ನಂಜನಗೂಡು ತಾಲ್ಲೂಕಿನ ಪ್ರವಾಹ ಪೀಡಿತ ಹಳ್ಳಿಗಳ ಗಾಥೆ
• ಶಿವಪ್ರಸಾದ್ ಮುಳ್ಳೂರು
• ಶ್ರೀಧರ್ ಆರ್. ಭಟ್
ಮೈಸೂರು/ ನಂಜನಗೂಡು: ಜಿಲ್ಲೆಯ ಕಬಿನಿ ಅಣೆಕಟ್ಟೆಯಿಂದ ಭೋರ್ಗರೆದು ಹೊರಬರುತ್ತಿರುವ ಕಪಿಲಾ ನದಿಯ ರುದ್ರರಮಣೀಯತೆ ನೋಡುಗರ ಮನಸ್ಸುಗಳಿಗೆ ಉಲ್ಲಾಸ ತುಂಬಿದರೆ, ಮತ್ತೊಂದೆಡೆ ಈ ನದಿಯ ಒಡಲಿನಲ್ಲಿ ಉಕ್ಕಿ ಹರಿಯುವ ಜಲರಾಶಿಯು ಹಲವು ಅಮಾಯಕರ ಬದುಕಿಗೆ ಬರೆ ಎಳೆದಿದೆ. ಇದು ನದಿಯಲ್ಲಿ ಪ್ರವಾಹ ಬಂದಾಗಲೆಲ್ಲ ಸಹಜ ಎಂಬಂತಾಗಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಊರನ್ನೇ ಶಾಶ್ವತವಾಗಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿಕೊಟ್ಟರೆ ಸಾಕು ಎಂಬಂತಹ ದುಸ್ಥಿತಿಯ ಚಿತ್ರಣಗಳು ತೆರೆದುಕೊಳ್ಳುತ್ತವೆ.
ಕೆಲ ದಿನಗಳ ಹಿಂದೆ ನೆರೆ ಬಂದಿದ್ದರಿಂದ ಮನೆ ಖಾಲಿ ಮಾಡಿ ಬೇರೆಡೆ ವಾಸ ಇದ್ದೇವೆ ಎಂದ ಹೆಣ್ಣುಮಗಳ ಕಂಗಳಲ್ಲಿ ಕಂಬನಿ ಪಸೆಯಾಡಿತ್ತು… ಮನೆಯಾಗಲಿ, ನಿವೇಶನವನ್ನಾಗಲಿ ಸುರಕ್ಷಿತ ಪ್ರದೇಶದಲ್ಲಿ ಒದಗಿಸಿದರೆ, ಊರು ಖಾಲಿ ಮಾಡುವುದು ದಿಟ ಎಂಬುದು ಕಪಿಲಾ ನದಿ ಮುನಿಸಿಕೊಂಡಾಗಲೆಲ್ಲಾ ಪ್ರವಾಹ ಸಂಕಟದಿಂದ ನರಳುವ ಗ್ರಾಮದ ಮುಖಂಡರೊಬ್ಬರ ಖಚಿತ ನುಡಿ… ಇವರ ಮನದ ನೋವುಗಳಿಗೆ ಮುಲಾಮು ಹಚ್ಚ ಬಲ್ಲವರ ಕಿವಿಗಳಿಗೆ ಇದು ತಾಕಬೇಕಿದೆ.
ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಎಡಕ್ಕೆ ತಿರುಗಿದರೆ ಹಳೆಯ ಸೇತುವೆಯೊಂದು ಎದುರಾಗುತ್ತದೆ. ಇದು ಚಾಮರಾಜನಗರ ಗುಂಡ್ಲುಪೇಟೆಯಿಂದ ಹರಿದು ಬರುವ ಗುಂಡ್ಲು ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ಸುಮಾರು 3 ದಶಕಗಳ ಹಿಂದೆ ನಂಜನಗೂಡು ಮಾರ್ಗವಾಗಿ ಚಾಮರಾಜನಗರ, ತಿ.ನರಸೀಪುರಕ್ಕೆ ಇದೇ ಸೇತುವೆ ಮೇಲೆ ಬಸ್ ಗಳಿಂದ ಹಿಡಿದು ಎಲ್ಲ ಬಗೆಯ ವಾಹನಗಳೂ ಸಂಚರಿಸುತ್ತಿದ್ದವು. ವಾಪಸ್ಸಾಗುವವರು ಇದೇ ಮಾರ್ಗದಲ್ಲಿ ಬರಬೇಕಿತ್ತು. ಈಗ ಬೈಪಾಸ್ ರಸ್ತೆ ನಿರ್ಮಾಣವಾಗಿರುವುದರಿಂದ ಸೇತುವೆಯ ಮೇಲೆ ವಾಹನಗಳ ಸಂಚಾರದ ಒತ್ತಡ ಕಡಿಮೆಯಾಗಿದೆ. ಈ ಸೇತುವೆಯ ಕೆಳಭಾಗದಲ್ಲಿ ಅಂದರೆ ಗುಂಡ್ಲು ನದಿ ಹರಿವಿಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿ ನಾಲ್ಕು ಮನೆಗಳಿವೆ. ಇವು ನಂಜನಗೂಡಿನ ಹಳ್ಳದಕೇರಿ ಬಡಾವಣೆ ವ್ಯಾಪ್ತಿಗೆ ಸೇರುತ್ತವೆ. ಕಪಿಲಾ ನದಿಯಲ್ಲಿ ನೀರಿನ ಹರಿವು ಅಬ್ಬರಿಸಿದರೆ, ಈ ಮನೆಗಳ ಕುಟುಂಬಗಳ ಎದೆಯೊಳಗೆ ಢವ ಢವ ಶುರುವಾಗುತ್ತದೆ. ಸಂತೈಸುವಿಕೆಗೆ ಮಾನವೀಯ ಮನಸ್ಸುಗಳಿಗಾಗಿ ಹಾತೊರೆಯುವಂತಹ ಸ್ಥಿತಿ ಉದ್ಭವಿಸುತ್ತದೆ.
ಕೆಲವೇ ದಿನಗಳ ಹಿಂದೆ ಕಬಿನಿ ಅಣೆಕಟ್ಟೆಯಿಂದ ನೀರಿನ ಹೊರಹರಿವು ನಿರೀಕ್ಷೆ ಮೀರಿ ಹೆಚ್ಚಳವಾಗಿತ್ತು. ಕಪಿಲಾ ನದಿಯ ನೀರು ಹಿಂದಕ್ಕೆ ಒದ್ದುಕೊಂಡು ಬಂದಿದ್ದರಿಂದ ಗುಂಡ್ಲು ನದಿ ಸೇತುವೆ ಕೆಳಭಾಗದ ನಾಲ್ಕೂ ಮನೆಗಳು ಜಲಾವೃತವಾಗಿದ್ದವು. ತಕ್ಷಣ ಸ್ಥಳೀಯ ಅಧಿಕಾರಿಗಳು ಬಂದರು, ಕಾಳಜಿ ಕೇಂದ್ರ ತೆರೆದಿದ್ದೇವೆ ಬನ್ನಿ ಎಂದರು. ಅಲ್ಲಿಗೆ ಹೋದರೆ ಯಾರೂ ಇರಲಿಲ್ಲ. ಇನ್ನು ಪರಿಹಾರ ಅಂತ ಏನೂ ಸಿಕ್ಕಿಲ್ಲ ಎಂದವರು ನೆರೆ ಸಂತ್ರಸ್ತರಾದ ಮಹದೇವಮ್ಮ ನಾಗೇಶ್ ಅವರು.
