ಕೆ.ಬಿ.ರಮೇಶನಾಯಕ
ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಸ್ತಬ್ಧಚಿತ್ರಗಳ ನಿರ್ಮಾಣ; ೫೦ ಸ್ತಬ್ಧಚಿತ್ರಗಳ ಮೆರವಣಿಗೆ
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಏಕತಾ ಮಂತ್ರ, ತತ್ವಗಳನ್ನು ಸಾರುವ ಸ್ತಬ್ಧಚಿತ್ರಗಳು ಅನಾವರಣಗೊಳ್ಳಲಿವೆ.
ಗಾಂಧಿ ಜಯಂತಿ ದಿನದಂದೇ ವಿಜಯದಶಮಿ ಮೆರವಣಿಗೆ ನಡೆಯುವುದರಿಂದ ಬಹುತೇಕ ಸ್ತಬ್ಧಚಿತ್ರಗಳು ಗಾಂಧೀಜಿ ಕಂಡ ಆಶಯಗಳನ್ನು ಜನರೆದುರು ತೆರೆದಿಡಲಿವೆ. ಇದೇ ಮೊದಲ ಬಾರಿಗೆ ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್), ಬಿಎಚ್‌ಇಎಲ್(ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್), ಕೆಎಸ್‌ಆರ್‌ಟಿಸಿ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಸಾಧನೆಯನ್ನು ಅನಾವರಣಗೊಳಿಸುತ್ತಿರುವುದು ವಿಶೇಷವಾಗಿದೆ.
ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಾಲ್ಕೂವರೆ ಕಿ.ಮೀ. ಉದ್ದಕ್ಕೂ ಲಕ್ಷಾಂತರ ಜನರು ಜಂಬೂಸವಾರಿ ಮೆರವಣಿಗೆಯನ್ನು ನೇರವಾಗಿ ವೀಕ್ಷಣೆ ಮಾಡಿದರೆ, ಕೋಟ್ಯಂತರ ಜನರು ದೃಶ್ಯ ಮಾಧ್ಯಮದ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆ. ಸ್ತಬ್ಧಚಿತ್ರಗಳು ತಂತಮ್ಮ ಜಿಲ್ಲೆಯ, ಇಲಾಖೆಗಳ ಇತಿಹಾಸವನ್ನು ಬಿಂಬಿಸಿ ಗಮನ ಸೆಳೆಯಲು ಸಿದ್ಧವಾಗಿವೆ. ಹಾಗಾಗಿಯೇ ಈ ಬಾರಿ ಗಾಂಽಜಿಯ ಏಕತಾ ಮಂತ್ರ, ಸರ್ವ ಧರ್ಮ ಸಮನ್ವಯತೆ ಹಾಗೂ ತತ್ವ ಸಂದೇಶಗಳನ್ನು ಸಾರುವ ಪ್ರಯತ್ನ ಮಾಡಲಾಗುತ್ತದೆ.
ಉಡುಪಿ ಜಿಲ್ಲೆಯು ಗಾಂಧೀಜಿ ಅವರ ಆಶಯದ ಸ್ವದೇಶಿ ಉಡುಪುಗಳನ್ನು ಧರಿಸುವಂತೆ ಸ್ವಚ್ಛ ಉಡುಪು, ಸಕ್ಕರೆ ನಾಡು ಮಂಡ್ಯ ಜಿಲ್ಲೆಯು ಶಿವಪುರ ಸತ್ಯಾಗ್ರಹ ಸೌಧದ ಸ್ತಬ್ಧಚಿತ್ರ ನಿರ್ಮಾಣ ಮಾಡಿದರೆ, ದೇಶದಲ್ಲೇ ಎರಡು ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಸೇರಿದಂತೆ ಹಲವಾರು ಸ್ವಚ್ಛ ನಗರಿ ಬಿರುದುಗಳನ್ನು ಪಡೆದಿರುವ ಕಾರಣ ಸ್ವಚ್ಛ ಮೈಸೂರು ಸ್ತಬ್ಧಚಿತ್ರವನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗುತ್ತಿದೆ.
ಸೈನಿಕರ ನಾಡು ಕೊಡಗು ಜಿಲ್ಲೆಯಲ್ಲಿರುವ ಚಾರಣ ಸ್ಥಳಗಳನ್ನು ವೈಭವೀಕರಿಸುವುದಕ್ಕಾಗಿ ಈ ಬಾರಿ ಕೊಡಗು ಚಾರಣ ಸ್ಥಳಗಳುಳ್ಳ ಸ್ತಬ್ಧಚಿತ್ರ ತಯಾರಿಸಿದರೆ, ವಿಜಯನಗರ ಜಿಲ್ಲೆ ತನ್ನ ವೈಶಿಷ್ಟ್ಯ್ಠತೆಗಳನ್ನು ಅನಾವರಣ ಮಾಡಲಿದೆ. ಕೊಪ್ಪಳ ಜಿಲ್ಲೆಯು ಕಿನ್ನಾಳ ಕಲೆ, ಹಾವೇರಿ ಜಿಲ್ಲೆಯಿಂದ ಮೈಲಾರ ಮಹಾದೇವ, ಗಡಿನಾಡು ಚಾಮರಾಜನಗರ ಜಿಲ್ಲೆಯಿಂದ ಪ್ರಕೃತಿಯೊಂದಿಗೆ ಪ್ರಗತಿಯತ್ತ, ಚಿತ್ರದುರ್ಗ ಜಿಲ್ಲೆಯಿಂದ ರಾಜವೀರ ಮದಕರಿನಾಯಕ ಕುರಿತಾದ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಸಮಾಜ ಕಲ್ಯಾಣ ಇಲಾಖೆಯು ಸಾಧಿಸಿರುವ ಪ್ರಗತಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಸಂವಿಧಾನ ಪೀಠಿಕೆ ಸೇರಿದಂತೆ ಮತ್ತಿತರ ಅಂಶಗಳನ್ನು ಒಳಗೊಂಡಿರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ- ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳ ಒಟ್ಟು ೫೦ ಸ್ತಬ್ಧಚಿತ್ರಗಳು ಸಾರ್ವಜನಿಕರ ಗಮನಸೆಳೆಯಲಿವೆ.
ಫೈಟರ್ ಜೆಟ್‌ಗಳ ಅನಾವರಣ!: ಈ ಬಾರಿ ಎಚ್‌ಎಎಲ್ ಸ್ವದೇಶಿ ನಿರ್ಮಿತ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಜೆಟ್ ಎಂಜಿನ್‌ಗಳು, ಏವಿಯಾನಿಕ್ಸ್, ಬಿಡಿ ಭಾಗಗಳು ಮತ್ತು ಭಾರತೀಯ ಸೇನಾ ವಿಮಾನಗಳನ್ನು ಅನಾವರಣಗೊಳಿಸಿದರೆ, ಬಿಎಚ್‌ಇಎಲ್ ಇಂಧನ, ಸಾರಿಗೆ, ಉದ್ಯಮ ಮತ್ತು ರಕ್ಷಣಾ ಯೋಜನೆಗಳಿಗೆ ಪೂರಕವಾಗಿ ವಿನ್ಯಾಸಗೊಳಿಸುತ್ತಿರುವ ಸಾಧನಗಳನ್ನು ಜನರಿಗೆ ಪರಿಚಯಿಸಲಿದೆ.
‘ಶಕ್ತಿ’ ಯೋಜನೆಯ ಸ್ತಬ್ಧಚಿತ್ರವೂ ಭಾಗಿ!: ಶಕ್ತಿ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವುದರಿಂದ ಕೆಎಸ್ಆರ್‌ಟಿಸಿ ಪ್ರಗತಿ ಸಾಧಿಸಿದ್ದು, ಇದೇ ಮೊದಲ ಬಾರಿಗೆ ನಿಗಮದ ಸ್ತಬ್ಧಚಿತ್ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ. ಶತಮಾನಗಳನ್ನು ಪೂರೈಸಿರುವ ರೈಲ್ವೆ ಇಲಾಖೆಯು ಮೀಟರ್‌ಗೇಜ್‌ನಿಂದ ಬುಲೆಟ್ ಟ್ರೈನ್ ತನಕ ಸಾಧಿಸಿರುವ ಪ್ರಗತಿ, ಲಿಡ್ಕರ್, ಕರ್ನಾಟಕ ಹಾಲು ಒಕ್ಕೂಟ, ಕರ್ನಾಟಕ ರಾಜ್ಯ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಮೈಸೂರು ಸಿಲ್ಕ್ ಸೇರಿದಂತೆ ಮೈಸೂರು ಜಿಲ್ಲೆಯಿಂದಲೇ ಒಟ್ಟು ಆರು ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ.
” ವಿಜಯದಶಮಿ ದಿನದಂದೇ ಗಾಂಧಿ ಜಯಂತಿ ಬಂದಿರುವ ಕಾರಣಕ್ಕಾಗಿ ಗಾಂಧಿಜಿ ಅವರ ತತ್ವಗಳನ್ನು ಬಿಂಬಿಸುವ, ಸ್ವದೇಶಿ ವಸ್ತುಗಳ ಬಳಕೆ ಕುರಿತಾದ ಆಯಾಯ ಜಿಲ್ಲೆಗಳ ವಿಶೇಷತೆಗಳನ್ನು ಬಿಂಬಿಸುವಂತಹ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಈ ಬಾರಿ ಹೊಸದಾಗಿ ಮೂರು ಸಂಸ್ಥೆಗಳು ತಮ್ಮ ಸಾಧನೆಗಳನ್ನು ಪ್ರದರ್ಶಿಸಲು ಸಜ್ಜಾಗುತ್ತಿವೆ.”
ಕೆ.ಬಿ.ಪ್ರಭುಸ್ವಾಮಿ, ಉಪ ವಿಶೇಷಾಧಿಕಾರಿ, ಸ್ತಬ್ಧಚಿತ್ರ ಉಪ ಸಮಿತಿ
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…
ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…
ಟೋಕಿಯೋ : ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ ೭.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ…
ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು…
ಕೆ.ಆರ.ಪೇಟೆ : ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಸೋಮವಾರ…