ಭಾಗ್ಯಜ್ಯೋತಿ ಹಿರೇಮಠ,
ಗುಡಗೇರಿ, ಕಥೆಗಾರ್ತಿ ಮತ್ತು ಕವಯಿತ್ರಿ
ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಚೈತ್ರದ ಬಿಸಿಲು ಅಪ್ಪಳಿಸುತ್ತಿದ್ದಂತೆಯೇ ಗಾಳಿಯಲ್ಲಿ ಒಣಗಿದ ಎಲೆಗಳ ಮರ್ಮರ ಮತ್ತು ಹೊಸ ಚಿಗುರಿನ ಕಂಪಿನ ನಡುವೆ ಒಂದು ವಿಶಿಷ್ಟ ಸಂಘರ್ಷ ಶುರುವಾಗುತ್ತದೆ. ಯುಗಾದಿ ಎನ್ನುವುದು ಬರಿ ಕ್ಯಾಲೆಂಡರಿನ ಹಾಳೆ ಬದಲಾವಣೆಯಲ್ಲ, ಅದು ಮಣ್ಣಿನ ಒಡಲು ತನ್ನನ್ನು ತಾನು ನವೀಕರಿಸಿ ಕೊಳ್ಳುವ ಒಂದು ಅಧ್ಯಾತ್ಮಿಕ ವಿಧಿವಿಧಾನ ಮುಂಜಾನೆಯ ಕೆಂಪು ಇಡೀ ಹಳ್ಳಿಯನ್ನು ಆವರಿಸಿ ಕೊಂಡಾಗ, ಮನೆಗಳ ಮುಂದಿನ ಸಗಣಿ ಸಾರಿಸಿದ ನೆಲದ ಮೇಲೆ ಬಿಳಿ ಹಿಟ್ಟಿನ ರಂಗೋಲಿಗಳು ಜೀವತಳೆಯುತ್ತವೆ. ಈ ರಂಗೋಲಿಗಳು ಬರಿ ಆಕೃತಿಗಳಲ್ಲ; ಬದುಕಿನ ಏರಿಳಿತಗಳನ್ನು ಮೌನವಾಗಿ ಒಪ್ಪಿಕೊಂಡ ರೈತಜೀವದ ಕಲಾತ್ಮಕ ಅಭಿವ್ಯಕ್ತಿ. ಬಾಗಿಲಿಗೆ ಕಟ್ಟಿದ ಹಸಿರು ಮಾವಿನ ಎಲೆ ಮತ್ತು ಬೇವಿನ ಸೊಪ್ಪಿನ ತಳಿರು ತೋರಣಗಳು ಗಾಳಿಗೆ ಅಲುಗಾಡುವಾಗ, ಅವು ಮನೆಯೊಳಗಿನ ದುಷ್ಟ ಶಕ್ತಿಗಳನ್ನು ತಡೆದು ನಿಲ್ಲಿಸುವ ಹಸಿರು ಕಾವಲುಗಾರನಂತೆ ಕಾಣಿಸುತ್ತವೆ. ಬೇವಿನ ಎಲೆಯ ಕಹಿಯು ಚೈತ್ರದ ಬಿಸಿಲಿಗೆ ಒಂದು ಬಗೆಯ ಘಮವನ್ನು ನೀಡುವ ಆ ವಿರೋಧಾಭಾಸವೇ ಈ ನೆಲದ ಸೌಂದರ್ಯ. ಬೆಳ್ಳಂಬೆಳಿಗ್ಗೆ ಹಂಡೆಗಳಲ್ಲಿ ನೀರು ಕಾಯಿಸಿ ಮೈಗೆ ಎಣ್ಣೆ ಹಚ್ಚಿ ಶಾಸ್ರೋಕ್ತವಾಗಿ ನೀರು ಸುರಿಸಿಕೊಳ್ಳುವಾಗ, ಅದು ಬರಿ ದೈಹಿಕ ಸ್ಥಾನವಲ್ಲ, ಬದಲಾಗಿ ಕಳೆದ ವರ್ಷದ ದಣಿವನ್ನು ಮರೆತು ಹೊಸ ವರ್ಷದ ಚೈತನ್ಯವನ್ನು ಮೈಗೆ ಇಳಿಸಿಕೊಳ್ಳುವ ಒಂದು ಶುದ್ದೀಕರಣದ ಪ್ರಕ್ರಿಯೆ.
ಕೊಟ್ಟಿಗೆಯ ಕಡೆ ಮುಖ ಮಾಡಿದರೆ, ಅಲ್ಲಿ ವರ್ಷವಿಡೀ ಬೆವರು ಹರಿಸಿದ ದನ-ಕರುಗಳ ಸಂಭ್ರಮ ಮೈಮನ ಸೆಳೆಯುತ್ತದೆ. ರೈತನ ಪಾಲಿಗೆ ಇವು ಕೇವಲ ಪ್ರಾಣಿಗಳಲ್ಲ, ತನ್ನ ಸಂಸಾರದ ಅವಿಭಾಜ್ಯ ಅಂಗಗಳು, ಎತ್ತುಗಳ ಮೈ ತೊಳೆದು, ಅವುಗಳ ಕೊಂಬುಗಳಿಗೆ ಕಡು ಕೆಂಪು ಅಥವಾ ಹಳದಿ ಬಣ್ಣ ಹಚ್ಚಿ, ಕೊರಳಿಗೆ ಹೊಸ ಗೆಜ್ಜೆ ಕಟ್ಟಿದಾಗ ಆ ಮೂಕ ಪ್ರಾಣಿಗಳ ನಡಿಗೆಯಲ್ಲೇ ಒಂದು ರಾಜಗಾಂಭೀರ್ಯ ಕಾಣಿಸಿಕೊಳ್ಳುತ್ತದೆ. ‘ಬಾ ಮಗನೇ’ ಎಂದು ರೈತ ತನ್ನ ಎತ್ತಿನ ಹಣೆಗೆ ಮುದ್ದಿಸಿ ಬೇವು-ಬೆಲ್ಲದ ತುತ್ತು ನೀಡುವಾಗ, ಅಲ್ಲಿ ಮನುಷ್ಯ ಮತ್ತು ಪ್ರಾಣಿಯ ನಡುವಿನ ಭಾಷೆಯಿಲ್ಲದ ಸಂವಾದವೊಂದು ನಡೆಯುತ್ತದೆ. ಈ ಬೇವು-ಬೆಲ್ಲ ಕೇವಲ ರುಚಿಯಲ್ಲ; ಅದು ಬದುಕಿನ ಕಟು ಸತ್ಯವನ್ನು ಸಾರುವ ದಿವ್ಯ ಪ್ರಸಾದ, ಕಹಿಯನ್ನು ಬೆಲ್ಲದ ಸಮಾಧಾನದೊಂದಿಗೆ ನುಂಗುವುದನ್ನು ಕಲಿಸುವ ಈ ಆಚರಣೆ, ಮನುಷ್ಯನ ಮನಸ್ಥಿತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಹಳೆಯ ಕಹಿ ಘಟನೆಗಳನ್ನು, ದ್ವೇಷಗಳನ್ನು ಬೇವಿನ ಎಲೆಯಂತೆ ಉದುರಿಸಿ, ಹೊಸ ಬದುಕಿನ ಹಸಿರು ಪ್ರತಿ ಹಬ್ಬದ ಆಚ ರಣೆಯನ್ನೂ ಅಂದು ತಯಾರಿಸುವ ಚಿಗುರನ್ನಷ್ಟೇ ಮನಸಿನಲ್ಲಿ ಉಳಿಸಿಕೊಳ್ಳುವ ಒಂದು ಮಾನಸಿಕ ಸ್ಥಿತ್ಯಂತರ ಇಲ್ಲಿ ಸಂಭವಿಸುತ್ತದೆ. ಉತ್ತರ ಕರ್ನಾಟಕದ ಈ ನೆಲದಲ್ಲಿ ದ್ವೇಷ ಕೂಡ ಬೇವಿನಷ್ಟೇ ಗಾಢ, ಆದರೆ ಪ್ರೀತಿ ಬೆಲ್ಲದಷ್ಟೇ ಮೃದು ಮತ್ತು ಮಧುರ.
