ಕೆಟ್ಟು ೨-೩ ತಿಂಗಳಾದರೂ ದುರಸ್ತಿ ಭಾಗ್ಯವಿಲ್ಲ; ಬೇಗ ರಿಪೇರಿ ಮಾಡಿಸಲು ನಾಗರಿಕರ ಆಗ್ರಹ
ಚಾಮರಾಜನಗರ: ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯು ಆಟೋಗಳ ಮೂಲಕ ಬಡಾವಣೆಗಳ ಮನೆ ಮನೆಗಳಿಂದ ಕಸ ಸಂಗ್ರಹ ಮಾಡುತ್ತಿದೆ. ಆದರೆ, ಇತ್ತೀಚೆಗೆ ಸರಿಯಾಗಿ ನಿರ್ವಹಣೆ ಮಾಡದೆ ಕಸ ಸಂಗ್ರಹ ಆಟೋಗಳು ಪದೇ ಪದೆ ರಿಪೇರಿಗೆ ಬರುತ್ತಿವೆ.
ಕೆಲವು ಬಡಾವಣೆಗಳಿಗೆ ಕಸ ಸಂಗ್ರಹಕ್ಕಾಗಿ ಬರುತ್ತಿದ್ದ ಆಟೋಗಳು ಕೆಟ್ಟು ಹೋಗಿ ಗ್ಯಾರೇಜ್ ಸೇರಿ ೨-೩ ತಿಂಗಳಾದರೂ ರಿಪೇರಿ ಆಗಿಲ್ಲ. ಆದ್ದರಿಂದ ಬಡಾವಣೆಗಳ ಜನರು ಕಸವನ್ನು ಪ್ಲಾಸ್ಟಿಕ್ ಕವರ್ ಹಾಗೂ ಚೀಲಕ್ಕೆ ಕಟ್ಟಿ ರಸ್ತೆ ಬದಿಗಳಿಗೆ, ಖಾಲಿ ನಿವೇಶನಗಳಿಗೆ ಬಿಸಾಡುತ್ತಿದ್ದಾರೆ.
ನಗರದ ೧೦ನೇ ವಾರ್ಡ್‌ನಲ್ಲಿ ಕಸ ಸಂಗ್ರಹ ಮಾಡುತ್ತಿದ್ದ ವಾಹನ ಕೆಟ್ಟು ೨ ತಿಂಗಳಾಗಿದೆ. ರಿಪೇರಿಗೆಂದು ಗ್ಯಾರೇಜ್‌ಗೆ ಬಿಟ್ಟಿದ್ದರೂ ಇನ್ನು ದುರಸ್ತಿಯಾಗಿಲ್ಲ. ಈ ಆಟೋದ ಬಾಡಿ ಹಾಳಾಗಿದ್ದು ಬದಲಾಯಿಸುವ ಕೆಲಸ ಗ್ಯಾರೇಜ್‌ನಲ್ಲಿ ನಿಧಾನ ಗತಿಯಲ್ಲಿ ಸಾಗಿದೆ.
ನಗರದ ಗ್ಯಾರೇಜ್‌ನಲ್ಲಿ ನಗರಸಭೆಯ ೨ ಆಟೋಗಳು ರಿಪೇರಿಗೆಂದು ನಿಂತಿವೆ. ಇವೆರಡಕ್ಕೂ ಬಾಡಿ ಬದಲಾಯಿಸಬೇಕಿದೆ. ಗ್ಯಾರೇಜ್‌ನವರು ಇಲ್ಲಿಯ ತನಕ ೪ ಆಟೋಗಳನ್ನು ರಿಪೇರಿ ಮಾಡಿ ನಗರಸಭೆಗೆ ಕಳುಹಿಸಿದ್ದಾರೆ.
೨ ಆಟೋಗಳ ರಿಪೇರಿ ಶುಲ್ಕ ಮತ್ತು ಬಿಡಿಭಾಗಗಳ ಹಣವನ್ನು ನಗರಸಭೆಯು ಪಾವತಿ ಮಾಡುವುದು ವಿಳಂಬವಾಗಿದೆ. ಆದ್ದರಿಂದ ಈ ಆಟೋಗಳಿಗೆ ಬಾಡಿ ಕಟ್ಟಿ ನಗರಸಭೆಗೆ ಹಸ್ತಾಂತರಿಸುವ ಕೆಲಸ ಮಂದಗತಿಯಲ್ಲಿ ಸಾಗಿದೆ.
ಕೆಟ್ಟುಹೋದ ಕಸದ ಆಟೋವನ್ನು ರಿಪೇರಿ ಮಾಡಿಸಲು ಕನಿಷ್ಠ ಒಂದು ವಾರ ಸಾಕು. ೨-೩ ತಿಂಗಳು ಬೇಕೇನು ಎಂಬುದು ಸಾರ್ವಜನಿಕರ ಪ್ರಶ್ನೆ. ನಗರಸಭೆಯ ಅಧಿಕಾರಿಗಳು ಕಾಳಜಿ ವಹಿಸಿದರೆ ರಿಪೇರಿ ಮಾಡಿಸುವುದು ಕಷ್ಟದ ಕೆಲಸವಲ್ಲ ಎಂದು ನಾಗರಿಕರು ಹೇಳುತ್ತಿದ್ದಾರೆ.
ಕಸ ಸಾಗಣೆ ಆಟೋಗಳನ್ನು ಶುಚಿಯಾಗಿ ಇಟ್ಟುಕೊಳ್ಳದೆ ಹಾಗೂ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪದೇ ಪದೆ ರಿಪೇರಿಗೆ ಬರುತ್ತಿವೆ. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಹಾಕಿ ಬಂದ ನಂತರ ಶುಚಿಗೊಳಿಸುತ್ತಿಲ್ಲ. ಆದ್ದರಿಂದ ಗಲೀಜಾಗಿ ಕೆಟ್ಟು ಹೋಗುತ್ತಿವೆ ಎಂದು ನಗರಸಭೆಯ ಸಿಬ್ಬಂದಿಯೇ ಹೇಳುತ್ತಿದ್ದಾರೆ.
ಸಾಂಕ್ರಾಮಿಕ ರೋಗ ಭೀತಿ:
ಕಸದ ಆಟೋ ಬಡಾವಣೆಗೆ ಬಾರದೆ ನಾಗರಿಕರು ಕಸವನ್ನು ಬೀದಿಗೆ ಬಿಸಾಡುತ್ತಿದ್ದಾರೆ. ಈ ಕಸ ಕೊಳೆತು ಅನೈರ್ಮಲ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಹಸುಗಳು, ಹಂದಿಗಳು, ನಾಯಿಗಳು ಕಸದ ಚೀಲವನ್ನು ರಸ್ತೆಗೆ ಎಳೆದು ತಂದು ಹಾಕುತ್ತಿವೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ.
” ಕೆಟ್ಟು ಹೋಗಿರುವ ೨ ಆಟೋಗಳನ್ನು ಗ್ಯಾರೇಜ್‌ಗೆ ಬಿಡಲಾಗಿದೆ. ಸಣ್ಣ ಪುಟ್ಟ ರಿಪೇರಿ ಕೆಲಸ ಮುಗಿದಿದೆ. ಇನ್ನು ೩-೪ ದಿನಗಳಲ್ಲಿ ಬಾಡಿಗಳನ್ನು ಅಳವಡಿಸಿ ಕಸ ಸಂಗ್ರಹಕ್ಕೆ ಕಳುಹಿಸಲಾಗುವುದು.”
– ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ
ಮೈಸೂರು: ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದಾರೆ. ಈ ಕುರಿತು…
ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಗ್ಯಾರಂಟಿ…
ಮೈಸೂರು: ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ…
ಯಾದಗಿರಿ: ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ…
ಟಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಮಿತಿಮೀರಿದ್ದು, ಜನತೆ ಭಯಭೀತರಾಗಿದ್ದಾರೆ. ತಾಲ್ಲೂಕಿನ ಎಸ್.ಕೆಬ್ಬೆಹುಂಡಿ, ಕನ್ನಾಯಕನಹಳ್ಳಿ ಗ್ರಾಮದ ಮಧ್ಯೆ ಚಿರತೆ ಪ್ರತ್ಯಕ್ಷವಾಗಿದ್ದು, ಈ…