ಜಾತಿ ಆಧಾರಿತ ಅಪರಾಧಕ್ಕೆ ತಡೆ, ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಒದಗಿಸುವ ಮಹತ್ವಪೂರ್ಣವಾದ ‘ಇವ ನಮ್ಮವ ಇವ ನಮ್ಮವ’ ಮಸೂದೆಯನ್ನು ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಮಂಡಿಸಿದೆ. ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಅನ್ಯ ಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಗಳನ್ನು ತಂದೆಯೇ ಕೊಂದು ಹಾಕಿದ ದಾರುಣ ಘಟನೆ ವರದಿಯಾಗಿತ್ತು.
ಇದೊಂದು ನಿದರ್ಶನ ಮಾತ್ರ, ಇಂತಹ ಕ್ರೂರ ಹಾಗೂ ಅಮಾನವೀಯ ಪ್ರಕರಣಗಳು ಅಲ್ಲಲ್ಲಿ ಸದ್ದು ಮಾಡುತ್ತಲೇ ಇವೆ. ಪ್ರಮುಖವಾಗಿ ಮರ್ಯಾದೆಗೇಡು ಹತ್ಯೆಗಳಿಗೆ ಕಡಿವಾಣ ಹಾಕುವ ತುರ್ತು ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ವಿಧೇಯಕವನ್ನು ಮಂಡನೆ ಮಾಡಿದೆ.
ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆ ಮತ್ತು ಹಲ್ಲೆಗಳನ್ನು ತಡೆಗಟ್ಟಲು ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಹಾಗೂ ನಿಷೇಧಕ (ಇವ ನಮ್ಮ ಇವ ನಮ್ಮವ) ೨೦೨೬’ ವಿಧೇಯಕ ಮಂಡನೆಯಾಗಿದೆ. ಸಾಂವಿಧಾನಿಕವಾಗಿ ಅಂತರ್ಜಾತಿ ವಿವಾಹಗಳಿಗೆ ಮನ್ನಣೆ ಇದೆ. ಆದರೂ ಸಂಪ್ರದಾಯ, ಜಾತೀಯತೆ, ಮೌಢ್ಯ, ಕಂದಾಚಾರದ ಜಾಲಕ್ಕೆ ಸಿಲುಕಿದ ಪ್ರತಿಷ್ಠೆಯ ಮನಸ್ಸುಗಳು ಜಾತಿ ವಿನಾಶ, ಅಸಮಾನತೆಯ ನಾಶಕ್ಕೆ ಮೂಲವಾಗಬಹುದಾದ ಈ ಜಾತ್ಯತೀತ ಮದುವೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೆಲ ಅಪರೂಪದ ಪ್ರಕರಣಗಳು ಈ ಆರೋಪಕ್ಕೆ ಹೊರತಾಗಿವೆ. ಅದೆಷ್ಟೋ ಯುವಕ, ಯುವತಿಯರು ಈ ಅಂಧಾನುಕರಣೆಯ ಜಾತೀಯತೆಗೆ ಜೀವ ಕಳೆದುಕೊಂಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರು ಜಾತಿಯ ತರತಮಗಳ ವಿರುದ್ಧ ಕ್ರಾಂತಿಯನ್ನೇ ನಡೆಸಿದರು. ‘ಜಾತಿ ಹೀನನ ಮನೆಯ ಜ್ಯೋತಿ ತಾನವ್ವ’, ‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎನ್ನುವ ಮೂಲಕ ಸಹಬಾಳ್ವೆ, ಸಾಮರಸ್ಯದ ಸಂದೇಶವನ್ನು ಸಾರಿದ್ದರು. ರಾಜ್ಯ ಸರ್ಕಾರ ಇದೇ ಆಶಯವನ್ನು ಇಟ್ಟುಕೊಂಡು ‘ಇವ ನಮ್ಮವ ಇವ ನಮ್ಮವ’ ಕಾಯಿದೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ೭೮ ವರ್ಷಗಳ ನಂತರವೂ ಜಾತೀಯತೆ, ಕೋಮುವಾದದಂತಹ ಅಮಾನುಷತೆಯನ್ನು ಮಟ್ಟಹಾಕಲು ಇಂತಹದೊಂದು ಕಾಯ್ದೆ ತರಬೇಕಾಗಿದೆ ಎಂಬುದು ಮನುಷ್ಯತ್ವ ಇರುವ ಮನಸ್ಸುಗಳು ತಲೆತಗ್ಗಿಸುವಂತಹ ಸಂಗತಿ. ೧೮ ವರ್ಷ ವಯಸ್ಸು ತುಂಬಿದ ಯುವತಿ, ೨೧ ವರ್ಷ ವಯಸ್ಸು ಪೂರ್ಣಗೊಂಡ ಯುವಕ ಪರಸ್ಪರ ಒಪ್ಪಿ ಮದುವೆಯಾಗುವುದಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಸಲ್ಲದು ಎಂಬುದನ್ನು ನ್ಯಾಯಾಂಗ ಕೂಡ ಹೇಳುತ್ತದೆ. ಆದರೆ, ಜಾತಿಯ ಅಹಮಿಕೆಗೆ ಅಥವಾ ನೆರೆಹೊರೆಯವರ ಅವಹೇಳನಕ್ಕೆ ಗುರಿಯಾಗಬೇಕಲ್ಲ ಎಂಬ ಆಕ್ರೋಶಕ್ಕೆಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಹೆತ್ತವರು ಅಥವಾ ಒಡಹುಟ್ಟಿದವರು ಅಥವಾ ಸಂಬಂಧಿಕರು ಇಂತಹ ದಾರುಣ ಕೃತ್ಯಗಳಿಗೆ ಕಾರಣರಾಗುತ್ತಿದ್ದಾರೆ. ಬದುಕಿನಲ್ಲಿ ಸಂತಸ, ಸಂಭ್ರಮಗಳನ್ನು ಸವಿಯಬೇಕಾದ ಯುವ ಜೋಡಿಗಳು ಹಾದಿಬೀದಿಯಲ್ಲಿ ಹೆಣವಾಗುವುದು, ರಕ್ತಪಾತವೇ ನಡೆದುಹೋಗುವುದನ್ನು ಅತ್ಯಂತ ಕಟ್ಟುನಿಟ್ಟಾಗಿ ತಡೆಯಲು ಬಹುಶಃ ಇಂತಹದೊಂದು ಮಸೂದೆ ಕಾಯ್ದೆಯಾಗುವುದು ಆವಶ್ಯಕ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರವನ್ನೇ ಕೈಗೊಂಡಿದೆ. ಈ ಮಸೂದೆ ವಿಧಾನಮಂಡಲದ ಕೆಳಮನೆ ಮತ್ತು ಮೇಲ್ಮನೆಗಳಲ್ಲಿ ಅಂಗೀಕಾರವಾದ ನಂತರ ಕಾಯ್ದೆಯಾಗಲಿದೆ. ಆದರೆ, ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವುದು ಅತ್ಯಗತ್ಯ. ‘ಮಾನ- ಮಾರ್ಯಾದೆ ಹೋಯಿತು’ ಎಂಬ ಕಾರಣಕ್ಕೆ ಕೊಲೆ ಮಾಡಲು ಹೇಸದ ಜನರಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ದುಷ್ಕೃತ್ಯಗಳಿಗೆ ಉತ್ತೇಜನ ನೀಡುವ ಜಾತಿವಾದ ಮನಸ್ಥಿತಿಯವರಿಗೂ ಶಿಕ್ಷೆಯಾಗಬೇಕು. ಇದರಿಂದ ಮರ್ಯಾದೆಯನ್ನು ಪತ್ರಿಷ್ಠೆಯಾಗಿ ಪರಿಗಣಿಸಿ ಜೀವಗಳನ್ನು ಹಣಿಯುವುದಕ್ಕೂ ಹಿಂಜರಿಯದ ಮತಿಗೇಡು ಜನರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ.
ಮಸೂದೆಯಲ್ಲಿ ಮರ್ಯಾದೆಗೇಡು ಹತ್ಯೆ ಅಪರಾಧಕ್ಕೆ ಕನಿಷ್ಠ ಐದು ವರ್ಷಗಳು ಜೈಲು ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಅಂತರ್ಜಾತಿ ಅಥವಾ ಅಂತರ್ಧರ್ಮೀಯ ವಿವಾಹವಾದವರ ಮೇಲೆ ಹಲ್ಲೆ ನಡೆಸಿದರೆ, ಅಪರಾಽಗಳಿಗೆ ೩ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೩ ಲಕ್ಷ ರೂ. ಜುಲ್ಮಾನೆಯನ್ನು ವಿಧಿಸಲು ಅವಕಾಶ ಇದೆ. ಈಗಾಗಲೇ ಜಾರಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ- ೧೯೮೯ ನಿರೀಕ್ಷೆಯಷ್ಟು ಯಶಸ್ವಿಯಾಗಿಲ್ಲ. ಪರಿಶಿಷ್ಟರ ಮೇಲಿನ ಜಾತಿ ದೌರ್ಜನ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಈ ಕಾಯ್ದೆ ದುರುಪಯೋಗ ಆಗುತ್ತಿವೆ ಎಂಬ ಆಕ್ಷೇಪಗಳೂ ಇವೆ. ಈಗ ಜಾರಿಗೆ ತರಲು ಮುಂದಾಗಿರುವ ‘ಇವ ನಮ್ಮವ ಇವ ನಮ್ಮವ’ ಕಾಯ್ದೆಯೂ ಇದೇ ರೀತಿ ವಿಫಲವಾಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕಾಗುತ್ತದೆ.
” ಮರ್ಯಾದೆ ಹೆಸರಿನಲ್ಲಿ ಹತ್ಯೆ ಮತ್ತು ಹಲ್ಲೆಗಳನ್ನು ತಡೆಗಟ್ಟಲು ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಮಾರ್ಯಾದೆಯ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಹಾಗೂ ನಿಷೇಧಕ (ಇವ ನಮ್ಮ ಇವ ನಮ್ಮವ) ೨೦೨೬’ ವಿಧೇಯಕ ಮಂಡನೆಯಾಗಿದೆ. ಸಾಂವಿಧಾನಿಕವಾಗಿ ಅಂತರ್ಜಾತಿ ವಿವಾಹಗಳಿಗೆ ಮನ್ನಣೆ ಇದೆ.”
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ…
ಟೆಹರಾನ್: ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ಭೀಕರ ದಾಳಿ ನಡೆಸಿದ ಪರಿಣಾಮ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಇದು ದೇಶದ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದು ನಡೆದ ಗೌತಮ ಪಂಚಮಹಾರಥೋತ್ಸವದಲ್ಲಿ ದುರಂತವೊಂದು ಸಂಭವಿಸಿದ್ದು, ಜಗಜಂಗುಳಿಯಲ್ಲಿ ಸಿಲುಕಿ ಓರ್ವ ಭಕ್ತ ಸಾವನ್ನಪ್ಪಿರುವ…
ಹುಣಸೂರು: ಒಣಗಿದ್ದ ದಾಸವಾಳ ಹೂ ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರಿನಲ್ಲಿ ನಡೆದಿದೆ. ದೊಡ್ಡಹೆಜ್ಜೂರಿನ…
ನಾಳೆ ಸೇವೆಯಿಂದ ನಿವೃತ್ತಿ ಹೊಂದಲಿರುವ ಮೇಷ್ಟ್ರು ಸಿ.ಹರಕುಮಾರ್, ಬರಹಗಾರ ಮೂರ್ನಾಲ್ಕು ದಶಕಗಳ ಹಿಂದೆ ಮ್ಯಾನೇಜ್ಮೆಂಟ್ ಕೋರ್ಸ್ ಅಥವಾ ಎಂಬಿಎ ಪದವಿ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ದಾವಣಗೆರೆ ಉಪ ಚುನಾವಣೆ ಬಂಡಾಯ ಶಮನಗೊಳಿಸಿದ ಮುಖ್ಯಮಂತ್ರಿ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ…