ಸಿದ್ದಾಪುರ: ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಸಿದ್ದಾಪುರ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ೧ ಕಿಲೋಮೀಟರ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಿದ್ದರಿಂದ ಸಾರ್ವಜನಿಕರು ಶುಕ್ರವಾರ ಕೆಸರಿನಲ್ಲಿ ಪರಿತಪಿಸಿದ ಘಟನೆ ನಡೆದಿದೆ.
ಇಲ್ಲಿನ ೧ ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಲು ೧೧ ತಿಂಗಳುಗಳಿಂದ ಕಾಮಗಾರಿ ನಡೆಸಲಾಗುತ್ತಿದೆ. ಕಳೆದೆರಡು ದಿನಗಳಿಂದ ಮತ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಸುರಿದ ಮಳೆಯಿಂದ ರಸ್ತೆ ಉದ್ದಕ್ಕೂ ಕೆಸರುಮಯವಾಗಿತ್ತು. ಇದರಿಂದ ಸಿದ್ದಾಪುರ ಮಾರ್ಗವಾಗಿ ಸಂಚರಿಸುವ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತು ಇಡೀ ಗ್ರಾಮದ ರಸ್ತೆಗಳು ಟ್ರಾಫಿಕ್ ಜಾಮ್‌ನಿಂದ ಕೂಡಿದ್ದವು.
ಈ ನಡುವೆ ಕೆಸರಿನಲ್ಲಿ ಸಿಲುಕಿದ ನಾಲ್ಕು ಬಸ್‌ಗಳು ಸಂಚರಿಸಲು ಸಾಧ್ಯವಾಗದೆ ಸಿಲುಕಿಕೊಂಡವು. ನಂತರ ಜೆಸಿಬಿ, ಕ್ರೇನ್‌ಗಳನ್ನು ತರಿಸಿ ಬಸ್‌ಗಳಿಗೆ ಹಗ್ಗ ಕಟ್ಟಿ ಎಳೆದು ಸಂಚರಿಸಲು ಅನುವು ಮಾಡಿಕೊಡಲಾಯಿತು. ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಕೆಸರು ತುಂಬಿದ ರಸ್ತೆಯಲ್ಲಿ ಸಿಲುಕಿ ಧರಿಸಿದ ಬಟ್ಟೆ ಹಾಗೂ ಶೂ ಸಂಪೂರ್ಣ ಕೆಸರುಮಯವಾದ ಚಿತ್ರಣ ಕಂಡುಬಂದಿತು. ಈ ನಡುವೆ ಪೋಷಕರು ಮಕ್ಕಳನ್ನು ಬೈಕಿನಲ್ಲಿ ಕರತರುವ ವೇಳೆ ಜಾರಿ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆಯಿತು. ಘಟನೆಯಲ್ಲಿ ಮಹಿಳೆಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡು ಸಿದ್ದಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಾಲಾ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ಟ್ರಾಫಿಕ್ ಜಾಮಿನಲ್ಲಿ ಸಿಲುಕಿದ ಪರಿಣಾಮ ರಸ್ತೆಯಲ್ಲಿ ನಡೆದು ಶಾಲೆಗೆ ತೆರಳಿದರು.
ಕೆಸರಿನಲ್ಲಿ ನಡೆದು ಬಂದ ವಿದ್ಯಾರ್ಥಿಗಳಿಗೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಕಾಲುಗಳನ್ನು ಸ್ವಚ್ಛಗೊಳಿಸಿ ತರಗತಿಗೆ ಬರಮಾಡಿಕೊಂಡರು. ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ವಾಹನಗಳಲ್ಲಿ ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಮನೆಗೆ ಹಿಂತಿರುಗಿದರು. ಟ್ರಾಫಿಕ್ ಜಾಮಿನಲ್ಲಿ ಸಿಲುಕಿದ್ದ ಆಂಬ್ಯುಲೆನ್ಸ್ ವಾಹನವೊಂದು ಕೆಲಕಾಲ ಹರಸಾಹಸಪಟ್ಟು ನಂತರ ಸಂಚರಿಸಿತು.
ಕಾಮಗಾರಿ ವಿಳಂಬದ ವಿರುದ್ಧ ಸ್ಥಳೀಯರು ಆಕ್ರೋಶಗೊಂಡು ಕ್ಷೇತ್ರದ ಶಾಸಕ ಪೊನ್ನಣ್ಣ ಅವರ ಗಮನಕ್ಕೂ ತಂದಿದ್ದರು. ಸಿದ್ದಾಪುರಕ್ಕೆ ಬಂದ ಶಾಸಕರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಖಡಕ್ ಸೂಚನೆ ನೀಡಿದ್ದರು. ನಂತರ ದಿನಗಳಲ್ಲಿ ಶುರುವಾದ ಮಳೆಯಿಂದ ಕಾಮಗಾರಿಯನ್ನು ಮುಂದುವರಿಸದೆ ಸ್ಥಗಿತಗೊಳಿಸ ಲಾಗಿತ್ತು. ಇದೀಗ ಮತ್ತೆ ಕಾಮಗಾರಿ ಪ್ರಾರಂಭಿಸಿರುವುದರಿಂದ ವಾಹನ ಸವಾರರು, ಸ್ಥಳೀಯರು ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ವಾಹನ ಸಂಚಾರ ಸುಗಮಗೊಂಡ ನಂತರ ಕೆಸರು ರಸ್ತೆಗೆ ವೆಟ್ ಮಿಕ್ಸ್ ಜಲ್ಲಿಯನ್ನು ಹಾಕಿ ಸಮತಟ್ಟು ಮಾಡಿದರು. ಸಿದ್ದಾಪುರ ಪೊಲೀಸರು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಹರಸಹಾಸ ಪಡುವಂತಾಯಿತು.
” ಕಳೆದ ನವೆಂಬರ್‌ನಿಂದ ಈ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು,ಇದುವರೆಗೆ ಪೂರ್ಣಗೊಂಡಿಲ್ಲ.ಇದರಿಂದ ನಿತ್ಯ ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆಗೆ ಮಣ್ಣು ತಂದು ಹಾಕಿರುವುದರಿಂದ ಇಲ್ಲಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು.”
-ರೀಶಾ ಸುರೇಂದ್ರನ್, ಸ್ಥಳೀಯ ನಿವಾಸಿ
” ಸಿದ್ದಾಪುರ ಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ತಂತ್ರಜ್ಞಾನ ಯುಗದಲ್ಲಿ ಒಂದು ಕಿ.ಮೀ. ರಸ್ತೆಯನ್ನು ಒಂದು ದಿನದಲ್ಲೇ ಡಾಂಬರೀಕರಣ ಮಾಡಬಹುದು. ಆದರೆ, ಒಂದು ವರ್ಷವಾಗುತ್ತಾ ಬಂದರೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಅಭಿವೃದ್ಧಿ ಏನು ಎಂಬುದನ್ನು ಈಗ ಎಲ್ಲರೂ ನೋಡುವಂತಾಗಿದೆ.”
-ರೂಪೇಶ್, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ, ಸಿದ್ದಾಪುರ
ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…
ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…
ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…
ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…
ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…
ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…