ಒಟ್ಟು ೧೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ; ಗುಂಡ್ಲುಪೇಟೆಯಲ್ಲೇ ಹೆಚ್ಚು
ಚಾಮರಾಜನಗರ: ಹಿಂಗಾರು ಅವಧಿಯಲ್ಲಿ ಈ ಬಾರಿ ಹಿಂದಿಗಿಂತ ಹುರುಳಿ ಬಿತ್ತನೆ ಅಧಿಕವಾದರೂ ಅದರ ಇಳುವರಿ ಹೇಳಿ ಕೊಳ್ಳುವಂತೆ ಇಲ್ಲವಾಗಿದೆ. ಕೊಯ್ಲೇ ಮಾಡದೇ ದನ-ಕರು ಬಿಟ್ಟು ಮೇಯಿಸಿದವರೂ ಇದ್ದಾರೆ. ಒಟ್ಟಾರೆ ಈ ಬಾರಿ ಇಳುವರಿ ತರಾವರಿ ಬಂದಿದೆ!
ಕೆಲವರು ಈ ಬಾರಿ ಇಳುವರಿ ತುಂಬಾ ನಷ್ಟ ಎನ್ನುತ್ತಾರೆ. ಅನೇಕರು ಇಳುವರಿ ಸಾಮಾನ್ಯ ಅನ್ನುತ್ತಾರೆ. ಯಾರು ಬೇಗ ಬಿತ್ತನೆ ಮಾಡಿದ್ದರೋ ಅಂತಹ ರೈತರು ಈಗ ಹುರುಳಿ ಕೊಯ್ಲು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೊಯ್ಲಿಗೆ ಬರುವ ಹುರುಳಿ ಫಲವತ್ತಾಗಿದೆ ಎಂಬ ಸಮಾಧಾನದ ಮಾತುಗಳು ರೈತರಿಂದ ಕೇಳಿಬರುತ್ತಿವೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳು, ಬಹುತೇಕ ಎಲ್ಲಾ ಕಡೆ ಹುರುಳಿ ಬೆಳೆ ಚೆನ್ನಾಗಿದೆ ಎಂದು ಹೇಳುತ್ತಾರೆ.
ಎಂದಿನಂತೆ ಈ ಬಾರಿಯೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ೧೨,೯೦೦ ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬಿತ್ತನೆಯಾಗಿದ್ದು, ಕೆಲವೆಡೆ ಈಗಾಗಲೇ ಕೊಯ್ಲು ಆರಂಭವಾಗಿದೆ. ಕಬ್ಳಳ್ಳಿ, ಸೀಗೆವಾಡಿ, ಮಾದಾಪಟ್ಟಣ, ಕೊಡಗಾಪುರ, ಬೆಟ್ಟದ ಮಾದಹಳ್ಳಿ, ತಗ್ಗಲೂರು, ಹೊರೆಯಾಲ ಮೊದಲಾದ ಕಡೆ ಅಲ್ಲಲ್ಲಿ ಕೊಯ್ಲು ಶುರುವಾಗಿದೆ. ಇನ್ನು, ಚಾಮರಾಜನಗರ ತಾಲ್ಲೂಕಿನಲ್ಲಿ ೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮಲೆಯೂರು, ಮೂಡ್ನಾಕೂಡು, ಉಡಿಗಾಲ, ಕುಲಗಾಣ, ನಂಜೇದೇವನಪುರ, ಹಳೇಪುರ, ಬೆಟ್ಟದಪುರ ಸೇರಿದಂತೆ ವಿವಿಧ ಕಡೆ ಒಂದು ವಾರದಿಂದ ಹುರುಳಿ ಕೊಯ್ಲು ನಡೆಯುತ್ತಿದೆ.
ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕು ಗಳಲ್ಲಿ ತಲಾ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿತ್ತು. ಯಳಂದೂರು ತಾಲ್ಲೂಕಿನಲ್ಲಿ ಕೇವಲ ೨೦೦ ಹೆಕ್ಟೇರ್‌ನಷ್ಟು ಹುರುಳಿ ಬಿತ್ತನೆ ಕಂಡಿತ್ತು. ಅಲ್ಲಲ್ಲಿ ಕೊಯ್ಲು ಕಂಡುಬಂದಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನು ಓದಿ: ಮುದ್ದಿನ ಹಸುವಿಗೆ ಸೀಮಂತ ನೆರವೇರಿಸಿದ ರೈತ ಮಹಿಳೆ!
