6ವರ್ಷಗಳಾದರೂ ಸಿಗದ ಪೂರ್ಣ ಪ್ರಮಾಣದ ಪರಿಹಾರ
ಪ್ರಸಾದ್ ಲಕ್ಕೂರು
ಚಾಮರಾಜನಗರ: 6 ವರ್ಷಗಳ ಹಿಂದಿನ ದುರಂತದ ನೆನಪು ಇನ್ನೂ ಅಲ್ಲಿ ಪಸೆ ಆಡುತ್ತಿದೆ. ಕುಟುಂಬಗಳು, ಸಾವಿನ ದವಡೆ ಹೊಕ್ಕು ಬದುಕುಳಿದರೂ ಸಂಪೂರ್ಣ ಸಹಜ ಬದುಕಿಗೆ ಮರಳಲಾಗದ ಅಸಹಾಯಕತೆಯಿಂದ ಹಲವು ಮಂದಿ ನರಳುತ್ತಿದ್ದಾರೆ. ಇದು 17 ಮಂದಿಯ ಪ್ರಾಣ ತೆಗೆದು, 127 ಜನರು ಸುದೀರ್ಘ ಅನಾರೋಗ್ಯಕ್ಕೆ ತುತ್ತಾಗುವುದಕ್ಕೆ ಕಾರಣವಾದ ಬಹುದೊಡ್ಡ ದುರಂತ.
ಅದು, ಹನೂರು ತಾಲ್ಲೂಕಿನ ಸುಳ್ವಾಡಿಯ ವಿಷ ಪ್ರಸಾದ ಪ್ರಕರಣ. ಆ ವಿಷ ಪ್ರಸಾದ ಸೇವಿಸಿ ಮೃತಪಟ್ಟ ಇಬ್ಬರು ಮಕ್ಕಳೂ ಸೇರಿದಂತೆ 17 ಜನರ ಕುಟುಂಬಸ್ಥರು ಈಗಲೂ ಸಂಕಷ್ಟದಲ್ಲಿದ್ದಾರೆ. ಈ ಹೊಸ ವರ್ಷದಲ್ಲಿಯೂ ಅವರ ಅಳಲು ಮುಂದುವರಿದಿದೆ. ಸುಳ್ವಾಡಿ ಪ್ರಕರಣ ನೆನಪಿಸಿದರೆ ಸಾಕು ಅವರೆಲ್ಲ ಬೆಚ್ಚಿ ಬೀಳುತ್ತಾರೆ.
ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದು ಬದುಕುಳಿದಿರುವ 127 ಜನರು ಈಗಲೂ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಸಾವು ಬದುಕಿನೊಡನೆ ಹೋರಾಡುತ್ತ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸುಳ್ವಾಡಿಯೂ ಸೇರಿದಂತೆ ಸುತ್ತಮುತ್ತಲಿನ ೧೦ ರಿಂದ ೧೨ ಗ್ರಾಮಗಳ ಜನರು ವಿಷ ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಸ್ಥರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನರಕಯಾತನೆ ಅನುಭವಿಸಿದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾರೆ.
ಮೃತಪಟ್ಟ 17 ಮಂದಿಯ ಕುಟುಂಬಸ್ಥರಿಗೆ ಹಾಗೂ ಚಿಕಿತ್ಸೆ ಪಡೆದವರಿಗೆ ಪರಿಹಾರ ಮತ್ತು 7 ಕುಟುಂಬಗಳ ತಲಾ ಒಬ್ಬ ಸದಸ್ಯರಿಗೆ ಹೊರಗುತ್ತಿಗೆ ನೌಕರಿ ನೀಡಲಾಗಿದೆ. ಇದನ್ನು ಹೊರತು ಪಡಿಸಿದರೆ ಪುನರ್ವಸತಿ ಕಲ್ಪಿಸುವುದೂ ಸೇರಿದಂತೆ ಯಾವುದೇ ಭರವಸೆ ಈಡೇರಿಲ್ಲ.
