ರಾಜೇಶ್ ಬೆಂಡರವಾಡಿ
ಮಸೀದಿ ಮುಂಭಾಗವೇ ನಡೆಯುವ ಮಾರಮ್ಮ ಕೊಂಡೋತ್ಸವ ಸಾಮರಸ್ಯದ ದ್ಯೋತಕ
ಮುಸಲ್ಮಾನರು ಪ್ರಾರ್ಥನೆ ಮಾಡುವಾಗ ದೇವಸ್ಥಾನದಲ್ಲಿ ಮಂತ್ರ, ಘಂಟೆ ಶಬ್ದ ಇರಲ್ಲ
ದೇವಸ್ಥಾನದಲ್ಲಿ ಮಂತ್ರ ನುಡಿಯುವಾಗ ಮುಸ್ಲಿಮರು ಅಧಾನ್ ಕೂಗುವುದಿಲ್ಲ
ಮಂದಿರ-ಮಸೀದಿ ಪರಸ್ಪರ ಹೊಂದುಕೊಂಡಂತೆ ಇರುವ ತಾಳವಾಡಿಯಲ್ಲಿ ಹಿಂದೂ, ಮುಸ್ಲಿಂ ಎಂಬ ಯಾವ ಭೇದ ಭಾವವೂ ಇಲ್ಲದೇ ಪ್ರತಿ ವರ್ಷ ಮಾರಮ್ಮನ ಕೊಂಡೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸುಮಾರು ಒಂದೂವರೆ ಶತಮಾನದಿಂದಲೂ ಧರ್ಮ,ಕೋಮು, ಭಾಷೆಯ ಗೊಡವೆಗೆ ಹೋಗದೇ ಭಾವೈಕ್ಯತೆಯನ್ನು ಮೆರೆಯುತ್ತಾ ಬಂದಿರುವ ಅಪರೂಪದ ಜಾತ್ರೆಗಳಲ್ಲಿ ಇದೂ ಒಂದಾಗಿದೆ.
ಭಾಷೆ, ರಾಜ್ಯ ಹಾಗೂ ಗಡಿ ಇವೆಲ್ಲದರ ಎಲ್ಲೆಯನ್ನು ಮೀರಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಚಾಮರಾಜನಗರದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡು ರಾಜ್ಯಕ್ಕೆ ಸೇರಿರುವ ತಾಳವಾಡಿಯಲ್ಲಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ಸಾಮಾನ್ಯವಾಗಿ ಮಾರ್ಚ್‌ನಲ್ಲಿಯೇ ಕೊಂಡೋತ್ಸವ ನಡೆಯುತ್ತದೆ. ಕೊಂಡ ಹಾಯಲಿಕ್ಕಾಗಿ ಭಾರೀ ಗಾತ್ರದ ಮರದ ದಿಮ್ಮಿಗಳಿಂದ ಸಿದ್ಧಪಡಿಸುವ ನಿಗಿನಿಗಿ ಕೆಂಡ ಮತ್ತು ಅದರ ಹೊಗೆಯ ಕಾವು ಹತ್ತಿರವೇ ಇರುವ ಮಸೀದಿಯ ಗೋಡೆಯನ್ನು ತಟ್ಟುವಂತೆ ಭಾಸವಾಗುತ್ತದೆ.
ಮುಖ್ಯರಸ್ತೆಯಲ್ಲಿರುವ ಮಸೀದಿಯ ದ್ವಾರದಿಂದ ಮಾರಮ್ಮ ಗುಡಿ ಬಳಿಯವರೆಗೂ ಕೆಂಡದಿಂದ ಕೊಂಡವನ್ನು ನಿರ್ಮಿಸಲಾಗುತ್ತದೆ. ಮಸೀದಿ, ಮಂದಿರಗಳೆರಡರ ಆವರಣ ವನ್ನೂ ಭಕ್ತರು ಜಾತ್ರೆ ವೇಳೆ ಸುತ್ತುವರಿಯುತ್ತಾರೆ. ಕಾಲಿಡಲೂ ಜಾಗ ಇಲ್ಲದ ಸ್ಥಿತಿ ಇರುತ್ತದೆ. ಇತರ ಜಾತ್ರೆಗಳಂತೆಯೇ ಹರ್ಷೋದ್ಗಾರ ಜೋರಾಗಿರುತ್ತದೆ. ಆದರೂ ಪ್ರೀತಿ, ವಿಶ್ವಾಸಕ್ಕೆ ಭಾವೈ ಕ್ಯತೆಗೆ ಇನಿತೂ ಧಕ್ಕೆಯಾಗದೆ ಎಲ್ಲರನ್ನೂ ಒಳಗೊಂಡು ಸಂಭ್ರಮದಿಂದ ಕೊಂಡೋತ್ಸವ ಜರುಗುವ ರೀತಿಯೇ ವಿಶೇಷವಾದುದು.
ಮುಸ್ಲಿಂ ಸಮುದಾಯದವರೂ ಭಾಗಿಯಾಗುವ ಈ ಜಾತ್ರೆಯು ಸಮಸಮಾಜದ ಆಶೋತ್ತರಗಳಿಗೆ ಪೂರಕವಾಗಿದೆ. ಮಾರಮ್ಮನಗುಡಿ, ಮಸೀದಿ, ವೇಣುಗೋಪಾಲಸ್ವಾಮಿ ದೇಗುಲ ಒಂದಕ್ಕೊಂದು ಹತ್ತಿರತ್ತಿರ ಇರುವಂತೆಯೇ ಹಿಂದೂ-ಮುಸ್ಲಿಂ, ಕನ್ನಡ-ತಮಿಳು ಭಾಷಿ ಕರು ಸಮಭಾವದಿಂದ ಬಾಳುತ್ತಿದ್ದಾರೆ ಎಂಬುದಕ್ಕೆ ಎಲ್ಲರೂ ಒಂದೆಡೆ ಸೇರಿ ಆಚರಿಸುವ ಜಾತ್ರೆಯೇ ಸಾಕ್ಷಿಯಾಗಿದೆ. ತಾಳವಾಡಿ ಫಿರ್ಕಾದ ೫೮ ಗ್ರಾಮಗಳವರೂ ಸೇರಿದಂತೆ ಚಾಮರಾಜ ನಗರ, ತಮಿಳುನಾಡಿನ ಈರೋಡ್, ಕೊಯ ಮತ್ತೂರು ಸಹಿತ ವಿವಿಧೆ ಡೆಯಿಂದ ಸಾವಿರಾರು ಭಕ್ತರು ಅಪ್ಪಟ ಕನ್ನಡಿಗರೇ ಅಧಿಕವಾಗಿರುವ ಇಲ್ಲಿನ ಧಾರ್ಮಿಕ ಉತ್ಸವದಲ್ಲಿ ಭಾಗಿ ಯಾಗುವ ಪರಿಪಾಠ ಲಾಗಾಯ್ತಿನಿಂದಲೂ ಮುಂದುವರಿದಿದೆ.
ಸುಮಾರು ೪ ದಶಕಗಳ ಹಿಂದೆ ಜಾತ್ರೆ ಸಂಬಂಧವಾಗಿ ಶಾಂತಿಗೆ ಭಂಗ ಉಂಟಾದಾಗ ಎಲ್ಲ ಕೋಮಿನ ಮುಖಂಡರು ಕುಳಿತು ಜಾತ್ರೆಯನ್ನು ಎಂದಿನಂತೆ ಸಾಮರಸ್ಯದಿಂದ ನಡೆಸಿಕೊಂಡು ಹೋಗಬೇಕು ಎಂದು ಆಗ ಕೈಗೊಂಡ ಒಮ್ಮತದ ತೀರ್ಮಾನ ಹಾಗೆಯೇ ಸಾಗಿದೆ. ಮಸೀದಿ ಮುಂಭಾಗದಲ್ಲೇ ಮಾರಮ್ಮನ ಕೊಂಡೋತ್ಸವ ನಡೆಯುವುದು ಈ ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಒಂದೊಂದು ಸಮಾಜದವರೂ ನಿರ್ದಿಷ್ಟ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ಕೊಂಡೋತ್ಸವ ನಡೆಸುತ್ತಾ ಬಂದಿದ್ದಾರೆ. ಒಮ್ಮೆಲೇ ಹಲವರು ಕೊಂಡ ಹಾಯುವ ಪದ್ಧತಿ ಹಿಂದೆ ಚಾಲ್ತಿಯಲ್ಲಿತ್ತು. ಇದರಿಂದ ನೂಕು ನುಗ್ಗಲು ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅರ್ಚಕರಾದ ಶಿವಣ್ಣ ಮಾತ್ರ ಜಾತ್ರೆಯಲ್ಲಿ ಕೊಂಡ ಹಾಯುವ ತೀರ್ಮಾನವನ್ನು ಎರಡು ದಶಕಗಳ ಹಿಂದೆಯಷ್ಟೇ ಕೈಗೊಳ್ಳಲಾಯಿತು. ಅದರಂತೆ ಅವರೊಬ್ಬರೇ ಅಲಂಕೃತ ಮಾರಮ್ಮ ದೇವಿಮೂರ್ತಿಯನ್ನು ಹೊತ್ತು ಕೊಂಡ ಹಾಯುತ್ತಾರೆ. ಕೊಂಡದ ಗುಳಿಯ ಉದ್ದ ೬೦ ಅಡಿ, ಆಳ ೪ ಅಡಿ ಇರುತ್ತದೆ. ಹಾಗಾಗಿ ಇದು ದೊಡ್ಡ ಕೊಂಡೋತ್ಸವ ಎಂದೇ ಪ್ರಸಿದ್ಧಿ ಹೊಂದಿದೆ.
” ಜಾನಪದ ಕಲಾ ತಂಡಗಳ ಪ್ರದರ್ಶನ ಮತ್ತು ಮಂಗಳವಾದ್ಯದ ಸದ್ದು ಇತರ ಕಡೆಗಳಂತೆಯೇ ಇಲ್ಲಿ ಮೇಳೈಸಿದರೂ ಹಿಂದೂಗಳು ಮತ್ತು ಮುಸಲ್ಮಾನರು ಕೋಮು ಸೌಹಾರ್ದತೆ-ಭಾವೈಕ್ಯತೆ ಸಾರುವ ಕಾರಣಕ್ಕಾಗಿಯೇ ಮಾರಮ್ಮ ಕೊಂಡೋತ್ಸವ ಅತ್ಯಂತ ಹೆಸರುವಾಸಿಯಾಗಿದೆ. ಜಾತ್ರೆಯ ಭಾಗವಾಗಿ ರಥೋತ್ಸವ, ಉಯ್ಯಾಲೋತ್ಸವವೂ ನಡೆಯಲಿವೆ. ಗಡಿ, ಗುಡಿ ಮೀರಿದ ತಾಳವಾಡಿ ಜಾತ್ರೆ ಎಂಬ ಮಾತಿಗೆ ಈ ಕೊಂಡೋತ್ಸವ ಅನ್ವರ್ಥವಾಗಿದೆ”
” ತಾಳವಾಡಿಯಲ್ಲಿ ಅಕ್ಕಪಕ್ಕವೇ ಇರುವ ಮಂದಿರ, ಮಸೀದಿಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಾಗ ಪರಸ್ಪರ ತೊಂದರೆ ಆಗದ ರೀತಿಯಲ್ಲಿ ಪ್ರಾರ್ಥನಾ ಸಮಯ ನಿಗದಿ ಮಾಡಿಕೊಳ್ಳಲಾಗಿದೆ. ಮುಸಲ್ಮಾನರು ಪ್ರಾರ್ಥನೆ (ಅಧಾನ್) ಮಾಡುವಾಗ ದೇವಸ್ಥಾನದಲ್ಲಿ ಮಂತ್ರೋಚ್ಚಾರ, ಘಂಟೆ ಶಬ್ದ ಇರುವುದಿಲ್ಲ. ಇಲ್ಲಿ ಮಂತ್ರ ಘೋಷ ನಡೆಯುವಾಗ ಅವರು ಅಧಾನ್ ಕೂಗಲ್ಲ. ಈ ರೀತಿಯ ಸೌಹಾರ್ದತೆ ಸದಾ ಇದೆ. ನಮ್ಮ ಬಾಂಧವ್ಯ ಜಾತ್ರೆಗಷ್ಟೇ ಸೀಮಿತವಾಗಿಲ್ಲ.”
-ಡಿ.ಶಿವಣ್ಣ, ತಾಳವಾಡಿ
” ಮಾರಮ್ಮ ಕೊಂಡೋತ್ಸವ ಸಂದರ್ಭದಲ್ಲಿ ಆಗುವ ಖರ್ಚು ಭರಿಸಲು ಮನೆ ಮನೆಗೆ ಇಂತಿಷ್ಟು ಎಂದು ವಂತಿಗೆ ನೀಡುವ ವ್ಯವಸ್ಥೆ ಇದ್ದು ಮುಸಲ್ಮಾನರಾದ ನಾವೂ ಅದಕ್ಕೆ ಹಣ ಕೊಡುತ್ತೇವೆ. ಕೊಂಡೋತ್ಸವದ ಬಳಿಕ ಅವರು ನಮ್ಮನ್ನು ಕರೆದು ಊಟೋಪಚಾರ ಮಾಡಿಸಿ ಗೌರವಿಸುವಂತೆ, ನಾವು ಸಹ ರಂಜಾನ್ ಸಂದರ್ಭದಲ್ಲಿ ಅವರನ್ನು ಆಹ್ವಾ ನಿಸಿ ಉಪಾಹಾರ,ಸಿಹಿ ನೀಡಿ ಸತ್ಕರಿಸುತ್ತೇವೆ. ಊರಲ್ಲಿ ಏನಾದರೂ ಸಣ್ಣಪುಟ್ಟ ವ್ಯತ್ಯಾಸ ಕಂಡು ಬಂದರೆ ಎಲ್ಲ ಕೋಮಿನ ಮುಖಂಡರು ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕುಳಿತು ನ್ಯಾಯ ಪಂಚಾಯಿತಿ ಮಾಡಿ ಪರಿಹಾರ ಕಂಡುಕೊಳ್ಳುತ್ತೇವೆ.”
-ಮೊಕ್ತಾರ್ ಅಹಮ್ಮದ್, ತಾಳವಾಡಿ
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ 1, 3 ಹಾಗೂ 5 ದಿನಗಳ ಅನ್‌ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಸಂಚಕಾರ ತಂದೊಡ್ಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಆಕ್ರಮ ನಿವೇಶನ ಹಂಚಿಕೆ…
ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ…
ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…
ಬೆಂಗಳೂರು: ಜನವರಿ.16ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ…
ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…