Andolana originals

ಸರ್ಕಾರಕ್ಕೆ ಚಾಟಿ ಬೀಸುವ ನೈತಿಕತೆ ಕಳೆದುಕೊಳ್ಳುತ್ತಿರುವ ವಿಪಕ್ಷಗಳು

ಆರ್.ಟಿ.ವಿಠಲಮೂರ್ತಿ

ಆಡಳಿತ ಪಕ್ಷದ ಲೋಪವನ್ನು ಎತ್ತಿ ತೋರಿಸುವ ವಿಷಯದಲ್ಲಿ ಪ್ರತಿಪಕ್ಷಗಳು ಸೋಲುತ್ತಿವೆ ಎಂದರೆ ಒಟ್ಟಾರೆ ವ್ಯವಸ್ಥೆ ಜಂಗಲ್ ರಾಜ್‌ಗೆ ಹತ್ತಿರವಾಗುತ್ತಿದೆ ಎಂದೇ ಅರ್ಥ.

ಕಳೆದ ವಾರ ಆರಂಭವಾದ ವಿಧಾನಮಂಡಲ ಅಧಿವೇಶನವನ್ನು ನೋಡಿದರೆ ಇದರ ಕುರುಹುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅಲ್ಲಿ ನಡೆದಿದ್ದೇನು? ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಗರಣಗಳನ್ನು ಎತ್ತಿ ತೋರಿಸಲು ಪ್ರತಿಪಕ್ಷಗಳು ರಣೋತ್ಸಾಹ ತೋರಿಸಿದವು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿಗಳ ಅಕ್ರಮ ವರ್ಗಾವಣೆ ವಿಷಯ ಮತ್ತು ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ಆಕ್ರಮಗಳ ಕುರಿತು ಪ್ರತಿಪಕ್ಷಗಳು ಪ್ರಸ್ತಾಪಿಸಲು ಮುಂದಾದಾಗ ಸರ್ಕಾರ ಅಂಜಬೇಕಿತ್ತು. ಕಾರಣ ಇವತ್ತಿನ ಪುರಾವೆಗಳ ಪ್ರಕಾರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣ ವರ್ಗಾವಣೆಯ ಪ್ರಕರಣದಲ್ಲಿ ನಿಶ್ಚಿತವಾಗಿಯೂ ಲೋಪಗಳಾಗಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಇನ್ನು ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಹಲವು ಆಯಾಮಗಳಿವೆ ಮತ್ತು ಈಗಾಗಲೇ ಇದನ್ನು ತನಿಖೆಗೆ ವಹಿಸಿ ಸರ್ಕಾರ ಆದೇಶ ನೀಡಿದೆ. ಆದರೆ ಇಂತಹ ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ, ಪ್ರತಿಪಕ್ಷಗಳು ಗದ್ದಲವೆಬ್ಬಿಸಿದರೆ ಆಳುವ ಸರ್ಕಾರ ಅಂಜುವುದಿರಲಿ, ಬದಲಿಗೆ ಪ್ರತಿಪಕ್ಷಗಳ ಬುಡಕ್ಕೇ ಬಿಸಿ ನೀರು ಕಾಯಿಸಲು ಸಜ್ಜಾಯಿತು. ಅರ್ಥಾತ್, ಈ ಹಿಂದೆ ಅಸ್ತಿತ್ವದಲ್ಲಿದ್ದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕಡತಗಳನ್ನು ಸರ್ಕಾರ ಅಲುಗಾಡಿಸಿತು.

ಬೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ, ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಾದ ಅವ್ಯವಹಾರ ಸೇರಿದಂತೆ ಬಿಜೆಪಿ ಮತ್ತು ಜಾ.ದಳ ಸರ್ಕಾರಗಳ ಅವಧಿಯಲ್ಲಾದ ಹಗರಣಗಳನ್ನು ಕೆದಕಲು ಸರ್ಕಾರ ಸಜ್ಜಾಯಿತು. ಇದೇ ಕಾಲಕ್ಕೆ ಸದನದಲ್ಲಿ ನಡೆದ ಒಂದು ಘಟನೆ ನಮ್ಮ ರಾಜಕೀಯ ವ್ಯವಸ್ಥೆ ಎಷ್ಟು ಸಂಕಷ್ಟದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಅಂದ ಹಾಗೆ ಘಟನೆಯಲ್ಲಿ ಭಾಗಿಯಾದ ಇಬ್ಬರಲ್ಲಿ ಒಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮತ್ತೊಬ್ಬರು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಡಾ. ಅಶ್ವತ್ಥ ನಾರಾಯಣ

ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭವಾದಾಗ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಇಂತಹ ಮಹತ್ವದ ಚರ್ಚೆ ನಡೆಯುವಾಗ ಮಂತ್ರಿಗಳು, ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ ಎಂದರು. ಆಗ ತಕ್ಷಣವೇ ಮಧ್ಯೆ ಪ್ರವೇಶಿಸಿದ ಅಶ್ವತ್ಥನಾರಾಯಣ ಅವರು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪವಿದೆ. ಹೀಗಾಗಿ ಈ ಚರ್ಚೆಯ ಸಂದರ್ಭದಲ್ಲಿ ಅವರು ಹಾಜರಿರಬೇಕಿತ್ತು ಎಂದು ಹೇಳುತ್ತಾರೆ. ಆಗ ತಕ್ಷಣವೇ ಮೇಲೆದ್ದು ನಿಲ್ಲುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶ್ವತ್ಥನಾರಾಯಣ ಅವರನ್ನು ಉದ್ದೇಶಿಸಿ, “ನೀನೇ ಲೂಟಿಕೋರರ ಪಿತಾಮಹ. ನೀವು ಮಾಡಬಾರದ್ದನ್ನು ಮಾಡಿದ್ದರಿಂದಲೇ ನಾವಿಲ್ಲಿ ಬಂದು ಕುಳಿತಿರುವುದು’ ಎನ್ನುತ್ತಾರೆ. ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ? ನಮ್ಮ ರಾಜಕೀಯ ನಾಯಕರು ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಯಾಗಿ, ನಮಗಿಂತ ನೀವು ಭ್ರಷ್ಟರು ಎಂದು ಎತ್ತಿ ತೋರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಒಂದರ್ಥದಲ್ಲಿ ಇದು ಸ್ವಸಮರ್ಥನೆಯಾಗಿ ಕಂಡರೂ, ಮತ್ತೊಂದು ಕಡೆ, ಭ್ರಷ್ಟಾಚಾರದ ವಿಷಯದಲ್ಲಿ ಒಟ್ಟಾರೆ ರಾಜಕೀಯ ವ್ಯವಸ್ಥೆಯ ಚರ್ಮ ಎಷ್ಟು ಜಡ್ಡುಗಟ್ಟಿದೆ ಎಂಬುದರ ಸಂಕೇತವಾಗಿ ಕಾಣುತ್ತದೆ. ಹೀಗೆ ಬೆಂಗಳೂರು ಡೈರಿ ಭ್ರಷ್ಟಾಚಾರದ ವಿಷಯಗಳನ್ನು ಪರಸ್ಪರ ದೋಷಾರೋಪಣೆಯ ಮೂಲಕ ರಾಜಕಾರಣಿಗಳು ದಕ್ಕಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ ಎಂಬುದರ ಅರ್ಥ ಬೇರೇನೂ ಅಲ್ಲ, ಇಡೀ ವ್ಯವಸ್ಥೆ ಜಂಗಲ್ ರಾಜ್‌ನತ್ತ ಶರವೇಗದಲ್ಲಿ ಧಾವಿಸುತ್ತಿದೆ ಎಂದೇ ಅರ್ಥ.

ಮನುಷ್ಯ ಸಮಾಜ ಜಂಗಲ್ ರಾಜ್‌ನ ರೂಪ ಪಡೆದರೆ ಆಗುವುದೇನು ಎಂಬುದನ್ನು ಅರಿಯಲು ವಿಶೇಷ ಕೌಶಲವೇನೂ ಬೇಕಾಗಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಬದುಕಲು ಪ್ರತಿಯೊಬ್ಬ ವ್ಯಕ್ತಿಯೂ ಬೇಟೆಯಾಡಲೇಬೇಕು ಎಂಬುದು ಇದರ ಅರ್ಥ, ಜಂಗಲ್ ರಾಜ್ ವ್ಯವಸ್ಥೆ ಇರುವುದೇ ಹಾಗೆ, ಅಲ್ಲಿ ಬಲಿಷ್ಠ ಪ್ರಾಣಿಗಳು ತಮಗಿಂತ ದುರ್ಬಲ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ. ಇಲ್ಲ, ಇಲ್ಲ ನಾವು ದುರ್ಬಲರು, ನಮ್ಮನ್ನು ಶೋಷಿಸುವುದು ನ್ಯಾಯವಲ್ಲ ಎಂದು ಯಾವ ಪ್ರಾಣಿಯೂ ಹೇಳಲು ಸಾಧ್ಯವಿಲ್ಲ. ಹೇಳಲು ಬಂದಿದ್ದರೂ ಅದನ್ನು ಕೇಳುವ ವ್ಯವಧಾನ ಬಲಿಷ್ಠ ಪ್ರಾಣಿಗಳಿಗೆ ಇರುತ್ತಿರಲಿಲ್ಲ.

ಇವತ್ತು ನಮ್ಮ ಆಳುವ ವ್ಯವಸ್ಥೆ ನಡೆಯುತ್ತಿರುವ ದಾರಿ ಕೂಡ ಹೀಗೇ ಇದೆ. ಅರ್ಥಾತ್, ಇಡೀ ರಾಜಕೀಯ ವ್ಯವಸ್ಥೆಯೇ ದುಡಿಯಲು ಸಜ್ಜಾದರೆ ಸಮಾಜದಲ್ಲಿರುವ ದುರ್ಬಲರ ಗತಿಯೇನು? ಒಟ್ಟಾರೆ ವ್ಯವಸ್ಥೆಯಲ್ಲಿ ಬಲಿಷ್ಠರು, ದುರ್ಬಲರು ಇದ್ದಾಗ ಇದನ್ನು ಸರಿದೂಗಿಸಿ ದುರ್ಬಲರಿಗೆ ಬದುಕುವ ಶಕ್ತಿ ಕೊಡುವುದು ರಾಜಕೀಯ ವ್ಯವಸ್ಥೆಯ ಮೂಲ ಧೈಯ.

ಈ ವಿಷಯದಲ್ಲಿ ಆಳುವ ಸರ್ಕಾರ ವಿಫಲವಾದರೆ ಪ್ರತಿಪಕ್ಷ ಅದನ್ನು ಎತ್ತಿ ತೋರಿಸಿ ಅದು ಸರಿ ದಾರಿಯಲ್ಲಿ ನಡೆಯುವಂತೆ ಮಾಡಬೇಕು. ಆದರೆ ಆಳುವವರ ಲೋಪವನ್ನು ಎತ್ತಿ ತೋರಿಸಲು ಮುಂದಾದವರೇ ಕಳಂಕಿತರಾದಾಗ ಸಹಜವಾಗಿ ಅವರ ನೈತಿಕತೆ ಕುಸಿದಿರುತ್ತದೆ. ಹೀಗೆ ನೈತಿಕತೆ ಕುಸಿದಾಗ ಆಳುವ ಸರ್ಕಾರಕ್ಕೆ ಅದು ಮೂಗುದಾರ ಹಾಕುವುದಿರಲಿ, ತನಗೇ ಸರಿಯಾದ ಮೂಗುದಾರವಿಲ್ಲ ಎಂದು ಅದು ಅಳುಕುವ ಸ್ಥಿತಿಯಲ್ಲಿರುತ್ತದೆ.

ಇವತ್ತು ನಮ್ಮ ಒಟ್ಟಾರೆ ರಾಜಕೀಯ ವ್ಯವಸ್ಥೆ ಈ ದಾರಿಯಲ್ಲಿರುವಾಗ ಸಾಮಾಜಿಕ ನ್ಯಾಯದ ಮಾತು ಅಪಹಾಸ್ಯದಂತೆ ಕೇಳಿಸುತ್ತದೆ. ಹಾಗಂತ ನಮ್ಮ ವ್ಯವಸ್ಥೆ ಈ ಸ್ಥಿತಿಗೆ ಬರಲು ಏನು ಕಾರಣ ಅಂತ ಗೊಣಗಾಡುವುದರ ಅಗತ್ಯವೇನೂ ಇಲ್ಲ.

ಏಕೆಂದರೆ ನೋಡ ನೋಡುತ್ತಿದ್ದಂತೆಯೇ ನಮ್ಮ ಚುನಾವಣಾ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎಂದರೆ, ಇವತ್ತು ನಾನು ಪ್ರಾಮಾಣಿಕ, ಜನಸೇವೆಗೆ ಬದುಕನ್ನು ಮುಡಿಪಾಗಿಡುತ್ತೇನೆ ಎಂದು ಧೈರ್ಯವಾಗಿ ಹೇಳಬಲ್ಲ ಒಬ್ಬ ವ್ಯಕ್ತಿ ಶಾಸಕನೋ, ಸಂಸದನೋ ಅಥವಾ ವಿವಿಧ ಹಂತಗಳಲ್ಲಿನ ಜನಪ್ರತಿನಿಧಿಯೋ ಆಗಲು ಸಾಧ್ಯವೇ ಇಲ್ಲ. ಈವತ್ತು ಸಂಸದರಾಗಿ ಆಯ್ಕೆಯಾಗಲು ಐವತ್ತರಿಂದ ನೂರು ಕೋಟಿ ರೂಪಾಯಿ, ಶಾಸಕರಾಗಲು ಇಪ್ಪತ್ತೈದರಿಂದ ಐವತ್ತು ಕೋಟಿ ರೂಪಾಯಿ ಸುರಿಯುವುದು ಅನಿವಾರ್ಯವಾಗಿರುವಾಗ ಆಯ್ಕೆಯಾಗಿರುವವರು ತಮ್ಮ ಹಿತ ಕಾಪಾಡಲು ಬಂದಿರುತ್ತಾರೆ ಎಂದು ನಂಬುವುದು ಮುಗ್ಧತನವಲ್ಲದೆ ಬೇರೇನೂ ಅಲ್ಲ.

ಏಕೆಂದರೆ ಈ ಪ್ರಮಾಣದ ಬಂಡವಾಳ ಸುರಿದವರು ಅದನ್ನು ಮರಳಿ ಪಡೆಯಲು ಯಾವ ಮಾರ್ಗ ಹಿಡಿಯುತ್ತಾರೆ ಎಂಬುದು ರಹಸ್ಯವೇನಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಒಂದು ರಾಜ್ಯದ ವಿಧಾನಸಭಾ ಚುನಾವಣೆಗೆ ದೇಶದ ವಿವಿಧ ಮೂಲೆಗಳಿಂದ ಬಂಡವಾಳ ಹರಿದು ಬರುತ್ತದೆ. ಸಂಸತ್ ಚುನಾವಣೆಯಲ್ಲಿ ಇಂತಹವರು ಗೆಲ್ಲಲೇಬೇಕು ಎಂದು ನಮ್ಮ ದೇಶದ ಬಂಡವಾಳಶಾಹಿಗಳು ಮಾತ್ರವಲ್ಲ, ವಿವಿಧ ದೇಶಗಳಿಂದಲೂ ಬಂಡವಾಳ ಹರಿದು ಬರುತ್ತದೆ. ಹೀಗೆ ಬಂಡವಾಳ ಹೂಡಿದವರು ಈ ನೆಲದಲ್ಲಿ ತಮ್ಮ ಹಿತ ರಕ್ಷಣೆಯಾಗಬೇಕು ಎಂದು ಬಯಸುತ್ತಾರೆ. ಹೀಗಾಗಿ ನಮ್ಮ ಬಹುತೇಕ ಜನಪ್ರತಿನಿಧಿಗಳದುಡಿಯುವಸಮಯ ಇಂತಹವರಿಗಾಗಿ ಮೀಸಲಾಗಿರುತ್ತದೆ. ತದನಂತರವೇ ಜನರ ಕಡೆ ನೋಡುವ ಅನಿವಾರ್ಯತೆ ಇರುತ್ತದೆ.

ಇದು ಅರ್ಥವಾದರೆ ನಾವು ಜಂಗಲ್ ರಾಜ್‌ನು ಎಷ್ಟು ಬೇಗ ಸರಿದು ಬರುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

13 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago