• ಆರ್.ಟಿ.ವಿಠಲಮೂರ್ತಿ
ಬೋಫೋರ್ಸ್ ಫಿರಂಗಿಯಿಂದ ಸಿಡಿದ ಗುಂಡು ಬೆಟ್ಟದ ಮೇಲಿನ ಗುರಿ ತಲುಪುವ ಮುನ್ನ ನಾವಿಬ್ಬರು ರಪ್ಪಂತ ನೆಲಕ್ಕೆ ಬಿದ್ದೆವು. ಕಣ್ಣಿಗೆ ಏನೆಂದರೆ ಏನೂ ಕಾಣುತ್ತಿಲ್ಲ. ಗುಂಡು ಸಿಡಿಯುತ್ತಿದ್ದಂತೆ ಆವರಿಸಿದ ಹೊಗೆಮಿಶ್ರಿತ ದೂಳು ಯಾವ ಮಟ್ಟದಲ್ಲಿ ಆವರಿಸಿದೆ ಅಂತ ನೋಡಲಾಗದ ಸ್ಥಿತಿ. ಅಂತಹ ಸ್ಥಿತಿಯಲ್ಲೇ ಪಕ್ಕದಲ್ಲಿದ್ದ ಅವರು ನನ್ನ ಕೈ ಮುಟ್ಟಿದರು. ಅವರ ಹೆಸರು- ರವಿ ಬೆಳಗೆರೆ.
ಅವತ್ತಿಗಾಗಲೇ ನಾವು ಯುದ್ಧಪೀಡಿತ ಪಂದ್ರಾಸ್‌ನಲ್ಲಿದ್ದೆವು. ಪಂದ್ರಾಸ್ ಇರುವುದು ಕಾಶ್ಮೀರದಲ್ಲಿ. ಅದರ ರಾಜಧಾನಿ ಶ್ರೀನಗರದಿಂದ ಹೊರಟು ಗುಲ್ ಮಾರ್ಗ್ ತಲುಪಿದರೆ, ಅಲ್ಲಿಂದ ಮುಂದೆ ಸಿಗುವುದೇ ಪಂದಾಸ್, ಅದರ ಸಮೀಪದಲ್ಲೇ ಇದೆ ಕಾರ್ಗಿಲ್.
ನಾವು ಕಾಶ್ಮೀರಕ್ಕೆ ಹೋಗುವ ಹೊತ್ತಿಗಾಗಲೇ ಯುದ್ಧ ಶುರುವಾಗಿತ್ತು. ಕಾಶ್ಮೀರದ ಕಾರ್ಗಿಲ್ ಸೆಕ್ಟರ್‌ನ ಯಮಗಾತ್ರದ ಬೆಟ್ಟಗಳ ಮೂಲಕ ಸಾವಿರಾರು ಉಗ್ರರನ್ನು ಭಾರತದ ನೆಲಕ್ಕೆ ಕಳುಹಿಸಿದ ಪಾಕಿಸ್ತಾನ ಹಿಂದಿನಿಂದ ಈ ಉಗ್ರರನ್ನು ರಕ್ಷಣೆ ಮಾಡುತ್ತಿತ್ತು.
ಹೀಗೆ ಕಾರ್ಗಿಲ್ ವಲಯದಲ್ಲಿ ಪಾಕಿ ಉಗ್ರರು ಬಂದು ಕುಳಿತಿದ್ದನ್ನು ಮೊದಲು ನೋಡಿದವರು ಕುರಿಗಾಹಿಗಳು. ಆಯಕಟ್ಟಿನ ಜಾಗಗಳಲ್ಲಿ ಅವರು ಬಂದು ಕೂರುತ್ತಿರುವುದನ್ನು ಗಮನಿಸಿದ ಈ ಕುರಿಗಾಹಿಗಳು ಭಾರತೀಯ ಸೈನ್ಯಕ್ಕೆ ಮಾಹಿತಿ ತಲುಪಿಸಿದ್ದಾರೆ. ಅಲ್ಲಿಂದ ಉಭಯ ದೇಶಗಳ ಮಧ್ಯೆ ಶುರುವಾಗಿದ್ದೇ ಘನಘೋರ ಯುದ್ಧ.
ಭಾರತ-ಪಾಕಿಸ್ತಾನದ ಮಧ್ಯೆ ಇಂತಹ ಘನಘೋರ ಯುದ್ಧ ಶುರುವಾಗುತ್ತಿದ್ದಂತೆಯೇ ಇಲ್ಲಿ ಬೆಂಗಳೂರಿನಲ್ಲಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಮತ್ತು ನಾನು ಚಡಪಡಿಸಿದ್ದೆವು. ಅವತ್ತು ಉಭಯ ದೇಶಗಳ ನಡುವೆ ಶುರುವಾದ ಯುದ್ಧಕ್ಕೆ ಸಾಕ್ಷಿಯಾಗುವ ತವಕ ನಮ್ಮದು.
ಹಾಗಂತಲೇ ಒಂದು ದಿನ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಕುಳಿತು ನಾವಿಬ್ಬರೂ ಮಾತನಾಡಿಕೊಂಡೆವು ಇಂತಹ ಐತಿಹಾಸಿಕ ಸನ್ನಿವೇಶದಲ್ಲಿ ನಾವು ಇಲ್ಲಿರುವುದಕ್ಕಿಂತ ಅಲ್ಲಿರುವುದು ಒಳ್ಳೆಯದು ಎಂಬ ತೀರ್ಮಾನವಾದಾಗ ನಾನು ತಕ್ಷಣ ‘ಆಂದೋಲನ’ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರಿಗೆ ಫೋನು ಮಾಡಿ ವಿಷಯ ತಿಳಿಸಿದೆ. ಯುದ್ಧ ಭೂಮಿಗೆ ಹೋಗುವ ನಮ್ಮ ತೀರ್ಮಾನದಿಂದ ಅವರಿಗೆ ಹೆಮ್ಮೆಯೇನೋ ಆಯಿತು. ಆದರೆ ಹೋಗುತ್ತಿರುವುದು ಸಭೆ, ಸಮಾರಂಭಕಲ್ಲವಲ್ಲ? ಹಾಗಂತಲೇ, “ತುಂಬ ಎಚ್ಚರಿಕೆಯಲ್ಲಿರಪ್ಪ, ‘ಆಂದೋಲನ’ ಪತ್ರಿಕೆಯ ಪ್ರತಿನಿಧಿಯಾಗಿ ನೀವು ಯುದ್ಧ ಭೂಮಿಗೆ ಹೋಗುತ್ತಿರುವುದು ನನಗೇನೋ ಹೆಮ್ಮೆಯ ವಿಷಯ. ಆದರೆ ಯುದ್ಧಭೂಮಿ ಬಯಸುವ ಎಚ್ಚರಿಕೆ ಬೇರೆ. ಅದನ್ನು ಮರೆಯಬೇಡಿ’ ಅಂತ ಕಕ್ಕುಲತೆ ತೋರಿಸಿದರು.
ಇದಾದ ನಂತರವೂ ನಮಗೆ ಒಂದು ಚಿಂತೆ ಶುರುವಾಯಿತು. ಯುದ್ಧ ಭೂಮಿಗೆ ಹೋಗುವುದು ಅಂತ ತೀರ್ಮಾನಿಸಿದ್ದೇನೋ ಸರಿ, ಆದರೆ ಅಲ್ಲಿಗೆ ಹೋಗುವುದು ಹೇಗೆ? ಎಂಬುದು ನಮ್ಮ ಬಂದವರೇ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್, ಆ ಚಿಂತೆ. ಈ ಚಿಂತೆ ಶುರುವಾದಾಗ ನಮಗೆ ಮೊದಲು ನೆನಪಿಗೆ ಹೊತ್ತಿಗಾಗಲೇ ಅವರು ಕೇಂದ್ರ ಸಚಿವರಾಗಿದ್ದರು. ಹಾಗಂತಲೇ ಅವರಿಗೆ ಫೋನಾಯಿಸಿದರೆ: “ವಿಠಲಮೂರ್ತಿ ನೀವೊಂದು ಕೆಲಸ ಮಾಡಿ. ಮೊದಲು ದಿಲ್ಲಿಗೆ ಬನ್ನಿ, ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡೀಸ್ ಅವರ ಬಳಿ ನಮ್ಮ ಅನಿಲ್ ಹೆಗಡೆ ಇದ್ದಾರೆ. ಅವರಿಗೆ ಹೇಳಿರುತ್ತೇನೆ. ನಿಮಗೆ ಅವರು ನೆರವು ಕೊಡುತ್ತಾರೆ’ ಎಂದರು.
ಸರಿ, ಸ್ವಲ್ಪ ಹೊತ್ತಿನ ನಂತರ ನಾವು ಅನಿಲ್ ಹೆಗಡೆ ಅವರನ್ನು ಸಂಪರ್ಕಿಸಿದೆವು. ನಾವು ಮರುದಿನ ಬೆಳಿಗ್ಗೆಯೇ ವಿಮಾನ ಹತ್ತಿ ದಿಲ್ಲಿ ತಲುಪಿದೆವು. ಮರುದಿನ ಬೆಳಿಗ್ಗೆ ಕಾಶ್ಮೀರದ ಶ್ರೀನಗರ ತಲುಪಿದಾಗ ನೋಡುತ್ತೇವೆ. ಅಲ್ಲೇನಿದೆ? ಶ್ರೀನಗರದ ಅಲ್ಲೇನಿದೆ? ಶ್ರೀನಗರದ ಬೀದಿಗಳಲ್ಲಿ ಜನರೇ ಕಾಣುತ್ತಿಲ್ಲ. ಎಲ್ಲ ಕಡೆ ಕರ್ಪೂ ವಿಧಿಸಿದ ಪರಿಣಾಮ ಅದು. ಸರಿ, ವಿಮಾನ ಇಳಿದವರೇ ಶ್ರೀನಗರದ ದಾಲ್ ಸರೋವರದ ತಟದಲ್ಲಿದ್ದ ವೆಲ್‌ಕಮ್ ಹೋಟೆಲಿಗೆ ಹೋದೆವು.
ಹೀಗೆ ಶ್ರೀನಗರವನ್ನೇನೋ ತಲುಪಿಕೊಂಡೆವು. ಆದರೆ ಯುದ್ಧ ಭೂಮಿಗೆ ಕಾಲಿಡುವುದು ಹೇಗೆ? ಎಂಬ ಚಿತ್ರ ಸ್ಪಷ್ಟವಾಗಿರಲಿಲ್ಲ. ಅನಿಲ್ ಹೆಗಡೆ ಸೂಚಿಸಿದ ವ್ಯಕ್ತಿ, “ನೀವು ಸದ್ಯಕ್ಕೆ ಯುದ್ಧ ಭೂಮಿಗೆ ಹೋಗುವುದು ಕಷ್ಟ ಎಂದರು. ಯಾಕೆ? ಅಂತ ಕೇಳಿದರೆ ಕಾರ್ಗಿಲ್ ವಲಯದುದ್ದಕ್ಕೂ ಉಭಯ ದೇಶಗಳ ಮಧ್ಯೆ ಚಕಮಕಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯೋಧರನ್ನು ಹೊರತುಪಡಿಸಿ ಯುದ್ಧ ಭೂಮಿಗೆ ಬೇರೆಯವರು ಹೋಗುವುದು ಸೇಫ್ ಅಲ್ಲ ಎಂದರು. ಹಾಗಾದರೆ ನಾವೇನು ಮಾಡಬಹುದು? ಅಂತ ಕೇಳಿದರೆ, ಒಂದೆರಡು ದಿನ ಸುಮ್ಮನಿರಿ. ಇಲ್ಲವಾದರೆ ಭಾರತ-ಪಾಕಿಸ್ತಾನದ ಗಡಿ ಭಾಗದಲ್ಲಿರುವ ಉರಿಗೆ ಒಂದು ಬಾರಿ ಹೋಗಿ ಬನ್ನಿ” ಎಂದರು.
ಅಷ್ಟೇ ಅಲ್ಲ, ನೀವು ಹೋಗುವ ಮುನ್ನ ಶ್ರೀನಗರದಲ್ಲಿರುವ ಮಿಲಿಟರಿ ಬೇಸ್ ಕ್ಯಾಂಪಿಗೆ ಒಂದು ಬಾರಿ ಹೋಗಿ ಅಲ್ಲಿರುವ ಅಧಿಕಾರಿಗಳ ಬಳಿ ಮಾತನಾಡಿ ಬನ್ನಿ. ಯುದ್ಧ ಭೂಮಿಗೆ ಹೋಗುವ ದಾರಿ ತೆರೆದುಕೊಳ್ಳಬಹುದು” ಎಂದರು.
ಸರಿ, ನಾವು ಶ್ರೀನಗರದ ಮಿಲಿಟರಿ ಬೇಸ್ ಕ್ಯಾಂಪಿಗೆ ಹೋಗಿ ಅಲ್ಲಿದ್ದ ಮೇಜರ್ ಪುರುಷೋತ್ತಮ್ ಅವರನ್ನು ಭೇಟಿ ಮಾಡಿ ನಮ್ಮ ಪ್ರವರ ಹೇಳಿಕೊಂಡಿದ್ದಾಯಿತು. ಅವರ ಕಣ್ಣುಗಳಲ್ಲಿ ಹೊಳಪು. “ಓ, ಅಷ್ಟು ದೂರದಿಂದ ಯುದ್ಧ ನೋಡಲು ಬಂದಿದ್ದೀರಾ? ಗುಡ್, ಗುಡ್, ಆದರೆ ಈಗ ಯುದ್ಧ ಭೂಮಿಗೆ ನೀವು ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅದು ಸೇಫ್ ಅಲ್ಲ. ಇವತ್ತಿಗಾಗಲೇ ಬಿಬಿಸಿ ಸೇರಿದಂತೆ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಕಾದು ಕುಳಿತಿದ್ದಾರೆ. ಅವರಿಗೂ ಅನುಮತಿ ನೀಡಿಲ್ಲ. ಒಂದು ವೇಳೆ ಪಾಕಿಸ್ತಾನದ ದಾಳಿ ತೀವ್ರವಾದ ಸಂದರ್ಭದಲ್ಲಿ ನೀವು ಹೋಗಿ ಬಾಂಬು ಬಿದ್ದರೆ ಏನು ಮಾಡಬೇಕು?” ಎಂದರು.
ನಮಗೆ ಬೇರೆ ದಾರಿ ಕಾಣಲಿಲ್ಲ. ಹಾಗಂತಲೇ ಸಾರ್, ಯುದ್ಧ ಭೂಮಿಗೆ ಪತ್ರಕರ್ತರನ್ನು ಬಿಡುವ ತೀರ್ಮಾನವಾದರೆ ನಮ್ಮನ್ನೂ ಒಳಗೆ ಬಿಡಿ ಎಂದೆವು. “ಯಸ್,ಯಸ್, ನಿಮ್ಮಿಬ್ಬರ ಪೈಕಿ ಒಬ್ಬರಿಗಾದರೂ ಆ ಅವಕಾಶ ಸಿಗಬಹುದು” ಎಂದು ನಗು ತುಳುಕಿಸಿದರು ಮೇಜರ್ ಪುರುಪೋಷತ್ತಮ್.
ಇದಾದ ನಂತರ ನಾವು ಹೋಟೆಲ್ಲಿಗೆ ಮರಳಿದವರು ಮರುದಿನ ಎದ್ದ ಕೂಡಲೇ ಉರಿ ಸೆಕ್ಟರ್ ಕಡೆ ಹೊರಟೆವು. ಅಲ್ಲಿ ಹೆಜ್ಜೆ ಹೆಜ್ಜೆಗೂ ಮಿಲಿಟರಿಯ ಕಾವಲು. ಕಾರ್ಗಿಲ್ ಸೆಕ್ಟರ್ ಮಾತ್ರವಲ್ಲ, ಉರಿ ಸೇರಿದಂತೆ ಗಡಿ ಭಾಗದ ಯಾವುದೇ ಊರು ಗಳಲ್ಲಿ ಉಗ್ರರು ಇದ್ದಕಿದ್ದಂತೆ ದಾಳಿ ಮಾಡುವುದು ನಿತ್ಯದ ಕೆಲಸವೇ ಆಗಿತ್ತು. ಹೀಗಾಗಿ ಗಡಿ ಭಾಗದುದ್ದಕ್ಕೂ ಮಿಲಿಟರಿಯ ಸರ್ಪಗಾವಲು. ಹೀಗೆ ಉರಿ ಸೇರಿದಂತೆ ಗಡಿ ಭಾಗದ ಹಲವು ಪ್ರದೇಶಗಳನ್ನು ಸುತ್ತುತ್ತಾ, ಭಾರತ-ಪಾಕಿಸ್ತಾನದ ನಡುವಣ ಕದನದ ಮೂಲಗಳ ಬಗ್ಗೆ ಚರ್ಚಿಸುತ್ತಾ ಮರುದಿನ ಶ್ರೀನಗರಕ್ಕೆ ಮರಳಿದೆವು. ಅಷ್ಟಾದರೂ ಯುದ್ಧ ಭೂಮಿಗೆ ಹೋಗುವ ಚಿತ್ರ ಸ್ಪಷ್ಟವಾಗುತ್ತಿಲ್ಲ. ಆದರೆ ಅವತ್ತು ಸಂಜೆ ಮಿಲಿಟರಿ ಬೇಸ್ ಕ್ಯಾಂಪಿಗೆ ಹೋಗಿ ಮೇಜರ್ ಪುರುಷೋತ್ತಮ್ ಅವರ ಕೊಠಡಿಗೆ ನುಗ್ಗುತ್ತಿದ್ದಂತೆಯೇ “ಯೂ ಆರ್ ಇನ್ ಹಿಟ್ ಲಿಸ್ಟ್” ಎಂಬ ಮಾತು ಕೇಳಿಸಿತು.
ನಾವು ಅವಾಕ್ಕಾಗಿ ನೋಡುತ್ತಿದ್ದಂತೆಯೇ ಮೇಜ ಪುರುಷೋತ್ತಮ್ ನಗುತ್ತಾ, “ಯುದ್ಧ ಭೂಮಿಗೆ ಪತ್ರಕರ್ತರನ್ನು ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ನಿಮ್ಮ ದಾರಿ ತೆರೆದುಕೊಂಡಿದೆ. ವಿಶೇಷವೆಂದರೆ ನಿಮ್ಮಿಬ್ಬರ ಪೈಕಿ ಒಬ್ಬರಿಗಲ್ಲ, ಇಬ್ಬರನ್ನೂ ನಾನು ಯುದ್ಧ ಭೂಮಿಗೆ ಕಳಿಸುತ್ತಿದ್ದೇನೆ’ ಎಂದರು. ನಾವು ಫುಲ್ ಖುಷ್.
ಸರಿ, ನಾವು ಮರುದಿನ ಬೆಳಿಗ್ಗೆ ಆರು ಗಂಟೆಗೇ ತಯಾರಾಗಬೇಕಿತ್ತು. ಮಿಲಿಟರಿ ಬೇಸ್ ಕ್ಯಾಂಪಿಗೆ ತಲುಪಿದರೆ ಅಲ್ಲಿಂದ ಸೇನಾ ವಾಹನದಲ್ಲೇ ಯುದ್ಧ ಭೂಮಿಗೆ ಕರೆದೊಯ್ಯುವ ತೀರ್ಮಾನವಾಗಿತ್ತು. ಯಾವಾಗ ನಾವು ಯುದ್ಧ ಭೂಮಿಗೆ ಹೋಗುವುದು ಖಚಿತವಾಯಿತೋ ಆಗ ತಕ್ಷಣ ಹೋಟೆಲಿಗೆ ಹಿಂದಿರುಗಿದವರೇ ನಮ್ಮ ತಯಾರಿಗೆ ಇಳಿದೆವು.
ಅವತ್ತು ರಾತ್ರಿ ಊಟ ಮಾಡಲು ಹೋಟೆಲ್ಲಿನ ಟೇಬಲ್ ಮುಂದೆ ಕುಳಿತಾಗ ನಾಲೈದು ಮಂದಿ ಅಂಗರಕ್ಷಕರ ಜತೆ ಬಂದ ಯುವಕನೊಬ್ಬ ನಮ್ಮ ಮುಂದೆಯೇ ಕುಳಿತ, ಮಾತುಕತೆ ಶುರು ವಾಯಿತು. ನಾವು ಪತ್ರಕರ್ತರು ಎಂದು ತಿಳಿಯುತ್ತಿದ್ದಂತೆಯೇ ಆತ, “ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ನಿಮಗೆ ಏನನ್ನಿಸುತ್ತದೆ?” ಎಂದ
“ಇದು ಪಾಕಿಸ್ತಾನದ ಸಂಚು. ವಿಭಜನೆಯ ಕಾಲದ ಒಪ್ಪಂದಗಳನ್ನು ಉಲ್ಲಂಘಿಸಿ ಕಾಶ್ಮೀರದಲ್ಲಿ ದಂಗೆ ಎಬ್ಬಿಸಲು ಅದು ಪ್ರಯತ್ನಿಸುತ್ತಲೇ ಇದೆ. ಆದರೆ ಏನೇ ಮಾಡಿದರೂ ಪಾಕಿಸ್ತಾನದ ಸಂಚು ಸಫಲವಾಗುವುದಿಲ್ಲ. ನಮ್ಮ ಮಿಲಿಟರಿ ಅದಕ್ಕೆ ಅವಕಾಶ ಕೊಡುವುದೂ ಇಲ್ಲ” ಅಂತ ನಾವು ಹೇಳಿದಿವಿ. ನಮ್ಮ ಮಾತು ಕೇಳಿದ ಆತನ ಮುಖ ಗಡುಸಾಯಿತು.
ಇದಾದ ನಂತರ ನಮ್ಮ ಮಾತುಕತೆ ಮುಂದುವರಿಯಲಿಲ್ಲ. ಆತ ಕೂಡಾ ಊಟ ಮುಗಿಸಿದವನೇ ಅಲ್ಲಿಂದ ಎದ್ದು ಹೊರಟ. ಆತ ಅಲ್ಲಿಂದ ಎದ್ದು ಹೋಗುತ್ತಿದ್ದಂತೆಯೇ ರಿಸೆಪ್ಟನ್‌ನಲ್ಲಿದ್ದ ಹೋಟೆಲ್ಲಿನ ಸಿಬ್ಬಂದಿ ನಮ್ಮ ಬಳಿ ಬಂದು, “ಈಗ ಮಾತನಾಡಿ ದರಲ್ಲ ಅವರು ಯಾರು ಅಂತ ನಿಮಗೆ ಗೊತ್ತಾ?” ಎಂದ.
“ಇಲ್ಲ, ನೆನಪಿಗೆ ಬರುತ್ತಿಲ್ಲ. ಆದರೆ ಅವರನ್ನು ಎಲ್ಲೋ ಭೇಟಿ ಮಾಡಿ ಮಾತನಾಡಿದ ನೆನಪು” ಎಂದೆವು. ಅದಕ್ಕಾತ ಎತ್ತಿದ ಮಾತಿಗೆ “ನೋ ಚಾನ್ಸ್ ನೀವು ಇಲ್ಲಿಗೆ ಇದೇ ಮೊದಲು ಬಂದವರಾಗಿ ದ್ದರೆ ಅವರನ್ನು ಭೇಟಿ ಮಾಡಿ ಮಾತನಾಡಿರಲು ಸಾಧ್ಯವೇ ಇಲ್ಲ” ಎಂದ. ನಾವು ವಿಸ್ಥಿತರಾಗಿ, “ಯಾಕೆ?” ಅಂತ ಕೇಳಿದೆವು.
ಆತ ಮುಖದಲ್ಲಿ ಗಾಬರಿ ತುಳುಕಿಸಿ, “ಆತ ಉಗ್ರಗಾಮಿ ಸಂಘಟನೆಯ ನಾಯಕ ಯಾಸಿನ್” ಅಂತ ಹೇಳಿದ. ನಾವು ಮೌನ ವಾದೆವು. ಕಾಶ್ಮೀರದ ನೆಲದಲ್ಲಿ ಪಾಕಿಸ್ತಾನ ಬಿತ್ತಿದ ವಿದ್ರೋಹದ ಕಿಡಿಗಳು ಎಲ್ಲೆಲ್ಲಿವೆಯೋ? ಅನ್ನಿಸಿ ಮನಸ್ಸಿಗೆ ಖೇದವಾಯಿತು.
