ನಿರ್ಮಾಣ ವೆಚ್ಚ ಅಧಿಕ: ಹೊಸದಾಗಿ ನಿರ್ಮಿಸಲು ಸಂಸ್ಥೆಗಳ ಹಿಂದೇಟು
ಎಚ್. ಎಸ್. ದಿನೇಶ್ ಕುಮಾರ್
ಮೈಸೂರು: ನಗರಪಾಲಿಕೆ ಮಾತ್ರವೇ ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಯಂ ಸೇವಾ ಸಂಸ್ಥೆಗಳು ಕೂಡ ನಗರದಾದ್ಯಂತ ನೂರಕ್ಕೂ ಹೆಚ್ಚು ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿವೆ. ಇವುಗಳ ನಿರ್ವಹಣೆಯ ಹೊಣೆ ಕೂಡ ನಗರಪಾಲಿಕೆ ಯದ್ದೇ ಆಗಿದೆ. ಪಾಲಿಕೆ ಈ ಖಾಸಗಿ ತಂಗುದಾಣಗಳನ್ನು ಕೂಡ ನಿರ್ಲಕ್ಷಿಸಿದೆ. ಹಾಗಾಗಿ ಅವುಗಳಲ್ಲಿ ಅವ್ಯವಸ್ಥೆ ಕಂಡುಬಂದಿದೆ.
ಬಸ್ಸಿಗಾಗಿ ಕಾದು ನಿಲ್ಲುವ ಸಾರ್ವಜನಿಕರು ಬಿಸಿಲು ಅಥವಾ ಮಳೆಗೆ ಸಿಲುಕಿ ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕಾಗಿ ಸಂಘ, ಸಂಸ್ಥೆಗಳು ಹಾಗೂ ಕೆಲವರು ವೈಯಕ್ತಿಕವಾಗಿ ಲಕ್ಷಾಂತರ ರೂ. ವ್ಯಯಿಸಿ ಬಸ್ ತಂಗುದಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ನಂತರದ ನಿರ್ವಹಣೆ ನಗರಪಾಲಿಕೆಯ ಜವಾಬ್ದಾರಿ ಯಾಗಿದೆ. ಆದರೆ, ನಗರಪಾಲಿಕೆ ವತಿಯಿಂದ ನಿರ್ಮಾಣ ಮಾಡಿರುವ ತಂಗುದಾಣಗಳನ್ನೇ ಸರಿಯಾಗಿ ನಿರ್ವಹಣೆ ಮಾಡದ ನಗರಪಾಲಿಕೆಯು ಸಂಘ, ಸಂಸ್ಥೆಗಳು ನಿರ್ಮಿಸಿರುವ ತಂಗುದಾಣಗಳನ್ನು ಹೇಗೆ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇದೀಗ ನಗರಪಾಲಿಕೆ ಗುರುತಿಸಿರುವಂತೆ ನಗರದಾ ದ್ಯಂತ ೬೪೦ ಪ್ರಯಾಣಿಕರ ತಂಗುದಾಣಗಳಿವೆ. ಅದರಲ್ಲಿ ಶೇ. ೩೦ ಮಾತ್ರ ಪಾಲಿಕೆ ವತಿಯಿಂದ ನಿರ್ಮಾಣ ಮಾಡ ಲಾಗಿದೆ. ಉಳಿದವುಗಳನ್ನು ಶಾಸಕರ ಅನುದಾನದಡಿ ಅಥವಾ ಸಂಘ ಸಂಸ್ಥೆಗಳು ನಿರ್ಮಿಸಿ ನಗರಪಾಲಿಕೆಯ ಸುಪರ್ದಿಗೆ ವಹಿಸಿವೆ.
ಶಪಿಸುತ್ತಲೇ ಸುಣ್ಣಬಣ್ಣ: ಕೆಲ ಸಂಸ್ಥೆಗಳು ಮಾತ್ರ ಲಕ್ಷಾಂತರ ರೂ. ವ್ಯಯಿಸಿ ನಿರ್ಮಾಣ ಮಾಡಿರುವ ತಂಗು ದಾಣಗಳು ದುಸ್ಥಿತಿಯಲ್ಲಿ ಇರುವುದನ್ನು ಕಂಡು ಪಾಲಿಕೆ ಯನ್ನು ಶಪಿಸುತ್ತಲೇ ತಮ್ಮ ಸ್ವಂತ ಖರ್ಚಿನಲ್ಲಿ ಸುಣ್ಣ, ಬಣ್ಣ ಬಳಿಸಿ ತಮ್ಮ ಸಂಸ್ಥೆಯ ಹೆಸರುಗಳನ್ನು ಹೊಸದಾಗಿ ಬರೆಸಿಕೊಂಡ ಉದಾಹರಣೆಗಳೂ ಉಂಟು.
ಜಾಹೀರಾತು: ಕೆಲ ಬಸ್ ತಂಗುದಾಣಗಳನ್ನು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಂಡ ಉದಾಹರಣೆಗಳೂ ಇವೆ. ನಿಲ್ದಾಣದ ಮುಂದೆ ತಮ್ಮ ಸಂಸ್ಥೆಯ ದೊಡ್ಡ ಬೋರ್ಡ್‌ಗಳನ್ನು ಅಳವಡಿಸಿ ತಂಗುದಾಣಗಳ ಅಂದವನ್ನು ಹೆಚ್ಚಿಸುವ ಕೆಲಸ ಮಾಡುತ್ತಿವೆ.
ಆದರೆ, ರಾತ್ರಿ ವೇಳೆ ಅಲ್ಲಿಗೆ ಬರುವ ದುಷ್ಕರ್ಮಿಗಳು ಸೈನ್ ಬೋರ್ಡ್‌ಗಳನ್ನು ಬಿಚ್ಚಿ ಅಲ್ಲಿರುವ ಟ್ಯೂಬ್‌ಲೈಟ್ ಹಾಗೂ ಚೋಕ್‌ಗಳನ್ನು ಕಳವು ಮಾಡುತ್ತಾರೆ. ಹೀಗಾಗಿ ಆ ಸಂಸ್ಥೆಗಳು ಕೂಡ ತಂಗುದಾಣಗಳ ನಿರ್ವಹಣೆಗೆ ಮುಂದೆ ಬರುತ್ತಿಲ್ಲ. ಮತ್ತೊಂದು ಮುಖ್ಯವಾದ ಸಂಗತಿ ಎಂದರೆ, ಕಳೆದ ೬ ವರ್ಷಗಳಿಂದ ಯಾವುದೇ ಸಂಘ, ಸಂಸ್ಥೆಗಳು ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಾಣ ಮಾಡಿಲ್ಲ. ಅದಕ್ಕೆ ಕಾರಣ ಏನೆಂದರೆ ನಿರ್ಮಾಣ ಸಾಮಗ್ರಿಗಳ ವೆಚ್ಚ ದುಬಾರಿಯಾಗಿರುವುದು.
ಈಗಲಾದರೂ ನಗರಪಾಲಿಕೆ ಎಚ್ಚೆತ್ತುಕೊಂಡು ಬಸ್ ತಂಗುದಾಣಗಳ ಸಮರ್ಪಕ ನಿರ್ವಹಣೆಗೆ ಮುಂದಾಗ ಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಾನಿಗಳು ಕೂಡ ತಂಗುದಾಣ ನಿರ್ಮಾಣಕ್ಕೆ ಹಿಂಜರಿಯಬಹುದು.
ಖಾಸಗಿ ತಂಗುದಾಣಗಳ ಹೊಣೆಯೂ ಪಾಲಿಕೆಯದ್ದೇ
ಸ್ವಯಂ ಸೇವಾ ಸಂಸ್ಥೆಗಳು ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸುವಾಗ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಬೇಕು. ಅಲ್ಲದೆ, ತಂಗುದಾಣ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಆ ಬಗ್ಗೆ ಪಾಲಿಕೆಗೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಆದರೆ, ಸಾಮಾನ್ಯವಾಗಿ ತಂಗುದಾಣ ನಿರ್ಮಿಸಿದ ನಂತರ ದೃಢೀಕರಣ ಪತ್ರ ಸಲ್ಲಿಸುವುದಿಲ್ಲ. ಕೆಲ ಸಂಸ್ಥೆಗಳು ಎನ್‌ಒಸಿ ಪಡೆದ ನಂತರ ತಂಗುದಾಣದ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತ ಗೊಳಿಸಿಬಿಡುತ್ತಾರೆ. ಅಂತಹವರಿಗೆ ನಾವು ಪತ್ರ ಬರೆದು, ಕಾಮಗಾರಿ ಮುಂದುವರಿಸಲು ಸೂಚಿಸುತ್ತೇವೆ. ಆದರೆ, ಖಾಸಗಿಯವರು ಪೂರ್ಣಗೊಳಿಸಿದ ತಂಗುದಾಣಗಳ ಬಗ್ಗೆ ದೃಢೀಕರಣ ಪತ್ರ ಸಲ್ಲಿಸದಿದ್ದರೂ, ಅವುಗಳ ನಿರ್ವಹಣೆಯ ಹೊಣೆ ಪಾಲಿಕೆಯದ್ದೇ ಆಗಿರುತ್ತದೆ. -ಕೆ. ಜಿ. ಸಿಂಧು, ಅಧಿಕ್ಷಕ ಇಂಜಿನಿಯರ್, ನಗರಪಾಲಿಕೆ.
ಮೈಸೂರು: ಶೋಷಿತರು, ದಮನಿತರ ಧ್ವನಿಯಾಗಿರುವ ‘ಆಂದೋಲನ’ ದಿನಪತ್ರಿಕೆಯು ಸಮಾಜ ಸೇವಾ ಕಾರ್ಯದಲ್ಲೂ ನಿರತವಾಗಿದೆ. ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿಮೆಯಿಂದ ಗಳಿಸುವ ಆದಾಯದ ಅಲ್ಪಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕು ಎಂಬ ಮಾತನ್ನು ಹೇಳುತ್ತಲೇ ಇದ್ದರು. ಅಷ್ಟೇ ಅಲ್ಲ, ಸ್ವತಃ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಬಡ ಮಕ್ಕಳ ವಿದ್ಯಾಭ್ಯಾಸ, ಕ್ರೀಡೆಗೆ ಪ್ರೋತ್ಸಾಹ ಇತ್ಯಾದಿ ಸೇವೆಗಳ ಜೊತೆಗೆ ೧೯೯೦ರ ದಶಕದಲ್ಲಿ ನಗರ ಸೇರಿದಂತೆ ಹಲವೆಡೆ ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿದರು. ಸುಮಾರು ೩ ದಶಕಗಳ ಹಿಂದೆ ಬಸ್ ಗಳು ವಿರಳ ವಾಗಿದ್ದವು. ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಲ್ಲಿ ಬಸ್‌ಗೆ ಕಾಯಬೇಕಿತ್ತು. ಇದನ್ನು ಮನಗಂಡ ರಾಜಶೇಖರ ಕೋಟಿ ಅವರು ಮೊದಲಿಗೆ ರಾಮಕೃಷ್ಣನಗರ ವೃತ್ತದಲ್ಲಿ ವೈಯಕ್ತಿಕ ಖರ್ಚಿನಲ್ಲಿ ತಂಗುದಾಣ ನಿರ್ಮಿಸಿದರು. ಆಗಿನಿಂದಲೂ ಅದು ‘ಆಂದೋಲನ’ ವೃತ್ತ ಎಂದೇ ಹೆಸರಾಗಿದೆ. ಇದಲ್ಲದೆ, ನಗರದ ರಾಮಾನುಜ ರಸ್ತೆಯ ೯ನೇ ತಿರುವು, ಶ್ರೀರಾಂಪುರ, ವಿಜಯನಗರ ಎಚ್. ಡಿ. ಕೋಟೆ ತಾಲ್ಲೂಕಿನ ಹ್ಯಾಂಡ್‌ಪೋಸ್ಟ್, ಹುಣಸೂರು ತಾಲ್ಲೂಕಿನ ಬಿಳಿಕೆರೆ ಹಾಗೂ ಮಂಡ್ಯ ನಗರದಲ್ಲಿ ‘ಆಂದೋಲನ’ ದಿನಪತ್ರಿಕೆ ವತಿಯಿಂದ ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…