Andolana originals

ವಯನಾಡು: ಜೀವಕಳೆ ತೊಳೆದ ಮಳೆ

ವಯನಾಡು: ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈ ಕುಗ್ರಾಮದಲ್ಲಿ ಜನರ ಆರ್ತನಾದ ಮೇರೆ ಮೀರಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು, ಮೃತದೇಹಗಳಿಗಾಗಿ ಹುಡುಕಾಟ, ಬದುಕಿಬರಬಹುದೆಂಬ ಆಸೆ ಕಂಗಳಿಂದ ಕಾದುಕುಳಿ ತಿರುವ ಸಂಬಂಧಿಕರ ದುಗುಡ ಕಲ್ಲು ಹೃದಯದವರನ್ನೂ ಕರಗಿಸುವಂತಿದೆ.

ಆಂಬ್ಯುಲೆನ್ಸ್‌ಗಳಲ್ಲಿ ಶವಾಗಾರಕ್ಕೆ ಒಂದೊಂದು ಮೃತದೇಹ ಬಂದಾಗಲೂ ತಮ್ಮವರಿರಬಹುದೇನೋ ಎಂದು ಓಡುವ ದೃಶ್ಯ ಮನಕಲುಕುತ್ತದೆ. ನಮಗೆ ಅರಿವಿಲ್ಲದೇ ಕಣ್ಣಿನಿಂದ ನೀರಿನ ಹನಿಗಳು ಜಾರುತ್ತವೆ. ಇದು ಶವಾಗಾರದಲ್ಲಿ ಮಾತ್ರ ಅಲ್ಲ, ದುರ್ಘಟನೆ ಸಂಭವಿಸಿದ ಸ್ಥಳದ ಬಳಿಯೂ ಇದೇ ಪರಿಸ್ಥಿತಿ ಇದೆ.

ಭೂ ಕುಸಿತದಿಂದ ನಾಮಾವಶೇಷವಾಗಿರುವ ಕುಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಾಗ, ನಾಶವಾದ ಮನೆಗಳ ಒಳಗೆ ಕುಳಿತಿರುವ ಮತ್ತು ಮಲಗಿರುವ ಸ್ಥಿತಿಯಲ್ಲಿ ಮೃತ ದೇಹಗಳ ಭಯಾನಕ ದೃಶ್ಯಗಳು ಕಂಡುಬಂದವು.

ರಕ್ಷಣಾ ಸಿಬ್ಬಂದಿ ಅನೇಕ ಪ್ರದೇಶಗಳನ್ನು ತಲುಪಲು ಅಸಾಧ್ಯವಾಗಿದ್ದು, ಅವು ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿವೆ. ಒಂದು ಸ್ಥಳದಲ್ಲಿ, ಸೇನೆಯ ಸಿಬ್ಬಂದಿ ಸಂಪೂರ್ಣವಾಗಿ ಮಣ್ಣಿನಲ್ಲಿ ಹೂತುಹೋಗಿದ್ದ ಮನೆಯ ಮೇಲ್ಚಾವಣಿಯನ್ನು ಮುರಿದು ಹಗ್ಗಗಳನ್ನು ಬಳಸಿ ಒಳಗೆ ಇಳಿದು ಅಲ್ಲಿ ಮೃತಪಟ್ಟಿದ್ದವರ ಶವಗಳನ್ನು ಹೊರತೆಗೆದಿದ್ದಾರೆ.

ಅಂತಹ ಒಂದು ಮನೆಯೊಳಗೆ ಹೋದ ಸ್ಥಳೀಯ ವ್ಯಕ್ತಿಯೊಬ್ಬರು, ಕುರ್ಚಿಗಳ ಮೇಲೆ ಕುಳಿತ ಸ್ಥಿತಿಯಲ್ಲಿ ಮತ್ತು ಮಂಚಗಳ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮಣ್ಣಿನಿಂದ ಆವೃತವಾದ ದೇಹಗಳನ್ನು ಕಂಡಿದ್ದಾಗಿ ಹೇಳುತ್ತಾರೆ.

ಇದುವರೆಗೆ ಕನಿಷ್ಠ ೨೭೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ೧೮೬ ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಿಲುಕಿರುವ ಶಂಕಿತ ಜನರನ್ನು ಪತ್ತೆಹಚ್ಚಲು ವಿವಿಧ ರಕ್ಷಣಾ ಸಂಸ್ಥೆಗಳು ಬುಧವಾರ ಮುಂಜಾನೆ ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವಾರು ಜನರು ಸಿಕ್ಕಿಹಾಕಿಕೊಂಡಿರಬಹುದು. ವಯನಾಡಿನ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಮೃತಪಟ್ಟಿದ್ದಾರೆ. ಶವಾಗಾರದಲ್ಲಿ ಹೆಣಗಳ ರಾಶಿಯೇ ಕಂಡುಬಂದಿವೆ.

ವಯನಾಡಿಗೆ ಸಚಿವ ಸಂತೋಷ್ ಲಾಡ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ತರ ರಕ್ಷಣೆ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.

ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್, ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ. ಈಗಾಗಲೇ ನಾಲ್ವರು ಕನ್ನಡಿಗರು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಇನ್ನೂ ಹಲವರು ಸಿಲುಕಿರುವ, ನಾಪತ್ತೆಯಾಗಿರುವ ಮಾಹಿತಿ ಇದೆ. ಅವರೆಲ್ಲರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬೆಪ್ಪಾಡಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ದುರಂತದಲ್ಲಿ ಕರ್ನಾಟಕದ ನಾಲ್ವರು ಮೃತಪಟ್ಟಿದ್ದು, ೯ ಜನರು ನಾಪತ್ತೆಯಾಗಿದ್ದಾರೆ. ೧೦ ಕನ್ನಡಿಗರನ್ನು ರಕ್ಷಿಸಿ ಕಾಳಜಿ ಕೇಂದ್ರದಲ್ಲಿರಿಸಿದ್ದೇವೆ ಎಂದಿದ್ದಾರೆ.

ಭಾರಿ ಭೂಕುಸಿತ: ಮಂಗಳವಾರ ನಸುಕಿನ ಜಾವ ವಯನಾಡು ಜಿಲ್ಲೆಯ ಮುಂಡಕ್ಕೈ , ಚೂರಲ್‌ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಭಾರಿ ಭೂಕುಸಿತ ಸಂಭವಿಸಿತು. ನೂರಾರು ಮನೆಗಳು ಮತ್ತು ಅನೇಕ ಕಡೆಯಲ್ಲಿ ಇಡೀ ಕುಟುಂಬದ ಸದಸ್ಯರೇ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಲವಾರು ಮನೆಗಳು ಧ್ವಂಸಗೊಂಡಿದ್ದು, ಜಲ ಮೂಲಗಳು ತುಂಬಿತುಳುಕುತ್ತಿವೆ.

ಮರಗಳು ಬೇರುಸಮೇತ ಬಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ವಯನಾಡು, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯೊಂದಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಇಂದು ವಯನಾಡಿಗೆ ರಾಹುಲ್, ಪ್ರಿಯಾಂಕಾ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಭೂ ಕುಸಿತ ಪೀಡಿತ ವಯನಾಡಿಗೆ ಗುರುವಾರ ಭೇಟಿ ನೀಡಲಿದ್ದು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಹಲವಾರು ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಬುಧವಾರ ಬೆಳಿಗ್ಗೆ ವಯನಾಡಿಗೆ ಭೇಟಿ ನೀಡಬೇಕಿತ್ತು ಆದರೆ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬರುವುದು ಬೇಡ ಎಂದು ಅಽಕಾರಿಗಳು ತಿಳಿಸಿದ್ದರಿಂದ ಅವರು ಭೇಟಿಯನ್ನು ಮುಂದೂಡಿದ್ದರು. ಇವರಿಬ್ಬರೂ ಗುರುವಾರ ಮೆಪ್ಪಾಡಿಯ ಸರ್ಕಾರಿ ಪ್ರೌಢ ಶಾಲೆ ಮತ್ತು ಸೇಂಟ್ ಜೋಸೆಫ್ ಶಾಲೆಯಲ್ಲಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮೆಪ್ಪಾಡಿಯ ಡಾ ಮೂಪನ್ಸ್ ಮೆಡಿಕಲ್ ಕಾಲೇಜಿಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ

ಆಂದೋಲನ ಡೆಸ್ಕ್

Recent Posts

ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯದ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ…

28 mins ago

ಹೊಸ ವರ್ಷಾಚರಣೆ: ಮೈಸೂರಿನಲ್ಲಿ ಅಬಕಾರಿ ಪೊಲೀಸರ ಅಲರ್ಟ್

ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು…

47 mins ago

ನಂಜನಗೂಡು: ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ: ಪಟ್ಟಣದಲ್ಲಿ ಆತಂಕ

ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…

1 hour ago

ಚಾಮರಾಜನಗರದಲ್ಲಿ ಮತ್ತೊಂದು ಹುಲಿ ಸೆರೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…

2 hours ago

ಓದುಗರ ಪತ್ರ: ಇಸ್ಕಾನ್ ಕೃಷ್ಣ ದೇವಾಲಯದ ಬಳಿಯಿದ್ದ ಕಸ ತೆರವು

ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…

4 hours ago

ಓದುಗರ ಪತ್ರ: ಪ್ರಮುಖ ವೃತ್ತಗಳಲ್ಲಿ ಭಿಕ್ಷುಕರ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…

4 hours ago