ಹಿಂಗಾರು ಮಳೆಗೆ ಹುರುಳಿ ಬಿಟ್ಟರೆ ಹಸಿಕಡಲೆ ಹಾಕಲಾಗುತ್ತದೆ. ಇವೆರಡೂ ಬೆಳೆಗಳ ಬೆಳವಣಿಗೆ ಗತಿ ಹೇಗೆಂದರೆ ಒಂದು ಹಂತದವರೆಗಷ್ಟೇ ಮಳೆಯನ್ನು ಬೇಡುತ್ತವೆ. ನಂತರದಲ್ಲಿ ಇಬ್ಬನಿ ಮತ್ತು ಚಳಿ ವಾತಾವರಣ ದಲ್ಲೇ ಬೆಳೆ ಬರುತ್ತದೆ. ಪ್ರಾರಂಭದಲ್ಲಿ ಹುರುಳಿಗೆ ಮಳೆ ಕೊರತೆಯಾಯಿತು. ಅದರಿಂದಾಗಿ ಇಳುವರಿ ಕುಂಠಿತವಾಗಿದೆ ಎನ್ನುತ್ತಾರೆ ರೈತರು.
ಕೊಯ್ಲು ಮಾಡದೇ ದನಕರು ಬಿಟ್ಟು ಮೇಯಿಸಿದ ರೈತ: ಮೂಡ್ನಾಕೂಡು ಗ್ರಾಮದ ಚನ್ನಬಸಪ್ಪ ಅವರು ಕೊಯ್ಲು ಮಾಡಿ ಟ್ರಾಕ್ಟರ್ ನಲ್ಲಿ ತಂದಿದ್ದ ಹುರುಳಿ ಬೆಳೆ ಕಡೆ ಕೈ ಮಾಡಿ ತೋರಿಸಿದರು. ೨ ಎಕರೆಯಲ್ಲಿ ಬಿತ್ತನೆ ಮಾಡಲಾ ಗಿತ್ತು. ಇಷ್ಟು ಇಳುವರಿ ಬಂದಿದೆ ಸಾಕಲ್ವಾ? ಎಂದು ನೋವಿನಿಂದಲೇ ನುಡಿದರು. ಅದೇ ಗ್ರಾಮದ ಮಲ್ಲಪ್ಪ ಅವರು, ತಮ್ಮ ಜಮೀನಿನಲ್ಲಿ ಹುರುಳಿ ಬೆಳೆ ಕೈಗೇ ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಬೆಳೆ ಕಮರಿಹೋಗಿದೆ. ಹಾಗಾಗಿ ಬೆಳೆಯನ್ನು ಕೊಯ್ಲು ಮಾಡದೇ ದನಕರು ಬಿಟ್ಟು ಮೇಯಿಸುತ್ತಿದ್ದೇನೆ ಎಂದು ಬೇಸರದಿಂದ ನುಡಿದರು.
” ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಹುರುಳಿ ಬಿತ್ತನೆ ಸುಮಾರು ೩ ಸಾವಿರ ಹೆಕ್ಟೇರ್ ಹೆಚ್ಚಾಗಿದ್ದು, ಒಟ್ಟಾರೆ ೧೭ ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಅಲ್ಲಿ ಇಲ್ಲಿ ಬೆಳೆ ವ್ಯತ್ಯಾಸ ಇರಬಹುದು. ಒಟ್ಟಾಗಿ ನೋಡಿದರೆ ಹುರುಳಿ ಬೆಳೆ ಚೆನ್ನಾಗಿದೆ.”
-ಸುಷ್ಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಕ
” ಹುರುಳಿ ಇಳುವರಿ ಈ ಬಾರಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.೨೦ರಷ್ಟೂ ಇಲ್ಲ. ಮಳೆ ಸಕಾಲಕ್ಕೆ ಆಗದಿರುವುದು ಇದಕ್ಕೆ ಕಾರಣ. ಬೆಳೆ ಹೋದರೆ ದನಕರುಗಳ ಮೇವಿಗೆ ಹುರಳಿ ಕಡ್ಡಿಯಾದರೂ ಆಗುತ್ತಿತ್ತು. ಅದಕ್ಕೂ ಈ ಸಲ ತತ್ವಾರ. ಮೇವಿಗಾಗಿ ನರಸೀಪುರ ತಾಲ್ಲೂಕಿನಿಂದ ಭತ್ತದ ಹುಲ್ಲು ಖರೀದಿಸಿ ತರುವ ಪರಿಸ್ಥಿತಿ ನಿರ್ಮಾಣವಾಗಿದೆ.”
-ಮೂಡ್ನಾಕೂಡು ಮಹೇಶ್, ರೈತ ಮುಖಂಡ
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…