ನೈಸರ್ಗಿಕ ಕೃಷಿ ರೂವಾರಿ ಸುಭಾಷ್ ಪಾಳೇಕರ್ ಸ್ಪಷ್ಟನುಡಿ
ಸಂದರ್ಶನ: ರಶ್ಮಿ ಕೋಟಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಶ್ರೀ ಕ್ಷೇತ್ರ ಪುಷ್ಪಗಿರಿ ಸಹಯೋಗದಲ್ಲಿ ಜ.೩ರಿಂದ ೬ರವರೆಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸಿದ್ದ ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ಅವರು ಆಂದೋಲನ ದಿನಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನ.
ಮೈಸೂರು: ಮಣ್ಣೆಂದರೆ ಕೇವಲ ದೂಳಲ್ಲ. ಕೃಷಿ ಸಮಸ್ಯೆಗೆ ಮಣ್ಣಿನೊಳಗೆ ಪರಿಹಾರ ಇದೆ. ರೈತರ ಆತ್ಮಹತ್ಯೆ, ಸಾಲಬಾಧೆ, ಅಸಹಾಯಕತೆ ಈ ಎಲ್ಲದಕ್ಕೂ ನೈಸರ್ಗಿಕ ಕೃಷಿ ಪರಿಹಾರವಾಗುತ್ತದೆ. ಮಣ್ಣಿನ ಜೀವಂತಿಕೆ ಯನ್ನೂ ಉಳಿಸುತ್ತದೆ. ಅನ್ನದಾತರು ಕಾರ್ಪೊರೇಟ್ ಕಪಿಮುಷ್ಟಿಗೆ ಸಿಲುಕದಂತೆ ರಕ್ಷಣೆ ನೀಡುತ್ತದೆ ಎಂದು ನೈಸರ್ಗಿಕ ಕೃಷಿ ರೂವಾರಿ ಸುಭಾಷ್ ಪಾಳೇಕರ್ ಅಭಿಪ್ರಾಯಪಟ್ಟರು.
‘ಆಂದೋಲನ’ ನಡೆಸಿದ ಸಂದರ್ಶನದಲ್ಲಿ ನೈಸರ್ಗಿಕ ಕೃಷಿಯ ಮಹತ್ವ ಮತ್ತು ಅದನ್ನು ಅಳವಡಿಸಿಕೊಳ್ಳುವುದರಿಂದ ರೈತರ ಬದುಕಿಗೆ ಬೇಸಾಯದಿಂದ ದೊರೆಯಬಹು ದಾದ ಲಾಭ ಮತ್ತು ಭದ್ರತೆ ಕುರಿತು ಮಾತನಾಡಿದ್ದಾರೆ.
ಆಂದೋಲನ: ಇಂದು ದೇಶದಾದ್ಯಂತ ‘ಶೂನ್ಯ ಬಜೆಟ್ ನೈಸರ್ಗಿಕ ಕೃಷಿ’ ಬಗ್ಗೆ ಮಾತನಾಡುವಾಗ ಮೊದಲಿಗೆ ಕೇಳಿಬರುವ ಹೆಸರು ನಿಮ್ಮದು. ಈ ಯೋಚನೆ ನಿಮ್ಮೊಳಗೆ ಹೇಗೆ ಹುಟ್ಟಿತು?
ಸುಭಾಷ್ ಪಾಳೇಕರ್: ನಾನು ಕೃಷಿಯನ್ನು ಹೊಸದಾಗಿ ಕಂಡುಕೊಂಡವನಲ್ಲ. ನನ್ನ ತಂದೆಯ ಕೃಷಿ, ನಮ್ಮ ಹಳ್ಳಿಯ ಅನುಭವ, ಮಣ್ಣಿನ ಜೊತೆಗಿನ ನೇರ ಸಂಬಂಧದಿಂದ ಕಲಿತವನು. ರಾಸಾಯನಿಕ ಕೃಷಿ ರೈತರನ್ನು ಸಾಲ ಗಾರರನ್ನಾಗಿಸುತ್ತಿದೆ ಎಂಬುದನ್ನು ನಾನು ನನ್ನ ಕಣ್ಣಾರೆ ನೋಡಿದೆ. ಆಗ ನನ್ನಲ್ಲಿ ಮೂಡಿದ ಪ್ರಶ್ನೆ ಎಂದರೆ, ಭೂಮಿ ಲಕ್ಷಾಂತರ ವರ್ಷಗಳಿಂದ ಬದುಕಿದೆ, ಆದರೆ ಮನುಷ್ಯ ನಿಂದ ಅದು ಅಸ್ವಸ್ಥವಾಗುತ್ತಿದೆಯಲ್ಲಾ ಎಂಬುದು. ಅಲ್ಲಿಂದಲೇ ನೈಸರ್ಗಿಕ ಕೃಷಿಯ ಚಿಂತನೆ ಆರಂಭವಾಯಿತು.
ಆಂದೋಲನ: ನೈಸರ್ಗಿಕ ಕೃಷಿ ಎಂದರೆ ರೈತರಿಗೆ ಹೆಚ್ಚುವರಿ ಶ್ರಮ, ಕಡಿಮೆ ಉತ್ಪಾದನೆ ಎನ್ನುವ ಭ್ರಮೆ ಇನ್ನೂ ಇದೆ. ಇದಕ್ಕೆ ನಿಮ್ಮ ಉತ್ತರವೇನು? ಸುಭಾಷ್ ಪಾಳೇಕರ್: ಇದು ಭ್ರಮೆಯಲ್ಲ, ತಪ್ಪು ಪ್ರಚಾರ. ನೈಸರ್ಗಿಕ ಕೃಷಿಯಲ್ಲಿ ಶ್ರಮ ಕಡಿಮೆ, ಖರ್ಚು ಶೂನ್ಯಕ್ಕೆ ಸಮ. ನಾವು ಹೊರಗಿನಿಂದ ಏನನ್ನೂ ತರುವುದಿಲ್ಲ. ಹಸು, ಮಣ್ಣು, ನೀರು, ಬೀಜ ಇವೆಲ್ಲವೂ ರೈತನ ಕೈಯಲ್ಲೇ ಇವೆ. ಉತ್ಪಾದನೆ ಕಡಿಮೆ ಎಂಬುದು ಮೊದಲ ವರ್ಷ ಮಾತ್ರ ಕಾಣಬಹುದು. ಮಣ್ಣು ಚೇತರಿಸಿಕೊಂಡ ನಂತರ ಫಲಿತಾಂಶ ಅದ್ಭುತವಾಗುತ್ತದೆ.
ಆಂದೋಲನ: ನೀವು ‘ಮಣ್ಣು ಜೀವಂತವಾಗಿದೆ’ ಎಂದು ಹೇಳುತ್ತೀರಿ. ಇದನ್ನು ವೈಜ್ಞಾನಿಕವಾಗಿ ಹೇಗೆ ಅರ್ಥ ಮಾಡಿಕೊಳ್ಳಬೇಕು?
ಸುಭಾಷ್ ಪಾಳೇಕರ್: ಮಣ್ಣು ಎಂದರೆ ಕೇವಲ ದೂಳಲ್ಲ. ಅದರಲ್ಲಿ ಕೋಟಿ ಕೋಟಿ ಸೂಕ್ಷ್ಮ ಜೀವಿಗಳು ಬದುಕುತ್ತಿವೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಅವುಗಳನ್ನು ಕೊಲ್ಲುತ್ತವೆ. ಜೀವಂತ ಮಣ್ಣಿನಲ್ಲಿ ಬೆಳೆ ಬೆಳೆದರೆ ಕೀಟಗಳು ದಾಳಿ ಮಾಡುವುದೇ ಕಡಿಮೆ. ನಾವು ಸಮಸ್ಯೆಗೆ ಉತ್ತರವನ್ನು ಹೊರಗಡೆ ಹುಡುಕುತ್ತೇವೆ, ಆದರೆ ಉತ್ತರ ಮಣ್ಣಿನೊಳಗೇ ಇದೆ.
ಆಂದೋಲನ: ನೈಸರ್ಗಿಕವಾಗಿ ಬೆಳೆದ ಬೆಳೆಗಳಿಗೂ ಮಾರುಕಟ್ಟೆ ಸಿಗದ ಪರಿಸ್ಥಿತಿ ಇದೆ. ಇದು ಕೃಷಿಯ ಸಮಸ್ಯೆಯೋ? ಅಥವಾ ಕೃಷಿಯ ಸುತ್ತ ನಿರ್ಮಾಣವಾದ ವ್ಯವಸ್ಥೆಯದೋ?