ಇದಾದ ಮರುದಿನ ಶ್ರೀನಗರದಿಂದ ಗುಲ್ ಮಾರ್ಗ್‌ಗೆ ಹೋದ ನಾವು, ಅಲ್ಲಿಂದ ಬೆಟ್ಟಗಳ ಸಾಲಿನಲ್ಲಿ ತೇಕಾಡುತ್ತಿದ್ದ ಮಿಲಿಟರಿ ವಾಹನದಲ್ಲಿ ಕುಳಿತು ಪಂದಾಸ್‌ಗೆ, ಅಲ್ಲಿಂದ ಮುಂದೆ ದ್ರಾಸ್‌ಗೆ ತಲುಪಿದೆವು. ಹೋಗುವ ದಾರಿಯಲ್ಲಿ ಮಧ್ಯೆ ಮಧ್ಯೆ ಯೋಧರ ಹೆಣಗಳನ್ನು ಹೊತ್ತು ತರುತ್ತಿದ್ದ ವಾಹನಗಳು, ಯುದ್ಧಭೂಮಿ ಎಂದರೆ ಹಾಗೆ ಅದು ಮೃತ್ಯುವಿನ ಜತೆ ಸೆಣಸಾಡುವ ತಾಣ. ಇದಕ್ಕೆಲ್ಲ ಸಾಕ್ಷಿಯಾಗುತ್ತಾ ನಾವು ಯುದ್ಧ ಶುರು ಮಾಡಿದೆವು. ಪೀಡಿತ ನೆಲದಲ್ಲಿ ಅಲೆದಾಡಲು ಗುಂಡಿನ ಒಂದೊಂದು ಮೊರೆತ. ವಲಯದಲ್ಲೂ ಪರಿಣಾಮವಾಗಿ ಕವಿಯುತ್ತಿದ್ದ ದೂಳು, ಹೊಗೆಯ ಮಧ್ಯೆ ಅದೆಷ್ಟು ಬಾರಿ ನಾವು ನೆಲ ಕಚ್ಚಿದೆವೋ ನೆನಪಿಲ್ಲ.
ಕುತೂಹಲದ ಸಂಗತಿ ಎಂದರೆ ನಾವು ಯುದ್ಧ ಭೂಮಿಗೆ ಕಾಲಿಟ್ಟ ದಿನವೇ ಪಾಕಿಗಳ ವಶದಲ್ಲಿದ್ದ ಟೈಗರ್ ಹಿಲ್ ಎಂಬ ದುರ್ಗಮ ಪರ್ವತವನ್ನು ಖಾಡಾಖಾಡಿ ಹೋರಾಟದ ಮೂಲಕ ನಮ್ಮ ಯೋಧರು ಮರಳಿ ಪಡೆದಿದ್ದರು. ನಮ್ಮ ಯೋಧರ ಇಂತಹ ಹಲವು ಸಾಹಸಗಳನ್ನು ನೋಡುತ್ತಾ, ಎದೆನಡುಗಿಸುವ ಯುದ್ಧ ಭೂಮಿಯ ಕರಾಳತೆಯನ್ನು ಅನುಭವಿಸುತ್ತಾ ನಾವು ಅಲ್ಲಿಂದ ಹೊರಬರುವ ಹೊತ್ತಿಗಾಗಲೇ ಒಂದು ಚಿತ್ರ ಸ್ಪಷ್ಟವಾಗಿತ್ತು. ಅರ್ಥಾತ್, ಭಾರತವನ್ನು ನಡುಗಿಸಲು ಒಳನುಗ್ಗಿದ್ದ ಪಾಕಿಗಳು ತಾವೇ ನಡುಗಿ ಸೋಲು ಒಪ್ಪಿಕೊಳ್ಳುವ ಸ್ಥಿತಿಗೆ ತಲುಪಿದ್ದರು.
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…
ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…