ಪ್ರಸಾದ್ ಲಕ್ಕೂರು
ಕಾಮಗಾರಿ ಮುಗಿಯುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ; ಜಾಗದ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬ
ಚಾಮರಾಜನಗರ: ನಗರದ ನ್ಯಾಯಾಲಯ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯು ಕುಂಟುತ್ತ, ತೆವಳುತ್ತ ಸಾಗಿದೆ. ಕಾಮಗಾರಿ ಯಾವಾಗ ಮುಗಿಯಲಿದೆ? ಕಾಂಕ್ರಿಟ್ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಇನ್ನೆಷ್ಟು ಕಾಲ ಬೇಕು ಎಂಬುದು ಸಾರ್ವಜನಿಕರ ಹಾಗೂ ವಾಹನ ಸವಾರರ ಪ್ರಶ್ನೆಯಾಗಿದೆ.
ಡಿವೈಎಸ್ಪಿ ಕಚೇರಿ ಬಳಿಯಿಂದ ಆರಂಭವಾಗುವ ನ್ಯಾಯಾಲಯ ರಸ್ತೆ ಕರಿನಂಜಪುರ ರಸ್ತೆ ಮಾರ್ಗವಾಗಿ ಸತ್ಯಮಂಗಲ ರಸ್ತೆಯನ್ನು ಸಂಪರ್ಕಿಸುತ್ತದೆ. ಡಿವೈಎಸ್ಪಿ ಕಚೇರಿಯಿಂದ ನ್ಯಾಯಾಲಯದ ತನಕ ಕಾಂಕ್ರಿಟೀಕರಣ ಆಗಿದೆ. ಸತ್ಯಮಂಗಲ ರಸ್ತೆಯಿಂದ ನಿಜಗುಣ ರೆಸಾರ್ಟ್ ಸಮೀಪದ ಸೇತುವೆ ತನಕ ಕಾಂಕ್ರಿಟೀಕರಣವಾಗಿದೆ. ಈ ೨ ನಡುವೆ ಇರುವ ೨೧೭ ಮೀಟರ್ ಅಂತರದ ರಸ್ತೆ ಕಾಂಕ್ರಿಟೀಕರಣವಾಗಿಲ್ಲ.
೬ ತಿಂಗಳ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಭವನ, ನಿಜಗುಣ ರೆಸಾರ್ಟ್ ಮುಂಭಾಗ ಸುಮಾರು ೧೦೦ ಮೀಟರ್ ರಸ್ತೆ ಕಾಂಕ್ರಿಟೀಕರಣವಾಯಿತು. ನ್ಯಾಯಾಲಯದ ಮುಂಭಾಗ ಒಂದು ತಿಂಗಳ ಹಿಂದೆ ೪-೫ ಮೀಟರ್ ಕಾಂಕ್ರಿಟೀಕರಣಗೊಂಡಿತು. ನಂತರ ಕಾಮಗಾರಿ ನಿಂತಲ್ಲೇ ನಿಂತುಬಿಟ್ಟಿದೆ.
ಈ ರಸ್ತೆಯನ್ನು ೧೦ ಮೀಟರ್ ಅಗಲಕ್ಕೆ ಕಾಂಕ್ರಿಟೀಕರಣ ಮಾಡಬೇಕು ಎಂದು ನಗರಸಭೆ ಮುಂದಾಗಿದೆ. ಆದರೆ, ರಸ್ತೆಯ ಅಕ್ಕಪಕ್ಕದ ಜಾಗದವರು ಹಿಂದೆ ರಸ್ತೆ ಎಷ್ಟು ಅಗಲಿವಿತ್ತೋ ಅಷ್ಟಕ್ಕೇ ಮಾಡಬೇಕು. ನಮ್ಮ ಜಾಗ ಬೇಕಾದರೆ ನ್ಯಾಯಯುತ ಪರಿಹಾರ ನೀಡಿ ಎಂದು ತಕರಾರು ತೆಗೆಯುತ್ತಿದ್ದಾರೆ. ಆದ್ದರಿಂದಲೇ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಡಿವೈಎಸ್ಪಿ ಕಚೇರಿಯಿಂದ ನ್ಯಾಯಾಲಯಗಳ ಸಂಕೀರ್ಣದತನಕ ರಸ್ತೆ ಕಾಂಕ್ರಿಟೀಕರಣಗೊಂಡು ಸಂಚಾರಕ್ಕೆ ಅನುಕೂಲವಾಗಿದೆ. ಇನ್ನು ಸತ್ಯಮಂಗಲ ರಸ್ತೆಯಿಂದ ನಿಜಗುಣ ರೆಸಾರ್ಟ್ ಸಮೀಪದ ಹಳ್ಳದ ತನಕದ ರಸ್ತೆಯೂ ಕಾಂಕ್ರಿಟೀಕರಣವಾಗಿದೆ. ಉಳಿದ ೨೧೭ ಮೀಟರ್ ರಸ್ತೆ ಅಭಿವೃದ್ಧಿಯಾಗಿಲ್ಲ. ಇಲ್ಲಿ ಓಡಾಡುವ ಜನರು ನಗರಸಭೆಗೆ, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರಸಭೆಯ ವಿಶೇಷ ಅನುದಾನ ೩ ಕೋಟಿ ೫೦ ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ರವೀಂದ್ರನಾಥ್ ಕನ್ಸ್‌ಟ್ರಕ್ಷನ್ ಅಂಡ್ ಪೈವೇಟ್ ಲಿಮಿಟೆಡ್ ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆಗೆ ಪಡೆದಿದೆ. ಒಂದು ವರ್ಷದ ಹಿಂದೆ ಕಾಮಗಾರಿ ಆರಂಭವಾಗಿದೆ. ಆದರೆ, ಇನ್ನು ಪೂರ್ಣಗೊಂಡಿಲ್ಲ. ರಸ್ತೆ ನಿರ್ಮಾಣಕ್ಕೆ ಬಳಸುವ ಪದಾರ್ಥಗಳ ಎಸ್‌ಆರ್ ದರ ಏರುತ್ತಲೇ ಇದೆ. ಕಾಮಗಾರಿ ವಿಳಂಬವಾಗಲು ಇದು ಕೂಡ ಕಾರಣ. ಟೆಂಡರ್ ಅಂದಾಜು ಮೊತ್ತದಂತೆ ಕೆಲಸ ಮುಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರ ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
” ರಸ್ತೆ ನಿರ್ಮಾಣಕ್ಕೆ ಅಕ್ಕಪಕ್ಕದ ಜಾಗದ್ದೆ ಸಮಸ್ಯೆ. ನಾವು ೮ ಮೀಟರ್ ರಸ್ತೆ ಮಾಡಲು ಮುಂದಾಗಿದ್ದೆವು. ಆದರೆ, ರಸ್ತೆಯ ಅಕ್ಕಪಕ್ಕದ ಮನೆಗಳ ಹಾಗೂ ನಿವೇಶನಗಳ ಮುಖಂಡರು ೧೦ ಮೀಟರ್ ರಸ್ತೆ ಮಾಡಿಸಿ ನಾವು ಜಾಗ ಬಿಡಿಸಿಕೊಡುತ್ತೇವೆ ಎಂದು ಮುಂದೆ ಬಂದಿದ್ದಾರೆ.”
ರಾಜುನಾಯಕ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ
ಸಂಸದರು ಸೂಚಿಸಿದ್ದರೂ ಆರಂಭಿಸಿಲ್ಲ: ಇತ್ತೀಚೆಗೆ ಸಂಸದರಾದ ಸುನಿಲ್ ಬೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ನ್ಯಾಯಾಲಯ ರಸ್ತೆ ವಿಳಂಬದ ವಿಚಾರ ಪ್ರಸ್ತಾಪವಾಗಿತ್ತು. ಸಂಸದರು ಈ ಬಗ್ಗೆ ಪ್ರಶ್ನೆ ಮಾಡಿ ರಸ್ತೆ ನಿರ್ಮಾಣಕ್ಕೆ ಇನ್ನೆಷ್ಟು ದಿನಗಳು ಬೇಕೆಂದಿದ್ದರು. ನಗರಸಭೆಯ ಆಯುಕ್ತರು ೨-೩ ದಿನಗಳಲ್ಲಿ ಆರಂಭಿಸುವುದಾಗಿ ತಿಳಿಸಿದ್ದರು. ೧೦ ದಿನಗಳು ಕಳೆಯುತ್ತಾ ಬರುತ್ತಿದೆ. ಇನ್ನೂ ಆರಂಭವಾಗಿಲ್ಲ.
” ರಸ್ತೆಯ ಅಕ್ಕಪಕ್ಕದವರು ಕಾಮಗಾರಿ ನಡೆಸಲು ಮುಂದಾದರೆ ನ್ಯಾಯಾಲಯಕ್ಕೆ ಹೋಗುತ್ತಾರೆ. ಇದರಿಂದ ಕೆಲಸ ಮುಂದೆ ಸಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮತ್ತೊಮ್ಮೆ ಮಾತನಾಡಿ ಕೆಲಸ ಮುಗಿಸಲು ಸೂಚಿಸುತ್ತೇನೆ.”
-ಸಿ.ಪುಟ್ಟರಂಗಶೆಟ್ಟಿ, ಶಾಸಕರು, ಚಾಮರಾಜನಗರ
ಲಕ್ಕುಂಡಿ : ಅದೊಂದು ಐತಿಹಾಸಿಕ ಗ್ರಾಮ. ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು..... ಅದ್ಭುತ ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ…
ಮೈಸೂರು : ನಗರದ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು…
ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.6ರಂದು ಬಜೆಟ್ ಮಂಡಿಸುವ ಬಗ್ಗೆ ಸಿಎಂ…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…
ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…