Andolana originals

ನುಡಿಸುತ್ತಿದ್ದ ತಂತಿ ಹರಿಯಿತು

  • ರಹಮತ್‌ ತರೀಕೆರೆ

 

ಯಾವಾಗ ಕುವೆಂಪುನಗರದ ಮನೆಗೆ ಹೋದರೂ, ಆರಾಮ ಕುರ್ಚಿಯಲ್ಲಿ ಮೈಚೆಲ್ಲಿ ಶತಮಾನದ ನೆನಪಿನ ಬುತ್ತಿ ಬಿಚ್ಚಿ ಸರಸ ವಿರಸದ ಅನುಭವವನ್ನು ಮುಟ್ಟಿಗೆ ಮಾಡಿ ಉಣಿಸುತಿದ್ದವರು ರಾಜೀವ ತಾರಾನಾಥರು. ನನಗೂ ಬಾನುಗೂ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೆಂಬಂತೆ ಅಕ್ಕರೆ ಸುರಿಸುತ್ತಿದ್ದರು. ಹಬ್ಬಗಳಂದು ಮೊಟ್ಟಮೊದಲ ಕರೆ ಬರುತ್ತಿದ್ದುದೇ ರಾಜೀವರಿಂದ. ತುಂಬು ದನಿಯಲ್ಲಿ “ಅಸ್ಸಲಾಮು ಅಲೈಕುಂ, ಮೈ ರಾಜೀವ್ ತಾರಾನಾಥ್, ಈದ್ ಮುಬಾರಕ್, ಖುದಾ ಹಾಫೀಸ್” ಎಂದು ಹಾರೈಕೆ ಮೊಳಗುತ್ತಿತ್ತು. ಮುಂದಿನ ವಾರ ಬಕ್ರೀದ್ . ಆದರೆ ಈದ್ ಮುಬಾರಕ್ ಮೊಳಗು ಬರುವುದಿಲ್ಲ.

ಕಳೆದ ಏಪ್ರಿಲ್ ತಿಂಗಳನಲ್ಲಿ ಅಂಬೇಡ್ಕರ್ ಸೆಂಟರಿನ ಕಾರ್ಯಕ್ರಮಕ್ಕೆ ಬಂದವನು, “ಸಾರ್. ನಾನು ಇವತ್ತು ಸಂಜೆ ಬರಲೇ?” ಎಂದು ಕೇಳಿದೆ ಪೋನಿನಲ್ಲಿ. “ಬರಲೇ ಅಂತೀರಲ್ರೀ. ಬರತಕ್ಕದ್ದು” ಎಂದು ಅಪ್ಪಣೆ ಮಾಡಿದರು. ಅವರು ತಿನ್ನುವ ಕಿತ್ತಳೆಹಣ್ಣು
ತೆಗೆದುಕೊಂಡು, ನನ್ನ ಗೆಳೆಯರನ್ನು ಕರೆದುಕೊಂಡು ಹೋದೆ. ಅವರು ನನ್ನ ಆತ್ಮಕತೆ ಕುಲುಮೆ ಓದುತ್ತಿದರು. ಅದನ್ನು ತಮ್ಮ ಬಳಿಯಿದ್ದ ಹಿಟ್ಲರನ ಆತ್ಮಕತೆ ‘ಮೇಯ್ನ್ ಕೆಂಫ್’ ಜತೆ ಇಟ್ಟಿದ್ದರು. ನೀವು ಹೀಗೆ ಮಾಡಬಹುದೇ ಎಂದೆ. ನಮ್ಮ ದೇಶದ ಈಗಿನ ಅವಸ್ಥೆಯನ್ನು ತಿಳೀಬೇಕಾದರೆ ಇದನ್ನು ಓದಬೇಕು ಎಂದರು. ಬಳಿಕ ಅಮೆರಿಕದಲ್ಲಿ ಸಂಗೀತ ಕಲಿಸುವಾಗಿನ ಅನುಭವಗಳನ್ನು ತಮಾಶೆಯಿಂದ ಹೇಳುತ್ತ ಹೋದರು. ಈಗ ಇಂತಹ ಹರಟೆಗಳು ಕೇಳಲಾರೆವು.

ಹಿರಿಯ ಜೀವ, ರಾಜೀವ ತಾರಾನಾಥರಿಗೆ ೯೨ ತುಂಬಿತ್ತು. ಪ್ರತಿಭಾವಂತ ಕಲಾವಿದರ ನಿಡಿದಾದ ಬಾಳು, ದೀರ್ಘಾಯುವಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಪರಂಪರೆಯ ಯಾನಕ್ಕೆ, ಅದರೊಳಗಿನ ಸೃಜನಶೀಲ ಪ್ರಯೋಗ ಮತ್ತು ಸಾಹಸಗಳಿಗೆ ಲಗತ್ತಾಗಿರುತ್ತದೆ. ಇದನ್ನು ಅನ್ಹದ್ ಎಂದು ಕರೆಯಬಹುದು. ಇವರೆಲ್ಲ ತಾವು ಆರಿಸಿಕೊಂಡ ಮಾಧ್ಯಮದಲ್ಲಿ ಕೇವಲ ಕಲಾವಿದರಾಗಿ ದುಡಿದವರಲ್ಲ. ಆ ಮಾಧ್ಯಮದ ಚೌಕಟ್ಟನ್ನೆ ಬದಲಿಸಿದವರು. ಒಂದು ಮಾಧ್ಯಮಕ್ಕೆ ಸೀಮಿತರಲ್ಲ. ಹಲವು ಮಾಧ್ಯಮಗಳಿಗೆ ಹರಿದಾಡಿದವರು. ಇವರಿಗೆ ನಿಯಮ ಅಥವಾ ಸೀಮೆಗಳಿರುವುದು ಕೇವಲ ಪಾಲಿಸುವುದಕ್ಕಲ್ಲ, ಸೀಮೋಲ್ಲಂಘನಕ್ಕೆ. ಹದ್ದುಗಳಿರುವುದು ಅನಹದ್ ಆಗುವುದಕ್ಕೆ.

‘ಅನಹದ್’-ಫಾರಸಿ ಶಬ್ದ. ಸಾಧಕರು ತಮ್ಮ ಆನುಭಾವಿಕ ಸಾಧನೆಯಲ್ಲಿ ಮಾಡುವ ಏರುಯಾನವನ್ನು ವಿವರಿಸಲು ಕಬೀರನು ಈ ಪದವನ್ನು ಬಳಸಿದನು. ಅವನ ಬಾಳೇ ಹಲವು ಬಗೆಯ ಸೀಮೋಲ್ಲಂಘನೆಗಳ ಮೊತ್ತ. ಆತ ತನ್ನ ಧರ್ಮದ ಸಾಂಸ್ಥಿಕ ಚೌಕಟ್ಟು ಬಿಟ್ಟು ಗುರುಪಂಥೀಯ ಅನುಭಾವಕ್ಕೆ ಚಲಿಸಿದವನು. ಹುಟ್ಟಿಬೆಳೆದ ಬನಾರಸ್ಸನ್ನು ತೊರೆದು ಗೋರಖಪುರಕ್ಕೆ ಪ್ರಸ್ಥಾನ ಮಾಡಿದವನು. ಅವನ ಗುರುವಾಗಲಿ ಶಿಷ್ಯರಾಗಲಿ ಅವನ ಧರ್ಮದವರಲ್ಲ. ಗಾಯನ ಕಾವ್ಯ ಅನುಭಾವ ನೇಕಾರಿಕೆಗಳಲ್ಲಿ ಆತ ಮಗ್ಗದಲ್ಲಿ ನೂಲೆಳೆಗಳು ಹಾಸುಹೊಕ್ಕಾಡುವಂತೆ ಸಮದರ್ಶನದಲ್ಲಿ ಅಲೆದಾಡಿದವನು. ಇಂತಹವೇ ಜೈವಿಕ ಮತ್ತು ಕಲಾತ್ಮಕ ಸಂಕರ ಪರಂಪರೆಯ ಉಳಿ ಸುತ್ತಿಗೆಗಳಿಂದ ರಾಜೀವ ತಾರಾನಾಥರ ವ್ಯಕ್ತಿತ್ವ ಕಟೆಯಲ್ಪಟ್ಟಿತು. ಎಂತಲೇ ಅದು ಭಾರತದ ನಡಾವಳಿಯ ಭಾಗವಾಗಿರುವ ಬಹುತ್ವದ ಪರಂಪರೆಯ ಪವಿತ್ರ ಪ್ರತೀಕವಾಗಿದೆ.