ನಾವು ವಾಸ ಇರುವುದು ನನ್ನ ಪತಿ ನಾಗೇಶ್ ಅವರ ತಂದೆ ಮನೆ ನಮ್ಮ ಮದುವೆ ನಂತರ ನನ್ನ ತವರು ಮನೆಯಲ್ಲೇ ಇದ್ದೆವು. ಕಳೆದ 10 ವರ್ಷಗಳಿಂದ ಇಲ್ಲಿದ್ದೇವೆ. ನಮ್ಮ ಮೂವರೂ ಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ. ಆದರೆ, ಮನೆಯೇ ಸರಿಯಾಗಿಲ್ಲ. ಸದ್ಯಕ್ಕೆ ಹೃದಯವಂತರೊಬ್ಬರು, ಅವರ ಮನೆಯಲ್ಲಿ ಇರುವುದಕ್ಕೆ ಅವಕಾಶ ನೀಡಿದ್ದಾರೆ ಎಂದು ಅವರು ಕಣ್ಣೀರಾದರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಪಿಲಾ ನದಿಯಲ್ಲಿ ಉಂಟಾಗುವ ಪ್ರವಾಹ ಉಕ್ಕಿ ಹರಿದು, ಆ ಕುಟುಂಬಗಳನ್ನು ಸದಾ ಆತಂಕದ ತೂಗುಯ್ಯಾಲೆಯಲ್ಲಿಯೇ ಇರಿಸಿದೆ.
ಬೊಕ್ಕಹಳ್ಳಿ ಸ್ಥಳಾಂತರಕ್ಕೆ ಈಗಾಗಲೇ 4 ಎಕರೆ ಜಾಗವನ್ನು ಗುರುತಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಕಾರ್ಯ ನಡೆದಿದೆ. ಅಲ್ಲಿ ಎಷ್ಟು ನಿವೇಶನಗಳನ್ನು ರಚಿಸಬಹುದು ಎಂಬುದು ಸರ್ವೇ ಬಳಿಕವಷ್ಟೇ ನಿರ್ಧರಿಸಬೇಕಾಗಿದೆ.
-ಶಿವಕುಮಾರ್, ತಹಸಿಲ್ದಾರ್, ನಂಜನಗೂಡು.
‘ಹಕ್ಕುಪತ್ರ ಇಲ್ಲದೆ ಹೋಗುವುದಾದರೂ ಎಲ್ಲಿಗೆ?’
ಸ್ಥಳೀಯ ಅಧಿಕಾರಿಗಳು, ಬೇರೆ ಕಡೆ ನಿವೇಶನ ಸಿದ್ಧವಾಗಿವೆ. ಅಲ್ಲಿಗೆ ಹೋಗಿ ಎನ್ನುತ್ತಾರೆ. ಆದರೆ, ಹಕ್ಕುಪತ್ರ ಇಲ್ಲದೆ, ನಾವು ಹೋಗುವುದಾದರೂ ಎಲ್ಲಿಗೆ? ನನ್ನ ಪತಿ ಬಾಳೆ ಸಾಗಿಸುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಾರೆ. ಅವರ ದುಡಿಮೆಯೇ ನಮ್ಮ ಕುಟುಂಬ ನಿರ್ವಹಣೆಗೆ ಆಧಾರ. ಇದರ ನಡುವೆ ಆಗಾಗ ಈ ಪ್ರವಾಹದ ಭಯ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.
-ಮಹದೇವಮ್ಮ ನಾಗೇಶ್, ಹಳ್ಳದಕೇರಿ, ನಂಜನಗೂಡು
ಮೈಸೂರು: ರಾಜ್ಯದಲ್ಲಿ ಮೈಸೂರು ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇಂದು ತನಿಖೆಯ ಭಾಗವಾಗಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು…
ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನೇ ಓದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿಯಿದೆ ಎಂದು ಲೋಕಸಭೆ ವಿರೋಧ ಪಕ್ಷದ…
ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಉದ್ಬೂರು ಹಾಡಿ ಹಾಗೂ ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಅವರಿಂದು ಭೇಟಿ ನೀಡಿ, ಆದಿವಾಸಿಗಳ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ…
ಬೆಂಗಳೂರು: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವೋಲ್ವೋ ಬಸ್…
ಮುಂಬೈ: ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ…