Andolana originals

ಇಂದು ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಜಾತ್ರೋತ್ಸವ

ಲಕ್ಷ್ಮೀಕಾಂತ್ ಕೊಮಾರಪ್ಪ

ನವದಂಪತಿಗಳಿಂದ ಕೆರೆಗೆ ಬಾಗಿನ; ಉತ್ಸವಕ್ಕೆ ಸಿಂಗಾರಗೊಂಡ ದೊಡ್ಡಮಳ್ತೆ ಗ್ರಾಮ

ಸೋಮವಾರಪೇಟೆ: ನವದಂಪತಿಗಳ ಆರಾಧ್ಯ ದೇವತೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮ ತಾಯಿ ಜಾತ್ರೋತ್ಸವ ಆ.೨೬ ರಂದು ನಡೆಯಲಿದ್ದು, ಗ್ರಾಮವು ಸಿಂಗಾರಗೊಂಡಿದೆ. ಸ್ವರ್ಣಗೌರಿ ಹಬ್ಬದಂದು ನವದಂಪತಿಗಳು ಹೊನ್ನಮ್ಮನ ಕೆರೆ ತಟದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆ.೨೬ರಂದು ಬೆಳಿಗ್ಗೆ ೧೦.೩೦ಕ್ಕೆ ಕೆರೆಗೆ ಬಾಗಿನ ಆರ್ಪಿಸಲಾಗುತ್ತದೆ. ಸುತ್ತಮುತ್ತಲ ಗ್ರಾಮಸ್ಥರು ಮನೆಯಲ್ಲಿ ಮದುವೆಯ ಶುಭ ಕಾರ್ಯ ನಡೆಯಬೇಕಾದರೂ ಹೊನ್ನಮ್ಮ ತಾಯಿಗೆ ಹರಕೆ ಹೊರುವುದು ಇಲ್ಲಿನ ಪದ್ಧತಿ. ಮದುವೆ ನಂತರ ಕುಟುಂಬ ಸಮೇತ ಜಾತ್ರೋತ್ಸವದಲ್ಲಿ ಭಾಗವಹಿಸಿ, ಬಾಗಿನ ಅರ್ಪಿಸಿ ಆಶೀರ್ವಾದ ಪಡೆಯುವುದು ಸಂಪ್ರದಾಯವಾಗಿದೆ.

ಹೊರ ರಾಜ್ಯ, ಜಿಲ್ಲೆಗಳಿಂದ ಸಾರ್ವಜನಿಕರು ಗೌರಿಹಬ್ಬದಂದು ಆಗಮಿಸುತ್ತಾರೆ. ಹೊರಗಿನ ಜನರಿಗೆ ಊರಿನ ಜನ ಆತ್ಮೀಯವಾಗಿ ಸ್ವಾಗತಿಸುವ ಬಗೆಯೂ ಔಚಿತ್ಯಪೂರ್ಣವಾಗಿದೆ. ಮನೆ, ಮಂದಿರಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಆತಿಥ್ಯ ನೀಡುವ ಪರಿಯಂತೂ ಮಲೆನಾಡಿನ ಜೀವನಶೈಲಿಗೆ ಉತ್ತಮ ನಿದರ್ಶನವಾಗಿದೆ. ಈ ಜಾತ್ರೋತ್ಸವದಲ್ಲಿ ಶ್ರೀಸಾಮಾನ್ಯರೆಲ್ಲರೂ ಮತ-ಭೇದ ಮರೆತು ಗೌರಿಹಬ್ಬದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸಂಪ್ರದಾಯವಾಗಿದೆ. ಗ್ರಾಮಸ್ಥರು ಸಭೆ ಸೇರಿ ಗೌರಿಹಬ್ಬ ಹಾಗೂ ಜಾತ್ರೋತ್ಸವದ ವಿಧಿ ವಿಧಾನಗಳು ಮತ್ತು ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತಾರೆ.

ಬಾಗಿನ ಅರ್ಪಣೆ: ಗೌರಿಹಬ್ಬದಂದು ಅವರವರ ಮನೆಗಳಲ್ಲಿ ಗೌರಿಯನ್ನು ಪೂಜಿಸಿ, ವೃತ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಗಂಗೆಯನ್ನು ಪೂಜಿಸಿ ಕಳಸದೊಂದಿಗೆ ಗೌರಿಯನ್ನು ಮನೆಗೆ ತರುವುದು ಮುಂತಾದ ವಿಶಿಷ್ಟ ಸಂಪ್ರದಾಯಗಳನ್ನು ನೆರವೇರಿಸಿ ಹೊನ್ನಮ್ಮನ ಕೆರೆಯಲ್ಲಿ ಬಾಗಿನ ಅರ್ಪಿಸುತ್ತಾರೆ. ಬಾಗಿನಗಳನ್ನು ಆಕರ್ಷಕವಾಗಿ ಕಾಣುವಂತೆ ಸಿಂಗರಿಸಿ, ದೇವಾಲಯದ ಹೊರಾಂಗಣದಲ್ಲಿರುವ ಬಂಗಾರದ ಕಟ್ಟೆ ಮೇಲಿಟ್ಟು ಪೂಜಿಸಲಾಗುತ್ತದೆ. ಕೆರೆಯ ಏರಿಯ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯವು ಪೂಜೆ-ಪುನ \ಸ್ಕಾರಗಳಿಗೆ ವಿಶೇಷ. ಬಹಳ ಹಿಂದೆಯೇ ಪ್ರತಿಷ್ಠಾಪಿಸಲ್ಪಟ್ಟ ನಂದಿಯ ವಿಗ್ರಹವಿರುವ ಗರ್ಭಗುಡಿಯನ್ನೇ ಕೇಂದ್ರವಾಗಿಟ್ಟುಕೊಂಡು ತಾಯಿ ಹೊನ್ನಮ್ಮನ ಪ್ರತಿಮೆ ಸ್ಥಾಪಿಸಲಾಗಿದೆ. ಇಲ್ಲಿ ವಿಶೇಷ ಪೂಜೆ ನೆರವೇರಿಸಿದರೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ

ಎಂಬ ನಂಬಿಕೆ ಜನರಲ್ಲಿದೆ. ಪ್ರವಾಸಿತಾಣವೂ ಹೌದು: ಹೊನ್ನಮ್ಮನ ಕೆರೆಯ ಏರಿಯ ಎಡ ಮತ್ತು ಬಲ ಬದಿಯಲ್ಲಿರುವ ಗವಿಬೆಟ್ಟ ಮತ್ತು ಮೋರಿ ಬೆಟ್ಟಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಂದಾಜು ೯೦೦ ಅಡಿಗಳಷ್ಟು ಎತ್ತರವಿರುವ ದೈತ್ಯಾಕಾರದ ಬಂಡೆ ಕಲ್ಲುಗಳಿಂದ ಸ್ಥಿರವಾಗಿ ನೆಲೆಯೂರಿ ನಿಂತಂತೆ ಭಾಸವಾಗುತ್ತದೆ. ಗವಿಬೆಟ್ಟಕ್ಕೆ ಮೆಟ್ಟಿಲುಗಳಿದ್ದು, ಮಧ್ಯಭಾಗಕ್ಕೆ ಸರಿಯಾಗಿ ಗುಹೆಯ ಬಾಗಿಲಿನಂತಿರುವ ದ್ವಾರವುಪ್ರವಾಸಿಗರನ್ನು ಸ್ವಾಗತಿಸುತ್ತದೆ. ಗುಹೆಯಿಂದ ಹೊರಬಂದು ಬೆಟ್ಟದ ಮೇಲೇರಿ ದೃಷ್ಟಿಹರಸಿದಷ್ಟು ನಯನ ಮನೋಹರ ದೃಶ್ಯಗಳು ಮೈ ರೋಮಾಂಚನಗೊಳ್ಳುವಂತೆ ಮಾಡುತ್ತವೆ.

ಹೊನ್ನಮ್ಮ ಕೆರೆಯ ಇತಿಹಾಸ: ಎರಡೂವರೆ ಸಾವಿರ ವರ್ಷಗಳ ಹಿಂದೆ ಊರಿನ ಒಡೆಯ ಮಲ್ಲೇಗೌಡರು ದೊಡ್ಡಮಳ್ತೆ ಗ್ರಾಮದಲ್ಲಿ ಕೆರೆಯನ್ನು ಕಟ್ಟಿಸಿದಾಗ ಕೆರೆಯಲ್ಲಿ ನೀರು ಬರಲಿಲ್ಲವಂತೆ. ನೀರು ಬರಬೇಕಾದರೆ ನಿಮ್ಮ ಮನೆಯ ಮುದ್ದಿನ ಸೊಸೆ ಹೊನ್ನಮ್ಮಳನ್ನು ಬಲಿಕೊಡಬೇಕು ಎಂದು ಕನಸ್ಸಿನಲ್ಲಿ ಅಶರೀರವಾಣಿ ನುಡಿಯಿತಂತೆ. ಇದರಿಂದ ಚಿಂತೆಗೆ ಒಳಗಾದ ಮಲ್ಲೇಗೌಡರು ಈ ವಿಷಯವನ್ನು ತನ್ನ ಪತ್ನಿಯೊಂದಿಗೆ ಚರ್ಚಿಸುತ್ತಿರುವಾಗ, ಹೊನ್ನಮ್ಮ ಇದೆಲ್ಲವನ್ನೂ ಕೇಳಿಸಿಕೊಂಡು, ಸ್ವಯಂ ನಿರ್ಧಾರದಿಂದ ಕೆರೆಗೆ ಹಾರವಾಗಿ, ನಂತರ ಕೆರೆಯಲ್ಲಿ ನೀರು ಉಕ್ಕಿ ಹರಿದು ಇಡೀ ಗ್ರಾಮವೇ ಸಮೃದ್ಧಿಯಾಯಿತು. ಇದು ತ್ಯಾಗದ ಸಂಕೇತವಾಗಿ, ನಂತರ ಹೊನ್ನಮ್ಮ ಗ್ರಾಮದೇವತೆಯಾದರು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

” ಹೊನ್ನಮ್ಮ ತಾಯಿ ಜಾತ್ರೋತ್ಸವನ್ನು ಅನೇಕ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹೊರ ಜಿಲ್ಲೆ ಮತ್ತು ರಾಜ್ಯದಿಂದ ಜನರು ಬರುತ್ತಾರೆ. ಕೆರೆ ನೀರಿಲ್ಲದೆ ಬತ್ತಿದ ನಿದರ್ಶನಗಳಿಲ್ಲ. ಈ ವರ್ಷ ಉತ್ತಮ ಮಳೆಯಾಗಿದ್ದು, ೧೬ ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣ ತುಂಬಿದೆ. ಹತ್ತಾರು ಗ್ರಾಮಗಳ ಕೃಷಿ ಭೂಮಿಗೆ ನೀರು ಸಿಗುತ್ತದೆ. ಪ್ರವಾಸಿಗರನ್ನು ಆಕರ್ಷಿಸಲು ಕಲಾ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.

 -ಚಂದ್ರಶೇಖರ್, ಅಧ್ಯಕ್ಷರು, ಶ್ರೀ ಸ್ವರ್ಣಗೌರಿ ದೇವಾಲಯ ಸಮಿತಿ, ದೊಡ್ಡ ಮಳ್ತೆ 

ಆಂದೋಲನ ಡೆಸ್ಕ್

Recent Posts

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

3 hours ago

ಮಡಿಕೇರಿ | ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ : ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

3 hours ago

ಗಡಿ ಜಿಲ್ಲೆಯಲ್ಲೂ ತಮಿಳು ಸಿಎಂ ವಿಜಯ್‌ ಹವಾ!

ಹನೂರು : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಪಟ್ಟಣದಲ್ಲಿ…

3 hours ago

ಪ್ರಧಾನಿ ಸಂಚಾರ ಮಾರ್ಗದಲ್ಲಿ ಜಿಲಿಟೆನ್ ಕಡ್ಡಿ ಪತ್ತೆ ; ಕೆಲಕಾಲ ಆತಂಕ ; ಓರ್ವ ವಶಕ್ಕೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ…

3 hours ago

ತಮಿಳುನಾಡು | ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಚೆನ್ನೈ : ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ…

4 hours ago

ಹುಣಸೂರು | ಭಾರೀ ಗಾಳಿ-ಮಳೆಗೆ ಹಾರಿಹೋದ ಚಾವಣಿ

ಹುಣಸೂರು : ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿದ್ದು,…

5 hours ago