Categories: Andolana originals

ಉರಿಯ ಉಯ್ಯಾಲೆ ಮತ್ತು ಪುರುಷ ಮೃಗ; ಸಿಡಿಲ ಮಲ್ಲಿಕಾರ್ಜುನ ಬೆಟ್ಟ ಹತ್ತುತ್ತಾ ಒಂದಿಷ್ಟು ಯೋಚನೆಗಳು

ಅಭ್ಯುದಯ

ನಮ್ಮ ವಾರಾಂತ್ಯದ ಟ್ರೆಕ್ಕಿಂಗಿನ ತಾವು ಪಿರಿಯಾಪಟ್ಟಣದ ಬಳಿಯ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಬೆಟ್ಟವೆಂದು ಅದಾಗಲೇ ನಿಗದಿಯಾಗಿತ್ತು. ಪಯಣತೊಡಗಿದ್ದು ಮೈಸೂರಿನಿಂದಲಾದರೂ ಎಂಬತ್ತು ಕಿಲೋಮೀಟರಿನಷ್ಟು ಸುದೀರ್ಘ ಕಾರಿನ ದಾರಿ ನಮ್ಮನ್ನು ಕಾತರಕ್ಕೆ ಗುರಿಪಡಿಸಿತ್ತು. ಚಾರಣದ ನೆಲೆ ಎಂದು ಬರುವುದೋ ಎಂದು ನಾವೆಲ್ಲರೂ ಕತ್ತನ್ನು ಹಿಗ್ಗಿಸಿ ಚಲನೆಯ ದಾರಿಯನ್ನು ನೋಡುತ್ತಾ ಹರಟೆಯಲ್ಲಿ ಮುಳುಗಿದ್ದೆವು.

ನಮ್ಮ ಸವಾರಿ ಬೆಟ್ಟದಡಿಯನ್ನು ತಲುಪುವಾಗ ಬೆಳಗಿನ ಉಪಾಹಾರ ಸಂದಿತ್ತು. ಬೆಟ್ಟದ ತುದಿಯಲ್ಲಿರುವ ಸಿಡಿಲು ಮಲ್ಲಿಕಾರ್ಜುನನ ಗುಡಿಗೆ ಕಣ್ಣನ್ನು ನೆಟ್ಟು ಎಲ್ಲರೂ ಕಾಲು ಹಾಕತೊಡಗಿದೆವು. ನಡಿಗೆ ಆರಂಭಿಸಿದೊಡನೆ ನಮಗೆದುರಾದದ್ದು ಎತ್ತರವಾದೊಂದು ಕಮಾನಿನಂತಹ ಕಲ್ಲಿನ ಆಕೃತಿ. ನಮ್ಮಲ್ಲೇ ಕೆಲವರು ಅದು ಬೃಹತ್ತಾದ ಪ್ರವೇಶ ದ್ವಾರವೇ ಇರಬೇಕು ಎಂದು ನಿರ್ಧರಿಸಿಯಾಗಿತ್ತು. ಅಲ್ಲಿ ಕಾಣಿಸಿಕೊಂಡ ದನಗಾಹಿಗಳನ್ನು ವಿಚಾರಿಸಿದರೆ ‘ಪೂಜೆ ಮಾಡುತ್ತಾರೆ, ಅಲ್ಲಿಯೇ ದೀಪ ಹಚ್ಚುತ್ತಾರೆ’ ಎಂದೇನೋ ಆ ಕ್ಷಣಕ್ಕೆ ಹೊಳೆದ ಉತ್ತರ ವನ್ನು ಸಲ್ಲಿಸಿ ನಮ್ಮನ್ನು ಮೀರಿ ಮುಂದುವರಿದರು.

ಅಲ್ಲಿದ್ದದ್ದು ಹಾಗಿದ್ದರೆ ಏನು ಎನ್ನುವ ಶಂಕೆ ನಿವಾರಣೆಯಾಗಲೇ ಇಲ್ಲ. ಹತ್ತುತ್ತಾ ಹೋದಂತೆ ಏದುಸಿರು ಕಾಣಿಸಿಕೊಂಡಷ್ಟೇ ಸರಾಗವಾಗಿ ನಮ್ಮ ಊಹೆಯೂ ಉಸಿರಾಡತೊಡಗಿತು. ಆ ಬೃಹತ್ ಆಕೃತಿ ಉಯ್ಯಾಲೆಯನ್ನು ಕಟ್ಟಲು ಅನುಕೂಲವಾಗುವಂತಹ ರಚನೆ ಇರಬೇಕು. ನಮ್ಮ ನಾಡಿನಲ್ಲಿ ನರಬಲಿಯ ಆಚರಣೆ ಪ್ರಚಲಿತವಿದ್ದಾಗ ಅದರ ರಿವಾಜುಗಳು ಹೇಗಿದ್ದವೆಂದು ಆ ಕಾಲದ ಅನೇಕ ಶಾಸನಗಳಿಂದ, ಸಾಹಿತ್ಯ ಕೃತಿಗಳಿಂದ ತಿಳಿದು ಬರುತ್ತದೆ. ಅದರ ಪ್ರತ್ಯಕ್ಷ ಕುರುಹು ಇದಾಗಿರಬೇಕು. ಉಯ್ಯಾಲೆಯಲ್ಲಿ ತೂಗಾಡುತ್ತಲೇ ಪ್ರಾಣವನ್ನು ತೆರಬೇಕಾಗಿರುವ ವ್ಯಕ್ತಿ ಬಲಿಯಾಗುವಂತಹ ವ್ಯವಸ್ಥೆ ಇದು. ‘ಉರಿಯ ಉಯ್ಯಾಲೆ’ ಎಂದು ಬಳಕೆಯಲ್ಲಿರುವ ಶಬ್ದದ ನಿಷ್ಪತ್ತಿ ಹೀಗೆ ಎನ್ನುವ ಆಲೋಚನೆ ನಾವಾಡಿದ ಮಾತುಗಳಿಂದಲೇ ರೂಪ ತಳೆಯಿತು.

ಆದರೆ ಸ್ಪಷ್ಟವಾಗಿ ಹೇಳುವುದಕ್ಕೆ ಆ ಕಮಾನಿನ ಮೇಲಿನ ಚೌಕಟ್ಟಿನಲ್ಲಿ ಉಯ್ಯಾಲೆ ಇರಿಸಲು ನೆರವಾಗುವಂತಹ ತೂತು ಏನಾದರೂ ಇರಲೇಬೇಕು. ಹಾಗಿದ್ದಲ್ಲಿ ಮಾತ್ರ ನಮ್ಮ ಊಹೆಗೆ ಪುಷ್ಟಿ ದೊರೆಯುತ್ತದೆ. ಸಮಸ್ಯೆಯೆಂದರೆ ನಮ್ಮಲ್ಲಿ ಯಾರೂ ಆ ಸೂಕ್ಷ್ಮವನ್ನು ಗಮನಿಸಿದಂತಿಲ್ಲ. ನಮ್ಮೆಲ್ಲ ಕೌತುಕವನ್ನೂ ಹಿಡಿದಿಟ್ಟುಕೊಂಡು ಇಳಿದು ಬರುವವರೆಗೂ ಕಾಯದೆ ಬೇರೆ ವಿಽ ಇರಲಿಲ್ಲ. ಯಾವುದೋ ರಾಜನ ದೀರ್ಘಾಯುಷ್ಯದ ನೆಪಕ್ಕಾಗಿಯೊ, ಇನ್ನೇತರ ಕಾರಣಕ್ಕಾಗಿಯೋ ಸಾಮಾನ್ಯ ಜನರು ಜೀವ ತೆರಬೇಕಾಗಿದ್ದ ಇಂತಹ ಹಲವಾರು ಅಮಾನುಷ ಆಚರಣೆಗಳ ಕುರುಹನ್ನು ಹುಡುಕಿ ತೆಗೆಯಬೇಕೆ? ಅದನ್ನು ಚರ್ಚಿಸಬೇಕೇ – ಬೇಡವೇ ? ಈ ಕ್ರೌರ್ಯದ ಆಚರಣೆ ಒಂದು ಕಾಲದಲ್ಲಿತ್ತು ಎನ್ನುವುದನ್ನು ಮರೆಮಾಚುವ ಪ್ರವೃತ್ತಿ ನಮ್ಮ ಜನರಲ್ಲಿ ಪ್ರಜ್ಞಾಪೂರ್ವಕವಾಗಿಯೇ ಬೆಳೆದು ಬಂದಿದೆಯೇ ? ಹೇಳುವುದು ಕಷ್ಟ. ಈ ಎಲ್ಲ ವಿಚಾರಗಳೂ ನಮ್ಮನ್ನು ಆವರಿಸಿಕೊಂಡಿದ್ದರಿಂದಲೂ, ಸುತ್ತಣ ನಿಸರ್ಗ ಹತ್ತುವ ಹುರುಪನ್ನು ತಂದು ಕೊಟ್ಟಿದ್ದರಿಂದಲೂ ಮೇಲೇರಿದ್ದು ಪ್ರಯಾಸವೆನಿಸಲೇ ಇಲ್ಲ.

ಎತ್ತರದ ಪ್ರದೇಶದಲ್ಲಿ ಮಂಟಪದ ರಚನೆ ಕಾಣಿಸಿಕೊಂಡಿತು. ಅದು ಜೈನರಿಗೆ ಸಂಬಂಽಸಿದ್ದಂತೆ. ಕಟ್ಟುನಿಟ್ಟಿನ ಉಪವಾಸದ ವ್ರತಗಳನ್ನು ಪಾಲಿಸುವ ಜೈನ ಧರ್ಮದ ಶ್ರದ್ಧಾವಂತರು, ಊರಿನ ಆಚೆಗಿರುವ ಬೆಟ್ಟದ ತಪ್ಪಲುಗಳನ್ನು ಆವಾಸಕ್ಕೆ ಪ್ರಶಸ್ತ ಸ್ಥಳವೆಂದು ಪರಿಗಣಿಸುತ್ತಿದ್ದರು. ಸಲ್ಲೇಖನದಂತಹ ಉಗ್ರ ನಿಯಮವನ್ನು ಕೈಗೊಂಡಾಗ ಬಯಸಿದರೂ ನೀರು ಸಿಗದಿರುವ ತಾವು ಅವರ ವ್ರತ ಭಂಗವಾಗದಂತೆ ರಕ್ಷಿಸುತ್ತದೆ. ಅಲ್ಲಿ ಜೈನಯತಿಗಳೋ ಆರ್ಯಿಕೆಯರೋ ವಾಸಿಸುತ್ತಿದ್ದಿರಬಹುದು ಎಂದು ನಮಗೆ ತೋರಿತು. ಮುಂದೆ ಚಲಿಸಿದಂತೆ ಮುರುಕು ದೈವದ ಗುಡಿಯೊಂದು ಕಾಣಿಸಿತು. ಕಾಲನ ಹೊಡೆತಕ್ಕೆ ಮುರಿದುಬಿದ್ದ ಆ ಸುಂದರ ಕಟ್ಟಡ ಅಸಂಖ್ಯ ಬಾವಲಿಗಳ ಪಾಲಿಗೆ ತಂಗುದಾಣವಾಗಿತ್ತು. ಆ ಗುಡಿಯ ಸುತ್ತಮುತ್ತ ಕರಡಿಯ ಹೆಜ್ಜೆ ಗುರುತುಗಳನ್ನೂ ಗಮನಿಸಬಹುದಿತ್ತು. ಬೆಟ್ಟಕ್ಕೆ ಹೆಸರನ್ನು ತಂದುಕೊಟ್ಟ ಸಿಡಿಲು ಮಲ್ಲಿಕಾರ್ಜುನನ ಗುಡಿ ತುತ್ತತುದಿಯಲ್ಲಿಯೇ ಇರಬೇಕಾದ್ದು ನ್ಯಾಯವಲ್ಲವೆ? ನೆತ್ತಿಯನ್ನು ಬಂದು ಮುಟ್ಟಿದಾಗ ಮಲ್ಲಿಕಾರ್ಜುನನ ಭವ್ಯವಾದ ದೇವಾಲಯ ಕಣ್ಣ ಮುಂದೆ ತೆರೆದುಕೊಂಡಿತು.

ಆ ಕಲ್ಲಿನ ಗುಡಿಗೆ ಮಳೆಗಾಲದ ಮೊದಲ ಸಿಡಿಲು ಬಡಿಯುತ್ತದೆಂದು ಪ್ರತೀತಿ. ದೇವಾಲಯದ ವಿಶಾಲವಾದ ರಚನೆ ಅದು ಕೇವಲ ಗುಡಿಯಾಗಿರಲಿಕ್ಕಿಲ್ಲ ಎನ್ನುವುದನ್ನು ಸೂಚಿಸುತ್ತಿತ್ತು. ಬಹು ಕೋಣೆಗಳ ಆಲಯ ಒಂದು ಕಾಲದಲ್ಲಿ ಪ್ರಸಿದ್ಧ ಕಲಿಕಾ ಕೇಂದ್ರವಾಗಿದ್ದಿರಬೇಕು. ಗುಡಿಯ ಹೊರಭಾಗದಲ್ಲಿ ಅಪರೂಪದ ಕೆತ್ತನೆಯೊಂದು ನಮ್ಮ ಗಮನಸೆಳೆಯಿತು. ಆ ಶಿಲ್ಪದ ಕೆಳಗೆ ಬರೆಹವೂ ಇದ್ದಿತ್ತು. ಬೇರೆ ಬೇರೆ ಯುಗಗಳಲ್ಲಿ ಮಲ್ಲಿಕಾರ್ಜುನ ಹೇಗೆ ಪೂಜಿಸಲ್ಪಡುತ್ತಿದ್ದ ಎಂದು ಸಾದರಪಡಿಸುವುದು ಆ ಶಿಲ್ಪ – ಬರೆಹಗಳ ಉದ್ದೇಶವಾಗಿತ್ತು. ತ್ರೇತಾಯುಗದಲ್ಲಿ ನಾಗಾರ್ಜುನ ಕಾಣಿಸಿಕೊಂಡರೆ, ದ್ವಾಪರ ಯುಗದಲ್ಲಿ ಶಿವಭಕ್ತಿಯ ಪಾರಮ್ಯವನ್ನು ಮೆರೆದದ್ದು ಪುರುಷ ಮೃಗ. ಅಚ್ಚರಿಯ ಸಂಗತಿಯೆಂದರೆ ಪುರುಷ ಮೃಗದ ಕಥೆಯನ್ನು ಕೇಳುತ್ತಲೇ ಬೆಳೆದ ನಾನು ಅದರ ಆಕಾರವನ್ನು ಕಂಡದ್ದು ಮೊದಲನೇ ಬಾರಿ! ಹೆಸರೇ ಸೂಚಿಸುವಂತೆ ಸೊಂಟದಿಂದ ಮೇಲಕ್ಕೆ ಪುರುಷನ ಆಕಾರವನ್ನೂ ಅದರಿಂದ ಕೆಳಭಾಗಕ್ಕೆ ಮೃಗವೊಂದರ ಶರೀರವನ್ನು ಕೆತ್ತಲಾಗಿತ್ತು. ನಮ್ಮೂರಿನ ಬಹುತೇಕ ಶಿವಾಲಯದ ಚರಿತ್ರೆಗಳಲ್ಲಿ, ಸ್ಥಳ ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಪುರುಷಮೃಗವನ್ನು ಶಿಲ್ಪದಲ್ಲಾದರೂ ಸೆರೆಹಿಡಿವ ಪ್ರಯತ್ನವನ್ನು ನಮ್ಮೂರಿನ ಶಿಲ್ಪಿಗಳು ಮಾಡಿದ್ದು ನನ್ನ ಅರಿವಿಗೆ ಬಂದಿಲ್ಲ. ಸೌಗಂಧಿಕಾ ಪುಷ್ಪವನ್ನು ತರಲು ಹೊರಡುವ ಭೀಮನ ಕಥೆಯನ್ನೇ ಅನೇಕ ಸ್ಥಳ ಪುರಾಣಗಳು ಹೋಲುತ್ತವೆ.

ಆದರೆ ಇಲ್ಲಿ ಆತ ಹೊರಟಿರುವುದು ಪಾಂಡವಾದಿಗಳು ಕೈಗೊಂಡ ಯಾಗಕ್ಕೆ ಸಹಕಾರಿಯಾಗಲೆಂದು ಪುರುಷಮೃಗವನ್ನು ತರಲು. ಆ ಮೃಗದ ಅಪರಿಮಿತ ಶಿವಭಕ್ತಿಯನ್ನು ಬಳಸಿಕೊಂಡು ಉಪಾಯದಿಂದ ಕರೆತರಬೇಕು ಎಂದು ಎಚ್ಚರಿಸುವವನು ಹನುಮಂತ. ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯ, ಕಡೇಶಿವಾಲಯ ಇಲ್ಲಿನ ಸ್ಥಳಪುರಾಣಗಳು ಇದೇ ಕಥೆಯ ಚೌಕಟ್ಟಿನಲ್ಲಿ ಸಣ್ಣ ವ್ಯತ್ಯಾಸದೊಂದಿಗೆ ಜನಜನಿತವಾಗಿವೆ. ಈ ಎಲ್ಲ ವಿಚಾರಗಳೂ ಹೊಳೆಯುತ್ತಲೇ ನನ್ನ ಸಹ ಪಯಣಿಗರನ್ನು ಕರೆದು ನಿಲ್ಲಿಸಿ ನನ್ನ ಪುರಾಣ ಪಾಂಡಿತ್ಯವನ್ನು ಪ್ರದರ್ಶನಕ್ಕೆ ಒಡ್ಡಿದೆ. ಪಾಂಡವರ ಭೀಮ ಉಪ್ಪಿನಂಗಡಿಯನ್ನು ತಲುಪುತ್ತಿದ್ದಂತೆಯೇ ಪುರುಷಮೃಗಕ್ಕೆ ಸರಿಯಾದ ಬುದ್ಧಿ ಕಲಿಸುತ್ತೇನೆ ಎಂದು ಬಗೆದು ಒಂದು ಮುಷ್ಟಿಯಷ್ಟು ಹನುಮಂತನ ಬಾಲದ ರೋಮವನ್ನು ನೆಲಕ್ಕೆ ಚೆಲ್ಲಿದಾಗ ಸಹಸ್ರಲಿಂಗಗಳು ಆ ನೆಲದಿಂದ ಒಡೆದು ಮೇಲೆದ್ದವು ಎಂದು ವಿವರಿಸಿ, ಎಲ್ಲಾ ಊರಿನ ದೇವಾಲಯಗಳಲ್ಲೂ ಪಾಂಡವರ ಹಸ್ತಕ್ಷೇಪ ಇರಲೇಬೇಕೆಂಬ ನಿಯಮವನ್ನು ಯಾರೋ ಹಿಂದೆ ಮಾಡಿದ್ದಿರಬೇಕು ಎಂದು ಚಟಾಕಿ ಹಾರಿಸಿದೆ. ಬಾಲ್ಯದ ಸ್ಮೃತಿಯಿಂದಾಗಿ ನನ್ನಲ್ಲಿ ಉಂಟಾದ ಉತ್ಸಾಹ ಉಳಿದವರಿಗೆ ವಿಚಿತ್ರವಾಗಿ ಕಂಡಿರಲೂ ಸಾಕು.

ಅಂತೂ ಎಲ್ಲರೂ ಆಸ್ಥೆಯಿಂದ ನನ್ನ ಮಾತಿಗೆ ಕಿವಿಯಾದರು ಎಂದು ನನ್ನ ಭಾವನೆ. ಒಂದಷ್ಟು ಸಮಯವನ್ನು ಆ ದೇವಾಲಯದ ಆವರಣದಲ್ಲಿ ಕಳೆದು ಇಳಿಯತೊಡಗಿದೆವು. ಇಳಿಯುತ್ತಿದ್ದ ಹಾಗೆ ನನ್ನ ನೆನಪನ್ನು ಕೆದಕತೊಡಗಿದೆ. ಲೆಕ್ಕವಿಲ್ಲದಷ್ಟು ಬಾರಿ ಅಪ್ಪನಿಂದ ಪುರುಷಮೃಗದ ಕಥೆಯನ್ನು ಕೇಳಿಸಿಕೊಂಡಾಗಲೆಲ್ಲ ನನ್ನ ಮನದಲ್ಲಿ ಆ ಜಂತುವಿಗೆ ಆರೋಪಿಸಲಾಗುತ್ತಿದ್ದ ರೂಪ ಯಾವುದು ? ಎಷ್ಟು ಪ್ರಯಾಸಪಟ್ಟರೂ ಅದನ್ನು ಕಾಣುವುದು ಸಾಧ್ಯವಾಗಲಿಲ್ಲ. ಕಲ್ಪಿಸಿಕೊಂಡರೆ ಈಗಷ್ಟೇ ಕಂಡ ಹೊಸ ರೂಪು ಅಲ್ಲಿ ಪ್ರತ್ಯಕ್ಷವಾಗಿಬಿಡುತ್ತಿತ್ತು. ನಾವು ಬೆಳೆದಂತೆಲ್ಲ ನಮ್ಮ ಆಲೋಚನೆಯ ವ್ಯಾಯಾಮ ಶಾಲೆಯೂ ಬದಲಾಗುತ್ತದೇನೊ. ನಮ್ಮನ್ನು ರೂಪಿಸುವ ಸುಪ್ತ ಮನಸ್ಸಿನ ಆಟದ ಬಯಲಿನಂತಹ ಗರಡಿಯಲ್ಲಿ ಮಾತು, ಮೌನ, ಗಾಂಭೀರ್ಯ, ತುಂಟತನಗಳು ಮಿಳಿತಗೊಳ್ಳುವ ಅನೇಕ ಕಸರತ್ತುಗಳು ನಡೆಯುತ್ತಲೇ ಇರುತ್ತವೆ. ಅದರ ನಾಡಿಯನ್ನು ಗ್ರಹಿಸುವುದು ಸಾಧ್ಯವಿಲ್ಲ. ಚಲನೆಯನ್ನು ಸವಿಯಬೇಕಷ್ಟೇ. ಬೆಟ್ಟವನ್ನು ಸಂಪೂರ್ಣ ಇಳಿದುಬಿಟ್ಟೆವು. ಥಟ್ಟನೆ ನೆನಪಾಯಿತು ನೇರ ಹೋಗಿ ಆ ಕಮಾನಿನ ಆಕೃತಿಯ ಮೇಲ್ಚಾವಣಿಯಲ್ಲಿನ ರಂಧ್ರವನ್ನು ಗುರುತಿಸಿದೆವು. ಅಲ್ಲಿ ಉಯ್ಯಾಲೆಯನ್ನು ತೂಗಲಾಗುತ್ತಿತ್ತು ಎನ್ನುವುದಕ್ಕೆ ಯಾವ ಅನುಮಾನವೂ ಉಳಿಯಲಿಲ್ಲ. ರಹಸ್ಯ ಒಂದು ನಮ್ಮ ಪಾಲಿಗಾದರೂ ಬಯಲಾದ ಖುಷಿ, ಬೆಟ್ಟವನ್ನು ಹತ್ತಿ – ಇಳಿದ ಆಯಾಸವನ್ನು ಮೀರಿ ನಮ್ಮೆಲ್ಲರಲ್ಲಿ ವ್ಯಕ್ತವಾಗಿತು

 

andolana

Recent Posts

ಭಾರತೀಯ ಸೇನೆಯಿಂದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಹೊಸ ವಿಡಿಯೋ ಬಿಡುಗಡೆ

ನವದೆಹಲಿ: ಸೇನಾ ದಿನದ ಅಂಗವಾಗಿ ಇಂದು ಭಾರತೀಯ ಸೇನೆಯು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಳೆದ ವರ್ಷ ನಡೆದ…

31 mins ago

ದಳಪತಿ ವಿಜಯ್‌ ಅಭಿನಯದ ಜನನಾಯಗನ್‌ ಚಿತ್ರಕ್ಕೆ ಸುಪ್ರೀಂ ಬಿಗ್‌ಶಾಕ್‌

ಜನನಾಯಗನ್‌ ಚಿತ್ರವನ್ನು ಮುಂದೂಡಿದ್ದಕ್ಕೆ ಸಂಬಂಧಿಸಿದಂತೆ ಸಿಬಿಎಫ್ಸಿ ಅನುಮತಿ ಕೋರಿ ಕೆವಿಎನ್‌ ಪ್ರೊಡಕ್ಷನ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಇಂದು ವಜಾಗೊಳಿಸಿದೆ. ಸೆನ್ಸಾರ್‌…

51 mins ago

ಪ್ರೀತಿ ಹೆಸರಿನಲ್ಲಿ ವಂಚನೆ: ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನ

ರಾಮನಗರ: ಪ್ರೀತಿ ಹೆಸರಿನಲ್ಲಿ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಯುವಕನೊಬ್ಬ ಕೈಕೊಟ್ಟಿದ್ದು, ಮನನೊಂದ ಯುವತಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ…

1 hour ago

ದಲಿತರೊಬ್ಬರು ಸಿಎಂ ಆಗದಿರುವ ಬಗ್ಗೆ ನಮಗೆ ನೋವಿದೆ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ದಲಿತ ಸಿಎಂ ಆಗದಿರುವುದರ ಬಗ್ಗೆ ನಮಗೆ ನೋವಿದೆ. ಹೈಕಮಾಂಡ್‌ ಮನಸ್ಸು ಮಾಡಿದರೆ ಎಲ್ಲಾ ಆಗುತ್ತದೆ ಎಂದು ಸಚಿವ…

1 hour ago

ವಿಧಾನಸಭೆ ಚುನಾವಣೆಗೆ ಪ್ರತಾಪ್‌ ಸಿಂಹ ಸ್ಪರ್ಧೆ ಫಿಕ್ಸ್‌

ಮೈಸೂರು: ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ನೀಡಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌…

1 hour ago

ದಕ್ಷಿಣ ಒಳನಾಡಿನಲ್ಲಿ ತಗ್ಗಿದ ಚಳಿ ಅಬ್ಬರ: ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿಯ ಅಬ್ಬರ ತಗ್ಗಿದೆಯಾದರೂ ಮೋಡ ಕವಿದ ವಾತಾವರಣವಿರಲಿದೆ. ರಾಜ್ಯದಲ್ಲಿ ಒಂದು…

1 hour ago