಜಿಸಿ, ಸಂಪೂರ್ಣ ಸಸ್ಯಾಹಾರಿಗಳಾದರು. ಇಡೀ ಪ್ರಪಂಚದಲ್ಲೇ ಸಂಪೂರ್ಣ ಸಸ್ಯಾಹಾರಿ ಬುಡಕಟ್ಟು ಜನಾಂಗ ಇದೊಂದೆ. ಅಂದಿನಿಂದ ಇವರು ಮಹದೇಶ್ವರ ಬೆಟ್ಟದ ಕಾಡು ತರಿದು ಜಮೀನು ಮಾಡಿ ವ್ಯವಸಾಯ ಮಾಡಿ, ಜಾನುವಾರು ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದಾರೆ. ಕರ್ನಾಟಕದ 18 ಕುಗ್ರಾಮಗಳಲ್ಲಿ, ತಮಿಳುನಾಡಿನ 33 ಕಾಡಂಚಿನ ಗ್ರಾಮಗಳಲ್ಲಿ ಇವರು ಚದುರಿದಂತೆ ಇದ್ದಾರೆ. ಒಟ್ಟು ಜನಸಂಖ್ಯೆ 15 ಸಾವಿರದಿಂದ 20 ಸಾವಿರ.

ಬೇಡಗಂಪಣರ ಕುಗ್ರಾಮಗಳಿಗಾಗಲಿ, ಆದಿವಾಸಿ ಸೋಲಿಗರ ಪೋಡುಗಳಿಗಾಗಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಮಹದೇಶ್ವರ ಬೆಟ್ಟದಿಂದ 3ರಿಂದ 10 ಕಿಮೀ ವ್ಯಾಪ್ತಿಯಲ್ಲಿರುವ ಯಾವ ಗ್ರಾಮಗಳಿಗೂ, ಪೋಡುಗಳಿಗೂ ರಸ್ತೆ ಇಲ್ಲ. ಬಂಡೆ ಕಲ್ಲು, ಮುಳ್ಳು, ಕೊರಕಲು ಹಾದಿಯಲ್ಲಿ ನಡೆದೇ ಸಾಗಬೇಕು. ಕುಡಿಯುವ ನೀರಿಗೂ ತತ್ವಾರ. ವಿದ್ಯುಚ್ಛಕ್ತಿ ಇಲ್ಲ. ವಾಹನ ಸೌಲಭ್ಯವಿಲ್ಲ. ಕಾಡಿನೊಳಗಿನ ಗ್ರಾಮಗಳಾದ್ದರಿಂದ ಆನೆ, ಹಂದಿ, ಚಿರತೆ ಕಾಟ ಬೆಳೆದ ಬೆಳೆ ಕೊಯ್ಲಿಗೆ ಬರುವ ಹೊತ್ತಿಗೆ ವನ್ಯಪ್ರಾಣಿಗಳ ಪಾಲಾದದ್ದು ಇದೆ. ಮನೆಯೊಳಗೆ ದಾಸ್ತಾನು ಮಾಡಿದ ರಾಗಿ, ಹುರುಳಿ ಇತರ ಧಾನ್ಯಗಳು ಆನೆಗಳ ಪಾಲಾದ ಉದಾಹರಣೆಗಳಿವೆ. ಆಹಾರ ಧಾನ್ಯ, ತರಕಾರಿ, ಕೊನೆಗೆ ಉಪ್ಪು ತರಬೇಕಾದರೂ ಇವರು ಮಹದೇಶ್ವರ ಬೆಟ್ಟಕ್ಕೆ ಬರಬೇಕು.

ಕಾರಯ್ಯ, ಬಿಲ್ಲಯ್ಯನ ಮಕ್ಕಳು

ಮಹದೇಶ್ವರ ಬೆಟ್ಟದ ದೇವಾಲಯದ ಪ್ರವೇಶ ದ್ವಾರದ ಗೋಡೆಯಲ್ಲಿ ಅಕ್ಕಪಕ್ಕ ಕಾರಯ್ಯ, ಬಿಲ್ಲಯ್ಯನ ಮೂರ್ತಿಗಳಿವೆ. ಇವರು ಮಹದೇಶ್ವರ ಕಾವ್ಯದ ಸೋಲಿಗರ ಸಂಕವ್ವನ ಮಕ್ಕಳು. ಸೋಲಿಗರು ಕಾರಯ್ಯನ ಮಕ್ಕಳಾದರೆ ಬೇಡಗಂಪಣರು ಬಿಲ್ಲಯ್ಯನ ಮಕ್ಕಳು, ಸಹೋದರರ ಮಕ್ಕಳಾದರೂ ಬೆಟ್ಟದ ಮಾದೇಶನ ದೇಗುಲದಲ್ಲಿ ಪೂಜೆ ಮಾಡುವವರು ಬೇಡ ಗಂಪಣರು, ಸೋಲಿಗರಿಗೆ ಆ ಹಕ್ಕಿಲ್ಲ. ಪೂಜೆ ಮಾಡುವವರನ್ನು ತಮ್ಮಡಿಗಳೆಂದು ಕರೆಯುತ್ತಾರೆ. ಪೂಜೆಯ ಹಕ್ಕು ಇವರದಾದ್ದರಿಂದ ಮಡಿ ಮೈಲಿಗೆ ಹೆಚ್ಚು. ಸರದಿ ಮೇಲೆ ಇವರಿಗೆ ಪೂಜೆಗೆ ಅವಕಾಶ ಕಲ್ಪಿಸಲಾಗುತ್ತದೆ. ಬುಡಕಟ್ಟು ಜನಾಂಗವಾದರೂ ಇವರನ್ನು ಸರ್ಕಾರ ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿಸಿದೆ. ಹೀಗಾಗಿ ಸೋಲಿಗರಿಗೆ ಸಿಗುವ ಪರಿಶಿಷ್ಟ ವರ್ಗದ ಸೌಲಭ್ಯಗಳಿಂದ, ಮಿಸಲಾತಿಯಿಂದ ವಂಚಿತರಾಗಿದ್ದಾರೆ.

ಚಾಮರಾಜನಗರದಲ್ಲಿ ದಶಕಗಳ ಹಿಂದೆ ಹಂಪಿ ವಿವಿ ವತಿಯಿಂದ ಬೇಡಗಂಪಣರ ಸ್ಥಿತಿ ಗತಿ ಬಗ್ಗೆ ವಿಚಾರ ಸಂಕಿರಣ ನಡೆದಿತ್ತು. ಅದರಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಬಹು ಹಿಂದುಳಿದ ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಒತ್ತಾಯ ಮಾಡಲಾಯಿತು.

ಅಂದಿನಿಂದ ಒತ್ತಡ ಹೇರುತ್ತಲೇ ಇದ್ದಾರೆ.ಆದರೆ ಜಾರಿಯಾಗಿಲ್ಲ. ಸರ್ಕಾರ ಇವರನ್ನು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿಸಿದರೂ ಇವರ ಮಧ್ಯೆ ವೈವಾಹಿಕ ಸಂಬಂಧಗಳಾಗಲಿ, ಕೊಡು ಕೊಳ್ಳುವ ಸಂಬಂಧಗಳಾಗಲಿ ಇಲ್ಲ. ಬೇಡಗಂಪಣರು ತಮಿಳುನಾಡಿನ ಕಾಡಿನ ಪ್ರದೇಶಗಳಾದ ಹಾಸನೂರು, ಗೇರುಮಾಳ, ಅಂದಿಯೂರು, ಹೂಜಿಮಲೆ, ಕಾಡಿಗನಹಳ್ಳಿ, ಗುಂಡೆ, ಚಿಕ್ಕನಂದಿ, ಹುಲ್ಲೇಪಾಳ್ಯ, ಬರಗೂರು, ದೇವರ ಬೆಟ್ಟ ಹಾಗೂ ಗುತ್ತಿ ಅಲತ್ತೂರು ಅರಣ್ಯ ಪ್ರದೇಶದಲ್ಲಿ ಇದ್ದಾರೆ.

ಬೆಟ್ಟದ ಬೇಡಗಂಪಣರು ವೈವಾಹಿಕ ಸಂಬಂಧ ಬೆಳೆಸಲು ಇಲ್ಲಿಗೆಲ್ಲಾ ಎಡತಾಕಬೇಕು. ಬಹುತೇಕ ಬೇಡಗಂಪಣರು ಲಿಂಗಾಯತ ಎಂದು ಮೇಲ್ವರ್ಗದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಸೋಲಿಗರನ್ನು ಅತ್ತತ್ತಲಾಗೇ ನೋಡುತ್ತಾರೆ.

ಸೋಲಿಗರ ಸ್ಥಿತಿ ಗತಿ

ಸೋಲಿಗರ ಸುಮಾರು 148 ಪೋಡುಗಳಿವೆ. 45 ಸಾವಿರ ಜನಸಂಖ್ಯೆ ಇದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ 36 ಸಾವಿರ ಇದೆ. ಮಲೆ ಮಹದೇಶ್ವರ ಬೆಟ್ಟ ಬಿಟ್ಟರೆ ಇವರು ಬಿಳಿಗಿರಿ ರಂಗನ ಬೆಟ್ಟ, ಪುಣಜನೂರು, ಬಂಡೀಪುರ, ಬೇಡ ಗುಳಿ, ಗುಂಡ್ಲುಪೇಟೆ, ಕೊಳ್ಳೇಗಾಲ ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಇದ್ದಾರೆ. ಇದಲ್ಲದೇ ತಮಿಳುನಾಡಿನ ಮಾಕನಪಾಳ್ಯ, ಸುಜ್ಜಲಕೆರೆ, ಬೂತಾಳಪುರ, ಕೊಂಗಾಡಿ, ದಿಂಬಂ, ಹಾಸನೂರು, ಮಾವನ ಬಾಳೆಪಡಗ, ಕಲ್ಲುಬಂಡಿ ಪುರ ಮುಂತಾದ ಪೋಡುಗಳಲ್ಲಿ ಚದುರಿದಂತೆ ಇದ್ದಾರೆ.

ಇವರ ಪೋಡುಗಳಿಗೂ ರಸ್ತೆ ವಿದ್ಯುತ್, ನೀರು, ಮೊದಲಾದ ಮೂಲಭೂತ ಸೌಲಭ್ಯಗಳಿಲ್ಲ. ಬೆಟ್ಟದ ಬಹು ಹಿಂದುಳಿದ ಪೋಡುಗಳನ್ನು ಬಿಟ್ಟರೆ ಇತರೆಡೆ ಸೋಲಿಗರ ಸ್ಥಿತಿ ಬೇಡಗಂಪಣರಿಗೆ ಹೋಲಿಸಿದರೆ ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಕೆಲವರು ಕಾಫಿ ಬೆಳೆಯುತ್ತಾರೆ. ಕಿರು ಅರಣ್ಯ ಉತ್ಪನ್ನಗಳನ್ನು ಶೇಖರಿಸಿ ಲ್ಯಾಂಪ್‌ ಸೊಸೈಟಿಗೆ ಮಾರುತ್ತಾರೆ. ಪರಿಶಿಷ್ಟಪಂಗಡದ ಅನೇಕಸೌಲಭ್ಯಗಳು ದೊರಕುತ್ತವೆ. ಅನೇಕರಿಗೆ ವಿವಿಧ ವಸತಿ ಯೋಜನೆಗಳಲ್ಲಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಮನರೇಗಾದಡಿ ಅರಣ್ಯ ಪ್ರದೇಶದಲ್ಲಿ ಲಾಂಟಾನಾ ತೆಗೆಯಲು, ಬೆಂಕಿರೇಖೆ ನಿರ್ಮಿಸಲು, ಕಾಡ್ಗಿಚ್ಚು ಹತೋಟಿಗೆ ತರಲು ಕೆಲಸ ಸಿಗುತ್ತದೆ. ಅರಣ್ಯ ಹಕ್ಕು ಕಾಯ್ದೆಯಂತೆ ಇವರಿಗೆ ಭೂಮಿ ಸಿಕ್ಕಿದೆ. ಪೌಷ್ಟಿಕ ಆಹಾರದ ಭಾಗವಾಗಿ ರಾಗಿ, ತುಪ್ಪ, ಮೊಟ್ಟೆ ಸಿಗುತ್ತದೆ. ಇದಕ್ಕೆ ಹೋಲಿಸಿದರೆ ಮೆಂದಾರೆಯ ಸೋಲಿಗರದು ಹೀನಾಯ ಪರಿಸ್ಥಿತಿ. ಇವರನ್ನು ಸ್ಥಳಾಂತರಿಸಿದರಷ್ಟೇ ಅವರಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆ.

ಬೇಕಿದೆ ಕನಿಷ್ಠ ಮೂಲಸೌಲಭ್ಯ

ಶತಮಾನಗಳಿಂದ ಅರಣ್ಯದಲ್ಲಿ ಬದುಕುತ್ತಿರುವ ಎರಡು ಬುಡಕಟ್ಟು ಜನರಿಗೆ 1972ರ ಅರಣ್ಯ ಸಂರಕ್ಷಣಾ ಕಾಯ್ದೆ, 1980ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ಅರಣ್ಯ ಇಲಾಖೆ ರಸ್ತೆ ಮಾಡಲು, ವಿದ್ಯುಚ್ಛಕ್ತಿ ಕಂಬ ನೆಡಲು ಇತರೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶ ಕೊಡುತ್ತಿಲ್ಲ. ಇದಕ್ಕಾಗಿ ಇವರು ನಿರಂತರ ಹೋರಾಟ ಮಾಡಿಕೊಂಡೇ ಬರುತ್ತಿದ್ದಾರೆ. ಚುನಾವಣೆ ಬಹಿಷ್ಕಾರದಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ‘ಮೊದಲು ಮತದಾನ ಮಾಡಿ ಚುನಾವಣೆ ನಂತರ ನಿಮಗೆ ಸೌಲಭ್ಯ ಒದಗಿಸುತ್ತೇವೆ’ ಎಂದು ಆಶ್ವಾಸನೆ ಕೊಟ್ಟು ನಂತರ ಕೈಕೊಟ್ಟ ಉದಾಹರಣೆಗಳೇ ಹೆಚ್ಚು .

ಓಟು ಹಾಕಲು ಐದಾರು ಕಿಮೀ ನಡೆದುಕೊಂಡು ಹೋಗಬೇಕು ಎಂದು ಮತದಾನ ಬಹಿಷ್ಕರಿಸಿದ್ದರಿಂದ ಪಡಸಲನತ್ತದವರಿಗೆ ಅಲ್ಲಿ ಬೂತ್ ವ್ಯವಸ್ಥೆ ಮಾಡಿಕೊಡಲಾಯಿತು. ಬಿಳಿಗಿರಿರಂಗನ ಬೆಟ್ಟದಲ್ಲಿ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ 700 ಎಕರೆ ಅರಣ್ಯ ಕಬಳಿಕೆ ತೆರವುಗೊಳಿಸಿ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಆದೇಶ ಮಾಡಿದ್ದರು. ಅಧಿಕಾರಿಗಳು ಸರ್ವೆ ಮಾಡಿ ಸುಮ್ಮನಾಗಿದ್ದಾರೆ. ಭೂಕಬಳಿಕೆ ಮಾಡಿರುವ ಎಲ್ಲರೂ ಗಣ್ಯವ್ಯಕ್ತಿಗಳು, ಸಮಾಜಸೇವಾ ಕಾರ್ಯಕರ್ತರು, ಮಠಾಧಿಪತಿಗಳು. ಅವರಿಗೊಂದು ನ್ಯಾಯ ನಮಗೆ ಮತ್ತೊಂದು ನ್ಯಾಯವೇ ಎನ್ನುವುದು ಇವರ ಪ್ರಶ್ನೆ. ಇಲ್ಲಿ ಹಾಗೂ ಬಂಡೀಪುರದಲ್ಲಿ ಪ್ರಭಾವಿಗಳಿಗೆ ರೆಸಾರ್ಟ್ ಕಟ್ಟಲು ಬಿಟ್ಟಿದ್ದಾರೆ. ಪರಿಸರವಾದಿಗಳು ಇದರ ವಿರುದ್ಧ ಧ್ವನಿ ಎತ್ತಿದರೂ ಪ್ರಭಾವಿಗಳು ಎಂಬ ಕಾರಣಕ್ಕೆ ಕ್ರಮ ಕೈಗೊಂಡಿಲ್ಲ. ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಚೀನಾ ಮೂಲದ ಚೆಂಡು ಹೂವು ಬಣ್ಣ ಬಿಡಿಸುವ ಕಾರ್ಖಾನೆ ಅನೇಕ ವರ್ಷಗಳಿಂದ ಕಾರ್ಯಾಚರಣೆನಡೆಸುತ್ತಿದೆ.

ಇದರ ವಿರುದ್ಧ ಪರಿಸರವಾದಿಗಳು, ಗ್ರಾಮಸ್ಥರು, ರೈತರು ಹೋರಾಟ ನಡೆಸಿದರೂ ಹೊರದೇಶಗಳ ಕೈಗಾರಿಕೆಗಳಿಗೆ ಭಾರತದಲ್ಲಿ ಕೆಂಪು ಹಾಸಿನ ಸ್ವಾಗತ ಕೋರುವ ಭಾಗವಾಗಿ ಹೋರಾಟಗಳನ್ನು ದಮನಿಸಲಾಯಿತು. ಶೋಷಿತರು, ಧ್ವನಿ ಇಲ್ಲದವರಿಗೆ ಮಾತ್ರ ಅರಣ್ಯ ಇಲಾಖೆ ಕಾನೂನುಗಳು ಅನ್ವಯಿಸುತ್ತದೆ. ಪ್ರಭಾವಿಗಳಿಗೆ ಇಲ್ಲ ಎಂದರೆ ಇದು ಯಾವ ಕಾಡಿನ ನ್ಯಾಯ? ಕಡೇ ಪಕ್ಷ ಮಹದೇಶ್ವರ ಬೆಟ್ಟದ ಕುಗ್ರಾಮಗಳಿಗೆ, ಮಕ್ಕಳನ್ನು ಶಾಲೆಗೆ ಒಯ್ಯಲು, ಆನೆ ಹಂದಿ ಕಾಟದಿಂದ ಬಚಾವು ಮಾಡಲು, ಕೆಟ್ಟು ಹೋಗಿರುವ ಸೋಲಾರ್ ಬೇಲಿ ರಿಪೇರಿ ಮಾಡಲು, ವಾಹನ ಯೋಗ್ಯ ರಸ್ತೆ ನಿರ್ಮಿಸುವುದು ಬೇಡವೇ ? ವಿದ್ಯುತ್ ಸಂಪರ್ಕ ಕಲ್ಪಿಸಲಾಗದಿದ್ದರೂ ಸಮರ್ಪಕ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡ ಬೇಡವೇ? ಇವರಿಗೆ ವನ್ಯಜೀವಿಗಳಿಂದ ಶಾಶ್ವತ ರಕ್ಷಣೆ ನೀಡಲು ರೈಲು ಕಂಬಿಗಳ ಬೇಲಿ ಯೋಜನೆ ಜಾರಿಗೊಳಿಸಬೇಕು. ಶಿಕ್ಷಣಕ್ಕೆ ಶಾಲೆ, ಚಿಕಿತ್ಸೆಗೆ ಸಣ್ಣ ಕ್ಲಿನಿಕ್, ಕುಡಿಯುವ ನೀರಿಗೆ ಶಾಶ್ವತ ಯೋಜನೆ ರೂಪಿಸಬೇಕು. ಇಂಡಿಗನತ್ತ ಪ್ರಕರಣದಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಹೃದಯಗಳು ಮಾನವೀಯತೆಯಿಂದ ಮಿಡಿಯುವಂತಾಗಬೇಕು.

andolana

Recent Posts

ಬಿಜೆಪಿ ಬೆಳಗಾವಿ ಚಲೋಗೆ ಅನುಮತಿ ಕೊಡಲ್ಲ: ಸಚಿವ ಜಿ.ಪರಮೇಶ್ವರ್‌

ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…

10 mins ago

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

46 mins ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

1 hour ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

2 hours ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

2 hours ago

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…

3 hours ago