ಫ್ರೆಬ್ರವರಿಯಲ್ಲಿಯೆ 32 ಡಿಗ್ರಿ ಸೆಲ್ಸಿಯಸ್ ದಾಖಲು ; ಅಗತ್ಯ ಮುನ್ನೆಚ್ಚರಿಕೆಗೆ ತಜ್ಞರ ಸಲಹೆ
ನವೀನ್ ಡಿಸೋಜ
ಮಡಿಕೇರಿ: ಬೇಸಿಗೆ ಆರಂಭಕ್ಕೂ ಮೊದಲೇ ಮಂಜಿನ ನಗರಿ ಮಡಿಕೇರಿಯಲ್ಲಿ ತಾಪಮಾನ ಏರಿಕೆ ಕಂಡಬರುತ್ತಿದೆ. ಫೆಬ್ರವರಿ ತಿಂಗಳ ೩ನೇ ವಾರದಲ್ಲಿಯೇ ಜಿಲ್ಲೆಯಲ್ಲಿ ೩೨ ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳ ಬಗ್ಗೆ ಆತಂಕ ಮೂಡಿಸಿದೆ.
ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಸಾಮಾನ್ಯವಾಗಿ ಫೆಬ್ರವರಿ ಅಂತ್ಯದವರೆಗೆ ತಂಪಾದ ವಾತಾವರಣವಿದ್ದು, ಮಾರ್ಚ್ ಬಳಿಕ ಬಿಸಿಲು ಹೆಚ್ಚಾಗುತ್ತಾ ಹೋಗುತ್ತಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಧಗೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫೆಬ್ರವರಿ ತಿಂಗಳಿನಿಂದಲೇ ಸುಡುವ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ತಾಪಮಾನ ಈಗಾಗಲೇ ಗರಿಷ್ಠ ೩೨-೩೩ ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ಕಳೆದ ಮುಂಗಾರು ಉತ್ತಮವಾಗಿತ್ತು ಮತ್ತು ದೀರ್ಘ ಕಾಲದ ಮಳೆಯಾಗಿತ್ತು. ಮುಂಗಾರಿನ ಬಳಿಕವೂ ಕೆಲವು ಚಂಡಮಾರುತ, ವಾಯು ಭಾರ ಕುಸಿತಗಳ ಪರಿಣಾಮ ಡಿಸೆಂಬರ್ ತಿಂಗಳವರೆಗೂ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಲೇ ಇತ್ತು. ಆದರೆ ಡಿಸೆಂಬರ್ ತಿಂಗಳಿನಲ್ಲಿ ಸೆಂಗಾಲ್ ಚಂಡಮಾರುತದ ಬಳಿಕ ಜಿಲ್ಲೆಯಲ್ಲಿ ಮಳೆ ಸುರಿಯಲಿಲ್ಲ. ಹೀಗಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದ್ದು, ಹೆಚ್ಚಿನ ಶಾಖ ಕಂಡುಬರುತ್ತಿದೆ. ಜತೆಗೆ ಹವಾಮಾನ ವೈಪರೀತ್ಯದ ಪರಿಣಾಮದಿಂದಲೂ ಹೆಚ್ಚಿನ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ ಎಂಬುದು ಹವಾಮಾನ ಇಲಾಖೆಯ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಈ ಬಾರಿ ಪೂರ್ವ ಮುಂಗಾರು ಬೇಗನೆ ಆರಂಭವಾಗುವ ಸಾಧ್ಯತೆಯಿದ್ದು, ಮಾರ್ಚ್ ತಿಂಗಳಲ್ಲಿ ಒಂದೆರಡು ಮಳೆಯಾದರೆ ತಾಪಮಾನ ಕಡಿಮೆಯಾಗಲು ಸಹಕಾರಿಯಾಗಲಿದೆ. ಸೂಕ್ತ ಸಮಯಕ್ಕೆ ಮಳೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭೂಮಿಯಲ್ಲಿನ ತೇವಾಂಶ ಮತ್ತಷ್ಟು ಕಡಿಮೆಯಾಗುವ ಪರಿಣಾಮ ಹೆಚ್ಚಿನ ತಾಪಮಾನ ಕಂಡುಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಮಡಿಕೇರಿಯ ಮಟ್ಟಿಗೆ ೩೩ ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನ ಅಪಾಯಕಾರಿಯಾಗಿದ್ದು, ಜನರು ತಮ್ಮ ಮತ್ತು ಬೆಳೆಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
೨೦೨೪ರ ಏಪ್ರಿಲ್ ೪ರಂದು ಮಡಿಕೇರಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು. ಅಂದು ದಾಖಲಾದ ೩೫. ೨ ಡಿಗ್ರಿ ಸೆಲ್ಸಿಯಸ್ ತಾಪಮಾನ ಮಡಿಕೇರಿಯಲ್ಲಿ ದಾಖಲಾದ ಅತಿ ಹೆಚ್ಚಿನ ತಾಪಮಾನ ಎನಿಸಿಕೊಂಡಿದೆ. ಫೆಬ್ರವರಿ ತಿಂಗಳಲ್ಲಿ ಈ ಬಾರಿ ೩೩. ೪ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ಹಿಂದೆ ೧೯೮೧ ಮತ್ತು ೨೦೧೦ರಲ್ಲಿ ಫೆಬ್ರವರಿ ತಿಂಗಳಲ್ಲಿ ೩೫ ಡಿಗ್ರಿ ತಾಪಮಾನ ದಾಖಲಾಗಿತ್ತು.
ತಾಪಮಾನ ಹೆಚ್ಚಿರುವ ಸಂದರ್ಭ ಮಕ್ಕಳಲ್ಲಿ ವಾಂತಿ, ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಿರಿಯರಿಗೂ ತಾಪಮಾನ ಹೆಚ್ಚಳದಿಂದ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ.
ಬಿಸಿಲಿಗೆ ಹೀಗೆ ಮಾಡಿ
ಹೆಚ್ಚು ನೀರು ಕುಡಿಯುವುದು, ಒಆರ್‌ಎಸ್, ನಿಂಬೆ ಪಾನೀಯ, ಫ್ರೆಶ್ ಜ್ಯೂಸ್ ಕುಡಿಯುವುದು ಪ್ರಯಾಣದ ವೇಳೆ ನೀರು ಜತೆಗಿರಲಿ. ಹೆಚ್ಚು ಹಣ್ಣಿನ ಸೇವನೆ, ಹೆಚ್ಚಾಗಿ ಮನೆ ಒಳಗೆಯೇ(ಗಾಳಿ ಸಂಚಾರ ಹೆಚ್ಚಿರುವ ಕಡೆ) ಇರುವುದು, ತಿಳಿ ಬಣ್ಣದ, ಹತ್ತಿ ಬಟ್ಟೆಧರಿಸುವುದು, ಬಿಸಿಲಿನಿಂದ ತಲೆ ಭಾಗವನ್ನು ರಕ್ಷಿಸಿ (ಕೊಡೆ, ಟೋಪಿ ಬಳಸಿ) ಕಾಲಿಗೆ ಪಾದರಕ್ಷೆಗಳನ್ನು ಬಳಸಿ.
ಅತಿಯಾದ ಶಾಖದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
ತಲೆ ಸುತ್ತುವುದು, ಪ್ರಜ್ಞೆ ತಪ್ಪುವುದು, ವಾಕರಿಕೆ ಅಥವಾ ವಾಂತಿಯಾಗುವುದು, ತಲೆ ನೋವು, ಅತಿಯಾದ ಬಾಯಾರಿಕೆ, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತ
ಈ ಬಾರಿ ಫೆಬ್ರವರಿ ತಿಂಗಳಿನಲ್ಲಿಯೇ ಹೆಚ್ಚಿನ ಬಿಸಿಲು ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಒಂದೆರಡು ಬಾರಿ ಮಳೆಯಾಗದ ಹೊರತು ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೊಡಗಿನಲ್ಲಿ ಕಾಫಿ, ಅಡಕೆ, ಬಾಳೆಯಂತಹ ಬೆಳೆಗಳಿಗೆ ತುಂತುರು ನೀರಾವರಿ ಮತ್ತು ಬುಡವನ್ನು ತೇವವಾಗಿರುವಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. -ಡಾ. ಸುಮಂತ್ ಕುಮಾರ್ ಜಿ. ವಿ. , ತಾಂತ್ರಿಕ ಅಧಿಕಾರಿ, ಹವಾಮಾನ ವಿಭಾಗ, ನಾಗನಹಳ್ಳಿ.
ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…
ನವದೆಹಲಿ: ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ-ಯುರೋಪ್ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…
ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…
ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…
ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…