ಕೆ.ಬಿ.ಶಂಶುದ್ದೀನ್
ಹೆಚ್ಚುತ್ತಿರುವ ಅಪಘಾತಗಳು- ಪುರಸಭೆ ನಿರ್ಲಕ್ಷ್ಯ, ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಕುಶಾಲನಗರ: ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ದನಗಳು ಎಲ್ಲೆಂದರಲ್ಲಿ ಬೀಡುಬಿಡುತ್ತಿದ್ದು, ವಾಹನ ಚಾಲಕರು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಆ ಬಗ್ಗೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಾಣಿಜ್ಯ ಕೇಂದ್ರವೆನಿಸಿದ ಕುಶಾಲನಗರ ಅತೀ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ವಾಹನ ದಟ್ಟಣೆಯೂ ಹೆಚ್ಚಿದೆ. ಕುಶಾಲನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿರುತ್ತವೆ. ಇದರ ನಡುವೆ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳು ಬೀಡುಬಿಟ್ಟು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿವೆ.
ಮೂಕ ಪ್ರಾಣಿಗಳನ್ನು ಅವುಗಳ ಮಾಲೀಕರು ಎಲ್ಲೆಂದರಲ್ಲಿ ಬಿಡುವುದರಿಂದ ಅವುಗಳು ಪಟ್ಟಣದಾದ್ಯಂತ ಸಂಚರಿಸುತ್ತವೆ. ಅಲ್ಲದೆ ಬಹುತೇಕ ಸಮಯವನ್ನು ರಸ್ತೆಗಳಲ್ಲಿ ನಿಂತೋ, ಮಲಗಿಯೋ ಕಳೆಯುತ್ತವೆ. ಇದರಿಂದ ವಾಹನ ಚಾಲಕರು ವಾಹನ ಚಲಾಯಿಸುವುದೇ ಕಷ್ಟವಾಗಿದೆ. ಪಾದಚಾರಿಗಳಿಗೂ ಕಿರಿಕಿರಿ ಉಂಟು ಮಾಡುತ್ತಿವೆ. ಎಲ್ಲಿ ತಿವಿದು ಬಿಡುತ್ತವೆಯೋ ಎಂಬ ಆತಂಕದಿಂದ ಪಾದಚಾರಿಗಳು ಸಂಚರಿಸುವಂತಾಗಿದೆ. ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಕುಶಾಲನಗರ ಪುರಸಭೆ ಕೂಡ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ದನಗಳನ್ನು ಲಂಗುಲಗಾಮಿಲ್ಲದೇ ಹೊರಗೆ ಬಿಡುವ ಅವುಗಳ ಮಾಲೀಕರ ವಿರುದ್ಧ ಪುರಸಭೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕುಶಾಲನಗರದ ಕಾರ್ಯಪ್ಪ ಸರ್ಕಲ, ರಥಬೀದಿ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಬೈಚನಹಳ್ಳಿ, ಮಾದಾ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ದನಗಳ ಹಾವಳಿ ಹೆಚ್ಚಾಗಿದೆ. ಮುಖ್ಯರಸ್ತೆಗಳಲ್ಲಿ ವಾಹನಗಳಿಗೆ ಅಡ್ಡಲಾಗಿ ಬರುವ ದನಗಳಿಂದ ವಾಹನ ಚಾಲಕರು ಪರದಾಡುವಂತಾಗಿದೆ. ಒಂದೆಡೆ ಚಾಲಕರಿಗೆ ವಾಹನ ಚಲಾಯಿಸಲು ಸಮಸ್ಯೆ ಆಗುತ್ತಿದ್ದರೆ, ಮತ್ತೊಂದೆಡೆ ಅಪಘಾತ ಸಂಭವಿಸಿದಲ್ಲಿ ಮೂಕ ಪ್ರಾಣಿಗಳು ಹಾಗೂ ವಾಹನ ಸವಾರರ ಪ್ರಾಣಕ್ಕೆ ಅಪಾಯ ಸಂಭವಿಸುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಈ ಬಗ್ಗೆ ಪುರಸಭೆ ಕ್ರಮಕ್ಕೆ ಮುಂದಾಗಬೇಕು ಎಂದು ವಾಹನ ಚಾಲಕರು ಆಗ್ರಹಿಸಿದ್ದಾರೆ.
ಅಪಘಾತ ಹೆಚ್ಚಳ: ಕುಶಾಲನಗರದ ಮುಖ್ಯ ರಸ್ತೆಗಳಲ್ಲಿ ದನಗಳ ಹಾವಳಿಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ದನಗಳಿಂದ ದೊಡ್ಡ ವಾಹನಗಳ ಸವಾರರು ಹರ ಸಾಹಸ ಪಡಬೇಕಿದೆ. ದ್ವಿಚಕ್ರ ವಾಹನ ಸವಾರರು ಬಹಳಷ್ಟು ಬಾರಿ ಬಿದ್ದು ಕೈ-ಕಾಲಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದ ನಿದರ್ಶನಗಳೂ ಇವೆ. ಪಾದಚಾರಿಗಳಿಗೂ ಸಮಸ್ಯೆ ಆಗುತ್ತಿದೆ. ಒಂದೇ ಸಮನೆ ರಸ್ತೆಗೆ ನುಗ್ಗುವ ದನಗಳು ಪಾದಚಾರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಒಮ್ಮೊಮ್ಮೆ ಜಗಳ ಶುರುಮಾಡಿಕೊಂಡರೆ ಇಡೀ ಪ್ರದೇಶದಲ್ಲಿ ಭಯ ಆವರಿಸುವಂತಾಗುತ್ತದೆ. ಜನರು ಭಯದಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಪುರಸಭೆ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಬೇಕು. ಬಿಡಾಡಿ ದನಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು. ಕೆಲವರ ಬೇಜವಾಬ್ದಾರಿ ತನ ಹಾಗೂ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತಿವೆ. ಯಾರ ತಪ್ಪಿಗೆ ಅಮಾಯಕರು, ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವುದನ್ನು ತಡೆಗಟ್ಟಬೇಕಾಗಿದೆ. ಕುಶಾಲನಗರ ಪುರಸಭೆ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಕುಶಾಲ ನಗರದ ಪ್ರeವಂತ ನಾಗರಿಕರು ಒತ್ತಾಯಿಸಿದ್ದಾರೆ.
” ರಸ್ತೆಗಳಲ್ಲಿ ಕಂಡಕಂಡಲ್ಲಿ ದನಗಳು ಬೀಡುಬಿಡುತ್ತಿವೆ. ದನಗಳನ್ನು ರಸ್ತೆಯಲ್ಲಿ ಬಿಡುವ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮಾಲೀಕರ ಬೇಜವಾಬ್ದಾರಿ ನಡವಳಿಕೆಯಿಂದ ಅಮಾಯಕರ ಪ್ರಾಣಕ್ಕೆ ತೊಂದರೆಯಾಗಿದ್ದು, ಕುಶಾಲನಗರ ಪುರಸಭೆ ಕ್ರಮಕ್ಕೆ ಮುಂದಾಗಬೇಕು.”
ಎಚ್.ಪಿ.ಸೈದಲವಿ, ಸಂಘಟನಾ ಕಾರ್ಯದರ್ಶಿ, ತಾಲ್ಲೂಕು ಅಲ್ಪ ಸಂಖ್ಯಾತರ ಘಟಕ
” ರಸ್ತೆಯಲ್ಲಿ ದನಗಳು ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಬೈಕ್ ಚಾಲನೆಗೆ ತೊಂದರೆಯಾಗುತ್ತಿದೆ. ಅಪಘಾತ ಸಂಭವಿಸಿ ಪ್ರಾಣಕ್ಕೆ ತೊಂದರೆಯಾದರೆ ಯಾರು ಹೊಣೆ? ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡದನಗಳನ್ನು ರಸ್ತೆಗೆ ಬಿಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.”
ನಿಜ್ಹಾಮ್, ಬೈಕ್ ಸವಾರ
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…