ವಿಷ ಪ್ರಸಾದದಿಂದ ಹಲವರಿಗೆ ಅನಾರೋಗ್ಯ: ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದು ಬದುಕುಳಿದಿರುವ ಬಿದರಹಳ್ಳಿ, ಸಳ್ವಾಡಿ, ದೊರೆಸ್ವಾಮಿ ಮೇಡು, ಎಂ. ಜಿ. ದೊಡ್ಡಿ, ಗೋಡೆಸ್ಟ್ ನಗರ, ಕೋಟೆ ಪಾದೈ ಗ್ರಾಮಗಳ ಮಹಿಳೆ ಯರು, ಪುರುಷರು, ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಿಸಿಲಿಗೆ ಹೋದರೆ ತಲೆ ಸುತ್ತು, ಹೊಟ್ಟೆ, ಎದೆ, ಕೀಲು ನೋವುಗಳು, ಸುಸ್ತು, ಸೆಳೆತ, ಕಣ್ಣು ಮಂಜು ಆಗುವುದು. ರಾತ್ರಿ ವೇಳೆ ನಿದ್ದೆ ಬಾರದೆ ಒದ್ದಾಟ. . . ಇತ್ಯಾದಿ ಸಮಸ್ಯೆಗಳು ಅವರನ್ನು ಕಾಡುತ್ತಿವೆ.
ವಿಷ ಪ್ರಸಾದ ಸೇವಿಸಿದ್ದ ಮಹಿಳೆಯರು, ಯುವತಿಯರಿಗೆ ಪಿರಿಯೆಡ್(ಋತುಚಕ್ರ) ಕ್ರಮಬದ್ಧವಾಗಿ ಆಗುತ್ತಿಲ್ಲ. ಹಲವರಿಗೆ ಗರ್ಭಪಾತವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಿಷ ಪ್ರಸಾದ ಸೇವಿಸಿ ಚಿಕಿತ್ಸೆಯಿಂದ ಉಳಿದಿರುವ ಬಹುತೇಕ ಎಲ್ಲ ಕುಟುಂಬಗಳೂ ಬಡವರ್ಗಕ್ಕೆ ಸೇರಿದ ಕೂಲಿ ಕಾರ್ಮಿಕರು. ಅನಾರೋಗ್ಯದಿಂದ ಕೂಲಿ ಕೆಲಸಕ್ಕೂ ಹೋಗಲಾಗದೆ ಜೀವನ ನಡೆಸಲು ಪರದಾಡುತ್ತಿದ್ದಾರೆ.
ಈ ಭಾಗದಲ್ಲಿ ಸೂಕ್ತ ಆಸ್ಪತ್ರೆಯಿಲ್ಲ: ವಿಷ ಪ್ರಸಾದ ಸೇವಿಸಿ ಉಳಿದ 127 ಮಂದಿಗೆ ಆಗೊಮ್ಮೆ ಈಗೊಮ್ಮೆ ಕಾಣಿಸಿ ಕೊಳ್ಳುವ ಆರೋಗ್ಯದ ಸಮಸ್ಯೆಯಿಂದ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲು ಸೂಕ್ತ ಸರ್ಕಾರಿ ಆಸ್ಪತ್ರೆಯಿಲ್ಲ. ಸಮೀಪದ ಮಾರ್ಟಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೊರಕುವ ಚಿಕಿತ್ಸೆ ಸಾಲುತ್ತಿಲ್ಲ. ಹಾಸ್ಟೆಲ್‌ನಲ್ಲಿ ಇರಲು ಆಗಲಿಲ್ಲ: ತನ್ನ ಅಜ್ಜಿ ಜೊತೆ ಕಿಚ್ ಗುತ್ ಮಾರಮ್ಮ ದೇವಾಲಯಕ್ಕೆ ಹೋಗಿ ವಿಷ ಪ್ರಸಾದ ಸೇವಿಸಿದ್ದ ಎಂ. ಜಿ. ದೊಡ್ಡಿಯ ರೇಖಾ (15) ಎಂಬ ವಿದ್ಯಾರ್ಥಿನಿ ಕೊಳ್ಳೇಗಾಲದ ಸಾರ್ವಜನಿಕ ಬಾಲಕಿಯರ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಎಸ್‌ವಿಕೆ ಶಾಲೆಯಲ್ಲಿ ಓದುತ್ತಿದ್ದಳು. ಅನಾರೋಗ್ಯದ ಕಾರಣದಿಂದ ಆಕೆಯನ್ನು ಹಾಸ್ಟೆಲ್‌ನಿಂದ ಕರೆತಂದು ಎಂ. ಜಿ. ದೊಡ್ಡಿಯ ಸರ್ಕಾರಿ ಶಾಲೆಗೆ ದಾಖಲಿಸಿದ್ದು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾಳೆ. ಆಕೆಗೆ ತಲೆಸುತ್ತು ಸಮಸ್ಯೆ ಮುಂದುವರಿದಿದೆ. ಇದೇ ಗ್ರಾಮದ ವಿದ್ಯಾರ್ಥಿಗಳಾದ ಮೋಹನ್ ಲಾಲ್, ಮೋಹನ್ ಕುಮಾರ್, ಶರಣ್ಯ, ನಿತ್ಯಾ, ರೋಜಾ ಅವರ ಆರೋಗ್ಯದಲ್ಲಿಯೂ ಆಗಾಗ ಏರುಪೇರು ಆಗುತ್ತಿದೆ.
ಈಡೇರದ ಅಂದಿನ ಮುಖ್ಯಮಂತ್ರಿ ಭರವಸೆ: ಸುಳ್ವಾಡಿ ವಿಷ ಪ್ರಸಾದ ದುರಂತ ಸಂಭವಿಸಿದ ಸಂದರ್ಭ ದಲ್ಲಿ ಬೀದರಹಳ್ಳಿಗೆ ಭೇಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು, ಮೃತರ ಕುಟುಂಬ ಗಳಿಗೆ ತಲಾ 2 ಎಕರೆ ಜಮೀನು ಹಂಚಿಕೆ, ಬೋರ್‌ವೆಲ್ ಕೊರೆಸಿ ಪಂಪ್‌ಸೆಟ್ ನೀರಾವರಿಗೆ ಅವಕಾಶ, ಮನೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು.
ಇದಲ್ಲದೆ, ಬೀದರಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಈ ಭಾಗದಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆ, ಮೃತರ ಕುಟುಂಬದವರು ಮತ್ತು ವಿಷ ಪ್ರಸಾದ ಸೇವಿಸಿ ತೊಂದರೆಗೆ ಒಳಗಾದವರಿಗೆ ಉದ್ಯೋಗ ನೀಡಲು ಯಾವುದಾದರೂ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಇಲ್ಲಿಯತನಕ ಈಡೇರಿಲ್ಲ.
ಮೃತರ ಕುಟುಂಬಗಳಿಗೆ ತಲಾ ೮ ಲಕ್ಷ ರೂ. ಪರಿಹಾರ ದೊರಕಿದೆ. ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದ ೧೨೭ ಮಂದಿಗೆ ೫೦ ಸಾವಿರ ರೂ. ಗಳಿಂದ ೧ ಲಕ್ಷ, ೨. ೫೦ ಲಕ್ಷ, ೩. ೫೦ ಲಕ್ಷ ರೂ. ಗಳ ತನಕ ಪರಿಹಾರ ಲಭ್ಯವಾಗಿದೆ. ಬಿದರಹಳ್ಳಿಯಲ್ಲಿ ಸ್ವಲ್ಪ ಭೂಮಿಯನ್ನು ಗುರುತಿಸಿ ನೊಂದವರ ಕುಟುಂಬಗಳಿಗೆ ಆರ್‌ಟಿಸಿ ನೀಡಲಾಗಿದೆ. ನಂತರ ಸರ್ವೆ ಮಾಡಿಸಿ ಗಡಿ ಗುರುತಿಸಿ ನಿವೇಶನ ಹಂಚಿಕೆ ಮಾಡಿಲ್ಲ. ಇತರೆ ಸಂತ್ರಸ್ತರಿಗೆ ಯಾವುದೇ ನಿವೇಶನ ನೀಡುವ ಕಾರ್ಯ ನಡೆದಿಲ್ಲ.
ಮಿಟಮಿನ್ ಕಿಟ್ ಸಕಾಲಕ್ಕೆ ತಲುಪಿಸಿ: ಸುಳ್ವಾಡಿ ಸಂತ್ರಸ್ತರಿಗೆ ಸರ್ಕಾರದಿಂದ ಪ್ರತಿ ತಿಂಗಳು ಮಿಟಮಿನ್ ಕಿಟ್ ನೀಡಲಾಗುತ್ತಿದೆ. ಅದು ಇತ್ತೀಚೆಗೆ ವಿಳಂಬವಾಗಿ ಬರುತ್ತಿದೆ. ಅದನ್ನು ಸಕಾಲಕ್ಕೆ ತಲುಪಿಸಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ. ಸುಳ್ವಾಡಿ ಸಂತ್ರಸ್ತರಿಗೆ ಮಿಟಮಿನ್ ಕಿಟ್ ನೀಡಲಾಗು ತ್ತಿದ್ದು, ಈ ಕಿಟ್‌ನಿಂದ ನಮ್ಮ ಜೀವ ಉಳಿದುಕೊಂಡಿದೆ ಎಂದು ಬಿದರಹಳ್ಳಿ ಸಂತ್ರಸ್ತರು ಕಣ್ಣೀರಿಟ್ಟರು.
ದುರಂತ ಸಂಭವಿಸಿದ್ದು ಹೀಗೆ…
೨೦೧೮ರ ಡಿ. ೧೪ ರಂದು ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಬಳಿಯ ಕಿಚ್‌ಗುತ್ ಮಾರಮ್ಮ ದೇವಾಲಯದಲ್ಲಿ ನೂತನ ಗೋಪುರ ಉದ್ಘಾಟನೆ ಕಾರ್ಯಕ್ರಮ ಇತ್ತು. ಅಲ್ಲಿಗೆ ಬರುವ ಸುತ್ತಲಿನ ಗ್ರಾಮಗಳ ಭಕ್ತರಿಗೆ ವಿತರಿಸಲು ಪ್ರಸಾದವನ್ನು ತಯಾರಿಸಲಾಗಿತ್ತು. ಆದರೆ, ಆ ಪ್ರಸಾದಕ್ಕೆ ಕೀಟನಾಶಕ ಮಿಶ್ರಣ ಮಾಡಿ ವಿತರಿಸಿದ್ದರಿಂದ ಅದನ್ನು ಸೇವಿಸಿದ ನೂರಾರು ಓಂಶಕ್ತಿ ಮಾಲಧಾರಿ ಭಕ್ತರ ಪೈಕಿ ೧೭ ಜನರು ಮೃತಪಟ್ಟಿದ್ದರು. ೧೨೭ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಸುಳ್ವಾಡಿ ದುರಂತದ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕೆಂಬ ಒತ್ತಾಯವು ಆ ಭಾಗದ ಮುಖಂಡರು, ಶಾಸಕರಿಂದಲೂ ಕೇಳಿಬಂದಿದೆ. ಈ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. – ಸಿ. ಟಿ. ಶಿಲ್ಪಾನಾಗ್, ಜಿಲ್ಲಾಧಿಕಾರಿ.
ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…
ಹನೂರು : ನೆಮ್ಮದಿಯಾಗಿ ವಾಸಿಸಲು ಸ್ವಂತ ಸೂರಿಲ್ಲ, ಜೀವನೋಪಯಕ್ಕಾಗಿ ವೃದ್ಯಾಪ್ಯ ವೇತನವಿಲ್ಲ. ವಿಳಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲ. ತುತ್ತು ಅನ್ನಕ್ಕಾಗಿ…
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ 1, 3 ಹಾಗೂ 5 ದಿನಗಳ ಅನ್‌ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಸಂಚಕಾರ ತಂದೊಡ್ಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಆಕ್ರಮ ನಿವೇಶನ ಹಂಚಿಕೆ…
ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ…
ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…