Andolana originals

ಆತಂಕದಲ್ಲಿ ಕಾಡಂಚಿನ ಜನ

ಗಿರೀಶ್ ಹುಣಸೂರು

ಮೈಸೂರು, ಚಾ.ನಗರ ಭಾಗಗಳಲ್ಲಿ ಹೆಚ್ಚಿದ ಹುಲಿ ದಾಳಿ ಪ್ರಕರಣ

ಹುಲಿ ಸೆರೆಗೆ ಕಾರ್ಯಾಚರಣೆ; ಬೋನು, ಕ್ಯಾಮೆರಾ ಅಳವಡಿಕೆ

ಮೈಸೂರು: ನಾಡಿನ ಪ್ರಮುಖ ಹುಲಿ ಸಂರಕ್ಷಿತ ಅರಣ್ಯಗಳಾದ ಬಂಡೀಪುರ ಮತ್ತು ನಾಗರಹೊಳೆಯಿಂದ ಹೊರಬಂದಿರುವ ೨೦ಕ್ಕೂಹೆಚ್ಚು ಹುಲಿಗಳು ಕಾಡಂಚಿನ ಗ್ರಾಮಗಳಲ್ಲಿ ಅಡ್ಡಾಡುತ್ತಾ ಮಾನವ ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಭಾಗದ ಜನರು ಆತಂಕದಲ್ಲೇ ದಿನ ದೂಡುವಂತಾಗಿದೆ.

ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಭಾನುವಾರ ಹುಲಿ ದಾಳಿ ಮಾಡಿ ಹಸುವನ್ನು ಕೊಂದಿತ್ತು. ಈ ಜಾಗದಿಂದ ಸುಮಾರು ೧೫ ಮೀಟರ್ ದೂರದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನ್ ಇರಿಸಿ, ಥರ್ಮಲ್ ಡ್ರೋನ್ ಕ್ಯಾಮೆರಾ, ಸಾಕಾನೆಗಳೊಂದಿಗೆ ಕೂಂಬಿಂಗ್ ನಡೆಸಿದರೂ ಸೋಮ ವಾರ ಕೂಡ ಹುಲಿ ಸೆರೆ ಸಿಕ್ಕಿಲ್ಲ.

ಹುಲಿ ಸೆರೆ ಕಾರ್ಯಾಚರಣೆ ಜತೆಗೆ ದಾಳಿಯಿಂದ ರೋಸಿ ಹೋಗಿರುವ ಜನರ ಪೈಕಿ ಕಿಡಿಗೇಡಿಗಳು ಹುಲಿ ಕೊಲ್ಲಲು ಹಸುವಿನ ಕಳೇಬರಕ್ಕೆ ವಿಷ ಹಾಕಿ ಬಿಡಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಎಚ್ಚರ ವಹಿಸಿ, ಹಸುವಿನ ಕಳೇಬರದ ಮೇಲೆ ನಿಗಾ ಇರಿಸಿದ್ದಾರೆ.

ಹುಲಿ ಸೆರೆ ಕಾರ್ಯಾಚರಣೆಗೆ ಮಂಡ್ಯ ಜಿಲ್ಲೆಯಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಕಡೇ ಕಾರ್ತಿಕ ಸೋಮವಾರ ಪ್ರಯುಕ್ತ ಸರಗೂರು ತಾಲ್ಲೂಕು ವ್ಯಾಪ್ತಿಯಲ್ಲಿನ ಬಂಡೀಪುರ ಅರಣ್ಯಪ್ರದೇಶದೊಳಗಿರುವ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಿದ್ದರಿಂದ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಭಾಗವಹಿಸಿದ್ದರು.

ಜೆಸಿಬಿ ಸದ್ದು: ಸಂತಾನೋತ್ಪತ್ತಿ ಸಮಯ, ಬೇಟೆಯಾಡಲು ನಿಶ್ಯಕ್ತವಾದ ಹುಲಿಗಳು ಕಾಡಿನಿಂದ ಹೊರಬಂದಿದ್ದು, ತಾನಾಗೇ ಆವಾಸ ಸ್ಥಾನಗಳಿಗೆ ವಾಪಸ್ಸಾಗಲಿವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಆದರೆ, ಕಾಡಂಚಿನ ಜನರು ನುಗು ಅರಣ್ಯಪ್ರದೇಶದಲ್ಲಿ ಜೆಸಿಬಿಯಿಂದ ಕೆಲಸ ನಡೆಯುತ್ತಿರುವುದರಿಂದ ಅದರ ಸದ್ದಿಗೆ ಬೆದರಿದ ಹುಲಿಗಳು ಕಾಡಿನಿಂದ ಹೊರಬಂದು ದಾಳಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕಾಡಂಚಿನ ಗ್ರಾಮಗಳ ರೈತಾಪಿ ಜನರು ತಮ್ಮ ಜಮೀನಿನಲ್ಲಿ ಬೆಳೆದು ನಿಂತಿರುವ ತೆಂಗು, ಅರಿಶಿಣ, ಜೋಳ ಮೊದಲಾದ ಬೆಳೆಗಳ ನಿರ್ವಹಣೆಗಾಗಿ, ಹಸು, ಕುರಿ,ಮೇಕೆಗಳನ್ನು ಮೇಯಿಸಲು ಜಮೀನುಗಳಿಗೆ ಹೋಗಲೇಬೇಕಾಗಿದೆ. ಕಾಡಂಚಿನ ಜನರು ವನ್ಯಜೀವಿಗಳೊಂದಿಗಿನ ಸಂಘರ್ಷದ ಜತೆಯಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿತ್ಯ ನಿರಂತರ. ಆದರೆ, ಕಳೆದ ೨೦ ದಿನಗಳಿಂದ ಬಂಡೀಪುರ, ನಾಗರಹೊಳೆ ಅರಣ್ಯಗಳಿಂದ ಹೊರಬಂದಿರುವ ಹುಲಿಗಳು ಮನುಷ್ಯ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಾ ಆತಂಕ ಮೂಡಿಸಿವೆ.

ಹನಗೋಡು ಭಾಗದಲ್ಲೂ ಕೂಂಬಿಂಗ್: ಹುಣಸೂರು ತಾಲ್ಲೂಕಿನ ನಾಗರಹೊಳೆ ಅರಣ್ಯದಂಚಿನ ಹನಗೋಡು ಹೋಬಳಿಯ ಕಾಮಗೌಡನಹಳ್ಳಿ, ಬೀರತಮ್ಮನಹಳ್ಳಿ, ಬಿ.ಆರ್.ಕಾವಲ್ ಗ್ರಾಮಗಳ ಬಳಿಯ ಅರಣ್ಯದಂಚಿನಲ್ಲಿ ಸಾಕಾನೆಗಳಾದ ಶ್ರೀರಂಗ, ವರಲಕ್ಷ್ಮೀ ನೆರವಿನಿಂದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಹಾಗೂ ಎಸ್ ಟಿಪಿಎಫ್ ಸಿಬ್ಬಂದಿ ಹುಲಿ ಪತ್ತೆಗಾಗಿ ಕೂಂಬಿಂಗ್ ನಡೆಸಿದೆ. ಅಲ್ಲದೆ ಥರ್ಮಲ್ ಡ್ರೋನ್ ಮೂಲಕವೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಹುಲಿ ಕುರುಹು ಪತ್ತೆಯಾಗಿಲ್ಲ. ಹುಲಿ ಕಾಣಿಸಿಕೊಂಡ ಕಡೆಗಳಲ್ಲಿ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಿದ್ದು, ಹುಲಿ ಚಲನವಲನ ಸೆರೆಯಾದಲ್ಲಿ ಅವುಗಳನ್ನು ಗುರುತಿಸಿ, ಐ.ಡಿ. ಸಂಖ್ಯೆ ನೀಡಿ, ಹಿರಿಯ ಅಽಕಾರಿಗಳ ಅನುಮತಿ ಪಡೆದು ಸೆರೆ ಹಿಡಿಯಲು ಕ್ರಮವಹಿಸಲಾಗುವುದು ಎಂದು ಹುಣಸೂರು ಉಪ ವಿಭಾಗದ ಎಸಿಎಫ್ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

” ಬ್ರೀಡಿಂಗ್ ಟೈಮ್, ಬೇಟೆಯಾಡಲು ಸಾಧ್ಯವಾಗದೆ… ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ೨೦ ಹುಲಿಗಳು ಕಾಡಂಚಿನಲ್ಲಿ ಓಡಾಡುತ್ತಿವೆ. ಈ ಪೈಕಿ ೫ ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಹೊರಬಂದಿರುವ ಎಲ್ಲ ಹುಲಿಗಳನ್ನೂ ಸೆರೆ ಹಿಡಿಯ ಬೇಕೆಂದಿಲ್ಲ. ಅವು ತಾನಾಗಿಯೇ ವಾಪಸಾಗುತ್ತವೆ. ಈವರೆಗೆ ನಡೆದಿರುವ ದಾಳಿಗಳು ಮನುಷ್ಯನ ಅಚಾತುರ್ಯದಿಂದಲೇ ನಡೆದಿವೆ. ಆದರೂ ಕಾಡಂಚಿನ ಜನರಿಗೆ ಅಭಯ ನೀಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ.”

-ಪರಮೇಶ್ವರ್, ಡಿಸಿಎಫ್‌ 

“ಬೆಣ್ಣೆಗೆರೆಯಲ್ಲಿ ಭಾನುವಾರ ಹುಲಿ ದಾಳಿಯಿಂದ ರೈತರೊಬ್ಬರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಹೀಗಾಗಿ ಹುಲಿ ಹಸುವನ್ನು ಕೊಂದಿದೆ. ಅರಣ್ಯ ಇಲಾಖೆ ಬೋನ್‌ಗಳನ್ನು ಇರಿಸಿ, ಕೂಂಬಿಂಗ್ ನಡೆಸಿದರೂ ಹುಲಿ ಸೆರೆಗೆ ಸಿಗುತ್ತಿಲ್ಲ. ಗದ್ದೆಯಲ್ಲಿ ಭತ್ತ ಬೆಳೆದು ನಿಂತಿದ್ದರೂ ಗದ್ದೆ, ಜಮೀನಿಗೆ ಹೋಗಲಾಗುತ್ತಿಲ್ಲ. ಹುಲಿ ಹಿಡಿದರೆ ಈ ಭಾಗದ ಜನರ ಆತಂಕ ದೂರಾಗಲಿದೆ.”

ಲೋಕೇಶ್, ಮುಳ್ಳೂರು ಗ್ರಾಮಸ್ಥರು

ಆಂದೋಲನ ಡೆಸ್ಕ್

Recent Posts

ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ: ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.…

39 mins ago

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

49 mins ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

1 hour ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

1 hour ago

ಮಂಡ್ಯ ಕೃಷಿ ಪ್ರದಾನ ಜಿಲ್ಲೆ: ಸಿಎಂ ಸಿದ್ದರಾಮಯ್ಯ

ಮಂಡ್ಯ: ಲ್ಯಾಬ್‌ ಟು ಲ್ಯಾಂಡ್‌ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…

1 hour ago

ಹೊಸ ದಾಖಲೆ ನಿರ್ಮಿಸಿದ ಬೆಂಗಳೂರು ಪೊಲೀಸರು: ಏನದು ಗೊತ್ತಾ?

ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…

2 hours ago