ಕೃಷ್ಣ ಸಿದ್ದಾಪುರ
ಟೆಂಡರ್ ವಿಳಂಬದಿಂದ ೯,೫೦೦ ಕುಟುಂಬಗಳಿಗೆ ಸಂಕಷ್ಟ; ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ
ಸಿದ್ದಾಪುರ: ಕೊಡಗು ಜಿಲ್ಲೆಯ ಹಾಡಿ ಹಾಗೂ ಗಿರಿಜನ ಪ್ರದೇಶಗಳಲ್ಲಿ ವಾಸಿಸುವ ಸುಮಾರು ೯,೫೦೦ ಕುಟುಂಬಗಳಿಗೆ ಆಸರೆಯಾಗಿದ್ದ ಪೌಷ್ಟಿಕ ಆಹಾರ ಕಿಟ್ ವಿತರಣೆ ಕಳೆದ ಫೆಬ್ರವರಿಯಿಂದ ಸ್ಥಗಿತಗೊಂಡಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಮಟ್ಟದ ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಪೂರೈಕೆ ಸ್ಥಗಿತಗೊಂಡಿದ್ದು, ತಕ್ಷಣ ವಿತರಣೆ ಆರಂಭಿಸುವಂತೆ ಗಿರಿಜನ ಕುಟುಂಬಗಳು ಹಾಗೂ ಮುಖಂಡರು ಆಗ್ರಹಿಸಿದ್ದಾರೆ.
ಪರಿಶಿಷ್ಟ ಪಂಗಡಗಳ ಅರ್ಹ ಕುಟುಂಬಗಳಿಗೆ ಸೌಲಭ್ಯ: ಕೊರಗ, ಮಲೆಕುಡಿಯ, ಜೇನುಕುರುಬ, ಕಾಡುಕುರುಬ, ಸೋಲಿಗ, ಯರವ, ಕುಡಿಯ, ಸಿದ್ಧಿ ಹಾಗೂ ಬೆಟ್ಟಕುರುಬ ಸೇರಿದಂತೆ ವಿವಿಧ ಪರಿಶಿಷ್ಟ ಪಂಗಡಗಳ ಅರ್ಹ ಕುಟುಂಬಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮಾಸಿಕ ೨,೨೫೮.೧೪ ರೂ. ಮೌಲ್ಯದ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುತ್ತಿತ್ತು. ಅಕ್ಕಿ, ರಾಗಿ, ಗೋಧಿ, ತೊಗರಿ ಬೇಳೆ, ಕಡಲೆ, ಕಡಲೆಬೀಜ, ಅಲಸಂದೆ, ಹುರುಳಿ, ಹೆಸರುಕಾಳು, ಸಕ್ಕರೆ, ಬೆಲ್ಲ, ಮೊಟ್ಟೆ, ಸೂರ್ಯಕಾಂತಿ ಎಣ್ಣೆ ಹಾಗೂ ನಂದಿನಿ ತುಪ್ಪ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಕಿಟ್ನಲ್ಲಿ ದೊರೆಯುತ್ತಿದ್ದವು. ಆದರೆ, ಈ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ.
ಉದ್ಯೋಗಾವಕಾಶವಿಲ್ಲದೆ ಊಟಕ್ಕೂ ಪರದಾಟ: ಜಿಲ್ಲೆಯ ಬಹುತೇಕ ಗಿರಿಜನ ಕುಟುಂಬಗಳು ಕೂಲಿ ಕೆಲಸ ಹಾಗೂ ಅರಣ್ಯಾಧಾರಿತ ಚಟುವಟಿಕೆಗಳನ್ನು ಅವಲಂಬಿಸಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯೋಗಾವಕಾಶಗಳ ಕೊರತೆ ಮತ್ತು ಪ್ರತಿಕೂಲ ಪರಿಸ್ಥಿತಿಗಳಿಂದ ಕುಟುಂಬಗಳ ಆದಾಯ ಕುಂಠಿತಗೊಂಡಿದೆ. ಕೆಲಸ ಸಿಗದ ದಿನಗಳಲ್ಲಿ ದಿನನಿತ್ಯದ ಜೀವನ ನಿರ್ವಹಿಸುವುದೇ ಕಷ್ಟವಾಗಿದ್ದು, ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಎರಡು ಹೊತ್ತಿನ ಊಟ ಒದಗಿಸುವುದಕ್ಕೂ ಕುಟುಂಬಗಳು ಪರದಾಡುವಂತಾಗಿದೆ.
ಪೌಷ್ಟಿಕ ಆಹಾರವೇ ಪ್ರಮುಖ ಆಸರೆ: ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಸರ್ಕಾರದಿಂದ ನಿಯಮಿತವಾಗಿ ದೊರೆಯುತ್ತಿದ್ದ ಪೌಷ್ಟಿಕ ಆಹಾರ ಕಿಟ್ ಪ್ರಮುಖ ಆಸರೆಯಾಗಿತ್ತು. ಆದರೆ ಕಳೆದ ಆರು ತಿಂಗಳುಗಳಿಂದ ಕಿಟ್ ವಿತರಣೆ ಸ್ಥಗಿತಗೊಂಡಿರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಅವಽಯಲ್ಲಿ ಪರ್ಯಾಯವಾಗಿ ಆಹಾರ ಪದಾರ್ಥಗಳನ್ನು ಒದಗಿಸಿಲ್ಲ ಎಂದು ಫಲಾನುಭವಿ ಕುಟುಂಬಗಳು ಅಳಲು ತೋಡಿಕೊಂಡಿವೆ.
ಈ ಸಮಸ್ಯೆಯ ಕುರಿತು ಸಂತ್ರಸ್ತ ಕುಟುಂಬಗಳು ಹಾಗೂ ಸ್ಥಳೀಯ ಮುಖಂಡರು ಸಂಬಂಧಪಟ್ಟ ಶಾಸಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಽಕಾರಿಗಳು ಮತ್ತು ಇಲಾಖೆಯ ನಿರ್ದೇಶಕರ ಗಮನಕ್ಕೆ ತಂದಿದ್ದಾರೆ. ಸರ್ಕಾರದಿಂದ ವರ್ಕ್ ಆರ್ಡರ್ ಬಿಡುಗಡೆಯಾಗಿದ್ದು, ಪೂರೈಕೆದಾರರ ಆಯ್ಕೆ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಈ ತಿಂಗಳಿನಿಂದ ಜಿಲ್ಲೆಯ ಎಲ್ಲ ೯,೫೦೦ ಗಿರಿಜನ ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಪುನರಾರಂಭಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
” ಆರು ತಿಂಗಳಿಂದ ಪೌಷ್ಟಿಕ ಆಹಾರ ಕಿಟ್ ದೊರೆಯದೆ ಹಾಡಿಗಳಲ್ಲಿನ ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಉದ್ಯೋಗಾವಕಾಶಗಳು ಕಡಿಮೆಯಾಗಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸವಾಲಾಗಿದೆ. ಸರ್ಕಾರದ ಯೋಜನೆಯೊಂದು ಟೆಂಡರ್ ವಿಳಂಬದ ಕಾರಣಕ್ಕೆ ಸ್ಥಗಿತಗೊಳ್ಳುವುದು ಸರಿಯಲ್ಲ. ಬಾಕಿ ಉಳಿದಿರುವ ಕಿಟ್ಗಳ ವಿತರಣೆಯನ್ನೂ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ವ್ಯವಸ್ಥೆ ರೂಪಿಸಬೇಕು.”
-ವೈ.ಪಿ.ಲೀಲಾ, ಹೃದಯಡ್ಲು ಹಾಡಿ ನಿವಾಸಿ
” ರಾಜ್ಯಮಟ್ಟದಲ್ಲಿ ಟೆಂಡರ್ ವಿಳಂಬವಾಗಿದ್ದರಿಂದ ಕಿಟ್ ವಿತರಣೆಯಲ್ಲಿ ತಡವಾಗಿತ್ತು. ಇದೀಗ ಕಿಟ್ ವಿತರಣೆಗೆ ಆದೇಶ ಬಂದಿದ್ದು, ಈ ತಿಂಗಳಿನಿಂದಲೇ ಜಿಲ್ಲೆಯ ಎಲ್ಲ ೯,೫೦೦ ಗಿರಿಜನ ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ ಪೂರೈಕೆ ಪುನರಾರಂಭಿಸಲಾಗುವುದು.”
-ಹೆಚ್.ಸಿ.ಭಾಗೀರಥಿ , ಸಮನ್ವಯಾಧಿಕಾರಿ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ
” ಉದ್ಯೋಗ ಮತ್ತು ಆದಾಯದ ಕೊರತೆಯಿಂದ ಸಂಕಷ್ಟದಲ್ಲಿರುವ ಗಿರಿಜನ ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ ಪ್ರಮುಖ ಆಸರೆಯಾಗಿದೆ. ಟೆಂಡರ್ ವಿಳಂಬಕ್ಕೆ ಬಡವರ ಹಸಿವು ಬಲಿಯಾಗಬಾರದು. ಆಹಾರ ಕಿಟ್ಗಳು ಸಕಾಲದಲ್ಲಿ ಫಲಾನು ಭವಿಗಳಿಗೆ ತಲುಪುವಂತೆ ಶಾಶ್ವತ ವ್ಯವಸ್ಥೆ ರೂಪಿಸಬೇಕು.”
-ಸಿದ್ದಪ್ಪ, ಬುಡಕಟ್ಟು ಸಂಘದ ಅಧ್ಯಕ್ಷ
ಸ್ಟಿಂಗ್ ಆಪರೇಷನ್ ಸ್ವರೂಪ ಬದಲಾಗಿದ್ದು ರಾಜ್ಯದ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ಅಂದ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಟಿಂಗ್…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ Stoney Brook ಹೋಟೆಲ್ನ D-Boss Safari ಜಾಗದಲ್ಲಿ ಪಾರ್ಟಿಯ ಮರು ಚಿತ್ರಣ ರೇಣುಕಾಸ್ವಾಮಿಗೆ ಹಲ್ಲೆ…
ಕೇಶವ ಎಂ. ವರ್ಲಿ ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಅನಸೂಯ; ಬುಡಕಟ್ಟು ಜನರ ಜೀವನ, ಸಂಸ್ಕೃತಿ ಅನಾವರಣ ಮೈಸೂರು: ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಚಾತಕ…
ಮಂಜುಕೋಟೆ ಕೋಟೆ: ಪ್ರಥಮ ಬಾರಿಗೆ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ತಲಾ ೨ ಸ್ಥಾನಗಳು ಹಂಚಿಕೆ ಎಚ್.ಡಿ.ಕೋಟೆ: ಏಳು ವರ್ಷಗಳ…
ಕೆ.ಬಿ.ರಮೇಶನಾಯಕ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಳ ಸ್ಥಳೀಯರಿಗೆ ಶೇ.೭೦, ಹೊರಗಿನವರಿಗೆ ಶೇ.೩೦ರಷ್ಟು ಪ್ರಮಾಣದಲ್ಲೇ ಅದಲು ಬದಲು…