Andolana originals

ದೆಹಲಿ ಕಣ್ಣೋಟ: ಕೇಂದ್ರದ ವಿರುದ್ಧ ದಕ್ಷಿಣ ರಾಜ್ಯಗಳ ಜನಸಂಖ್ಯೆ ಹೆಚ್ಚಳದ ಅಸ್ತ್ರ

ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಭಾರತ ಈಗ ನಂ. ೧ ಸ್ಥಾನದಲ್ಲಿದೆ. ಶನಿವಾರದಂದು ದೇಶದ ಜನಸಂಖ್ಯೆಯು ವಿಶ್ವಸಂಸ್ಥೆಯ ಜನಸಂಖ್ಯೆಯ ಮೀಟರ್ ಪ್ರಕಾರ ೧,೪೫೫,೦೨೬,೮೧೫. ಕೆಲವು ತಿಂಗಳವರೆಗೂ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದ ಚೀನಾದಲ್ಲಿ ಈಗ ೧,೪೨೫,೧೭೮,೭೮೨ ಜನ ಸಂಖ್ಯೆ ಇದೆ. ೨೦೨೩ರಿಂದ ಚೀನಾದಲ್ಲಿ ಜನಸಂಖ್ಯೆಯ ಪ್ರಮಾಣ ಕುಸಿಯುತ್ತಿದೆ.

ಚೀನಾದಲ್ಲಿ ಹೆಚ್ಚು ಮಕ್ಕಳನ್ನು ಪಡೆದರೆ ಅದು ಶಿಕ್ಷಾರ್ಹವಾಗಿತ್ತು. ಆದರೆ ಭಾರತದ ಜನಸಂಖ್ಯೆ ನಾಗಾಲೋಟದಲ್ಲಿ ಓಡುತ್ತಿದೆ. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಜನಸಂಖ್ಯೆ ಹೆಚ್ಚಳದ ಬಗ್ಗೆ ಭಾರತದಲ್ಲಿ ಕಳವಳ ವ್ಯಕ್ತವಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ‘ನಾವಿಬ್ಬರು ನಮಗಿಬ್ಬರು ಮಕ್ಕಳು’ ಎನ್ನುವ ಘೋಷಣೆ ಜಾರಿಯಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ಜನಸಂಖ್ಯೆಯ ನಿಯಂತ್ರಣಕ್ಕೆ ಗಂಭೀರ ಮತ್ತು ಪರಿಣಾಮಕಾರಿ ಕ್ರಮ ಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದರೂ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ಹೆಚ್ಚಳದಿಂದ ಆಹಾರ ಪೂರೈಕೆ, ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಉದ್ಯೋಗ ಒದಗಿಸುವುದು ಕಷ್ಟ ಎನ್ನುವ ಕಾರಣಕ್ಕೆ ಜನಸಂಖ್ಯೆಯ ಹೆಚ್ಚಳವನ್ನು ನಿಯಂತ್ರಣ ಮಾಡಿಕೊಂಡು ಬಂದವು. ಆದರೆ ಇಂತಹ ಕ್ರಮ ಉತ್ತರ ಭಾರತದ ರಾಜ್ಯಗಳಲ್ಲಿ ಕಂಡು ಬರಲಿಲ್ಲ. ಅಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಬಡತನ, ಅನಕ್ಷರತೆ ಮತ್ತು ಆರೋಗ್ಯ ಸಮಸ್ಯೆಗಳೂ ಅಧಿಕವಾಗುತ್ತಿವೆ.

