Andolana originals

ವಿಜಯ್‌ ದಿವಸ್‌: ಯುದ್ಧದ ದಿನಗಳ ಅನುಭವ ಮೆಲುಕು ಹಾಕಿದ ಮಾಜಿ ಯೋಧ ಮೊಹಮ್ಮದ್ ನಬಿ

ನವೀನ್ ಡಿಸೋಜ

‘ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು’ ಎಂಬ ಮಾತಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಯುದ್ಧಗಳೇ ಸಾಕ್ಷಿ ಎನ್ನಬಹುದು. ಈ ಎರಡೂ ದೇಶಗಳು ನಾಲ್ಕು ಯುದ್ಧಗಳನ್ನು ಮಾಡಿವೆ. ನಾಲ್ಕನೆಯದಾಗಿ ನಡೆದ ಕಾರ್ಗಿಲ್ ಯುದ್ಧಕ್ಕೆ ಈಗ 25 ವರ್ಷಗಳು ಸಂದಿವೆ. ಭಾರತದ ವಶದಲ್ಲಿರುವ ಜಮ್ಮು-ಕಾಶ್ಮೀರದ ಭಾಗವಾದ ಕಾರ್ಗಿಲ್ ಅನ್ನು ಪಾಕಿಸ್ತಾನವು ಆಕ್ರಮಿಸುವ ಪ್ರಯತ್ನ ಮಾಡಿದ್ದು ಯುದ್ಧಕ್ಕೆ ಕಾರಣಯಿತು. 1999ರ ಮೇ- ಜುಲೈ ತಿಂಗಳಲ್ಲಿ ನಡೆದ ಈ ಸಮರ ಅತ್ಯಂತ ಭೀಕರವಾಗಿತ್ತು. ಭಾರತೀಯ ಸೇನೆಯ 527 ಯೋಧರು ಹುತಾತ್ಮರಾದರು. ಅಂತಿಮವಾಗಿ 1999ರ ಜುಲೈ 26ರಂದು ಭಾರತೀಯ ಸೇನೆ ಕಾರ್ಗಿಲ್‌ನಲ್ಲಿ ವಿಜಯ ಪತಾಕೆ ಹಾರಿಸಿತು. ಕಾರ್ಗಿಲ್ ಯುದ್ಧದಲ್ಲಿ ಜಯಭೇರಿ ಬಾರಿಸಿದ ಯೋಧರ ನೆನಪುಗಳನ್ನು ಹಾಗೂ ಧೈರ್ಯ, ಏಕತೆ, ದೇಶಭಕ್ತಿಯನ್ನು ಮತ್ತೊಮ್ಮೆ ಜಾಗೃತಗೊಳಿಸಿದ ‘ವಿಜಯ್ ದಿವಸ್’ನ ಬೆಳ್ಳಿ ಹಬ್ಬವನ್ನು ಇಂದು (ಜುಲೈ 26) ದೇಶಾದ್ಯಂತ ಆಚರಿಸಲಾಗುತ್ತಿದೆ.

“ಪಕ್ಕಕ್ಕೇ ಬಂದು ಬೀಳುತ್ತಿದ್ದ ಶೆಲ್‌ಗಳು, ಗುಂಡಿನ ಮೊರೆತ… ಜೀವದ ಹಂಗು ತೊರೆದು ಶತ್ರು ದೇಶದ ಸೈನಿಕರನ್ನು ಬಗ್ಗುಬಡಿದ ಕ್ಷಣಗಳು ಅವಿಸ್ಮರಣೀಯ…” ಇವು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರೊಬ್ಬರ ಮನದಾಳದ ಮಾತುಗಳು.

25 ವರ್ಷಗಳ ಹಿಂದೆ ಜಮ್ಮು- ಕಾಶ್ಮೀರ ರಾಜ್ಯದ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಸೈನಿಕರನ್ನು ಭಾರತೀಯ ಸೇನೆ ಮಣಿಸಿ ವಿಜಯ ಪತಾಕೆ ಹಾರಿಸಿತು. ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಕೊಡಗಿನ ಯೋಧ ಮೊಹಮ್ಮದ್ ನಬಿ ಅವರು, ‘ಆಂದೋಲನ’ದೊಂದಿಗೆ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ.

ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನಿಗಳು ಅತಿಕ್ರಮಿಸಿಕೊಂಡಾಗ ನಾವು ಎರಡೂವರೆ ತಿಂಗಳು ಪೂರ್ತಿ ಫೀಲ್ಡ್‌ನಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ಈ ವೇಳೆ ಶೆಲ್‌ ಗಳ ದಾಳಿಯಿಂದ ರಾತ್ರಿಯಿಡೀ ಆಕಾಶದಲ್ಲಿ ದೀಪಾವಳಿಯಂತೆ ತೋರುತ್ತಿದ್ದವು. ನಮ್ಮ ಹಾಗೂ ಶತ್ರು ಪಾಳೆಯದಿಂದ ಹಾರುವ ಶೆಲ್, ನಮ್ಮ ವಾಯುದಳದ ದಾಳಿಯಿಂದಾಗಿ ಕೂಡ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದಾಗ ಮೂಡುವ ಬಣ್ಣ ಬಣ್ಣದ ಬೆಳಕಿನಂತೆ ತೋರುತ್ತಿದ್ದವು. ಆದರೆ ಶೆಲ್ಲಿಂಗ್‌ನ ಶಬ್ದ ಮಾತ್ರ ಭಯಂಕರವಾದದ್ದು” ಎಂದು ಹೇಳಿದ ಮೊಹಮ್ಮದ್ ಅವರ ಕಂಗಳ ಮುಂದೆ ಅಂದಿನ ಯುದ್ಧದ ಭೀಕರತೆ ಮತ್ತೆ ಮೂಡಿದಂತೆ ಭಾಸವಾಯಿತು.

ಮೊಹಮ್ಮದ್ ನಬಿ ಸೇನೆಯ ಎಂಇಜಿಯ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಗಿಲ್ ಯುದ್ಧ ಸಂಭವಿಸುವ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದವರು. ಸೈನಿಕರ ಮುಖಾಮುಖಿ ಹೋರಾಟಕ್ಕೂ ಮುನ್ನ ಜೀವದ ಹಂಗು ತೊರೆದು ಸ್ಥಳಗಳಿಗೆ ಮೊದಲೇ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಇತರ ಸೈನಿಕರನ್ನು ಅಲ್ಲಿಗೆ ಕರೆದೊಯ್ಯುವ ಮತ್ತು ಅವರಿಗಿಂತ ಮುಂಚೂಣಿಯಲ್ಲಿ ತೆರಳುವ ಕಾರ್ಯವನ್ನು ಎಂಇಜಿ ವಿಭಾಗ ಮಾಡುತ್ತದೆ. ಅಷ್ಟೇ ಅಲ್ಲ, ಕ್ಷಣ ಮಾತ್ರದಲ್ಲಿ ಸೇತುವೆ, ರಸ್ತೆ ನಿರ್ಮಿಸುವ ಎಂಇಜಿ ವಿಭಾಗದ ಯೋಧರ ಕಾರ್ಯ ಅತ್ಯಂತ ಅಪಾಯಕಾರಿ ಹಾಗೂ ರೋಮಾಂಚನಕಾರಿಯಾದದ್ದು.

2 ದಿನಗಳಲ್ಲಿ ವಾಪಸ್ ಬರಲೇಬೇಕು..!

