ಎಚ್.ಎಸ್.ದಿನೇಶ್ ಕುಮಾರ್
ತಪಾಸಣೆ ವೇಳೆ ಕೈಗೊಳ್ಳಬಹುದಾದ ಕ್ರಮಗಳು
* ವಾಹನ ತಪಾಸಣೆ ಸ್ಥಳದಿಂದ ನೂರು ಮೀಟರ್ ಹಿಂದೆ ಸೂಚನಾ ಫಲಕದೊಂದಿಗೆ ಬ್ಯಾರಿಕೇಡ್ ಅಳವಡಿಕೆ
* ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಿಸಿ ಟಿವಿಗಳ ಸಂಖ್ಯೆ ಹೆಚ್ಚಳ
* ಸಂಚಾರ ಪೊಲೀಸರಿಗೆ ಆಧುನಿಕ ತಂತ್ರ ಜ್ಞಾನದ ಕ್ಯಾಮೆರಾ ಒದಗಿಸುವುದು
ಮೈಸೂರು: ಮಂಡ್ಯದಲ್ಲಿ ಸೋಮವಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದ ದುರಂತದಲ್ಲಿ ೩ ವರ್ಷದ ಹೆಣ್ಣು ಮಗು ಪ್ರಾಣ ಕಳೆದುಕೊಂಡ ಘಟನೆಯ ಬೆನ್ನಲ್ಲೇ, ಪೊಲೀಸರು ನಡೆಸುವ ವಾಹನ ತಪಾಸಣೆ ಹೇಗಿರಬೇಕು? ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಅದಕ್ಕಿಂತ ಹೆಚ್ಚಾಗಿ ಅದು ಜೀವ ರಕ್ಷಕ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಆ ಜವಾಬ್ದಾರಿ ಯಾರದ್ದು? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಮಂಡ್ಯದಲ್ಲಿ ನಡೆದ ಪ್ರಕರಣದಲ್ಲಿ ಹೆಲ್ಮೆಟ್ ಧರಿಸದ ಕಾರಣ ಸಂಚಾರ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅನಿರೀಕ್ಷಿತವಾಗಿ ಬೈಕ್‌ಗೆ ಟ್ಯಾಂಕರ್ ಗುದ್ದಿದ ಪರಿಣಾಮವಾಗಿ, ಬೈಕ್ ಸವಾರ ಸಹಿತ ಮೂವರು ಕೆಳಗೆ ಬಿದ್ದಿದಾರೆ. ಅವರ ಪೈಕಿ ೩ ವರ್ಷದ ಮಗುವು ಪ್ರಾಣ ಕಳೆದುಕೊಂಡಿತು.
ಮೈಸೂರಿನಲ್ಲಿ ಕೂಡ ಹಿಂದೆ ಇಂತಹ ಘಟನೆಗಳು ನಡೆದಿವೆ. ೨೦೨೨ರ ಮಾರ್ಚ್‌ನಲ್ಲಿ ಹಿನಕಲ್ ವರ್ತುಲ ರಸ್ತೆಯ ಬಳಿ ಸಂಚಾರ ಪೊಲೀಸರು ಮಾಡಿದ ಎಡ ವಟ್ಟಿನಿಂದ ಬೈಕ್ ಸವಾರರೊಬ್ಬರು ಲಾರಿಗೆ ಸಿಲುಕಿ ಸಾವಿಗೀಡಾಗಿದ್ದರು.
ಇಂತಹ ಘಟನೆಗಳು ವಾಹನ ಸವಾರರಿಗೆ ಎಚ್ಚರಿಕೆಯ ಘಂಟೆಯಾಗಬೇಕು. ಜೊತೆಗೆ ರಸ್ತೆಯಲ್ಲಿ ನಿಂತು ಏಕಾಏಕಿ ಚಲಿಸುತ್ತಿರುವ ವಾಹನಗಳಿಗೆ ಸಂಚಾರ ಪೊಲೀಸರು ಕೈ ಅಡ್ಡವಿಟ್ಟು ವಾಹನಗಳನ್ನು ನಿಲ್ಲಸಲು ಮುಂದಾದಲ್ಲಿ ಆಗಬಹುದಾದ ಅನಾಹುತ ಎಂತಹುದು ಎಂಬುದು ಪೊಲೀಸರಿಗೂ ಗೊತ್ತಾಗಬೇಕು.
ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಮುಂತಾದ ಅಪಾಯಕಾರಿ ನಡವಳಿಕೆಗಳನ್ನು ಬಿಡಬೇಕು. ಇವುಗಳು ಅಪಘಾತಕ್ಕೆ ಕಾರಣವಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ನಗರದಲ್ಲಿ ಕೆಲ ವರ್ಷಗಳ ಹಿಂದೆ ಸಂಚಾರ ನಿಯಮ ಉಲ್ಲಂಸುವ ವಾಹನ ಸವಾರರ ಫೋಟೋಗಳನ್ನು ನಾಗರಿಕರೇ ತೆಗೆದು ಪೊಲೀಸರಿಗೆ ಕಳುಹಿಸುವ ‘ಪಬ್ಲಿಕ್ ಐ’ ಎಂಬ ಯೋಜನೆಯೊಂದು ಜಾರಿಯಾಗಿತ್ತು.
ಆದರೆ, ಅದು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಇನ್ನು ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಂಟರ್ ಸೆಪ್ಟರ್ ಸಂಚರಿಸುತ್ತಲೇ ಇರುತ್ತದೆ. ಆದರೂ ಸಂಚಾರ ನಿಯಮ ಉಲ್ಲಂಸುವವರನ್ನು ನಿಯಂತ್ರಿಸುವುದು ಸಾಧ್ಯವಾಗದಿರುವುದು ವಿಪರ್ಯಾಸ.
ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರೆ, ಭವಿಷ್ಯದಲ್ಲಿ ಅವರು ಸಂಚಾರ ನಿಯಮ ಪಾಲಿಸುತ್ತಾರೆ. ಮಾತ್ರವಲ್ಲ ಅವರು ತಮ್ಮ ಪೋಷಕರಿಗೂ ತಿಳಿಹೇಳುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಅದು ಮತ್ತಷ್ಟು ವೇಗಪಡೆದುಕೊಳ್ಳುವ ಅವಶ್ಯಕತೆ ಇದೆ.
ಇನ್ನು ಸಂಚಾರ ವಿಭಾಗದ ಪೊಲೀಸರಿಗೂ ಮೇಲಧಿಕಾರಿಗಳು ತಿಳಿಹೇಳುವ ಅಗತ್ಯ ಇದೆ. ಇಂದು ದೇಶ ವೈಜ್ಞಾನಿಕವಾಗಿ ಸಾಕಷ್ಟು ಸಾಧನೆ ಮಾಡಿದೆ. ಆ ವೈಜ್ಞಾನಿಕ ಸಾಧನಗಳನ್ನು ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿದೆ. ೨೦೧೫ರಲ್ಲಿ ಬಿ.ದಯಾನಂದ್ ಅವರು ನಗರ ಪೊಲೀಸ್ ಆಯುಕ್ತರಾಗಿದ್ದ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ನೋಟಿಸ್ ಜಾರಿಗೊಳಿಸುವ ನಿಯಮವನ್ನು ಜಾರಿಗೆ ತಂದಿದ್ದರು. ಇದರಿಂದ ಸಂಚಾರ ನಿಯಮ ಉಲ್ಲಂಘಿಸಿದವರ ಮನೆಗಳಿಗೆ ನೋಟಿಸ್ ಹೋಗುತ್ತಿತ್ತು. ತಪ್ಪು ಮಾಡಿದವರು ಆಯಾ ವ್ಯಾಪ್ತಿಯ ಠಾಣೆಗಳಿಗೆ ತೆರಳಿ ದಂಡ ಪಾವತಿಸುತ್ತಿದ್ದರು. ಸರತಿಯಲ್ಲಿ ನಿಂತು ದಂಡ ಪಾವತಿಸಿದ ಉದಾಹರಣೆಗಳೂ ಇವೆ. ಆದರೀಗ ಇಲಾಖೆಯ ಆಂತರಿಕ ಕಾರಣಗಳಿಂದಾಗಿ ನೋಟಿಸ್ ನೀಡುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.
ಇಂದಿನ ಪ್ರಭಾರ ಡಿಜಿಪಿ ಡಾ.ಎಂ.ಎ.ಸಲೀಂ ಅವರು ೨೦೧೩ರಲ್ಲಿ ಮೈಸೂರು ಪೊಲೀಸ್ ಆಯುಕ್ತರಾಗಿದ್ದರು. ಆ ಸಂದರ್ಭದಲ್ಲಿ ಸಂಚಾರ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಚುರುಕು ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದರು.
ನಗರದಾದ್ಯಂತವಿರುವ ಎಲ್ಲ ಸಂಚಾರ ಠಾಣೆಗಳ ಪೊಲೀಸರಿಗೆ ಇಲಾಖೆ ವತಿಯಿಂದಲೇ ಕ್ಯಾಮೆರಾಗಳನ್ನು ನೀಡಿದ್ದರು. ನಿಯಮ ಉಲ್ಲಂಘಿಸುವವರ ವಾಹನಗಳ ಫೋಟೋ ತೆಗೆದು ಅವರ ವಿಳಾಸಕ್ಕೆ ನೋಟಿಸ್ ತಲುಪುವಂತೆ ನೋಡಿಕೊಂಡಿದ್ದರು. ಆದರೀಗ ಕ್ಯಾಮೆರಾಗಳು ನಾಪತ್ತೆಯಾಗಿವೆ. ಹೀಗಾಗಿ ಪೊಲೀಸರು ಹಳೇ ಪದ್ಧತಿಯಲ್ಲಿಯೇ ವಾಹನ ತಪಾಸಣೆಗೆ ಮುಂದಾಗಿದ್ದಾರೆ. ಈಗಲಾದರೂ ಪೊಲೀಸರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
” ಇಂದು ನಾವು ವೈಜ್ಞಾನಿಕವಾಗಿ ಸಾಕಷ್ಟು ಮುಂದಿದ್ದೇವೆ. ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಿಸಿಕ್ಯಾಮೆರಾಗಳನ್ನು ಹೆಚ್ಚು ಮಾಡಬಹುದು. ಪೊಲೀಸರಿಗೆ ಒಳ್ಳೆಯ ಕ್ಯಾಮೆರಾಗಳನ್ನು ನೀಡಬೇಕು. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ತಪಾಸಣೆ ಬಿಟ್ಟು ಉಳಿದ ತಪಾಸಣೆಗಳನ್ನು ದೈಹಿಕವಾಗಿ ಮಾಡುವುದು ಸರಿಯಲ್ಲ. ಹಾಗೇನಾದರೂ ರಸ್ತೆಯಲ್ಲಿ ನಿಂತು ತಪಾಸಣೆ ಮಾಡಲೇ ಬೇಕು ಎಂದಾದಲ್ಲಿ ನೂರು ಮೀಟರ್ ಹಿಂದೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ತಪಾಸಣೆ ಮಾಡುತ್ತಿದ್ದೇವೆ ಎಂದು ಜನರಿಗೆ ಫಲಕಗಳ ಮೂಲಕ ತಿಳಿವಳಿಕೆ ನೀಡಬೇಕು. ಸಂಚಾರ ಪೊಲೀಸರು ಇರುವುದು ಅಪಘಾತಗಳನ್ನು ತಪ್ಪಿಸಲು ಮಾತ್ರ. ಆದರೆ, ಅವರೇ ಅಪಘಾತಕ್ಕೆ ಕಾರಣವಾದರೆ, ಜನರಿಗೆ ಎಂತಹ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.”
-ಶಂಕರೇಗೌಡ, ನಿವೃತ್ತ ಎಸ್‌ಪಿ
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್ ಚಿತ್ರಕ್ಕೂ ಪೈರಸಿ…
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಕಷ್ಟ ಎಂದು ಮಾಜಿ ಎಚ್‌ಡಿಡಿ ಹೇಳಿಕೆ ಕುರಿತು ಬಿಜೆಪಿ…
ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…
ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…
ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರದ…
ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…