ಈ ‘ಬಿಮಾರು‘ ಅಂದರೆ ರೋಗಗ್ರಸ್ತ (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ) ರಾಜ್ಯಗಳಲ್ಲಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ಮತ್ತು ಬಜೆಟ್‌ನಲ್ಲಿ ಅಽಕ ಹಣವನ್ನು ನೀಡುತ್ತಿರುವುದು ಸಹಜವಾಗಿಯೇ ಅಭಿವೃದ್ಧಿ ಹೊಂದುತ್ತಿರುವ ದಕ್ಷಿಣ ರಾಜ್ಯಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ನರಾ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ತಮ್ಮ ರಾಜ್ಯಗಳ ಜನರಿಗೆ ಹೆಚ್ಚು ಮಕ್ಕಳನ್ನು ಹೊಂದಲು ಕರೆ ನೀಡಿರುವುದು ಮೇಲ್ನೋಟಕ್ಕೆ ಅಚ್ಚರಿ ಉಂಟುಮಾಡಿದೆ. ಪರಿಸರದ ಮೇಲೆ ಹತ್ತಾರು ಕಡೆಯಿಂದ ಮಾನವನ ದಾಳಿ ನಡೆಯುತ್ತಿದೆ. ನಮಗಿರುವ ಒಂದೇ ಭೂಮಿ ಎಲ್ಲರಿಗೂ ಹೊಟ್ಟೆ ತುಂಬಿಸುವ ಶಕ್ತಿಯನ್ನು ಇನ್ನೆಷ್ಟು ವರ್ಷಗಳು ನೀಡುತ್ತದೆಯೋ ತಿಳಿಯದು. ಜನಸಂಖ್ಯಾ ಸ್ಛೋಟದಿಂದ ಆಗಬಹುದಾದ ದುಷ್ಪರಿಣಾಮಗಳ ಬಗೆಗೆ ಚಂದ್ರಬಾಬು ನಾಯ್ಡುಗಾಗಲಿ ಅಥವಾ ಸ್ಟಾಲಿನ್‌ಗಾಗಲಿ ಅರಿವು ಇಲ್ಲ ಎಂದಲ್ಲ.

ಕೇಂದ್ರ ಬಜೆಟ್ ಮತ್ತು ಜಿಎಸ್‌ಟಿ ಹಂಚಿಕೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಈ ಇಬ್ಬರೂ ಮುಖ್ಯಮಂತ್ರಿಗಳು ಜನಸಂಖ್ಯೆ ಹೆಚ್ಚಳ ಕರೆಯ ಅಸ್ತ್ರವನ್ನು ಪ್ರಯೋಗಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೇಂದ್ರದ ಕುಟುಂಬ ಕಲ್ಯಾಣ ಯೋಜನೆಯಂತೆ ಈಗಿರುವ ಇಬ್ಬರು ಮಕ್ಕಳ ನೀತಿಯನ್ನು ಬದಿಗೊತ್ತಿ ಪ್ರತಿ ಕುಟುಂಬವೂ ಹೆಚ್ಚು ಮಕ್ಕಳನ್ನು ಹೊಂದ ಬಹುದು ಎನ್ನುವುದಕ್ಕೆ ಪೂರಕವಾಗುವಂತೆ ರಾಜ್ಯಮಟ್ಟದಲ್ಲಿ ಕಾಯ್ದೆಯೊಂದನ್ನು ರೂಪಿಸುವ ಅವಶ್ಯಕತೆ ಬಗೆಗೆ ಈ ಇಬ್ಬರೂ ಮುಖ್ಯಮಂತ್ರಿಗಳು ಬಹಿರಂಗವಾಗಿಯೇ ನೀಡಿರುವ ಹೇಳಿಕೆಯು ದೇಶದಲ್ಲಿ ಒಂದು ರೀತಿಯ ಹೊಸ ಆಯೋಚನೆಯನ್ನು ಉಂಟು ಮಾಡಿದೆ. ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಗಾಗ್ಗೆ ಕೆಲವು ಹಿಂದೂ ಸ್ವಾಮೀಜಿಗಳು ಹೆಚ್ಚು ಮಕ್ಕಳನ್ನು ಪಡೆಯಿರಿ ಮತ್ತು ಆ ಮಕ್ಕಳನ್ನು ಧರ್ಮ ರಕ್ಷಣೆಗಾಗಿ ನೀಡಿ ಎನ್ನುವ ಅವೈಜ್ಞಾನಿಕ ಮತ್ತು ಧಾರ್ಮಿಕ ಕಣ್ಣಿನಿಂದ ಹಿಂದೂ ಮಹಿಳೆಯರಿಗೆ ಕರೆಕೊಟ್ಟಿರುವ ಉದಾಹರಣೆಗಳೂ ನಮ್ಮ ಮುಂದಿವೆ.

ವಾಸ್ತವವಾಗಿ ನಮ್ಮಲ್ಲಿರುವ ಅರಿವಿನಿಂದ ಎರಡು ಮಕ್ಕಳಷ್ಟೇ ಸಾಕು ಎನ್ನುತ್ತಿದ್ದ ಕುಟುಂಬಗಳಲ್ಲಿನ ಈಗಿನ ಜೀವನ ಶೈಲಿಯಿಂದ ಬಹುತೇಕ ಹೊಸ ಪೀಳಿಗೆಯ ದಂಪತಿಗಳಲ್ಲಿ ಸಂತಾನ ಶಕ್ತಿಯೇ (ಫಲವಂತಿಕೆ) ಕಡಿಮೆ ಆಗುತ್ತಿರುವುದು ಮತ್ತೊಂದು ಕಡೆ ಆತಂಕ ಉಂಟುಮಾಡಿದೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ರಾಜ್ಯಗಳಲ್ಲಿಯೇ ಕಾಣುತ್ತಿರುವ ಬೆಳವಣಿಗೆ ಎನ್ನಲಾಗಿದೆ. ಹಾಗಾಗಿಯೇ ಇಂದು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಐವಿಎಫ್ ಕೇಂದ್ರಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಯುವ ಪೀಳಿಗೆಯ ಬಹುತೇಕ ದಂಪತಿಗಳು ಒಂದು ಮಗುವಾದರೆ ಸಾಕು ಎನ್ನುವ ಮಟ್ಟಿಗೆ ತಲುಪಿದ್ದಾರೆ. ಮತ್ತೆ ಕೆಲವರು ಮಕ್ಕಳೇ ಬೇಡ ಎನ್ನುವ ನಿರ್ಧಾರಕ್ಕೂ ಬಂದಿರುವವರಿದ್ದಾರೆ. ಸಂತಾನಶಕ್ತಿ ಕಡಿಮೆ ಆಗಿರುವ ದೇಶಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಹೆಚ್ಚು ಮಕ್ಕಳನ್ನು ಪಡೆಯುವುದಕ್ಕೆ ಪ್ರೋತ್ಸಾಹ ಕ್ರಮಗಳನ್ನು ಸರ್ಕಾರಗಳೇ ಕೈಗೊಂಡಿವೆ. ಮತ್ತೊಂದು ಕಡೆ ಆಫ್ರಿಕಾ ಮತ್ತು ಕೆಲವು ಇಸ್ಲಾಂ ರಾಷ್ಟ್ರಗಳಲ್ಲಿ ಜನಸಂಖ್ಯಾ ಸೋಟವಾಗುವಂತಹ ಬೆಳವಣಿಗೆ ಕಾಣುತ್ತಿದೆ. ಜನಸಂಖ್ಯೆ ಹೆಚ್ಚಳ ಮತ್ತು ನಿಯಂತ್ರಣಕ್ಕೂ ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಗೂ ನೇರ ಸಂಬಂಧವಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯ ಹಿಂದೆ ಬೇರೆಯೇ ಕಾರಣಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಇಬ್ಬರೂ ನಾಯಕರು ತಮ್ಮದೇ ಆದ ಪಕ್ಷಗಳನ್ನು ಹೊಂದಿದ್ದು, ಆ ಪಕ್ಷಗಳು ಪಡೆದಿರುವ ಜನಬೆಂಬಲದಿಂದ ಇವರು ಇಂತಹ ಹೇಳಿಕೆ ನೀಡಲು ಮತ್ತು ನಿರ್ಧಾರ ಕೈಗೊಳ್ಳಲು ಸ್ವತಂತ್ರರಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಆಡಳಿತವಿರುವ ಕರ್ನಾಟಕ, ತೆಲಂಗಾಣ ಮತ್ತು ಕೇರಳದ ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಲು ಸ್ವತಂತ್ರರಾಗಿಲ್ಲ.

ಆ ದೇಶದ ಸಾಧಕ-ಬಾಧಕಗಳನ್ನು ನಿರ್ಣಯಿಸುವ ಜನಸಂಖ್ಯೆಯಂತಹ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳು ದೇಶವನ್ನಾಳುತ್ತಿರುವ ಪಕ್ಷದ ನಿಲುವಿನಂತೆ ನಡೆಯಬೇಕಾಗುತ್ತದೆ. ಈಗ ಚಂದ್ರಬಾಬು ನಾಯ್ಡು ಮತ್ತು ಸ್ಟಾಲಿನ್ ಅವರ ಹೇಳಿಕೆಯನ್ನು ನೋಡಿದರೆ ಅವರ ಆತಂಕ ಮತ್ತು ಕಳಕಳಿ ಇರುವುದು ಜನಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಬಜೆಟ್ ಹಂಚಿಕೆಯಲ್ಲಿ ಮತ್ತು ಅಭಿವೃದ್ಧಿಗೆಂದು ನೀಡುವ ಅನುದಾನದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ. ಜನಸಂಖ್ಯೆ ಹೆಚ್ಚಿರುವ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಗುಜರಾತ್ ಮುಂತಾದ ಉತ್ತರ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಬಜೆಟ್ ಕಾರ್ಯಕ್ರಮಗಳನ್ನು ಹಾಗೂ ತೆರಿಗೆಯ ಪಾಲಿನಲ್ಲಿ ಹೆಚ್ಚಿನ ಅನುದಾನವನ್ನು ನೀಡುತ್ತಿರುವುದು ಸಮಂಜಸವಲ್ಲ ಎಂಬುದನ್ನು ತೋರುತ್ತದೆ. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯೂ ಆಗುತ್ತದೆ. ಈ ಪುನರ್ ವಿಂಗಡಣೆಯಿಂದ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರಗಳು ಹೆಚ್ಚಾಗಲಿವೆ. ೨೦೨೬ರ ಅಂದಾಜು ಜನಸಂಖ್ಯೆಯ ಆಧಾರದಲ್ಲಿ ನೋಡುವುದಾದರೆ ಉತ್ತರ ಪ್ರದೇಶದ ಈಗಿನ ಲೋಕಸಭೆ ಸದಸ್ಯರ ಸಂಖ್ಯೆ ೮೦ರಿಂದ ೧೪೩, ಬಿಹಾರದಲ್ಲಿ ೪೦ರಿಂದ ೭೯, ರಾಜಸ್ತಾನ ೨೫ರಿಂದ ೫೦, ಮಧ್ಯಪ್ರದೇಶ ೨೯ರಿಂದ ೫೨, ಮಹಾರಾಷ್ಟ್ರದಲ್ಲಿ ೪೮ರಿಂದ ೭೬ ಮತ್ತು ಗುಜರಾತ್‌ನಲ್ಲಿ ೨೬ರಿಂದ ೪೩ ಸದಸ್ಯರ ಬಲವನ್ನು ಹೆಚ್ಚಿಸಿಕೊಳ್ಳಲಿವೆ. ಅಂದರೆ ದಕ್ಷಿಣದ ರಾಜ್ಯಗಳ ಸಂಖ್ಯೆಯು ತನ್ನ ಜನಸಂಖ್ಯೆಯ ಆಧಾರದಲ್ಲಿ ಹೆಚ್ಚಿನ ಪ್ರಮಾಣದ ಲೋಕಸಭೆ ಸದಸ್ಯರನ್ನು ಪಡೆದರೂ ಉತ್ತರ ಭಾರತದ ರಾಜ್ಯಗಳನ್ನು ಸರಿಗಟ್ಟುವ ಮಾತಿರಲಿ ಅವುಗಳ ಹತ್ತಿರದ ಸಂಖ್ಯೆಗೂ ಹೋಗಲಾರವು.

ಅಂದರೆ ಕರ್ನಾಟಕದಲ್ಲಿ ೨೮ರಿಂದ ೪೧, ತಮಿಳುನಾಡು ೩೯ರಿಂದ ೪೯, ಆಂಧ್ರ ಪ್ರದೇಶ ಮತ್ತು ತೆಲಂಗಾಣ ೨೫ರಿಂದ ೫೪ ಸ್ಥಾನಗಳನ್ನು ಪಡೆಯಲಿವೆ. ಕೇರಳ ಈಗಿರುವ ೨೦ ಸ್ಥಾನಗಳನ್ನೇ ಉಳಿಸಿಕೊಳ್ಳಲಿದೆ. ಈ ಮುಂದಾಲೋಚನೆಯಿಂದೆಯೇ ಹೊಸ ಸಂಸತ್ ಭವನದಲ್ಲಿನ ಲೋಕಸಭೆಯ ಸದನದಲ್ಲಿ ಸ್ಥಾನಗಳನ್ನು ೫೪೩ರಿಂದ ೮೪೬ಕ್ಕೆ ಹೆಚ್ಚಿಸಲಾಗಿದೆ. ರಾಜಕೀಯ ಬೆಳವಣಿಗೆಯ ಈ ತಲ್ಲಣದಿಂದಾಗಿ ದೇಶದ ಆಡಳಿತ ಚುಕ್ಕಾಣಿ ಮುಂದೆಯೂ ಉತ್ತರ ಭಾರತದ ಕೈಯಲ್ಲಿ ಭದ್ರವಾಗಿ ಉಳಿಯಲಿದೆ ಎನ್ನುವ ಆತಂಕ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳದ್ದು ಎನ್ನುವುದು ಸ್ಪಷ್ಟ. ಇನ್ನು ದೇಶದ ಶೇ. ೭೦ರಷ್ಟು ತೆರಿಗೆಯ ಸಂಪನ್ಮೂಲವನ್ನು ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳು ಭರಿಸುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡೆಸಿರುವ ಸಂಶೋಧನಾ ವರದಿಯ ಪ್ರಕಾರ ೨೦೨೩-೨೪ರ ಸಾಲಿನಲ್ಲಿ ಕರ್ನಾಟಕವು ತನ್ನ ನೇರ ತೆರಿಗೆ ಸಂಗ್ರಹದಲ್ಲಿ ಶೇ. ೧೧. ೯, ಮಹಾರಾಷ್ಟ್ರ ಶೇ. ೩೮. ೯, ದೆಹಲಿ ಶೇ. ೧೦. ೪, ತಮಿಳುನಾಡು ಶೇ. ೬. ೫ ಮತ್ತು ಗುಜರಾತ್ ೪. ೮ರಷ್ಟು ತೆರಿಗೆ ಪಾವತಿ ಮಾಡಿದ ಐದು ರಾಜ್ಯಗಳು. ಕರ್ನಾಟಕ ಮೊದಲ ಬಾರಿಗೆ ಕಳೆದ ಏಳು ವರ್ಷಗಳಲ್ಲಿ ದೆಹಲಿಗಿಂತ ಹೆಚ್ಚಿನ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯನ್ನು ಕೇಂದ್ರದ ಬಾಬ್ತಿಗೆ ನೀಡಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಾಮೂಲಿನಂತೆ ಮಹಾರಾಷ್ಟ್ರದ ಪಾಲು ಹೆಚ್ಚಿದೆ.

ಮಹಾರಾಷ್ಟ್ರವು ೩,೦೨,೩೧೭ ಕೋಟಿ ರೂ. ಸಂಗ್ರಹಿಸಿದ್ದರೆ, ಕರ್ನಾಟಕವು ೧,೩೫,೯೫೩ ಕೋಟಿ ರೂ. , ಗುಜರಾತ್ ೧,೧೭,೭೭೧ ಕೋಟಿ ರೂ. , ತಮಿಳುನಾಡು ೧,೧೩,೧೭೪ ಕೋಟಿ ರೂ. ಮತ್ತು ದೆಹಲಿ ೬೦,೬೮೪ ಕೋಟಿ ರೂ. ಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ನೀಡಿವೆ. ಆದರೆ ಜಿಎಸ್‌ಟಿ ಮತ್ತು ಇತರೆ ತೆರಿಗೆ ಪಾಲು ಮತ್ತು ಬಜೆಟಿನಲ್ಲಿನ ಹೆಚ್ಚು ಅನುದಾನ ಪಡೆಯುವ ಉತ್ತರ ಪ್ರದೇಶ ಕೇಂದ್ರಕ್ಕೆ ನೀಡಿರುವ ತೆರಿಗೆ ಕೇವಲ ೯೬,೪೨೧ ಕೋಟಿ ರೂ. ಮಾತ್ರ. ಈ ತಾರತಮ್ಯಕ್ಕೆ ಹಣಕಾಸು ಆಯೋಗವು ಅನುಸರಿಸುವ ಮಾನದಂಡಗಳು ಕಾರಣ. ಹಣಕಾಸು ಆಯೋಗವು ಮುಖ್ಯವಾಗಿ ಅನುಸರಿಸುವ ಮಾನದಂಡ ಎಂದರೆ ಜನಸಂಖ್ಯೆಯ ಪ್ರಮಾಣ, ಆಯಾ ರಾಜ್ಯವು ಹೊಂದಿರುವ ಭೂ ಪ್ರದೇಶ, ಅರಣ್ಯ ಮತ್ತು ಹಣಕಾಸು ನಿರ್ವಹಣೆ. ಹಣಕಾಸು ಆಯೋಗದ ಈ ಮಾನದಂಡವನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ಜನಸಂಖ್ಯೆ ಹೆಚ್ಚಳಕ್ಕೆ ಕರೆ ನೀಡಿರುವುದು ಕೇಂದ್ರಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಈ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ಜನಸಂಖ್ಯೆ ನಿಯಂತ್ರಣ ಮತ್ತು ಅದಕ್ಕೆ ಸಂಬಂಽಸಿದ ಕಾರ್ಯಕ್ರಮಗಳು ಕೇಂದ್ರ ಸರ್ಕಾರದ ನೀತಿಗೆ ಅನ್ವಯವಾಗುವುದರಿಂದ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಆಡಳಿತವಿರುವ ಕ್ರಮವಾಗಿ ಕರ್ನಾಟಕ, ತೆಲಂಗಾಣ ಮತ್ತು ಕೇರಳದ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುವಷ್ಟು ಸ್ವತಂತ್ರರಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ದಕ್ಷಿಣ ರಾಜ್ಯಗಳಿಗೆ ಆಗುವ ರಾಜಕೀಯ ಅಽಕಾರದಿಂದ ಮತ್ತು ತೆರಿಗೆ ಹಂಚಿಕೆಯಿಂದಾಗುತ್ತಿರುವ ಅನ್ಯಾಯದ ಬಗೆಗೆ ಕೇಂದ್ರ ಸರ್ಕಾರವು ಹಣಕಾಸು ಆಯೋಗಕ್ಕೆ ನೀಡಿರುವ ಮಾನದಂಡಗಳನ್ನು ಪುನರ್ ಪರಿಶೀಲಿಸುವುದು ಅನಿವಾರ್ಯ.

 

andolana

Recent Posts

ಅಂಬೇಡ್ಕರ್‌ ಕುರಿತು ಅಮಿತ್‌ ಶಾ ವಿವಾದಾತ್ಮಕ ಹೇಳಿಕೆ: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ: ಬಾಬಾಸಾಹೇಬ್‌ ಅಂಬೇಡ್ಕರ್‌ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…

5 mins ago

ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸ್‌ ಹಿಂಪಡೆದ ರಾಜ್ಯ ಸರ್ಕಾರ

ತುಮಕೂರು: 70 ಲಕ್ಷ ಕರೆಂಟ್‌ ಬಿಲ್‌ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…

26 mins ago

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶ

ಹೈದರಾಬಾದ್:‌ ಟಾಲಿವುಡ್‌ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…

47 mins ago

ರಾಜಕೀಯ ಅಧಿಕಾರ ಹಿಡಿಯಲು ಅಂಬೇಡ್ಕರ್‌ ಹೆಸರು ಬಳಕೆ: ಸಿದ್ದರಾಮಯ್ಯ ವಿರುದ್ಧ ಆರ್‌.ಆಶೋಕ್‌ ವಾಗ್ದಾಳಿ

ಬೆಂಗಳೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕುರಿತಂತೆ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ…

1 hour ago

ಕಾಶ್ಮೀರದಲ್ಲಿ ಭರ್ಜರಿ ಬೇಟೆಯಾಡಿದ ಭಾರತೀಯ ಸೇನೆ: ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬೇಹಿಬಾಗ್‌…

1 hour ago

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

ಮಡಿಕೇರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಹಾರಂಗಿ ಜ್ಞಾನಗಂಗಾ ಶಾಲೆಯ…

2 hours ago