ನಾವು ಮ್ಯಾಪಿಂಗ್‌ಗೆ ತೆರಳುವಾಗ ಎರಡೂವರೆ ಲೀಟರ್‌ನಷ್ಟು ನೀರು, ಎರಡು ದಿನಗಳಿಗೆ ಆಗುವಷ್ಟು ಡ್ರೈಫ್ರೂಟ್‌ಗಳನ್ನು ಮಾತ್ರ ಕೊಂಡೊಯ್ಯುತ್ತಿದ್ದೆವು. ಏಕೆಂದರೆ ಕಾರ್ಗಿಲ್‌ನಂತಹ ಪ್ರದೇಶದಲ್ಲಿ ಉಸಿರಿಗಾಗಿ ಪರಿತಪಿಸುವಾಗ ಅಂತಹ ಬೆಟ್ಟದಲ್ಲಿ ಒಂದು ಬಿಸ್ಕೆಟ್ ಪೊಟ್ಟಣ ಕೂಡ ಮಣಭಾರವಾಗಿಬಿಡುತ್ತದೆ. ಹೀಗಾಗಿ ನಾವು ಎಷ್ಟೇ ದೂರ ತೆರಳಿದರೂ 2 ದಿನಗಳೊಳಗೆ ವಾಪಸ್ ಬರಲೇಬೇಕಾಗಿತ್ತು ಎಂಬುದನ್ನು ಅತ್ಯಂತ ಉತ್ಸಾಹದಿಂದ ಮೊಹಮ್ಮದ್ ನಬಿ ಹೇಳಿದರು.

ಶತ್ರುಗಳ ದೃಷ್ಟಿಗೆ ಬೀಳುವ ಅಪಾಯ: ಯಾವುದೇ ಒಂದು ಪ್ರದೇಶದ ಪಕ್ಕಾ ಮಾಹಿತಿ ನಮ್ಮಲ್ಲಿರುತ್ತದೆ. ಅಲ್ಲಿನ ಮ್ಯಾಪ್ ನಮ್ಮ ಕಣ್ಣ ಮುಂದಿರಬೇಕು. ಎಲ್ಲೆಲ್ಲಿ ಶತ್ರುಗಳ ಅಡಗುತಾಣವಿದೆ ಎಂಬುದನ್ನು ಪತ್ತೆಹಚ್ಚಿ ಸ್ಕೆಚ್ ಮಾಡಬೇಕು. ನಂತರ ಅಲ್ಲಿಗೆ ನಮ್ಮ ಸೈನಿಕರು ಯಾವ ಮಾರ್ಗವಾಗಿ ತೆರಳಬೇಕು ಎಂಬುದನ್ನು ಮಾರ್ಕ್ ಮಾಡಿ ಅವರ ಮಾರ್ಗದಲ್ಲಿ ಅಗತ್ಯ ಬಿದ್ದ ಕಡೆಗಳಲ್ಲಿ ತಾತ್ಕಾಲಿಕ ಸೇತುವೆ, ರಸ್ತೆಗಳನ್ನು ಶೀಘ್ರವಾಗಿ ರೂಪಿಸಿಕೊಡಬೇಕು. ಈ ಹಿನ್ನೆಲೆಯಲ್ಲಿ ಶತ್ರುಗಳ ದೃಷ್ಟಿಗೆ ನಾವು ಬಹುಬೇಗ ಬೀಳುವ ಅಪಾಯ ಇರುತ್ತದೆ.

ಯುದ್ಧಕ್ಕೆ ತಿರುವು ನೀಡಿದ ನಮ್ಮವರ ಬಲಿದಾನ..!

ಅದೊಂದು ದಿನ ಯುದ್ಧದಲ್ಲಿ ನಮ್ಮವರು ಇಂಚು ಇಂಚೂ ಪ್ರದೇಶವನ್ನೂ ಮರಳಿ ವಶಕ್ಕೆ ಪಡೆಯುತ್ತಾ ಮುನ್ನಡೆಯುತ್ತಿದ್ದಾಗ, ಬೆಟ್ಟವೊಂದರ ತಪ್ಪಲಿನಲ್ಲಿ ನಮ್ಮಂತೆಯೇ ಮ್ಯಾಪಿಂಗ್‌ಗೆ ತೆರಳಿದ 6 ಮಂದಿಯ ಮೃತದೇಹಗಳು ಅತ್ಯಂತ ಭೀಕರ ಸ್ಥಿತಿಯಲ್ಲಿ ಪತ್ತೆಯಾದವು. ಅಂದು ನಮ್ಮ ಸೈನಿಕರ ರಕ್ತ ಕುದಿಯಿತು. ಅಲ್ಲಿಯತನಕ ನಮ್ಮ ಕಡೆಯ ಯೋಧರು ಮೃತಪಟ್ಟಿರಲಿಲ್ಲ ಎಂದಲ್ಲ. ನೂರಾರು ಸಂಖ್ಯೆಯ ವೀರರು ಪ್ರಾಣ ಬಲಿದಾನಗೈದಿದ್ದರು. ಯುದ್ಧದ ಸಂದರ್ಭದಲ್ಲಿ ಉಭಯ ದೇಶಗಳ ಪಾಳೆಯಗಳಲ್ಲಿ ಅಧಿಕಾರಿಗಳ ಫ್ಲ್ಯಾಗ್ ಮೀಟಿಂಗ್ ನಡೆಯುತ್ತದೆ. ಬಿಳಿ ಧ್ವಜ ತೋರಿಸಿ ಸೈನಿಕರ ಮೃತದೇಹಗಳ ಬದಲಾವಣೆಯಾಗುತ್ತದೆ. ಕೆಲವೊಮ್ಮೆ ಗಾಯಗೊಂಡವರನ್ನೂ ಬದಲಿಸಲಾಗುತ್ತದೆ. ಆದರೆ ಈ 6 ಮಂದಿಗೂ ಅತ್ಯಂತ ಭಯಂಕರವಾಗಿ ಚಿತ್ರಹಿಂಸೆ ನೀಡಿದ್ದರು. ಮರ್ಮಾಂಗ ಕತ್ತರಿಸಲ್ಪಟ್ಟಿತ್ತು. ಕಣ್ಣು ಉಗುರು ಸೇರಿದಂತೆ ಅಂಗಾಂಗಗಳನ್ನು ಕೀಳಲಾಗಿತ್ತು. ನಮ್ಮ ಸಹೋದ್ಯೋಗಿಗಳ ಎದೆಗೆ ಮೊಳೆ ಹೊಡೆದು ಹಿಂಸೆ ನೀಡಿದ್ದರು. ಹೀಗಾಗಿಯೇ ನಮ್ಮ ರಕ್ತ ಕುದಿಯತೊಡಗಿತ್ತು. ಅಂದಿನ ಎಲ್ಲರ ದುಃಖ ಸೇಡಿಗೆ ಪರಿವರ್ತನೆಯಾಯಿತು. ಪ್ರಾಣವನ್ನೂ ಲೆಕ್ಕಿಸದೆ ಮುನ್ನುಗ್ಗಿ ಶತ್ರುಗಳ ಹುಟ್ಟಡಗಿಸಲು ಕಾರ್ಯತಂತ್ರ ರೂಪಿಸಲಾಯಿತು. ಅಂದಿನಿಂದ ಯುದ್ಧ ತಿರುವು ಪಡೆದುಕೊಂಡಿತು. ಅಂತಿಮವಾಗಿ ಜಯ ನಮ್ಮ ದೇಶದ್ದಾಯಿತು.

ನಿವೃತ್ತಿ ಬಳಿಕ ಕುಟುಂಬದೊಂದಿಗೆ ನೆಮ್ಮದಿಯ ಬದುಕು..!

ಮೊಹಮ್ಮದ್ ನಬಿ ಅವರು ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿ ಈಗ ಕುಟುಂಬದೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸೇನೆಯಿಂದ ನಿವೃತ್ತಿಯಾದ ಬಳಿಕ ಯೂನಿಯನ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಬಿ ಅವರು ಬ್ಯಾಂಕ್ ಕೆಲಸದಿಂದಲೂ ನಿವೃತ್ತಿಯಾಗಿದ್ದಾರೆ. ಆದರೂ ಬ್ಯಾಂಕ್‌ನಲ್ಲಿ ಅವರ ಸೇವೆಯನ್ನು ಪರಿಗಣಿಸಿ ಮತ್ತೆ ಉದ್ಯೋಗ ನೀಡಿದ್ದು, ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ನೂರ್‌ ಜಹಾನ್ ಗೃಹಿಣಿಯಾಗಿದ್ದು, ಇಬ್ಬರು ಪುತ್ರರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಒಬ್ಬ ಪುತ್ರ ಅಜ‌ರ್‌ ಯೂನಿಯನ್ ಬ್ಯಾಂಕ್‌ನಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಪುತ್ರ ಅಸೀಫ್ ಮನೆಯಲ್ಲಿಯೇ ಇದ್ದುಕೊಂಡು ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಒಟ್ಟಿನಲ್ಲಿ ಹಲವು ಏಳುಬೀಳುಗಳ ನಡುವೆ, ಸೇನೆಯ ಸಂಕಷ್ಟದ ಮತ್ತು ಆತ್ಮತೃಪ್ತಿಯ ಕೆಲಸದ ಬಳಿಕ ಈಗ ಮೊಹಮ್ಮದ್ ನಬಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಹುತಾತ್ಮ ಯೋಧರ ಕುಟುಂಬಕ್ಕೆ ಒತ್ತಾಸೆಯಾದ ಆಂದೋಲನ

ಮಾನವೀಯತೆಗೆ ನೆಲ, ಭಾಷೆ ಧರ್ಮಗಳ ಗಡಿ ಇಲ್ಲ. ‘ಆಂದೋಲನ’ದ ಸಹಾಯಹಸ್ತ ಕನ್ನಡ ನಾಡಿನ ಗಡಿಯಾಚೆಗೂ ಚಾಚಿರುವುದೇ ಇದಕ್ಕೆ ಸಾಕ್ಷಿ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ರಾಜ್ಯದ 18 ಯೋಧರು ಹುತಾತ್ಮರಾಗಿದ್ದರು. ಆಗ ಸಂತ್ರಸ್ತ ಕುಟುಂಬಗಳ ನೆರವಿಗೆ ಆಂದೋಲನ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ಪತ್ರಿಕೆಯ ಮೂಲಕ ಪರಿಹಾರ ನಿಧಿ ಸ್ಥಾಪಿಸಿದರು. ನಿಧಿಗೆ ದೇಣಿಗೆ ನೀಡಿದ ದಾನಿಗಳ ಹೆಸರನ್ನು ಪ್ರತಿದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿತ್ತು. 55 ದಿನಗಳವರೆಗೆ ಒಟ್ಟು 26,38,309 ರೂ. ಸಂಗ್ರಹವಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಮಡಿಕೇರಿಯ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ 1999ರ ಆ.17ರಂದು ಮಡಿಕೇರಿಯಲ್ಲಿ ‘ಆಂದೋಲನ’ ವತಿಯಿಂದ ಸರಳ ಕಾರ್ಯಕ್ರಮವನ್ನು ಆಯೋಜಿಸಿ, ಸಂತ್ರಸ್ತ ಕುಟುಂಬಗಳಿಗೆ ತಲಾ 1 ಲಕ್ಷ ರೂ.ಗಳನ್ನು ನೇರವಾಗಿ ನೀಡಲಾಗಿತ್ತು. ಇದಲ್ಲದೆ, 1999ರ ಆಗಸ್ಟ್ 31ರಂದು ಮೈಸೂರಿನಲ್ಲಿ ‘ಆಂದೋಲನ ಭವನ’ದಲ್ಲಿ ಸರಳ ಕಾರ್ಯಕ್ರಮವನ್ನು ಹಮ್ಮಿಕೊಂಡು, ಉತ್ತರ ಕರ್ನಾಟಕದ 10 ಹುತಾತ್ಮ ಯೋಧರ ಸಂತ್ರಸ್ತ ಕುಟುಂಬಗಳಿಗೆ ತಲಾ 1 ಲಕ್ಷ ರೂ. ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ, ಮೈಸೂರು ನಗರಪಾಲಿಕೆ ಆಯುಕ್ತ ಡಾ.ಬೋರೇಗೌಡ, ನಗರ ಪೊಲೀಸ್‌ ಆಯುಕ್ತ ಕೆಂಪಯ್ಯ ಅವರು ಪಾಲ್ಗೊಂಡಿದ್ದರು.

ಆಂದೋಲನ ಡೆಸ್ಕ್

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

5 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

6 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

6 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

7 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

8 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

8 hours ago