ಸುಭಾಷ್ ಪಾಳೇಕರ್: ಸಮಸ್ಯೆ ಕೃಷಿಯದಲ್ಲ. ಇಂದು ಮಾರುಕಟ್ಟೆ ಅನ್ನುವುದೇ ಕಾರ್ಪೊರೇಟ್‌ಗಳ ಕೈಯಲ್ಲಿದೆ. ಏನು ಖರೀದಿಸಬೇಕು? ಎಷ್ಟು ದರ ಕೊಡಬೇಕು? ಎಂಬುದನ್ನು ಅವರು ನಿರ್ಧರಿಸುತ್ತಾರೆ. ರೈತನು ಆರೋಗ್ಯಕರ ಆಹಾರ ಬೆಳೆದರೂ, ಅದನ್ನು ಮಾರಾಟ ಮಾಡುವ ಹಕ್ಕು ಅವನ ಕೈಯಲ್ಲಿಲ್ಲ.
ಆಂದೋಲನ: ಒಂದು ಕ್ವಿಂಟಾಲ್ ಗೋಧಿ ಉತ್ಪಾದನೆಗೆ ೪೦ ರೂ. ಖರ್ಚಾದರೆ, ಸರ್ಕಾರ ೨೦ ರೂ.ಗೆ ಬೆಲೆ ನಿಗದಿಪಡಿಸುತ್ತದೆ. ಇದರ ಹೊಣೆಗಾರರು ಯಾರು? ಸರ್ಕಾರವೇ? ವಿಶ್ವ ವ್ಯಾಪಾರ ಸಂಸ್ಥೆಯೇ (ಡಬ್ಲ್ಯೂಟಿಒ)? ಅಥವಾ ಕಾರ್ಪೊರೇಟ್ ಶಕ್ತಿಗಳೇ?
ಸುಭಾಷ್ ಪಾಳೇಕರ್: ಇದು ಮೂರೂ ಸೇರಿ ನಿರ್ಮಿಸಿರುವ ಅಪರಾಧ. ಡಬ್ಲ್ಯೂಟಿಒ ಜಾಗತಿಕ ಮಾರುಕಟ್ಟೆ ಹೆಸರಿನಲ್ಲಿ ರೈತನ ಬೆಲೆ ನಿಗದಿಗೆ ಅಡ್ಡಿಪಡಿಸುತ್ತದೆ. ಸರ್ಕಾರಗಳು ಅಂತರ್ ರಾಷ್ಟ್ರೀಯ ಒತ್ತಡಕ್ಕೆ ತಲೆಬಾಗುತ್ತವೆ. ಕಾರ್ಪೊರೇಟ್‌ಗಳು ಕಡಿಮೆ ದರದಲ್ಲಿ ಧಾನ್ಯ ಖರೀದಿಸಿ ಲಾಭ ಮಾಡಿಕೊಳ್ಳುತ್ತವೆ. ಆದರೆ ನಷ್ಟ ಅನು ಭವಿಸುವವನು ರೈತ ಮಾತ್ರ. ಇದನ್ನು ನಾನು ಸಂರಚಿತ ದೋಚಾಟ ((institutional loo) ಎನ್ನುತ್ತೇನೆ.
ಆಂದೋಲನ: ಹೊಸ ಕೃಷಿ ಕಾಯ್ದೆಗಳು ಮಧ್ಯವರ್ತಿಗಳಿಂದ ರೈತರನ್ನು ಮುಕ್ತಗೊಳಿಸುತ್ತವೆ ಎಂದು ಸರ್ಕಾರ ಹೇಳಿತು. ಆದರೆ ಲಕ್ಷಾಂತರ ರೈತರು ಅದನ್ನು ಅಪಾಯವೆಂದು ಯಾಕೆ ಕಂಡರು?
ಸುಭಾಷ್ ಪಾಳೇಕರ್: ಮಧ್ಯವರ್ತಿ ಹೋದರೆ ರೈತನು ಸ್ವತಂತ್ರನಾಗುತ್ತಾನೆ ಎಂಬುದು ಸುಳ್ಳು. ಮಧ್ಯವರ್ತಿ ಹೋದ ಜಾಗದಲ್ಲಿ ಕಾರ್ಪೊರೇಟ್ ಕುಳಿತುಕೊಳ್ಳುತ್ತದೆ. ಅದು ಇನ್ನೂ ಶಕ್ತಿಶಾಲಿ, ಇನ್ನೂ ನಿರ್ದಯಿ. ರೈತರು ಇದನ್ನು ಅರ್ಥ ಮಾಡಿಕೊಂಡಿದ್ದರು. ಅದಕ್ಕಾಗಿ ಅವರು ರಸ್ತೆಗೆ ಬಂದರು. ಇದು ಅಜ್ಞಾನವಲ್ಲ, ಇದು ರಾಜಕೀಯ ಜ್ಞಾನ.
ಆಂದೋಲನ: ಎಂಎಸ್‌ಪಿ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳಿದರೂ, ರೈತರು ಅದು ನಿಧಾನವಾಗಿ ದುರ್ಬಲವಾಗುತ್ತದೆ ಎಂದು ಯಾಕೆ ಭಯಪಟ್ಟರು?
ಸುಭಾಷ್ ಪಾಳೇಕರ್: ಕಾನೂನಿನಲ್ಲಿ ಬರದ ಭರವಸೆ, ಭರವಸೆಯೇ ಅಲ್ಲ. ಇಂದು ಎಂಎಸ್‌ಪಿ ಇದ್ದರೂ, ಅದು ಕಡ್ಡಾಯವಲ್ಲ. ನಾಳೆ ಕಾರ್ಪೊರೇಟ್ ಮಾರುಕಟ್ಟೆ ಬಂದಾಗ ಎಂಎಸ್‌ಪಿ ಕಾಗದದ ಮೇಲೆ ಉಳಿಯುತ್ತದೆ. ರೈತರು ಇತಿಹಾಸವನ್ನು ನೋಡಿದ್ದಾರೆ. ಆದ್ದರಿಂದ ಭರವಸೆಯ ಮಾತುಗಳಿಗಿಂತ ಕಾನೂನು ಭದ್ರತೆ ಬೇಕೆಂದರು.
ಆಂದೋಲನ: ಎಂಎಸ್‌ಪಿ ಭಾರತೀಯ ರೈತರಿಗೆ ರಾಜಿಯಾಗದ ವಿಷಯವೇ?
ಸುಭಾಷ್ ಪಾಳೇಕರ್: ಎಂಎಸ್‌ಪಿ ಅನ್ನುವುದು ದಾನವಲ್ಲ, ಅದು ರೈತನ ಬದುಕಿನ ಕನಿಷ್ಠ ಭದ್ರತೆ. ಬೆಲೆ ಇಲ್ಲದ ಕೃಷಿ ದಾಸ್ಯ. ನೈಸರ್ಗಿಕ ಕೃಷಿ ರೈತನ ಖರ್ಚು ಕಡಿಮೆ ಮಾಡುತ್ತದೆ. ಆದರೆ ಬೆಲೆ ಭದ್ರತೆ ಇಲ್ಲದೆ ಅದು ಸಾಕಾಗುವುದಿಲ್ಲ. ಆದ್ದರಿಂದ ಎಂಎಸ್‌ಪಿ ಮತ್ತು ನೈಸರ್ಗಿಕ ಕೃಷಿ ಪರಸ್ಪರ ವಿರೋಧಿಗಳಲ್ಲ, ಪೂರಕಗಳು.
ಆಂದೋಲನ: ಈ ಕಾಯ್ದೆಗಳು ರೈತರಿಗೆ ಇಷ್ಟು ಲಾಭದಾಯಕವಾಗಿದ್ದರೆ, ರೈತ ಸಂಘಟನೆಗಳೊಂ ದಿಗೆ ವ್ಯಾಪಕ ಚರ್ಚೆ ಯಾಕೆ ನಡೆಯಲಿಲ್ಲ?
ಸುಭಾಷ್ ಪಾಳೇಕರ್: ಏಕೆಂದರೆ ಇದು ರೈತರಿಗಾಗಿ ಮಾಡಲಾದ ಕಾಯ್ದೆಗಳಲ್ಲ. ಇದು ರೈತರ ಹೆಸರಿನಲ್ಲಿ ಕಾರ್ಪೊರೇಟ್‌ಗಳಿಗೆ ಮಾಡಲಾದ ಕಾಯ್ದೆಗಳು. ರೈತರನ್ನು ಕೇಳಿದರೆ ಪ್ರಶ್ನೆಗಳು ಬರುತ್ತಿದ್ದವು. ಪ್ರಶ್ನೆ ಬಂದರೆ ಸತ್ಯ ಹೊರಬರುತ್ತಿತ್ತು. ಅದಕ್ಕಾಗಿ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ.
ಆಂದೋಲನ: ಇಂದು ದೇಶದಲ್ಲಿ ಕ್ಯಾನ್ಸರ್, ಮಧುಮೇಹ ವ್ಯಾಪಕವಾಗುತ್ತಿದೆ. ಇದಕ್ಕೆ ರಾಸಾಯನಿಕ ಕೃಷಿಯ ಸಂಬಂಧ ಎಷ್ಟು ನೇರವಾಗಿದೆ?
ಸುಭಾಷ್ ಪಾಳೇಕರ್: ನೇರ ಸಂಬಂಧ ಇದೆ. ವಿಷಬೆಳೆಸಿ, ವಿಷ ತಿಂದರೆ ದೇಹ ಕಾಯಿಲೆಗೀಡಾಗುವುದಿಲ್ಲವೆ? ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು ಆಹಾರದ ಮೂಲಕ ನಮ್ಮ ರಕ್ತಕ್ಕೆ ಸೇರುತ್ತಿವೆ. ಇದು ಆಹಾರ ದಿಂದ ಉಂಟಾಗುತ್ತಿರುವ ಮಾನವ ಹಕ್ಕು ಉಲ್ಲಂಘನೆ.
ಆಂದೋಲನ: ನೀವು ‘ಆರ್ಗಾನಿಕ್ ಕೃಷಿಯೂ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಬಹುದು’ ಎಂದು ಹೇಳಿದ್ದೀರಿ. ಅದು ಹೇಗೆ? ಸುಭಾಷ್ ಪಾಳೇಕರ್: ಆರ್ಗಾನಿಕ್ ಕೃಷಿಯಲ್ಲಿ ಕೂಡ ಹೊರಗಿನಿಂದ ಗೊಬ್ಬರ, ಸಾರಿಗೆ, ಪ್ಯಾಕೇಜಿಂಗ್ ಇರುತ್ತದೆ. ಅದು ಇಂಧನ ಬಳಕೆ ಹೆಚ್ಚಿಸುತ್ತದೆ. ನೈಸರ್ಗಿಕ ಕೃಷಿಯಲ್ಲಿ ಎಲ್ಲವೂ ಸ್ಥಳೀಯ. ಕಾರ್ಬನ್ ಉಳಿತಾಯವಾಗುತ್ತದೆ. ಭೂಮಿಗೆ ಹಾನಿ ಮಾಡದೇ ಬೆಳೆ ಬೆಳೆಸುವುದೇ ನಿಜವಾದ ಹವಾಮಾನ ಪರಿಹಾರ.
ಆಂದೋಲನ: ಸರ್ಕಾರಗಳು, ಕೃಷಿ ನೀತಿ ನಿರ್ಣಾಯಕರು ನಿಮ್ಮ ಆಲೋಚನೆಗಳನ್ನು ಹೇಗೆ ನೋಡಬೇಕು ಎಂದು ನೀವು ಭಾವಿಸುತ್ತೀರಿ?
ಸುಭಾಷ್ ಪಾಳೇಕರ್: ಸರ್ಕಾರ ರೈತನಿಗೆ ದಾನ ಕೊಡ ಬೇಕಾಗಿಲ್ಲ. ಸರಿಯಾದ ದಾರಿ ತೋರಿಸಬೇಕು. ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಒಂದು ಯೋಜನೆ ಅಲ್ಲ, ಒಂದು ತತ್ವ. ಅದನ್ನು ಕಡ್ಡಾಯ ಮಾಡಬಾರದು, ಆದರೆ ಪ್ರೋತ್ಸಾಹಿಸಬೇಕು. ರೈತನು ಸ್ವತಃ ಅನುಭವಿಸಿ ನಂಬಬೇಕು.
ಆಂದೋಲನ: ಇಂದಿನ ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಅವರಿಗೆ ನೀವು ಏನು ಹೇಳಲು ಬಯಸುತ್ತೀರಿ?
ಸುಭಾಷ್ ಪಾಳೇಕರ್: ಕೃಷಿಯಲ್ಲಿ ಲಾಭ ಇಲ್ಲ ಎನ್ನುವುದು ತಪ್ಪು. ರಾಸಾಯನಿಕ ಕೃಷಿ ನಷ್ಟಕ್ಕೆ ದಾರಿ. ಆದರೆ ನೈಸರ್ಗಿಕ ಕೃಷಿ ಭವಿಷ್ಯ. ಇದರಲ್ಲಿ ಗೌರವವಿದೆ, ಆರೋಗ್ಯವಿದೆ, ಸ್ವಾಭಿಮಾನವಿದೆ. ಯುವಕರು ಭೂಮಿಯನ್ನು ಅರ್ಥ ಮಾಡಿಕೊಂಡರೆ, ಕೃಷಿಯೇ ಅತ್ಯಂತ ಗೌರವಯುತ ವೃತ್ತಿ ಎಂಬುದು ಗೊತ್ತಾಗುತ್ತದೆ.
ಆಂದೋಲನ: ಕೊನೆಗೆ, ರೈತರಿಗೆ ನಿಮ್ಮ ಸಂದೇಶ? ಸುಭಾಷ್ ಪಾಳೇಕರ್: ಭೂಮಿಯ ಜೊತೆ ಯುದ್ಧ ಮಾಡಬೇಡಿ. ಸಂವಾದ ಮಾಡಿ. ಭೂಮಿ ನಿಮ್ಮ ತಾಯಿ. ತಾಯಿಯನ್ನು ನಂಬಿದರೆ, ಅವಳು ಎಂದಿಗೂ ಮೋಸ ಮಾಡುವುದಿಲ್ಲ.
ಆಂದೋಲನ: ರೈತರ ಆತ್ಮಹತ್ಯೆ, ಸಾಲ, ಅಸಹಾಯಕತೆ ಈ ಎಲ್ಲದಕ್ಕೂ ನೈಸರ್ಗಿಕ ಕೃಷಿ ಪರಿಹಾರವಾಗಬಹುದೇ?
ಸುಭಾಷ್ ಪಾಳೇಕರ್: ಖಂಡಿತ. ರೈತನ ಆತ್ಮಹತ್ಯೆಗೆ ಕಾರಣ ಬೆಳೆ ವಿಫಲವಾಗುವುದಲ್ಲ, ಸಾಲಕ್ಕೂ ಅವರು ಹೆದರುವುದಿಲ್ಲ. ಆದರೆ ಅದನ್ನು ವಸೂಲು ಮಾಡುತ್ತಿರುವ ವಿಧಾನಕ್ಕೆ ಹೆದರುತ್ತಾರೆ. ನೈಸರ್ಗಿಕಕೃಷಿಯಲ್ಲಿ ಸಾಲವೇ ಇಲ್ಲ. ಬೀಜಕ್ಕೂ, ಗೊಬ್ಬರಕ್ಕೂ, ಔಷಧಕ್ಕೂ ಅಂಗಡಿಗೆ ಹೋಗಬೇಕಿಲ್ಲ. ರೈತ ಸ್ವತಂತ್ರನಾಗುತ್ತಾನೆ. ಸ್ವಾತಂತ್ರ್ಯ ಬಂದಾಗ ಆತ್ಮಹತ್ಯೆಯ ಪ್ರಶ್ನೆಯೇ ಉದಯಿಸುವುದಿಲ್ಲ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಕ್ಕಿದ್ದು, ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ.…
ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ವಿಷ ಪ್ರಶಾನದಿಂದ ಹುಲಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ…
ಮೈಸೂರಿನ ಮೆಟ್ರೋಪೋಲ್ ವೃತ್ತದ ಸಮೀಪ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ…
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳು, ನ್ಯಾಯಾಲಯ ಮೊದಲಾದ ಕಡೆ ಬಾಂಬ್ ಇಡಲಾಗಿದೆ ಎಂದು ದುಷ್ಕರ್ಮಿಗಳು ಫೋನ್, ಇ-ಮೇಲ್ ಮೂಲಕ ಬೆದರಿಕೆ…
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅತಿಹೆಚ್ಚು ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೆ ರಾಜ್ಯದ ಅನೇಕ…
ಸಂಚಾರ ನಿಯಮ ಉಲ್ಲಂಸಿದವರ ವಿರುದ್ಧ ೮೧ ಪ್ರಕರಣ ದಾಖಲು! ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ಹೊಸ ವರ್ಷಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ…