ಎಂ.ನಾರಾಯಣ
ತುರಗನೂರು ಶಾಖಾ ನಾಲೆಯ ಆಧುನೀಕರಣ ಕಾಮಗಾರಿ ಪೂರ್ಣ;
ಅನುದಾನ ನೀಡಿದ ಸಿಎಂ, ಸಚಿವ ಮಹದೇವಪ್ಪನವರಿಗೆ ರೈತರ ಕೃತಜ್ಞತೆ
ತಿ.ನರಸೀಪುರ: ತಾಲ್ಲೂಕಿನ ಬನ್ನೂರು ಹೋಬಳಿಯ ರೈತರ ಜೀವನಾಡಿ ವಿಶ್ವೇಶ್ವರಯ್ಯ ತುರಗನೂರು ಶಾಖಾ ನಾಲೆಯ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಆಧುನೀಕರಣಗೊಂಡ ನಾಲೆಯಲ್ಲಿ ಹರಿದ ನೀರು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಕೃಷಿ ಭೂಮಿಗೂ ತಲುಪಿದ್ದು, ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಗೊಂಡು ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಗಡಿಭಾಗದ ಅಚ್ಚುಕಟ್ಟು ಭೂ ಪ್ರದೇಶಗಳ ರೈತರಿಗೆ ಎಂಟು ದಶಕಗಳಿಂದ ನೀರಾವರಿ ಸೌಲಭ್ಯವನ್ನು ಕಲ್ಪಿಸುತ್ತಿರುವ ವಿಶ್ವೇಶ್ವರಯ್ಯ ತುರುಗನೂರು ಶಾಖಾ ನಾಲೆಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ೯೦ ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರಿಂದ ೨೨ ಕಿ.ಮೀ. ಉದ್ದದ ನಾಲೆ ಸಂಪೂರ್ಣವಾಗಿ ಆಧುನೀಕರಣಗೊಂಡಿದೆ.
ಕೆಆರ್‌ಎಸ್ ಅಣೆಕಟ್ಟೆಯ ವಿಶ್ವೇಶ್ವರಯ್ಯ ನಾಲೆಯ ೩೬ ಕಿ.ಮೀ.ನಲ್ಲಿ ಆರಂಭಗೊಳ್ಳುವ ಕಾವೇರಿ ಶಾಖಾ ನಾಲೆಯ ಕೊನೇ ಭಾಗದಿಂದ ಆರಂಭಗೊಂಡ ವಿಶ್ವೇಶ್ವರಯ್ಯ ತುರಗನೂರು ಶಾಖಾ(ಬ್ರಾಂಚ್) ನಾಲೆಯು ೧೯೪೩ರಲ್ಲಿ ಬ್ರಿಟಿಷ್ ಅಧಿಕಾರಿ ಇರ್ವಿನ್ ಕಾಲದಲ್ಲಿ ನಿರ್ಮಾಣವಾಯಿತು. ೨೨ ಕಿ.ಮೀ. ಉದ್ದದ ನಾಲೆಯಿಂದ ೩೧,೫೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸುತ್ತದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ೧೦೦ ಎಕರೆ, ತಿ.ನರಸೀಪುರ ತಾಲ್ಲೂಕಿನ ೨೦,೦೦೦ ಎಕರೆ ಹಾಗೂ ಮಳವಳ್ಳಿ ತಾಲ್ಲೂಕಿನ ೧೧,೪೦೦ ಎಕರೆ ಅಚ್ಚುಕಟ್ಟು ಭೂ ಪ್ರದೇಶ ನಾಲೆಯ ವ್ಯಾಪ್ತಿಯಲ್ಲಿದೆ. ನಾಲೆ ಆಧುನೀಕರಣದಿಂದಾಗಿ ಇಷ್ಟೊಂದು ಭೂಪ್ರದೇಶಕ್ಕೆ ಏಕಕಾಲಕ್ಕೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಕಳೆದ ೨೦೨೪ರಲ್ಲಿ ನಾಲೆಯ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದರಿಂದ ರಾಜ್ಯ ಸರ್ಕಾರ ೯೦ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿತ್ತು. ೨೦೨೪ರ ನ.೧೩ರಂದು ಸಿಎಂ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾಮಗಾರಿ ಗುತ್ತಿಗೆಯನ್ನು ಪಡೆದಿದ್ದ ಮಂಡ್ಯದ ಸ್ಟಾರ್ ಬಿಲ್ಡರ್ಸ್ ಸಂಸ್ಥೆ ೨೦೨೫ರ ಜನವರಿ ೧೦ ರಂದು ಅಧುನೀಕರಣ ಕಾಮಗಾರಿಯನ್ನು ಆರಂಭಿಸಿ, ತಾಲ್ಲೂಕಿನ ಕಾಡುಕೊತ್ತನಹಳ್ಳಿ ಹಾಗೂ ದೊಡ್ಡಮುಲಗೂಡು ಗ್ರಾಮಗಳ ಬಳಿ ಗುಣಮಟ್ಟದ ಕಾಮಗಾರಿ ನಡೆಸಿ ಪೂರ್ಣಗೊಳಿಸಿದೆ. ನಾಲೆಯಲ್ಲಿ ಮೊದಲ ನೀರು ಹರಿದ ಬಳಿಕ ಬೇಸಿಗೆ ಬೆಳೆಗೂ ಎರಡನೇ ನೀರನ್ನು ಹರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಎರಡನೇ ಹಂತದ ಕಾಮಗಾರಿಗೆ ೯೨ ಕೋಟಿ ರೂ. ಮಂಜೂರ ವಿಶ್ವೇಶ್ವರಯ್ಯ ತುರಗನೂರು ಶಾಖಾ ನಾಲೆಯ ಸಂಪರ್ಕದಲ್ಲಿರುವ ತುರಗನೂರು ವಿಸ್ತರಣಾ ನಾಲೆ ಸೇರಿದಂತೆ ಉಕ್ಕಲಗೆರೆ ನಾಲೆ, ಹಲವಾರ ಶಾಖಾ ನಾಲೆ ಹಾಗೂ ಬಿ.ಜಿ.ಪುರ ನಾಲೆಗಳನ್ನೂ ಆಧುನೀಕರಣಗೊಳಿಸುವ ೯೨ ಕೋಟಿ ರೂ.ಗಳ ಮತ್ತೊಂದು ಯೋಜನೆಗೆ ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿದ್ದು ಕಾಮಗಾರಿಗೆ ಚಾಲನೆ ನೀಡಬೇಕಿದೆ.
೯೨ ಕೋಟಿ ರೂ. ವೆಚ್ಚದಲ್ಲಿ ೬೭ ಕಿ.ಮೀ ಉದ್ದದ ನಾಲೆ, ಉಪ ನಾಲೆಗಳು, ಪಿಕಪ್ ನಾಲೆ ಹಾಗೂ ಕೆರೆ ಸಂಪರ್ಕ ನಾಲೆಗಳು ಆಧುನೀಕರಣಗೊಳ್ಳಲಿವೆ. ಇದರಿಂದಾಗಿ ಸೋಸಲೆ ಹೋಬಳಿಯ ಬರಡು ಭೂಮಿ ಹಚ್ಚ ಹಸಿರಿನಿಂದ ಕಂಗೊಳಿಸಲಿದೆ.
೨೧,೨೧೪ ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸ್ತುತ ೩೦೦೦ ಎಕರೆಗೆ ಮಾತ್ರ ನೀರನ್ನು ಒದಗಿಸಲಾಗುತ್ತಿದೆ. ಮುಂದುವರಿದ ಆಧುನೀಕರಣ ಕಾಮಗಾರಿಯನ್ನು ಕೈಗೊಂಡರೆ ಉಳಿದ ೧೮,೨೧೪ ಎಕರೆಗೆ ಅರೆ ನೀರಾವರಿ ಬೆಳೆಗಾಗಿ ನೀರಾವರಿ ಸೌಲಭ್ಯ ಲಭ್ಯವಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
” ವಿಶ್ವೇಶ್ವರಯ್ಯ ತುರಗನೂರು ಶಾಖಾ ನಾಲೆಯ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಆಧುನೀಕರಣಗೊಂಡ ನಾಲೆಯಲ್ಲಿ ಮುಂಗಾರು ಕೃಷಿಗೆ ನೀರನ್ನು ಈಗಾಗಲೇ ಹರಿಸಲಾಗಿದೆ. ವಿಸ್ತರಣಾ ನಾಲೆ ಸೇರಿದಂತೆ ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಆಧುನೀಕರಣಕ್ಕೆ ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರಿಂದ ಭೂಮಿ ಪೂಜೆ ನೆರವೇರಿಸಿದ ಬಳಿಕ ಕಾಮಗಾರಿಯನ್ನು ವಿಧ್ಯುಕ್ತವಾಗಿ ಆರಂಭಿಸಲಾಗುವುದು.”
ಹೆಚ್.ಸಿ.ರತೀಶ್, ಎಇಇ, ನಂ.೧ ವಿನ್ಯಾಸ ಕಾವೇರಿ
” ನೀರಾವರಿ ಉಪವಿಭಾಗ, ಬನ್ನೂರುಹಳೆಯ ನಾಲೆಯಾಗಿದ್ದ ವಿಶ್ವೇಶ್ವರಯ್ಯ ತುರಗನೂರು ಶಾಖಾ ನಾಲೆಯಲ್ಲಿ ಕೃಷಿಗೆ ನೀರು ಸಮರ್ಪಕವಾಗಿ ಸಿಗುತ್ತಿರಲಿಲ್ಲ. ನೀರಿಗಾಗಿ ಎರಡೂವರೆ ದಶಕಗಳಿಂದಲೂ ಪರದಾಡುತ್ತಿದ್ದೆವು. ಮಳೆ ಬಿದ್ದಾಗಷ್ಟೇ ಮುಂಗಾರು ಬೆಳೆಗೆ ನೀರು ಸಿಗುತ್ತಿತ್ತು. ಈಗ ನಾಲೆಯನ್ನು ಆಧುನೀಕರಣಗೊಳಿಸಿದ ಬಳಿಕ ಆರಾಮದಾಯಕವಾಗಿ ಬೇಸಾಯವನ್ನು ನಡೆಸಿ, ಉತ್ತಮ ಫಸಲನ್ನು ಪಡೆದಿದ್ದೇವೆ.”
ರಾಜೇಶ್ ಬಿ.ಬೆಟ್ಟಹಳ್ಳಿ, ಅಚ್ಚುಕಟ್ಟು ಪ್ರದೇಶದ ರೈತ
” ನಾಲೆಗಳ ಆಧುನೀಕರಣದಿಂದ ಅಚ್ಚುಕಟ್ಟು ಪ್ರದೇಶದ ಕಡೇ ಭಾಗದ ರೈತನಿಗೂ ನೀರಾವರಿ ಸೌಲಭ್ಯವನ್ನು ತಲುಪಿಸಿ, ವ್ಯವಸಾಯದ ನೀರಿಗಾಗಿ ರೈತರು ಹಗಲಿರುಳು ನಿದ್ದೆಗೆಡುವುದನ್ನು ಕ್ಷೇತ್ರದ ಶಾಸಕ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ತಪ್ಪಿಸಿದ್ದು, ಸಣ್ಣ ಹಿಡುವಳಿದಾರ ರೈತರಾದ ಪ.ಜಾತಿ ಮತ್ತು ಪಂಗಡದವರ ಜಮೀನಿಗೂ ನೀರಾವರಿ ಸೌಲಭ್ಯ ಲಭ್ಯವಾಗುವಂತೆ ಮಾಡಿದ್ದಾರೆ. ಎರಡನೇ ಹಂತದ ಆಧುನೀಕರಣ ಕಾಮಗಾರಿಗೆ ಅನುದಾನ ಕೊಟ್ಟು ಕಾಂಗ್ರೆಸ್ ಭದ್ರಕೋಟೆ ಸೋಸಲೆ ಹೋಬಳಿಯ ಮಳೆಯಾಶ್ರಿತ ಭೂಮಿಗೆ ನೀರು ಹರಿಸಿ, ಬರಡು ಭೂಪ್ರದೇಶವನ್ನು ಹಸಿರಾಗಿಸಿ, ಬೆಂಬಲಿಸುವ ಜನರ ಬದುಕನ್ನು ಹಸನುಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅಲ್ಲಿನ ರೈತರುಗಳು ಸಚಿವರ ಕಾರ್ಯವೈಖರಿಗೆ ಮನದುಂಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.”
ಮಂಡ್ಯ: ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ…
ನವದೆಹಲಿ: 2026ರ ಬಜೆಟ್ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು…
ಬೆಂಗಳೂರು: ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು 2026-27ನೇ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ…
ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದರು. ತೆರಿಗೆಗೆ ಸಂಬಂಧಿಸಿದಂತೆ ಹಲವು…
ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದರು. ದೇಶಾದ್ಯಂತ 500 ಹೊಸ…