ಸಾರ್ವಜನಿಕ ಕೆಲಸ – ಕಾರ್ಯಗಳಿಗೆ ಅಡಚಣೆ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಸಾರ್ವಜನಿಕ ಕೆಲಸಗಳು ಕಾರ್ಯಭಾರದ ಒತ್ತಡದಿಂದ ಬಳಲುತ್ತಿರುವ ಸಿಬ್ಬಂದಿ
-ಪ್ರಸಾದ್ ಲಕ್ಕೂರು
ಚಾಮರಾಜನಗರ: ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣಗೊಳಿಸಿ ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳನ್ನು ರಚಿಸಲಾಗಿದೆ. ಇವುಗಳ ಮೂಲಕ ಪಟ್ಟಣ ಮತ್ತು ನಗರಗಳ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಆದರೆ, ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಆಡಳಿತ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.
ಸೌಲಭ್ಯಗಳು ಸಕಾಲಕ್ಕೆ ತಲುಪುತ್ತಿಲ್ಲ.
ನಗರ ಮತ್ತು ಪಟ್ಟಣಗಳ ನಾಗರಿಕರಿಗೆ ಸಾಕಷ್ಟು ಕುಡಿಯುವ ನೀರು ಪೂರೈಕೆ, ಚರಂಡಿ, ಒಳಚರಂಡಿ, ಉದ್ಯಾನವನ, ರಸ್ತೆ ನಿರ್ಮಾಣ, ಶುಚಿತ್ವ ಕಾಪಾಡುವುದು, ಇತರೆ ಸೌಲಭ್ಯಗಳನ್ನು
ನೀಡಬೇಕಿದೆ. ಜೊತೆಗೆ ನಾಗರಿಕರ ಆಸ್ತಿಗಳಿಗೆ ಹಕ್ಕುಪತ್ರ, ಖಾತೆ, ಜನನ, ಮರಣ, ವಾಸಸ್ಥಳ ಪ್ರಮಾಣ ಪತ್ರಗಳ ನೀಡಿಕೆ, ಸರ್ಕಾರಿ ಸವಲತ್ತುಗಳ ವಿತರಣೆಯಂತಹ ಕಾರ್ಯ ನಡೆಸಬೇಕಿದೆ. ವಿವಿಧ ಕಂದಾಯಗಳನ್ನು
ವಸೂಲಿ ಮಾಡಬೇಕಿದೆ. ಅಧಿಕಾರಿಗಳ ಮತ್ತು ನೌಕರರ ಕೊರತೆಯಿಂದ ಈ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ.
ಜಿಲ್ಲೆಯಲ್ಲಿ 2 ನಗರಸಭೆಗಳು, ೨ ಪಟ್ಟಣ ಪಂಚಾಯಿತಿಗಳು, 1 ಪುರಸಭೆ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಒಟ್ಟು 395 ಹುದ್ದೆಗಳು ಖಾಲಿಯಿವೆ. ಇವುಗಳು ಭರ್ತಿಯಾಗದೆ ಇಲ್ಲಿನ ಅಧಿಕಾರಿಗಳು ಎರಡೆರಡು
ಹುದ್ದೆಗಳನ್ನು ನಿಭಾಯಿಸಬೇಕಿದೆ. ಕಾರ್ಯ ಭಾರದ ಒತ್ತಡದಿಂದ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
10 ವರ್ಷಗಳಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯೇ ನಡೆದಿಲ್ಲ. ಜಿಲ್ಲಾ ಕೇಂದ್ರದಲ್ಲಿ ಸೂಕ್ತ ಸೌಲಭ್ಯಗಳು ಇಲ್ಲದ ಕಾರಣ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲೆಯ
ಸ್ಥಳೀಯ ಸಂಸ್ಥೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಚಾಮರಾಜನಗರ ನಗರಸಭೆ: ಜಿಲ್ಲಾ ಕೇಂದ್ರವಾದ ನಗರವು 31 ವಾರ್ಡ್‌ಗಳನ್ನು ಹೊಂದಿದೆ. 2011ರ ಜನಗಣತಿ ಪ್ರಕಾರ 70 ಸಾವಿರ ಜನಸಂಖ್ಯೆ ಹೊಂದಿದೆ.
ಈ ನಗರಸಭೆಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು 236. ಆದರೆ ಪ್ರಸ್ತುತ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಸೇರಿ 92 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಕಿ 144 ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿಯ ಕೊರತೆಯಿಂದ ಕರ್ತವ್ಯನಿರತ ನೌಕರರಿಗೆ ದೈನಂದಿನ ಕಾರ್ಯಭಾರದ ಒತ್ತಡವಿದೆ.
ನಗರಸಭೆಗೆ ಡಿ-ದರ್ಜೆ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಆದರೆ, ಕಿರಿಯ ಇಂಜಿನಿಯರ್ 2, ಕಂಪ್ಯೂಟರ್ ಆಪರೇಟರ್ 3, ಸ್ಯಾನಿಟರಿ ಸೂಪರ್‌ವೈಸರ್ 3, ವಾಹನ ಚಾಲಕರು 4, ಸಹಾಯಕ ನೀರು ಸರಬರಾಜುಗಾರರು 8, ಪೌರಕಾರ್ಮಿಕರ 44, ಸಹಾಯಕರು 4, ಲೋಡರ‍್ಸ್ 16, ಗಾರ್ಡನರ್
4, ನೀರು ಸರಬರಾಜು ವಾಲ್‌ಮನ್ 3 ಹುದ್ದೆಗಳೂ ಖಾಲಿ ಉಳಿದಿವೆ.
ನಗರಸಭೆಗೆ ಇನ್ನು 44 ಪೌರಕಾರ್ಮಿಕರ ಅಗತ್ಯವಿದೆ. ಕಸದ ಆಟೋಗಳಿಗೆ 16 ಲೋಡರ‍್ಸ್ ಗಳ ಅವಶ್ಯಕತೆಯಿದೆ. ಆದರೆ ಒಬ್ಬರನ್ನೂ ನೇಮಿಸಿಕೊಂಡಿಲ್ಲ. ಇದರಿಂದ ನಗರಾದ್ಯಂತ ಕಸ ವಿಲೇವಾರಿಯು ಸಮರ್ಪಕವಾಗಿ ನಡೆಯುತ್ತಿಲ್ಲ.
ಕೊಳ್ಳೇಗಾಲ ನಗರಸಭೆ: ಪಟ್ಟಣದ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, 67 ಸಾವಿರ ಜನಸಂಖ್ಯೆ ಹೊಂದಿದೆ. ಈ ನಗರಸಭೆಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು 236, ಆದರೆ ಪ್ರಸ್ತುತ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಸೇರಿ 71 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಕಿ 165 ಹುದ್ದೆಗಳು ಖಾಲಿ ಉಳಿದಿವೆ. ಪ್ರಥಮ ದರ್ಜೆ ಸಹಾಯಕರು 2, ಶೀಘ್ರಲಿಪಿಗಾರರು 2, ಸ್ಯಾನಿಟರಿ ಸೂಪರ್‌ವೈಜರ್ 4, ಕರ ವಸೂಲಿಗಾರರು 3, ವಾಹನ ಚಾಲಕರು 5, ಸಹಾಯಕ ನೀರು ಸರಬರಾಜುದಾರರು 8, ಸಹಾಯಕರು 8 ಹುದ್ದೆಗಳು ಖಾಲಿಯಿವೆ.
ನಗರಸಭೆಗೆ ಇನ್ನು 59 ಪೌರಕಾರ್ಮಿಕರು ಬೇಕಾಗಿದ್ದಾರೆ. ಕಸ ಸಾಗಣೆ ವಾಹನಕ್ಕೆ 16 ಲೋಡರ‍್ಸ್, ನೀರು ಸರಬರಾಜು ವಾಲ್ವ್‌ಮನ್ 26, ನೀರು ಸರಬರಾಜು ಸಹಾಯಕ 8, ಗಾರ್ಡನರ್ 4 ಹುದ್ದೆಗಳು ಖಾಲಿಯಿವೆ. ಈ
ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಿದರೆ ನಗರಸಭೆಯಲ್ಲಿ ಕೆಲಸ ಕಾರ್ಯಗಳು ಸುಲಭವಾಗಿ ಸಾಗುತ್ತವೆ.
ಗುಂಡ್ಲುಪೇಟೆ ಪುರಸಭೆ: ಪಟ್ಟಣದಲಿ 23 ವಾರ್ಡ್ ಗಳಿದ್ದು, 28 ಸಾವಿರ ಜನಸಂಖ್ಯೆಯಿದೆ. ಇಲ್ಲಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು 100, ಆದರೆ ಪ್ರಸ್ತುತ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಸೇರಿ 57 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಕಿ 45 ಹುದ್ದೆಗಳು ಖಾಲಿ ಉಳಿದಿವೆ. ಪುರಸಭೆಯಲ್ಲಿ ಕಂಪ್ಯೂಟರ್
ಆಪರೇಟರ್ 2, ನೀರು ಸರಬರಾಜು ಸಹಾಯಕ 4, ಕಸದ ಆಟೋಗಳಿಗೆ ಕಸ ತುಂಬುವ ಲೋಡರ‍್ಸ್ 8, ನೀರು ಸರಬರಾಜು ವಾಲ್ವ್ ಮನ್ 7 ಹುದ್ದೆಗಳು ಖಾಲಿ ಉಳಿದಿವೆ.
ಯಳಂದೂರು ಪ.ಪಂಚಾಯಿತಿ: ಪಟ್ಟಣದಲ್ಲಿ 11 ವಾರ್ಡ್‌ಗಳಿದ್ದು, 8,500 ಜನಸಂಖ್ಯೆಯಿದೆ. ಇಲ್ಲಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು 40, ಪ್ರಸ್ತುತ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಸೇರಿ 23 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 17 ಹುದ್ದೆಗಳು ಖಾಲಿ ಉಳಿದಿವೆ.
ಹನೂರು ಪಟ್ಟಣ ಪಂಚಾಯಿತಿ: ಪಟ್ಟಣದಲ್ಲಿ 13 ವಾರ್ಡ್‌ಗಳಿದ್ದು, 10,500 ಜನಸಂಖ್ಯೆಯಿದೆ. ಇಲ್ಲಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು 40, ಪ್ರಸ್ತುತ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಸೇರಿ 16 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು 24 ಹುದ್ದೆಗಳು ಖಾಲಿ ಉಳಿದಿವೆ. ಈ ಪಟ್ಟಣ ಪಂಚಾಯಿತಿಗೆ ಇನ್ನು 6 ಪೌರಕಾರ್ಮಿಕರು, 4 ಲೋಡರ್‌ಗಳ ಅಗತ್ಯವಿದೆ.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಸಿಬ್ಬಂದಿಯ ನೇಮಕ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಸರ್ಕಾರವೇ ಕ್ರಮ ವಹಿಸಬೇಕು.
-ಎಂ.ವಿ.ಸುಧಾ, ಯೋಜನಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಾ.ನಗರ
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…