ಅದು ೧೯೯೩. ತ್ರಿವೇಣಿ ಆಚಾರ್ಯ ಮುಂಬೈಯ ಪತ್ರಿಕೆಯೊಂದರಲ್ಲಿ ಕ್ರ್ತ್ಯೈಮ್ ಬೀಟ್ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಆ ವರ್ಷ ರಾಖಿ ಬಂಧನದ ದಿನ ಒಬ್ಬ ಸಿನಿಮಾ ನಟ ಮುಂಬೈಯ ಕುಖ್ಯಾತ ರೆಡ್ ಲೈಟ್ ಪ್ರದೇಶ ಕಾಮಾಟಿಪುರಕ್ಕೆ ಅಲ್ಲಿನ ವೇಶ್ಯೆಯರಿಂದ ರಾಖಿ ಕಟ್ಟಿಸಿಕೊಳ್ಳಲು ಹೋಗಿದ್ದನು.
ತ್ರಿವೇಣಿ ಆಚಾರ್ಯ ಆ ಸುದ್ದಿಯ ವರದಿ ಮಾಡಲು ಅಲ್ಲಿಗೆ ಹೋಗಿದ್ದರು. ವರದಿ ಮಾಡಿದ ನಂತರ ಅವರಿಗೆ ವೇಶ್ಯೆಯರು ಉಳಿದುಕೊಳ್ಳುವ ಜಾಗ ಹೇಗಿರುತ್ತದೆ ಎಂದು ನೋಡುವ ಕುತೂಹಲದಿಂದ ಒಂದು ಗಲ್ಲಿಯಲ್ಲಿದ್ದ ಮನೆಯೊಳಕ್ಕೆ ಹೋಗಿ ನೋಡಿದರು. ಆ ಮನೆಯೊಳಗೆ ಸಾಲಾಗಿ ಪರದೆಗಳನ್ನು ಕಟ್ಟಲಾಗಿತ್ತು. ತ್ರಿವೇಣಿ ಒಂದು ಪರದೆಯನ್ನು ಸರಿಸಿ ನೋಡಿದಾಗ ಒಳಗೆ ಅಪ್ರಾಪ್ತ ಪ್ರಾಯದ ಕೆಲವು ಹೆಣ್ಣು ಮಕ್ಕಳು ಕಾಣಿಸಿದರು. ತ್ರಿವೇಣಿ ಆ ಮಕ್ಕಳ ಬಳಿ ಹೋಗಿ ‘ನೀವು ಇಲ್ಲೇನು ಮಾಡುತ್ತಿದ್ದೀರಿ? ನಿಮ್ಮ ಅಮ್ಮಂದಿರು ಇಲ್ಲಿ ಕೆಲಸ ಮಾಡುತ್ತಿದ್ದಾರಾ? ’ ಎಂದು ಕೇಳಿದಾಗ ಆ ಮಕ್ಕಳು ‘ತಾವು ನೇಪಾಳದವರು, ನಮ್ಮನ್ನು ಯಾರೋ ಸುಳ್ಳು ಹೇಳಿ ಕರೆ ತಂದು ಇಲ್ಲಿ ಮಾರಿದ್ದಾರೆ, ನಮಗೆ ಇಷ್ಟವಿಲ್ಲದಿದ್ದರೂ ಇಲ್ಲಿ ಈ ಹೊಲಸು ಕೆಲಸ ಮಾಡುತ್ತಿದ್ದೇವೆ’ ಎಂದು ಕಣ್ಣೀರು ಹಾಕುತ್ತ ಹೇಳಿಕೊಂಡರು. ಆಗ ತ್ರಿವೇಣಿ ‘ನೀವು ಯಾಕೆ ಇಲ್ಲಿಂದ ಓಡಿ ಹೋಗಬಾರದು? ’ ಎಂದು ಕೇಳಿದಾಗ ಅವರು, ‘ಹಾಗೆ ಓಡಿ ಹೋಗಲು ಸಾಧ್ಯವಿಲ್ಲ. ಇಲ್ಲಿ ಗಲ್ಲಿ ಗಲ್ಲಿಗಳಲ್ಲಿ ತಲೆಹಿಡುಕರು, ರೌಡಿಗಳಿದ್ದಾರೆ.
ಅವರು ನಮ್ಮನ್ನು ಹಿಡಿದು ವಾಪಸ್ ಇಲ್ಲಿಗೇ ಕರೆತಂದು ಹೊಡೆ ಯುತ್ತಾರೆ, ಉಪವಾಸ ಕೆಡವುತ್ತಾರೆ’ ಎಂದು ತಮ್ಮ ಗೋಳು ಹೇಳಿಕೊಂಡರು. ತ್ರಿವೇಣಿ ಆ ಮಕ್ಕಳೊಂದಿಗೆ ಮಾತಾಡುತ್ತಿರುವಾಗ ಆ ಮಕ್ಕಳ ಮಾಲಕಿನ್ ಮತ್ತು ಕೆಲವು ಗೂಂಡಾಗಳು ಅವರನ್ನು ಸುತ್ತುವರಿದು, ‘ಇಲ್ಲೇನು ಮಾಡುತ್ತಿದ್ದೀರಿ? ಫೋಟೋ ಏಕೆ ತೆಗೆಯುತ್ತಿದ್ದೀರಿ? ತೊಲಗಿ ಇಲ್ಲಿಂದ’ ಎಂದು ತ್ರಿವೇಣಿಯವರಿಗೆ ಬೆದರಿಕೆ ಹಾಕಿ ಅಲ್ಲಿಂದ ಹೊರ ಓಡಿಸಿದರು. ಮನೆಗೆ ಬಂದ ತ್ರಿವೇಣಿಯವರ ಕಣ್ಣೆದುರು ಆ ಬಡಪಾಯಿ ಮಕ್ಕಳ ಗೋಳಿನ ಕತೆಯೇ ತಿರುಗುತ್ತಿತ್ತು. ಅವರು ತಮ್ಮ ಪತಿ ಬಾಲಕೃಷ್ಣ ಆಚಾರ್ಯರಿಗೆ ಆ ವಿಚಾರವನ್ನು ತಿಳಿಸಿದರು. ಅವರು ‘ಅರೇ! ಇದೊಂತರ ಟೆಲಿಪತಿ ಆಯಿತಲ್ಲ! ನಾನು ಅದೇ ಕಾಮಾಟಿಪುರದ ಒಬ್ಬ ವೇಶ್ಯೆಯ ಬಗ್ಗೆ ನಿನಗೆ ಹೇಳಬೇಕಂತಿದ್ದೆ.
ಏನೆಂದರೆ, ನಮ್ಮ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸ ಮಾಡುವ ಒಬ್ಬ ಬಂಗಾಳಿ ಹುಡುಗ ಕಾಮಾಟಿಪುರದ ಒಬ್ಬ ವೇಶ್ಯೆಯನ್ನು ಪ್ರೀತಿಸುತ್ತಿದ್ದಾನೆ. ಆದರೆ, ಅವಳನ್ನು ಕರೆದುಕೊಂಡು ಬಂದು ಮದುವೆಯಾಗಲು ಅವಳ ಮಾಲಕಿನ್ ಬಿಡುವುದಿಲ್ಲ. ನೀನು ಪತ್ರಕರ್ತೆ ಎಂಬುದು ಅವನಿಗೆ ಗೊತ್ತಿದೆ. ನಿನಗೆ ಹೇಳಿ ಪೊಲೀಸರ ಸಹಾಯದಿಂದ ಅವಳನ್ನು ಅಲ್ಲಿಂದ ಬಿಡಿಸಿಕೊಂಡು ಬರಲು ಸಹಾಯ ಮಾಡುವಂತೆ ನನಗೆ ದಂಬಾಲು ಬಿದ್ದಿದ್ದಾನೆ’ ಎಂದು ಹೇಳಿದರು. ಮರುದಿನ ತ್ರಿವೇಣಿಯವರು ತಮ್ಮ ಪರಿಚಯದ ಮುಂಬೈ ಕ್ರೈಮ್ ಬ್ರಾಂಚಿನ ಪೊಲೀಸ್ ಕಮಿಷನರಿಗೆ ವಿಷಯ ತಿಳಿಸಿ, ಪೊಲೀಸರನ್ನು ಕರೆದು ಕೊಂಡು ಕಾಮಾಟಿಪುರದಲ್ಲಿ ಆ ಹುಡುಗಿಯಿದ್ದ ಮನೆಗೆ ಹೋಗಿ ಅವಳನ್ನು ಬಿಡಿಸಿದರು. ಆದರೆ, ಅಲ್ಲಿದ್ದ ಇತರ ೧೪ ಹೆಣ್ಣು ಮಕ್ಕಳು ತಮ್ಮನ್ನೂ ಈ ನರಕ ಯಾತನೆಯಿಂದ ಪಾರು ಮಾಡಿ ಎಂದು ಅಂಗಲಾಚಿದಾಗ ತ್ರಿವೇಣಿಯವರು ಅವರನ್ನೂ ಜತೆಯಲ್ಲಿ ಕರೆದುಕೊಂಡು, ಹತ್ತಿರದ ಪೊಲೀಸ್ ಠಾಣೆಗೆ ಹೋದರು. ಆ ಠಾಣೆಯ ಪೊಲೀಸರು ಕೇಸನ್ನು ದಾಖಲಿಸಿಕೊಂಡರಾದರೂ ನಂತರ, ‘ಈ ಹೆಣ್ಣು ಮಕ್ಕಳನ್ನು ಏನು ಮಾಡುತ್ತೀರಿ? ನಿಮಗೆ ಸಮಾಜಸೇವೆಯ ಖಯಾಲಿ ಬಹಳ ಇದೆಯಲ್ಲವೇ, ಅವರನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ’ ಎಂದರು. ತ್ರಿವೇಣಿ ಆಚಾರ್ಯ ಆ ಹೆಣ್ಣು ಮಕ್ಕಳನ್ನು ತಮ್ಮ ಮನೆಗೆ ಕರೆ ತಂದರು. ತ್ರಿವೇಣಿ ಆಚಾರ್ಯ ಆ ಹೆಣ್ಣು ಮಕ್ಕಳನ್ನು ತಮ್ಮದೇ ಖರ್ಚಿನಲ್ಲಿ ಅವರ ತವರಾದ ನೇಪಾಳಕ್ಕೆ ಕರೆದುಕೊಂಡು ಹೋದರು. ಹಲವು ಹೆಣ್ಣು ಮಕ್ಕಳಿಗೆ ಅವರ ಮನೆಯ ಸ್ಪಷ್ಟ ವಿಳಾಸಗಳೂ ಗೊತ್ತಿರಲಿಲ್ಲ. ಆಗ ಸ್ಥಳೀಯ ಸಾಮಾಜಿಕ ಸಂಸ್ಥೆಗಳ ನೆರವಿನಿಂದ ಬಹಳ ಕಷ್ಟಪಟ್ಟು ಅವರುಗಳ ಮನೆಗಳನ್ನು ಪತ್ತೆ ಹಚ್ಚಿದರು. ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಸೇರಿಸಿಕೊಂಡರು.
ಆದರೆ ಕೆಲವು ಮಕ್ಕಳ ಮನೆಯವರು ‘ಅವರು ಹೇಳದೆ ಕೇಳದೆ ಮನೆ ಬಿಟ್ಟು ಹೋಗಿ, ಮುಂಬೈಯಲ್ಲಿ ಹೊಲಸು ಕೆಲಸಗಳನ್ನು ಮಾಡಿ ಕೆಟ್ಟಿದ್ದಾರೆ’ ಎಂದು ಹೇಳಿ ಅವರನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಆಗ ತ್ರಿವೇಣಿ ಯವರು ಆ ಹೆಣ್ಣು ಮಕ್ಕಳನ್ನು ಏನು ಮಾಡುವುದು ಎಂದು ಆಲೋಚಿಸು ತ್ತಿದ್ದಾಗ ಅಲ್ಲಿ ನಿರಾಶ್ರಿತ ಮಕ್ಕಳಿಗಾಗಿ ‘ಮೈತಿ ನೇಪಾಳ್’ ಎಂಬ ಆಶ್ರಮವನ್ನು ನಡೆಸುತ್ತಿದ್ದ ಅನುರಾಧ ಕೊಯ್ರಾಲಾ ಎಂಬವರ ಮಾಹಿತಿಯನ್ನು ಪಡೆದು ಅವರ ಬಳಿ ಕರೆದುಕೊಂಡು ಹೋದರು. ಅನುರಾಧ ಕೊಯ್ರಾಲಾ ಭಾರತೀಯರಾಗಿ ನೇಪಾಳಿ ಹೆಣ್ಣು ಮಕ್ಕಳಿಗಾಗಿ ಅಷ್ಟೊಂದು ಶ್ರಮಪಟ್ಟ ತ್ರಿವೇಣಿಯವರನ್ನು ಬಹಳ ಮೆಚ್ಚಿಕೊಂಡು ಆ ಹೆಣ್ಣು ಮಕ್ಕಳನ್ನು ತಮ್ಮ ಆಶ್ರಯಕ್ಕೆ ಪಡೆದರು. ಮೈತಿ ನೇಪಾಳ್ ಆಶ್ರಮದಲ್ಲಿ ನಿರಾಶ್ರಿತ ಹೆಣ್ಣು ಮಕ್ಕಳ ಪುನರ್ವಸತಿಗಾಗಿ ರೂಪಿಸಿದ್ದ ವ್ಯವಸ್ಥೆಗಳನ್ನು ನೋಡಿ ಸ್ಛೂರ್ತಿ ಹೊಂದಿದ ತ್ರಿವೇಣಿಯವರು ವಾಪಸ್ ಬಂದ ನಂತರ, ಬಾಲಕೃಷ್ಣ ಆಚಾರ್ಯರೊಂದಿಗೆ ಸಮಾಲೋಚಿಸಿ, ೨೦೦೦ರಲ್ಲಿ ಮುಂಬೈಯ ತಮ್ಮ ಮನೆಯಲ್ಲೇ ಅಂತಹದೇ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿ, ಅದಕ್ಕೆ ‘ರಿಸ್ಕೂ ಫೌಂಡೇಷನ್’ ಎಂದು ನಾಮಕರಣ ಮಾಡಿದರು.
ಬಾಲಕೃಷ್ಣ ಆಚಾರ್ಯ ಗ್ರಾಹಕರಂತೆ ವೇಶ್ಯೆವಾಟಿಕೆ ನಡೆಯುವ ಸ್ಥಳಗಳಿಗೆ ಹೋಗಿ ಅಲ್ಲಿ ವಂಚಿಸಿ ಕರೆ ತಂದು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆದು, ಪತ್ರಕರ್ತರಾಗಿದ್ದ ತ್ರಿವೇಣಿ ಮತ್ತು ಪೊಲೀಸರಿಗೆ ಮಾಹಿತಿ ಕೊಟ್ಟು ದಾಳಿ ನಡೆಸಿ, ಆ ಹೆಣ್ಣು ಮಕ್ಕಳನ್ನು ಪಾರು ಮಾಡಿ ತಮ್ಮ ಮನೆಗೆ ಕರೆತರುತ್ತಿದ್ದರು. ಕೆಲವು ವರ್ಷಗಳ ಕಾಲ ಅವರು ಇದೇ ರೀತಿಯಲ್ಲಿ ಹೆಣ್ಣು ಮಕ್ಕಳನ್ನು ಪಾರು ಮಾಡಿದರು. ಹಲವು ಬಾರಿ ಅವರು ವೇಶ್ಯಾವಾಟಿಕೆ ನಡೆಸುವವರ ಗೂಂಡಾಗಳಿಂದ ಜೀವ ಬೆದರಿಕೆ ಎದುರಿಸಬೇಕಾಯಿತು. ಪಾರು ಮಾಡಲು ಹೋದ ಹೆಣ್ಣು ಮಕ್ಕಳ ಮಾಲಕಿನ್ ಗಳಿಂದ ಬೈಗುಳ ಕೇಳಬೇಕಾಯಿತು. ಕೆಲವೊಮ್ಮೆ ಅವರು ಪಾರು ಮಾಡಿದ ಹೆಣ್ಣು ಮಕ್ಕಳನ್ನು ಅವರೆದುರೇ ಮಾಲಕಿನ್‌ಗಳ ಗೂಂಡಾಗಳು ವಾಪಸ್ ಎಳೆದುಕೊಂಡು ಹೋದ ಉದಾಹರಣೆಗಳೂ ಇವೆ. ತ್ರಿವೇಣಿ ಮತ್ತು ಬಾಲಕೃಷ್ಣರ ಆ ರೆಸ್ಕೂ ಕೆಲಸಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರತೊಡಗಿದವು. ಯುರೋಪಿನ ಒಬ್ಬರು ದಾನಿ ಅವರಿಗಾಗಿ ಮುಂಬೈಯ ಕಾಂಡಿವಿಲಿ ಎಂಬಲ್ಲಿ ಏಳು ಅಂತಸ್ತುಗಳ ಒಂದು ಕಟ್ಟಡವನ್ನು ಕಟ್ಟಿಸಿಕೊಟ್ಟ ನಂತರ, ‘ರಿಸ್ಕೂ ಫೌಂಡೇಷನ್’ನ್ನು ಅದಕ್ಕೆ ಸ್ಥಳಾಂತರಿಸಿದರು. ಈ ಮಧ್ಯೆ, ತ್ರಿವೇಣಿಯವರ ಬದುಕಿನಲ್ಲಿ ದೊಡ್ಡದೊಂದು ದುರಂತ ನಡೆಯಿತು. ೨೦೦೫ರಲ್ಲಿ ಬಾಲಕೃಷ್ಣ ಆಚಾರ್ಯ ಅನುಮಾನಾಸ್ಪದವಾಗಿ ಸಾವಿಗೀಡಾದರು.
ಪೊಲೀಸರು ಅದನ್ನೊಂದು ರಸ್ತೆ ಅಪಘಾತವೆಂದು ಹೇಳಿದರೂ ತ್ರಿವೇಣಿಯವರಿಗೆ ಅದೊಂದು ಕೊಲೆ ಎಂಬ ಸಂಶಯ ಈಗಲೂ ಇದೆ. ಏಕೆಂದರೆ, ಬಾಲಕೃಷ್ಣ ಆಚಾರ್ಯ ಒಂದು ವೇಶ್ಯಾವಾಟಿಕೆ ಕೇಂದ್ರಕ್ಕೆ ದಾಳಿ ಮಾಡಲು ಹೋಗುವ ಮೊದಲ ದಿನ ಅವರಿಗೆ ಜೀವ ಬೆದರಿಕೆ ಕರೆ ಬಂದಿತ್ತು. ದಾಳಿಗೆ ಹೋಗುವ ದಿನ ತ್ರಿವೇಣಿಯವರು ತಾನೂ ಜೊತೆಯಲ್ಲಿ ಬರುತ್ತೇನೆ ಎಂದಾಗ ಬಾಲಕೃಷ್ಣ ಆಚಾರ್ಯ ‘ಬೇಡ, ಸಂಸ್ಥೆಯನ್ನು ಮುನ್ನಡೆಸಲು ಇಬ್ಬರಲ್ಲಿ ಒಬ್ಬರು ಜೀವಂತವಿರಬೇಕಾಗುತ್ತದೆ’ ಎಂದು ಹೇಳಿ ಅವರನ್ನು ತಡೆದಿದ್ದರು. ಆ ದಾಳಿಗೆ ಹೋದ ದಿನವೇ ಆವರ ಸಾವಾಗಿತ್ತು. ಅವರ ಸಾವಾದ ದಿನ ಆ ವೇಶ್ಯಾವಾಟಿಕೆ ಕೇಂದ್ರದಲ್ಲಿ ಸಿಹಿ ಹಂಚಲಾಗಿತ್ತು. ಬಾಲಕೃಷ್ಣ ಆಚಾರ್ಯರ ಸಾವಿನ ಆಘಾತದಿಂದಾಗಿ ತ್ರಿವೇಣಿ ಆಚಾರ್ಯರಿಗೆ ಮುಂದೇನು ಮಾಡುವುದೆಂದು ತಿಳಿಯದಾಯಿತು.
ಅವರ ಅತ್ತೆ ಮಾವ ಅಂದರೆ, ಬಾಲಕೃಷ್ಣ ಆಚಾರ್ಯರ ತಂದೆ ತಾಯಿ, ‘ಆ ಹೆಣ್ಣು ಮಕ್ಕಳನ್ನು ಕಾಪಾಡುವ ಕಾರ್ಯದಲ್ಲಿ ನಾವು ಮಗನನ್ನು ಕಳೆದುಕೊಂಡೆವು, ಇನ್ನು ನಿನ್ನನ್ನೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ನಿನಗೊಬ್ಬ ಚಿಕ್ಕ ಮಗನಿದ್ದಾನೆ ಎಂಬುದನ್ನೂ ನೆನಪಿಟ್ಟುಕೊ’ ಎಂದಾಗಲಂತೂ ತ್ರಿವೇಣಿ ಯವರಿಗೆ ಏನೂ ತೋಚದಾಯಿತು. ಆದರೆ, ಅವರಿಗೆ ಆ ಬಡಪಾಯಿ ಹೆಣ್ಣು ಮಕ್ಕಳ ಮುಖ ಗಳು ಕಣ್ಣೆದುರು ಬಂದು ತಮ್ಮ ರಿಸ್ಕ್ಯೂ ಫೌಂಡೇಷನನ್ನು ಸ್ಥಗಿತಗೊಳಿಸಲು ಮನಸ್ಸು ಬಾರದಾಯಿತು. ಆ ಹೆಣ್ಣು ಮಕ್ಕಳಿಗಾಗಿ ತನ್ನ ಪತಿ ಪ್ರಾಣ ಕಳೆದುಕೊಂಡುದು ವ್ಯರ್ಥವಾಗಬಾರದು ಎಂದು ನಿಶ್ಚಿಯಿಸಿದ ಅವರು ತಮ್ಮ ಪತ್ರಕರ್ತೆ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮನ್ನು ಸಂಪೂರ್ಣವಾಗಿ ರಿಸ್ಕ್ಯೂ ಫೌಂಡೇಷನ್‌ಗೆ ಅರ್ಪಿಸಿಕೊಂಡರು. ೧೯೯೩ರಲ್ಲಿ ಒಂದು ಹೆಣ್ಣನ್ನು ಬಲವಂತದ ವೇಶ್ಯಾವಾಟಿಕೆಯಿಂದ ಪಾರು ಮಾಡಿದ ತ್ರಿವೇಣಿ ಆಚಾರ್ಯ ಈವರೆಗೆ ಅಂತಹ ೫೦೦೦ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಪಾರು ಮಾಡಿದ್ದಾರೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…