ಕೆ.ಬಿ.ರಮೇಶನಾಯಕ
ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೂ ಅದರ ಬಿಸಿ ತಟ್ಟಿದೆ. ಈ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ಸಂಸ್ಥೆಯ ಎರಡೂ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿ ರುವ ಮೈಸೂರು ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ನೇರ ಸೇವೆಯನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿರುವಾಗಲೇ ಇಂಡಿಗೋ ವಿಮಾನ ಸಂಸ್ಥೆಯು ಎರಡು ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸಿರುವುದರಿಂದ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ನಾನಾ ಕಾರಣಗಳಿಂದಾಗಿ ಸಂಸ್ಥೆಯು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮೈಸೂರಿನಿಂದ ಹಾರಾಟ ಮುಂದುವರಿಸುವುದೋ ಅಥವಾ ನಿಲ್ಲಿಸುವುದೋ ಎಂಬ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ಈ ನಿಲ್ದಾಣದಿಂದ ಚೆನ್ನೈ, ಗೋವಾ, ಕೊಚ್ಚಿನ್, ಹೈದರಾಬಾದ್ ನಗರಗಳಿಗೆ ವಿಮಾನಯಾನ ಸೇವೆಯನ್ನು ಒದಗಿಸಲಾಗಿತ್ತು. ನಂತರದ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಕೊಚ್ಚಿನ್ ಹಾಗೂ ಗೋವಾ ನಗರಗಳಿಗೆ ವಿಮಾನಗಳ ಸೇವೆ ಸ್ಥಗಿತಗೊಂಡರೆ, ಮೈಸೂರು-ಚೆನ್ನೈ ಹಾಗೂ ಮೈಸೂರು-ಹೈದರಾಬಾದ್ ನಡುವೆ ಸಂಚಾರ ಮುಂದುವರಿದಿತ್ತು. ಮುಂದಿನ ದಿನಗಳಲ್ಲಿ ರನ್‌ವೇ ವಿಸ್ತರಣೆ ಮಾಡಿ ೩೬೦ ಆಸನಗಳ ದೊಡ್ಡ ವಿಮಾನಗಳ ಸೇವೆಯನ್ನು ಆರಂಭಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗವಾಗಿ ಇತರೆ ರಾಜ್ಯ ಹಾಗೂ ದೇಶಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಹೊಂದಲಾಗಿತ್ತು.
ಅದಕ್ಕಾಗಿಯೇ, ರಾಜ್ಯ ಸರ್ಕಾರ ೨೪೦ ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಂಡು ೨೦೦ ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಿತ್ತು. ನಿಲ್ದಾಣದ ಸಮೀಪದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ಕಿ.ಮೀ. ಉದ್ದದ ಬೈಪಾಸ್ ಮಾಡಿ, ಅದರಲ್ಲಿ ಮೂರು ಕಿ.ಮೀ. ಅಂಡರ್‌ಪಾಸ್ ನಿರ್ಮಿಸುವ ಪರಿಷ್ಕೃತ ಯೋಜನೆಯನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮುಂದೆ ವಿವಿಧ ಸಂಸ್ಥೆಗಳ ವಿಮಾನ ಹಾರಾಟಕ್ಕೆ ಪ್ರಯತ್ನಗಳು ನಡೆಯುತ್ತಿರುವಾಗಲೇ ಇಂಡಿಗೋ ಸಂಸ್ಥೆ ಮೈಸೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ತನ್ನ ಎರಡು ವಿಮಾನಗಳ ಸೇವೆಯನ್ನೂ ರದ್ದುಪಡಿಸಿರುವುದು ಭಾರೀ ನಿರಾಸೆ ಮೂಡಿಸಿದೆ.
ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ ನಿರ್ಮಾಣವಾದ ಮೇಲೆ ಮೈಸೂರು-ಚೆನ್ನೈ ಹಾಗೂ ಮೈಸೂರು-ಹೈದರಾಬಾದ್ ನಡುವೆ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕುಸಿಯಬಹುದೆಂಬ ಆತಂಕವನ್ನು ಪ್ರಯಾಣಿಕರು ದೂರ ಮಾಡಿದ್ದರು. ಭಾರತ ಸೇರಿದಂತೆ ಇಡೀ ಜಗತ್ತಿನಾದ್ಯಂತ ಸೇವೆಯನ್ನು ಒದಗಿಸುತ್ತಿರುವ ಇಂಡಿಗೋ ಸಂಸ್ಥೆಯು ಮೈಸೂರಿನಿಂದ ನಿರಂತರವಾಗಿ ಎರಡು ನಗರಗಳಿಗೆ ಹಾರಾಟ ಕಲ್ಪಿಸಿ ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಮೈಸೂರಿನಿಂದ ಹೋಗುವ ಮತ್ತು ಬರುವ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರಲಿಲ್ಲ. ಎರಡೂ ವಿಮಾನಗಳು ದಿನಕ್ಕೆ ನಾಲ್ಕು ಬಾರಿ ಪ್ರಯಾಣಿಸುತ್ತಿದ್ದವು. ಏತನ್ಮಧ್ಯೆ, ಇಂಡಿಗೋ ಸಂಸ್ಥೆಯು ಮೈಸೂರಿನಿಂದ ತನ್ನ ಹಾರಾಟ ಸೇವೆಯನ್ನು ಮುಂದುವರಿಸಿದ್ದರಿಂದ ಬೇರೆ ನಗರಗಳಿಗೂ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು
ಸೇವೆ ವಿಸ್ತರಣೆ ಕೋರಿದ್ದ ಸಂಸದ ಯದುವೀರ್: ಮೂರು ತಿಂಗಳ ಹಿಂದೆಯಷ್ಟೇ ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂಡಿಗೋ ವಿಮಾನ ಸಂಸ್ಥೆಗೆ ಪತ್ರ ಬರೆದು, ಮೈಸೂರಿನಿಂದ ಗೋವಾ, ಮುಂಬೈ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಕೋರಿದ್ದರು. ಇದಕ್ಕೆ ಕಂಪೆನಿ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ಆದರೆ, ಈಗ ಸಂಸ್ಥೆಯು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಇಡೀ ದೇಶಾದ್ಯಂತ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.
ಹೊಸದಿಲ್ಲಿ : ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ…
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ 16,700 ಕೋಟಿಗೆ ಖರೀದಿಸಿದ ಬಳಿಕ…
ಮೈಸೂರು : ಮೋಸದಿಂದ ಕಾರುಗಳನ್ನು ಖರೀದಿಸಿ, ಯಾವುದೇ ದಾಖಲೆ ನೀಡದೆ ಕಡಿಮೆ ಹಣ ಪಡೆದು ಬೇರೆಯವರಿಗೆ ಹೆಚ್ಚು ಬೆಲೆಗೆ ಮಾರಾಟ…
ಟೆಹ್ರಾನ್ : ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ನಮಗಿಲ್ಲ ಇಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ…
ಕನ್ನಡ ಚಲನಚಿತ್ರಗಳು ಭಾರತೀಯ ಸಿನಿರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ತೆರೆ ಕಂಡ ಚಿತ್ರಗಳ ಹಾಡುಗಳು…
ಸರಗೂರು ಹಾಗೂ ಎಚ್.ಡಿ.ಕೋಟೆಯಿಂದ ಗುಂಡ್ಲುಪೇಟೆಗೆ ಪ್ರತಿನಿತ್ಯ ನೂರಾರು ಜನರು ಪ್ರಯಾಣಿಸುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸರಿಯಾದ ಸಮಯಕೆ…