ಸಿರಿ ಮೈಸೂರು
ಅದೊಂದು ಪುಟ್ಟ ಹಳ್ಳಿ. ಹಳ್ಳಿಯ ಸುತ್ತಲೆಲ್ಲಾ ಬೆಳೆಯುವ ಅಸಂಖ್ಯಾತ ಗಿಡಮೂಲಿಕೆಗಳು, ಹಳ್ಳಿಯಲ್ಲಿರುವ ಅರಣ್ಯಾಧಾರಿತ ಹಕ್ಕಿಪಿಕ್ಕಿ ಸಮುದಾಯದವರ ಸರಳ ಮನೆಗಳು ಹಾಗೂ ಎಲ್ಲರ ಮನೆಗಳಲ್ಲಿಯೂ ರಾಶಿಗಟ್ಟಲೆ ಗಿಡಮೂಲಿಕೆಗಳು, ಪಾತ್ರೆಗಟ್ಟಲೆ ಎಣ್ಣೆ ಹಾಗೂ ಬಾಟಲಿಗಳು. ಇದೇ ಹಳ್ಳಿಯಲ್ಲಿ ಹುಟ್ಟಿ, ಇಲ್ಲಿಯೇ ಜೀವಿಸುತ್ತಿರುವ ಇವರುಗಳನ್ನು ಮಾತನಾಡಿಸಿದರೆ ಒಬ್ಬಬ್ಬರೂ ಕನಿಷ್ಠ ಪಕ್ಷ ಐದೈದು ದೇಶಗಳಿಗೆ ಹೋಗಿ ಬಂದಿದ್ದಾರೆ. ಇನ್ನೂ ಕೆಲವರು ಹತ್ತು, ಇಪ್ಪತ್ತು, ಮೂವತ್ತಕ್ಕೂ ಮಿಕ್ಕಿ ಹಲವಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ಇದಕ್ಕೆಲ್ಲಾ ಕಾರಣ ಇವರ ಅತ್ಯಂತ ವಿಶಿಷ್ಟ ಕುಲಕಸುಬು.
ಮೈಸೂರಿನಿಂದ ಹುಣಸೂರಿಗೆ ಹೋಗುತ್ತಿದ್ದಂತೆ ರಸ್ತೆ ತುಂಬೆಲ್ಲಾ ಕಾಣುವ ಮಾರುದ್ದ ಜಡೆಯ ಮಹಿಳೆಯರ ಫೋಟೊಗಳನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಇದು ತಲೆಕೂದಲಿಗೆ ಹಚ್ಚುವ ವಿಶಿಷ್ಟ ಎಣ್ಣೆಯ ಪರಿಣಾಮ. ಇದನ್ನು ಸಾಮಾನ್ಯವಾಗಿ ಆದಿವಾಸಿ ಹೇರ್ ಆಯಿಲ್ ಎಂದು ಕರೆಯುತ್ತಾರೆ. ಇದನ್ನು ತಯಾರಿಸಿ ಮಾರಾಟ ಮಾಡುವುದು ಇಲ್ಲಿನ ಹಕ್ಕಿಪಿಕ್ಕಿಗಳ ಕುಲಕಸುಬು. ಈ ಎಣ್ಣೆಯನ್ನು ತಯಾರಿಸುವ ಹಕ್ಕಿಪಿಕ್ಕಿಗಳು ಇರುವುದು ಹುಣಸೂರಿನ ಒಳಗಿರುವ ಪಕ್ಷಿರಾಜಪುರ ಎಂಬ ಸಣ್ಣ ಹಳ್ಳಿಯಲ್ಲಿ. ಇದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ಈ ಜನರು ತಮ್ಮ ಕಸುಬಿನ ಸಲುವಾಗಿ ದೇಶ-ವಿದೇಶಗಳನ್ನು ಸುತ್ತಿ ಬಂದಿದ್ದಾರೆ. ಎಷ್ಟೋ ಜನರು ಐಷಾರಾಮಿ ಕಾರು ಖರೀದಿಸಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿದ್ದಾರೆ. ಅದೇನೇ ಆದರೂ ಈ ಊರಿನಿಂದ ಮಾತ್ರ ದೂರ ಹೋಗಿಲ್ಲ ಎಂಬುದು ವಿಶೇಷ. ಇವರು ಪ್ರಪಂಚದಾದ್ಯಂತ ಸುತ್ತಾಡಿ ಬರುವುದರ ಫಲವಾಗಿ ‘ಆದಿವಾಸಿ ಹೇರ್ ಆಯಿಲ್’ ಈಗ ಇಡೀ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದೆ.
ಅಂದಹಾಗೆ ಇದೆಲ್ಲಾ ಶುರುವಾದದ್ದು ಬಹುಪಾಲು ಐವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ. ಹುಣಸೂರಿನ ಪಕ್ಷಿರಾಜಪುರ ಎಂಬಲ್ಲಿರುವ ಹಕ್ಕಿಪಿಕ್ಕಿ ಜನಾಂಗದ ಆದಿವಾಸಿಗಳು ಬೇರೆಲ್ಲಾ ಆದಿವಾಸಿಗಳಂತೆ ವ್ಯವಸಾಯ ಮತ್ತಿತರ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರಿದ್ದ ಸ್ಥಳದಲ್ಲಿ ಗಿಡಮೂಲಿಕೆಗಳು ಹೇರಳವಾಗಿ ಸಿಗುತ್ತಿದ್ದವು. ಇದನ್ನು ಇವರ ಗ್ರಾಮಸ್ಥರು ಕೊಬ್ಬರಿ ಎಣ್ಣೆಗೆ ಮಿಶ್ರಣ ಮಾಡಿಕೊಂಡು ಬಳಸಲು ಶುರು ಮಾಡಿದರು. ಇಲ್ಲಿ ಯಾವೆಲ್ಲಾ ಮೂಲಿಕೆಗಳು ಸಿಗುತ್ತಿದ್ದವೋ, ಅದನ್ನು ಯಾವ ಅಳತೆಯಲ್ಲಿ ಮಿಶ್ರಣ ಮಾಡಿ ಬಳಸುತ್ತಿದ್ದರೋ ತಿಳಿಯದು. ಒಟ್ಟಿನಲ್ಲಿ ಕೂದಲಿನ ಸರ್ವ ಸಮಸ್ಯೆಗಳಿಗೂ ಅದು ರಾಮ ಬಾಣವಾಗಿತ್ತು. ಹೀಗೆ ಮೊದಲೆಲ್ಲಾ ಮನೆಯಲ್ಲಿ ಬಳಸಲು ಮಾತ್ರ ಈ ಎಣ್ಣೆಯನ್ನು ಉಪಯೋಗಿಸುತ್ತಿದ್ದ ಈ ಜನರು ನಂತರ ಇದಕ್ಕೆ ಒಂದು ಬ್ರ್ಯಾಂಡ್ ರೂಪ ನೀಡಿ ಮಾರಾಟ ಮಾಡಲು ಶುರು ಮಾಡಿದರು. ತಂತಮ್ಮ ಮಕ್ಕಳಿಗೆ ಇದರ ತಯಾರಿಕೆಯನ್ನು ಹೇಳಿಕೊಟ್ಟರು. ಹೀಗೆ ಒಬ್ಬರ ನಂತರ ಒಬ್ಬರು ಈ ಉದ್ಯಮ ಮುಂದುವರಿಸುತ್ತಾ ಇಡೀ ಊರು ಆದಿವಾಸಿ ಎಣ್ಣೆಗೆ ಪ್ರಸಿದ್ಧವಾಯಿತು. ಇಲ್ಲಿ ಈಗ ಹೆಚ್ಚೂ ಕಡಿಮೆ ಒಂದೂವರೆ ಸಾವಿರ ಜನರಿದ್ದು, ಎಲ್ಲರೂ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲರೂ ತಂತಮ್ಮ ಮನೆಯಲ್ಲಿ ಅಥವಾ ಅವರ ಶಕ್ತಿಗೆ ತಕ್ಕಂತೆ ನಿರ್ಮಿಸಿಕೊಂಡಿರುವ ಕಾರ್ಖಾನೆಯಲ್ಲಿ ಎಣ್ಣೆ ತಯಾರಿಸುತ್ತಾರೆ.
ಎಣ್ಣೆಯಲ್ಲಿ ನೂರೆಂಟು ಗಿಡಮೂಲಿಕೆ ಇಲ್ಲಿನ ಜನರು ತಯಾರಿಸುವ ಈ ಎಣ್ಣೆಯಲ್ಲಿ ನೂರೆಂಟಕ್ಕೂ ಹೆಚ್ಚು ರೀತಿಯ ಗಿಡಮೂಲಿಕೆಗಳಿರುತ್ತವೆ. ಬಹುಪಾಲು ಎಲ್ಲವೂ ಇಲ್ಲೇ ಸಿಕ್ಕರೆ ಇನ್ನೂ ಕೆಲವನ್ನು ಕೇರಳದಿಂದ ತರಿಸಿಕೊಳ್ಳುತ್ತಾರೆ. ಅವರ ರೆಸಿಪಿಯ ಪ್ರಕಾರ ಎಲ್ಲದರ ಮಿಶ್ರಣ ತಯಾರಿಸಿ ಅದನ್ನು ಎಣ್ಣೆಗೆ ಹಾಕಿ ಕುದಿಸುತ್ತಾರೆ. ನೀಲಾಂಬರಿ, ಕರಿಬೇವು, ಭೃಂಗಮೂಲಿಕ, ಜಟಮಾನ್ಸಿ, ತುಳಸಿ, ನೆಲ್ಲಿಕಾಯಿ, ಬ್ರಾಹ್ಮೀ, ದಾಸವಾಳ, ಅಲೋವೆರಾ ಸೇರಿದಂತೆ ಕೂದಲು ಸೊಂಪಾಗಿ ಬೆಳೆಯಲು ಹಾಗೂ ಕೂದಲು ಉದುರುವಿಕೆ, ಹೊಟ್ಟು ಮತ್ತಿತರ ಸಮಸ್ಯೆಗಳು ಪರಿಹಾರವಾಗಲು ಏನೆಲ್ಲಾ ಸಾಮಗ್ರಿಗಳು ಬೇಕೋ ಅವನ್ನೆಲ್ಲಾ ಈ ಎಣ್ಣೆಯಲ್ಲಿ ಬಳಸಲಾಗುತ್ತದೆ. ಇದು ಕೂದಲಿನ ಸಮಸ್ಯೆ ಗಳನ್ನು ಪರಿಹರಿಸುತ್ತದೆಯೇ ಹೊರತು, ಕೂದಲೇ ಇಲ್ಲದವರಿಗೆ ಕೂದಲು ಬರುವಂತೆ ಮಾಡುವುದಿಲ್ಲ.
ಇವರಿಗುಂಟು ವಿದೇಶದ ನಂಟು ಇಲ್ಲಿನ ಜನರು ಈ ಎಣ್ಣೆಯನ್ನು ಇಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಮಾರಾಟ ಮಾಡುತ್ತಾರೆ. ಕೆಲವೊಮ್ಮೆ ಎಕ್ಸಿಬಿಷನ್‌ಗಳು ಅಥವಾ ಬೇರೆ ಕಾರ್ಯಕ್ರಮಗಳ ಮೂಲಕ ಎಣ್ಣೆ ಮಾರಾಟ ಮಾಡಲೆಂದು ಹೊರರಾಜ್ಯ ಹಾಗೂ ಹೊರ ದೇಶಗಳಿಗೆ ಪ್ರಯಾಣ ಮಾಡಿದರೆ ಇನ್ನು ಕೆಲವೊಮ್ಮೆ ತಾವೇ ಖುದ್ದಾಗಿ ಮಾರ್ಕೆಟಿಂಗ್ ಮಾಡಲು ಹೋಗುತ್ತಾರೆ. ಇಲ್ಲಿಂದ ಗಿಡಮೂಲಿಕೆಗಳು, ಬಾಟಲಿ, ಲೇಬಲ್‌ಗಳನ್ನು ತೆಗೆದು ಕೊಂಡು ಹೋದರೆ ಅಲ್ಲಿ ಎಣ್ಣೆ ಕೊಂಡು, ಅದಕ್ಕೆ ಈ ಸಾಮಗ್ರಿಗಳನ್ನು ಮಿಶ್ರಣ ಮಾಡಿ ಅಲ್ಲಿನ ಜನರಿಗೆ ಮಾರಾಟ ಮಾಡುತ್ತಾರೆ. ಹೊರದೇಶಗಳಲ್ಲಿರುವ ಭಾರತೀಯರು ಇವರನ್ನು ಆದರಾತಿಥ್ಯದಿಂದ ಕಾಣುವುದು ಇವರಿಗೆ ಖುಷಿಯ ಸಂಗತಿ. ಹೀಗೆ ಹೊರಗೆ ಹೋದಾಗ ಸಿಕ್ಕ ಗ್ರಾಹಕರಿಗೆ ಇವರು ಭಾರತಕ್ಕೆ ಮರಳಿದ ಮೇಲೂ ಕೊರಿಯರ್ ಮೂಲಕ ತಮ್ಮ ಎಣ್ಣೆ ಕಳುಹಿಸಿಕೊಡುತ್ತಾರೆ.
ಹೀಗೆ ಲಂಡನ್, ಅಮೆರಿಕ ಸೇರಿದಂತೆ ಹತ್ತಾರು ಸ್ಥಳಿಗಳಿಗೆ ಕೊರಿಯರ್ ಮೂಲಕ ಈ ಎಣ್ಣೆ ತಲುಪುತ್ತದೆ. ‘ನಾನು ಸಿಂಗಾಪೂರ್, ಮಲೇಷ್ಯಾ, ಮಾರಿಷಸ್, ದುಬೈ, ಬ್ರೆಜಿಲ್, ಈಜಿಪ್ಟ್, ದಕ್ಷಿಣ ಆಫ್ರಿಕಾ, ಕೆರಿಬಿಯನ್ ದ್ವೀಪಗಳು, ಗುಯೆನ್ನಾ, ಕೆನಡಾ, ಸೌದಿ ಅರೇಬಿಯಾ, ತಾಂಜೇನಿಯಾ, ಝಿಂಬಾಬ್ವೆ ಮುಂತಾದ ದೇಶಗಳಿಗೆ ಹೋಗಿ ಬಂದಿದ್ದೇನೆ. ಅಲ್ಲಿನ ಭಾರತೀಯರು ಮಾತ್ರವಲ್ಲದೆ ಇತರರೆಲ್ಲರಿಗೂ ನಮ್ಮ ಆದಿವಾಸಿ ಹೇರ್ ಆಯಿಲ್ ನೀಡಿದ್ದೇನೆ. ಆ ಪೈಕಿ ಬಹಳಷ್ಟು ಜನರು ಈಗಲೂ ಇಲ್ಲಿಂದ ಕೊರಿಯರ್ ಮೂಲಕ ಎಣ್ಣೆ ತರಿಸಿ ಕೊಳ್ಳುತ್ತಾರೆ. ೨೦೦೩ರಿಂದ ನಾನು ಹೀಗೆ ಹೊರದೇಶಗಳಿಗೆ ಹೋಗಲು ಆರಂಭಿಸಿದ್ದು. ಇನ್ನೂ ಐರೋಪ್ಯ ದೇಶಗಳಿಗೆ ಹೋಗುವ ಆಸೆ ಇದೆ. ವೀಸಾ ಮಾಡಿಸಿಕೊಂಡು ಶೀಘ್ರ ಅಲ್ಲಿಗೂ ಹೋಗಲಿದ್ದೇನೆ. ನಮ್ಮ ಜನರಿಗೆ ಈ ಕೆಲಸಗಳಿಗೆಲ್ಲಾ ಸರ್ಕಾರ ಸಹಾಯ ಮಾಡಬೇಕು. ಇಲ್ಲಿನ ಕೆಲವು ಎಕ್ಸಿಬಿಷನ್ಗಳಿಗೆ ನಾವು ಸರ್ಕಾರದ ಮೂಲಕ ಹೋಗಿದ್ದೇವಾದರೂ ಅವ ರಿಂದ ನಿರೀಕ್ಷೆಯಷ್ಟು ಸಹಕಾರ ಇನ್ನೂ ಸಿಕ್ಕಿಲ್ಲ. ಇನ್ನಷ್ಟು ಒತ್ತಾಸೆ, ಸಹಾಯ ಸಿಕ್ಕರೆ ನಮ್ಮ ಉದ್ಯಮದಿಂದ ದೇಶದ ಆರ್ಥಿಕತೆಗೆ ಬಹಳವೇ ಸಹಾಯವಾಗುತ್ತದೆ. ನಮ್ಮ ದೇಶ ವಿಶ್ವ ದೆಲ್ಲೆಡೆ ಮತ್ತಷ್ಟು ಪ್ರಸಿದ್ಧಿಯಾಗುತ್ತದೆ’ ಎನ್ನುತ್ತಾರೆ ಇಲ್ಲಿ ಆದಿ ವಾಸಿ ಹೇರ್ ಆಯಿಲ್ ತಯಾರಿಸುವ ಶ್ರೀನಿವಾಸ್ ಎಂಬ ಉದ್ಯಮಿ.
‘ನಮ್ಮಲ್ಲಿ ಹೇರ್ ಆಯಿಲ್ ಮಾತ್ರವಲ್ಲದೆ ಫೇಸ್ ಪ್ಯಾಕ್ ಪೌಡರ್, ಮಸಾಜ್ ಆಯಿಲ್‌ನಂತಹ ಉತ್ಪನ್ನಗಳನ್ನೂತಯಾರಿಸುತ್ತೇವೆ. ಕೆಲವರು ನಮ್ಮ ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಹೆಸರಿನಲ್ಲಿ ನಕಲಿ ಉತ್ಪನ್ನ ಗಳನ್ನು ಮಾರಾಟ ಮಾಡುತ್ತಾರೆ. ಜನರು ಜಾಗರೂಕತೆ ಯಿಂದ ಸರಿಯಾದ ಉತ್ಪನ್ನ ಆರಿಸಿಕೊಳ್ಳಬೇಕು’ ಎಂಬುದು ಶ್ರೀನಿವಾಸ್ ಅವರ ಸಲಹೆ.
ಫರಾ ಖಾನ್, ಸೋನು ಸೂದ್, ಡಾಲಿ ಚಾಯ್‌ವಾಲಾ, ಭಾರತಿ ಸಿಂಗ್, ಆರ್‌ಜೆ ನವೇದ್, ಎಲ್ವಿಷ್ ಯಾದವ್ ಸೇರಿದಂತೆ ಹತ್ತಾರು ಖ್ಯಾತ ಚಲನಚಿತ್ರ ನಟರು, ಧಾರಾವಾಹಿ ಕಲಾವಿದರು ಹಾಗೂ ನೂರಾರು ಯೂಟ್ಯೂಬರ್‌ಗಳು ಇಲ್ಲಿ ಬಂದು ವಿಡಿಯೋ ಮಾಡುವ ಮೂಲಕ ಇವರ ಉತ್ಪನ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿಯೂ ಆದಿವಾಸಿಗಳು ಇದ್ದಾರಾದರೂ ಈ ಭಾಗದ ಆದಿವಾಸಿಗಳು ಮಾತ್ರ ಈ ಉದ್ಯಮ ನಡೆಸುತ್ತಿದ್ದಾರೆ ಎಂಬುದು ವಿಶೇಷ. ಕರ್ನಾಟಕದಲ್ಲಿಯೂ ತುಮಕೂರು, ಹಾಸನ, ಬೆಂಗಳೂರು, ಕೋಲಾರ, ಮುಳಬಾಗಿಲು, ದಾವಣಗೆರೆ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ಕಾಣಬಹುದು. ಆದರೆ ಎಣ್ಣೆಯ ಉದ್ಯಮ ನಡೆಸುವುದು ಪಕ್ಷಿರಾಜಪುರ ಹಾಗೂ ಬೇಲೂರು ಬಳಿಯ ಅರಣ್ಯಾಧಾರಿತ ಆದಿವಾಸಿಗಳು ಮಾತ್ರ. ಒಂದು ಸಣ್ಣ ಹಳ್ಳಿಯಲ್ಲಿನ ಅಲ್ಪಸಂಖ್ಯಾತ ಜನಾಂಗ ಹೀಗೆ ದೇಶ-ವಿದೇಶಗಳಲ್ಲಿ ಭಾರತದ ಹೆಸರನ್ನು, ಆಯುರ್ವೇದದಗಿಡಮೂಲಿಕೆಯಿಂದ ತಯಾರಾದ ಉತ್ಪನ್ನವನ್ನು ಎತ್ತಿಹಿಡಿಯುತ್ತಿರುವ ಕೆಲಸ ಮಾಡುತ್ತಿರುವುದು ಹುಬ್ಬೇರಿಸುವ ಹಾಗೂ ಶ್ಲಾಘನೀಯ ಸಂಗತಿ. ಈ ಆದಿವಾಸಿಗಳ ಜೀವನಶೈಲಿ ಮೈಸೂರಿನ ಅತ್ಯಂತ ಪ್ರಮುಖ ವಿಶೇಷತೆಗಳ ಪೈಕಿ ಒಂದು ಪ್ರಮುಖ ಭಾಗ ಎಂದರೆ ತಪ್ಪಾಗಲಾರದು.
ತಮ್ಮ ಪೂರ್ವಜರಿಂದ ಈ ಕಲೆಯನ್ನು ಕಲಿತಿರುವ ಈ ಜನರು ಮುಂದೆ ತಮ್ಮ ಮಕ್ಕಳೂ ಮುಂದುವರಿಸಿಕೊಂಡು ಹೋಗುವಂತೆ ಈ ಉದ್ಯಮವನ್ನು ನಡೆಸುತ್ತಿದ್ದಾರೆ. ಫರಾ ಖಾನ್, ಸೋನು ಸೂದ್, ಡಾಲಿ ಚಾಯ್‌ವಾಲಾ, ಭಾರತಿ ಸಿಂಗ್, ಆರ್‌ಜೆ ನವೇದ್, ಎಲ್ವಿಷ್ ಯಾದವ್ ಸೇರಿದಂತೆ ಹತ್ತಾರು ಖ್ಯಾತ ಚಲನಚಿತ್ರ ನಟರು, ಧಾರಾವಾಹಿ ಕಲಾವಿದರು ಹಾಗೂ ನೂರಾರು ಯೂಟ್ಯೂಬರ್‌ಗಳು ಇಲ್ಲಿ ಬಂದು ವಿಡಿಯೋ ಮಾಡುವ ಮೂಲಕ ಇವರ ಉತ್ಪನ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…
ಬೆಂಗಳೂರು : ಬಾಲಗಂಗಾಧರನಾಥ ಶ್ರೀಗಳ ಧಾರ್ಮಿಕ ಗದ್ದುಗೆ ಲೋಕಾರ್ಪಣೆ ಹಾಗೂ ಡಾ.ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ…
ಬೆಂಗಳೂರು : ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಬಳ್ಳಾರಿ : ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗುರುವಾರ ಸಂಜೆ ನಡೆದ ಘರ್ಷಣೆ…
ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…
ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…