ಅಡುಗೆ ಮನೆಯಿಂದ ಬರುವ ಬಿಸಿ ಹೂರಣದ ಹೋಳಿಗೆ ಮತ್ತು ತುಪ್ಪದ ಘಮಲು ಬರಿ ಹಸಿವನ್ನಲ್ಲ, ಬದಲಾಗಿ ಬಾಲ್ಯದ ಸುಖದ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಕಲ್ಲಿನ ಒರಳಿನಲ್ಲಿ ಬೇಳೆ ರುಬ್ಬುವ ಲಯಬದ್ಧ ಸದ್ದು ಹಳ್ಳಿಯ ಸಂಗೀತದಂತೆ ಕೇಳಿಸುತ್ತದೆ. ಹೋಳಿಗೆಯ ಜೊತೆಗೆ ಮಾವಿನಕಾಯಿ ಚಿತ್ರಾನ್ನ, ಬದನೇಕಾಯಿ ಪಲ್ಯ ಮತ್ತು ಹಪ್ಪಳ, ಸಂಡಿಗೆಯ ಮೆರವಣಿಗೆಯೇ ಅಲ್ಲಿ ನಡೆಯುತ್ತದೆ. ಸಂಜೆ ಹೊತ್ತಿಗೆ ಊರ ಚಾವಡಿಯ ಅಂಚಿನಲ್ಲಿ ಅಥವಾ ಗುಡಿಯ ಕಟ್ಟೆಯ ಮೇಲೆ ಕುಳಿತು ಪಂಚಾಂಗ ಶ್ರವಣ ಮಾಡುವ ರೈತರ ಮುಖಗಳಲ್ಲಿ ಆತಂಕ ಮತ್ತು ಭರವಸೆಯ ಮಿಶ್ರಣವಿರುತ್ತದೆ. ರೋಹಿಣಿ ಮಳೆಯ ನಕ್ಷತ್ರದ ಬಗ್ಗೆ ಅಥವಾ ಮೃಗಶಿರಾ ಮಳೆಯ ಮುನ್ಸೂಚನೆಯ ಬಗ್ಗೆ ಹೇಳುವಾಗ, ಅಲ್ಲಿ ನೆರೆದಿದ್ದವರ ಕಣ್ಣುಗಳಲ್ಲಿ ಬೆಳೆಯ ಕನಸುಗಳು ಮೊಳಕೆಯೊಡೆಯುತ್ತವೆ. ‘ಈ ಸಲದ ಮಳೆ ಹದವಾಗಿ ಬಿದ್ದರೆ ಬದುಕು ಹಸನಾದೀತು’ ಎನ್ನುವ ಆಶಾವಾದ ಅವರ ಸುಕ್ಕುಗಟ್ಟಿದ ಮುಖಗಳಲ್ಲಿ ಮಿನುಗುತ್ತದೆ. ಇದು ಬರಿ ಭವಿಷ್ಯವಾಣಿಯಲ್ಲ, ಈ ಮಣ್ಣಿನ ಮಕ್ಕಳು ತಮ್ಮ ಅಸ್ತಿತ್ವದ ಭರವಸೆಯನ್ನು ಕಂಡುಕೊಳ್ಳುವ ಕ್ಷಣ.
ಮರುದಿನ ಬರುವ ‘ವರ್ಷದ ತೊಡಕು’ ಹಬ್ಬದ ಇನ್ನೊಂದು ಆಯಾಮ. ಅಂದು ಜನರೆಲ್ಲರೂ ಸಾಮೂಹಿಕವಾಗಿ ಸೇರಿ ವನಭೋಜನ ಮಾಡುವುದು ಅಥವಾ ಹೊಲಗದ್ದೆಗಳಲ್ಲಿ ಕುಳಿತು ಊಟ ಮಾಡುವುದು ಅಥವಾ ಊರ ಹಳ್ಳಿಯ ಜಾತ್ರೆಗೆ ಸೇರುವುದು ವಿಶಿಷ್ಟ ಸಂಪ್ರದಾಯ. ಇದು ಸಮಾಜದ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸುವ ಕೊಂಡಿ ಈ ಯುಗಾದಿಯು ಮನುಷ್ಯನನ್ನು ಮರಳಿ ತನ್ನ ಮೂಲ ಬೇರುಗಳಿಗೆ ಕರೆದೊಯ್ಯುತ್ತದೆ. ಇದು ಬರಿ ಸಂಭ್ರಮವಲ್ಲ, ಇದು ಮಣ್ಣು, ಪ್ರಾಣಿ ಮತ್ತು ಮನುಷ್ಯನ ಅಸ್ತಿತ್ವದ ಹೊಸ ಬಿತ್ತನೆ. ಈ ಹಬ್ಬದಲ್ಲಿ ಹಳೆಯದನ್ನು ಕಳಚಿ, ಹೊಸ ಮನ್ವಂತರಕ್ಕೆ ತೆರೆದುಕೊಳ್ಳುವ ಸಾತ್ವಿಕ ತುಡಿತವಿದೆ. ಪ್ರಕೃತಿಯೇ ತನ್ನನ್ನು ತಾನು ಸಿಂಗರಿಸಿಕೊಂಡಿರುವಾಗ, ಮಾನವನ ಮನಸು ಕೂಡ ಆ ಹಸಿರಿಗೆ ಸ್ಪಂದಿಸಿ ಹೊಸ ಬದುಕಿನ ಶಪಥ ಮಾಡುತ್ತದೆ. ಒಟ್ಟಾರೆಯಾಗಿ, ಉತ್ತರ ಕರ್ನಾಟಕದ ಯುಗಾದಿಯು ನಿಸರ್ಗದ ಆವರ್ತನದೊಂದಿಗೆ ಮಾನವನ ಬದುಕು ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಸಾರುವ ಮಣ್ಣಿನ ಮಹಾಕಾವ್ಯ ದಂತೆ ಕಂಗೊಳಿಸುತ್ತದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ…
ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…
ಮೈಸೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಜನರು ಸಾಂಪ್ರದಾಯಿಕವಾಗಿ…
ಸಾಂಸ್ಕೃತಿಕ ನಗರಿ ಮೈಸೂರು ಆಹಾರ ಪ್ರಿಯರ ಸ್ವರ್ಗವೂ ಹೌದು. ಮೈಸೂರು ಪಾಕ್‌ನಿಂದ ಹಿಡಿದು ಮೈಲಾರಿ ದೋಸೆಯವರೆಗೆ ಇಲ್ಲಿನ ರುಚಿ ಪ್ರಸಿದ್ಧವಾಗಿದೆ.…
ಪ್ರೇಮ್ ನಿರ್ದೇಶನದ ಕನ್ನಡ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ.. ಎಂಬ ಗೀತೆ ದ್ವಂದ್ವಾರ್ಥದ ಕೀಳು ಅಭಿರುಚಿಯ ಹಾಡು…
ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷಾ ಸಮಯ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಎಸ್ಕಾಂಗಳು ವಿದ್ಯುತ್ ಕಡಿತ ಮಾಡುತ್ತಿರುವುದು ಸರಿಯಲ್ಲ.…