ರಾಜೀವರ ತಂದೆ ಪಂಡಿತ ತಾರಾನಾಥರು ಕರಾವಳಿ ಸೀಮೆಯಲ್ಲಿ ಹುಟ್ಟಿ ಹೈದರಾಬಾದಲ್ಲಿ ಬೆಳೆದು, ನಾಡನ್ನೆಲ್ಲ ತಿರುಗಾಡಿ, ತುಂಗಭದ್ರಾದಲ್ಲಿ ಬೇರುತಳೆದವರು. ಕೊಂಕಣಿ ಮನೆಮಾತಿನ ಸಾರಸ್ವತ ಬ್ರಾಹ್ಮಣರಾಗಿ ತಮಿಳು ಮನೆಮಾತಿನ ಬೆಸ್ತ ಸಮುದಾಯದ ಸುಮತಿಬಾಯಿ ಅವರನ್ನು ಸಂಗಾತಿಯಾಗಿ ಪಡೆದವರು. ಅವರ ಈ ಸೀಮೋಲ್ಲಂಘನೆಗೆ ಪ್ರೇರಣೆಯಾಗಿದ್ದು ಪ್ರೇಮ. ಅವರ ಆಶ್ರಮದ ಹೆಸರು `ಪ್ರೇಮಾಯತನ’. ಅವರ ಗೆಳೆತನ, ಶಾಲೆ ಮತ್ತು ಆಶ್ರಮಗಳಲ್ಲಿ ಎಲ್ಲ ಧರ್ಮದವರು ಜಾತಿಯವರು ಇರುತ್ತಿದ್ದರು. ರಾಜೀವರ ಗುರುಗಳಾದ ಅಲಿ ಅಕಬರಖಾನರೂ, ಪಂಡಿತ ರವಿಶಂಕರರೂ ಹೀಗೇ ಲೋಕಸಂಚಾರಿಗಳು. ತಮ್ಮ ತಂದೆ ಅಲ್ಲಾವುದ್ದೀನ ಖಾನರಂತೆ, ಅಕಬರಖಾನರೂ ಎಲ್ಲ ಜಾತಿಯ ಮತ್ತು ಧರ್ಮದ ಶಿಷ್ಯರನ್ನು ಮನೆಯಲ್ಲಿ ಇಟ್ಟುಕೊಂಡು ಕಲಿಸಿದವರು. ಉಸ್ತಾದ್ ಅಲಿ ಅಕಬರ ಖಾನರ ಮನೆಯಲಿದ್ದು ರಾಜೀವರು ಸಂಗೀತ ಕಲಿತರು.

ರಾಜೀವರ ಈ ಸೀಮೋಲ್ಲಂಘನೆ ಗುಣ ತಂದೆಯಿಂದಲೇ ಬಂದಿತು. ತಾರಾನಾಥರಿಗೆ ಸಂಸ್ಕೃತ ತಮಿಳು ಹಿಂದಿ ಉರ್ದು ಕನ್ನಡ ಅಂಗ್ರೇಜಿ ಕೊಂಕಣಿಗಳಲ್ಲಿ ಪ್ರವೇಶವಿತ್ತು. ವೈದ್ಯ, ಸಂಗೀತ, ಸಾಹಿತ್ಯ, ರಾಜಕೀಯ ಚಳುವಳಿ, ಯೋಗ, ತಂತ್ರ, ಉದ್ಯಮಶೀಲತೆ, ಅಧ್ಯಾಪನ- ಹೀಗೆ ಹಲವು ಹೊಲಗಳಲ್ಲಿ ಪೈರುಬೆಳೆದ ರೈತ ಅವರು. ರಾಜೀವರಿಗೆ ತಾಯಿ ತಂದೆಯರಿಂದ ತಮಿಳು ಕೊಂಕಣಿಗಳು ವರ್ಗಾವಣೆಯಾದವು. ಅವರು ಕಲಿತಿದ್ದು ಮತ್ತು ಕಲಿಸಿದ್ದು ಆಂಗ್ಲಸಾಹಿತ್ಯ. ಬರೆದಿದ್ದು ಕನ್ನಡದಲ್ಲಿ. ಸಂಗೀತದ ಗುರುಗಳು ಬಂಗಾಳಿಗಳಾದ ಕಾರಣ, ಬಂಗಾಳಿ ದಕ್ಕಿತು. ಅವರಿಗೆ ಉರ್ದು ಅಥವಾ ಹಿಂದುಸ್ತಾನಿ ಪ್ರಿಯವಾದ ಭಾಷೆ. ಎಂತಲೇ ಅವರ ಮಾತುಕತೆಯಲ್ಲಿ ಈ ಬಹುಭಾಷಿಕ ನುಡಿಗಟ್ಟು ಗಾದೆ ಕವಿತೆಯ ಸಾಲು ಸಂಗೀತದ ಚೀಜುಗಳು, ಒಂದೇ ರಾಗದ ವಿವಿಧ ಆಲಾಪಗಳಂತೆ ಬಂದುಹೋಗುತ್ತವೆ. ಅವರು ಮೂಲತಃ ಸಾಹಿತ್ಯ ವಿದ್ಯಾರ್ಥಿ. ಹೈದರಾಬಾದ್ ಯೆಮನ್ ತಿರುಚನಾಪಲ್ಲಿಗಳಲ್ಲಿ ಅಧ್ಯಾಪನ ಮಾಡಿದವರು. ಅದರ ಕಟ್ಟನ್ನು ಹರಿದೊಗೆದು ಸಂಗೀತಕ್ಕೆ ಚಲಿಸಿದವರು. ಶಾಸ್ತ್ರೀಯ ಸಂಗೀತದೊಳಗಿದ್ದೇ ರಂಗಭೂಮಿಗೂ ಸಿನಿಮಾಕ್ಕೂ ಸಂಗೀತ ಒದಗಿಸಿದವರು. ಸಂಗೀತ ರಂಗಭೂಮಿ ಸಿನಿಮಾ ಭಾಷೆ ಸಾಹಿತ್ಯ ಚಿತ್ರಕಲೆ ವಾಸ್ತುಶಿಲ್ಪಗಳು ದೊಡ್ಡದನ್ನು ಸಾಧಿಸಿರುವುದೇ, ಒಡ್ಡಿದ ಹದ್ದುಗಳನ್ನು ದಾಟುತ್ತ ಅನಹದ್ ವಿಸ್ತರಣೆ ಪಡೆವ ಮೂಲಕ.

ನಾನೊಮ್ಮೆ ರಾಜೀವರ ಸಂಗದಲ್ಲಿ ಎರಡು ದಿನವಿದ್ದೆ- ಸಂದರ್ಶನ ಮಾಡಲು. ಅವರನ್ನು ಕಾಣಲು ಎಷ್ಟೊಂದು ಹಿನ್ನೆಲೆಯ ಜನ ಮನೆಗೆ ಬರುತ್ತಾರೆ? ಎಷ್ಟೊಂದು ಕ್ಷೇತ್ರದ ಮಂದಿ ಕರೆ ಮಾಡುತ್ತಾರೆ? ಅವರ ಮನೆಯಲ್ಲಿ ಪಾನೀಯ, ಊಟ, ಹರಟೆಗಳಿರುತ್ತವೆ. ಪೂರ್ವಸೂರಿಗಳು ಕಷ್ಟದಿಂದಲೂ ಪ್ರತಿಭೆಯಿಂದಲೂ ಗಳಿಸಿದ ಬಹುತ್ವದ ಪರಂಪರೆಯ ಅರಿವು, ವಿವೇಕ, ವೈಚಾರಿಕತೆಗಳಿರುತ್ತವೆ. ಸಂಗೀತದ ನಾದವಿರುತ್ತದೆ. ಬೆಚ್ಚಗಿನ ತಾಯಪ್ರೀತಿ ಸಿಗುತ್ತದೆ. ರಾಜೀವ್, ನಿಷ್ಠುರತೆಯ ಪೊಟ್ಟಣದೊಳಗೆ ಪ್ಯಾಕು ಮಾಡಿದ ಪ್ರೇಮದ ಸಿಹಿತಿಂಡಿ. ಅವರು `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು’ ಎಂಬಂತೆ ಬದುಕಿದವರು. ಹಲವು ಹೂಗಳನ್ನು ತಿರಿದು ತಂದ ಜೇನನ್ನು ತುಂಬಿಯಂತೆ, ತಾಯಿಯಂತೆ ಗುರುವಿನಂತೆ, ಸಖನಂತೆ ಲೋಕಕ್ಕೆ ಉಣಿ ಸಿದವರು. ಅವರಿಗೆ ಶತಮಾನ ತುಂಬುವುದಕ್ಕೂ ನಾಡು ಸಾಕ್ಷಿ ಯಾಗಬೇಕಿತ್ತು. ನಮಗೆ ಅದೃಷ್ಟವಿಲ್ಲ.

ಈಗ ಭಾರತದಲ್ಲಿ ಸಂಕರವೂ ಬಹುತ್ವವೂ ಅನಹದ್ ತತ್ವವೂ ಅಳಿವಿನಂಚಿನ ಜೀವಿಗಳಂತೆ ಕಾಣುತ್ತಿವೆ. ಇಂತಹ ಹೊತ್ತಲ್ಲಿ , ರಾಜೀವರು ತುಂಬು ಬಾಳನ್ನು ಬಾಳಿ ನಿರ್ಗಮಿಸಿದ್ದಾರೆ. ಸಾಂಸ್ಕೃತಿಕ ಅನಕ್ಷರತೆ, ಅಸಹನೆ, ಧ್ರುವೀಕರಣ ಮತ್ತು ಏಕರೂಪೀಕರಣದ ಕೆಟ್ಟ ಕಾಲದಲ್ಲಿ, ಬಹುತ್ವದ ಪರಂಪರೆಯ ಕೊಂಡಿಗಳಲ್ಲಿ ಒಬ್ಬರಾಗಿದ್ದ ಅವರ ಇರುವಿಕೆ, ತಮಂಧದ ಕೇಡಿನಲ್ಲಿ ಹಚ್ಚಿಟ್ಟ ದೀಪದಂತಿತ್ತು. ಮತೀಯ ಕೆಸರಲ್ಲಿ, ಬೀಳದಂತೆ ನಡೆಯಲು ನಮಗೆ ರಾಜೀವರೂ ಅವರ ಗುರುಗಳೂ ನಡೆದು ಮಾಡಿದ ಹಾದಿ ಕೈಮರವಾಗಿತ್ತು.

andolana

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago