Andolana originals

ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರನ ಸಾಮಾಜಿಕ ಕಾಳಜಿ

ರಾಮಕೃಷ್ಣ ಸೇವಾಶ್ರಮದ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವು

೧೯೧೭ರ ಮಾರ್ಚ್ ೧೮ರಂದು ಅವಿಭಜಿತ ಬಂಗಾಳದ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸುಧಾಂಶು ಬಿಸ್ವಾಸ್ ಚಿಕ್ಕ ಪ್ರಾಯದಲ್ಲೇ ಅರಬಿಂದೋ ಘೋಷ್, ಬಾರಿನ್ ಘೋಷ್, ನೃಪೇನ್ ಚಕ್ರವರ್ತಿ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರಭಾವಿತರಾಗಿದ್ದರು. ಬಡಬಗ್ಗರ ಬಗ್ಗೆ ಅತ್ಯಂತ ಕಾಳಜಿವುಳ್ಳವರಾಗಿದ್ದರು. ಏಳನೇ ತರಗತಿಯಲ್ಲಿದ್ದಾಗ ಅವರು ತನ್ನ ಮನೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಲಿಟ್ಟರು. ನೇತಾಜೀ ಸುಭಾಷ್‌ಚಂದ್ರ ಬೋಸ್‌ರ ಗುರುವಾದ ಬೇಣಿ ಮಾಧವ ದಾಸ್‌ರ ಕ್ರಾಂತಿಕಾರಿ ಮಕ್ಕಳಾದ ಕಲ್ಯಾಣಿ ದಾಸ್ ಮತ್ತು ಬೀನಾ ದಾಸ್‌ರ ಮಾರ್ಗದರ್ಶನವೂ ಅವರಿಗೆ ಸಿಕ್ಕಿತು.

‘ಅನುಶೀಲನ ಸಮಿತಿ’ ಎಂಬ ಒಂದು ಕ್ರಾಂತಿಕಾರಿ ಸಂಘಟನೆಯನ್ನು ಸೇರಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಪತ್ರಗಳನ್ನು ರವಾನಿಸುವುದು, ಬಾಂಬ್ಗಳನ್ನು ತಲುಪಿಸುವುದು ಮೊದಲಾದ ಕೆಲಸಗಳನ್ನು ಮಾಡಿದರು. ವಯಸ್ಸಿ ನಲ್ಲಿ ಚಿಕ್ಕವರಾಗಿದ್ದುದರಿಂದ ಬ್ರಿಟಿಷ್ ಪೊಲೀಸರಿಗೆ ಅವರ ಮೇಲೆ ಅನುಮಾನ ಬರುತ್ತಿರಲಿಲ್ಲ. ಆದರೆ, ೧೯೩೯ರಲ್ಲಿ ಕೊಲ್ಕೊತ್ತಾದ ಆಲ್ಬರ್ಟ್ ಹಾಲಿನಲ್ಲಿ ಬಾಂಬ್ ಹಾಕುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ ಅವರು ಬ್ರಿಟಿಷ್ ಪೊಲೀಸರ ಗಮನಕ್ಕೆ ಬಂದು ಭೂಗತರಾಗಬೇಕಾಗಿ ಬಂದಿತು. ಹಲವು ಭಾರಿ ಅವರು ಗುಂಡಿನ ಚಕಮಕಿಯಲ್ಲಿ ಸಿಕ್ಕಿ ಹಾಕಿಕೊಂಡು, ಗುಂಡೇಟುಗಳನ್ನೂ ತಿಂದಿದ್ದರು.

೧೯೪೨ರಲ್ಲಿ ಅವರು ಪೊಲೀಸರ ಸೆರೆಗೆ ಸಿಕ್ಕಿ, ದೇಶಕ್ಕೆ ಸ್ವಾತಂತ್ರ್ಯ ಸಿಗುವ ತನಕ ಅಲಿಪುರ ಕಾರಾಗೃಹದಲ್ಲಿ ಐದು ವರ್ಷಗಳ ಕಾಲ ಇರಬೇಕಾಯಿತು. ಜೈಲಲ್ಲಿ ಅವರು ನಾನಾ ರೀತಿಯ ಚಿತ್ರಹಿಂಸೆಗೆ ಒಳಪಟ್ಟರು. ಜೈಲಲ್ಲಿ ಕಳೆದ ಸಮಯವನ್ನು ಅವರು ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಅರ್ಥೈಸಿಕೊಳ್ಳಲು ಬಳಸಿಕೊಂಡರು.

ಜೈಲಿಂದ ಹೊರ ಬಂದ ನಂತರ, ‘ಜನರ ಸೇವೆಯೇ ಜನಾರ್ಧನ ಸೇವೆ’ ಎಂಬ ವಿವೇಕಾನಂದರ ಮಾತನ್ನು ಅಕ್ಷರಶಃ ಪಾಲಿಸಲು ನಿರ್ಧರಿಸಿದ ಅವರು ದೇಶ ವಿಭಜನೆಯಲ್ಲಿ ಸಂತ್ರಸ್ತರಾದ ಅನೇಕರಿಗೆ ನೆಲೆ ಕಲ್ಪಿಸಿಕೊಟ್ಟರು. ಜೀವನ ಪರ್ಯಂತ ಅವಿವಾಹಿತರಾಗಿ ಉಳಿದ ಅವರು ಆರು ಅನಾಥ ಹೆಣ್ಣು ಮಕ್ಕಳನ್ನು ದತ್ತು ಪಡೆದು, ಅವರಿಗೆ ಶಿಕ್ಷಣ ನೀಡಿ ಮದುವೆ ಮಾಡಿಕೊಟ್ಟರು.

೧೯೪೮ರಲ್ಲಿ ಸುಧಾಂಶು ಬಿಸ್ವಾಸ್ ತಮ್ಮ ಕೌಟುಂಬಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಳಚಿಕೊಂಡು ಹಿಮಾಲಯಕ್ಕೆ ಹೋದರು. ಅಲ್ಲಿ ೧೪ ವರ್ಷಗಳ ಕಾಲ ಸನ್ಯಾಸಿಯಂತೆ ಜೀವಿಸಿದರು. ನಂತರ ವಾರಣಾಸಿಗೆ ಬಂದು, ೧೯೬೦ರಲ್ಲಿ ಕೊಲ್ಕತ್ತಾಗೆ ವಾಪಸ್ ಆದರು. ೧೯೬೨ರಲ್ಲಿ ಅವರು ಸಾಮಾಜಿಕ ಕಾರ್ಯಗಳನ್ನು ಪ್ರಾರಂಭಿಸಲು ನಿರ್ಧರಿಸಿ, ಅದಕ್ಕೆ ಬೇಕಾದ ಹಣ ಹೊಂದಿಸುವ ಸಲುವಾಗಿ ಒಂದು ಪ್ಲಾಸ್ಟಿಕ್ ಉದ್ಯಮವನ್ನು ಪ್ರಾರಂಭಿಸಿದರು.

ಆ ಉದ್ಯಮ ಬಹಳ ಲಾಭದಾಯಕವಾಗಿ ನಡೆಯಿತು. ಅದರ ಲಾಭಾಂಶದಿಂದ ಅವರು ಪ. ಬಂಗಾಳದ ಸುಂದರಬನ್ ಮತ್ತು ಸೌತ್ ೨೪ ಪರಗಣ ಪ್ರದೇಶದ ನೂರಾರು ಬಡಬಗ್ಗರಿಗೆ ಆಹಾರ, ವಸತಿ ಮತ್ತು ಜೀವನೋಪಾಯವನ್ನು ಕಲ್ಪಿಸಿದರು. ಮುಂದಿನ ವರ್ಷಗಳಲ್ಲಿ ಅವರು ಕುಗ್ರಾಮಗಳಲ್ಲಿ ೧೮ ಉಚಿತ ಶಾಲೆಗಳನ್ನು ತೆರೆದು, ಎರಡು ದಶಕಗಳ ಕಾಲ ಆ ಶಾಲೆಗಳನ್ನು ನಡೆಸಿ, ನಂತರ ಅವುಗಳನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಕೊಟ್ಟರು.

೧೯೭೩ರಲ್ಲಿ ಅವರು ತಮ್ಮೆಲ್ಲಾ ಸಾಮಾಜಿಕ ಕಾರ್ಯಗಳನ್ನು ಇನ್ನೂ ಹೆಚ್ಚು ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಶ್ರೀ ರಾಮಕೃಷ್ಣ ಸೇವಾಶ್ರಮ್ ಎಂಬ ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರಿಂದ ೨೪ ಪರಗಣದ ಹಳ್ಳಿಗಳ ನೂರಾರು ಬಡ ಅನಾಥ ಮಕ್ಕಳು ಮೌಲ್ಯಾಧರಿತ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ರೂಪುಗೊಂಡರು. ತಮ್ಮ ಶಾಲೆಗಳಲ್ಲಿ ಇತರ ಶಿಕ್ಷಕರ ಜೊತೆಯಲ್ಲಿ ಸ್ವತಃ ಸುಧಾಂಶು ಬಿಸ್ವಾಸ್‌ರೂ ಗಣಿತ ಪಾಠ ಮಾಡುತ್ತಿದ್ದರು.

ಅದರ ನಂತರ, ವಯಸ್ಸಿನ ಹಾಗೂ ಬದಲಾದ ಸಾಮಾಜಿಕ ಸ್ಥಿತಿಗತಿಗಳ ಕಾರಣಕ್ಕೆ ಅನಾಥರಾಗುವ ಹಿರಿಯ ನಾಗರಿಕರಿಗೆ ಆಶ್ರಯ ಕಲ್ಪಿಸಲು ಆಶ್ರಮಗಳನ್ನು ಶುರು ಮಾಡಿದರು. ಹಳ್ಳಿಗಳಲ್ಲಿ ವೈದ್ಯರ ಕೊರತೆಯನ್ನು ಮನಗಂಡು ತಮ್ಮ ಅರವತ್ತರ ವಯಸ್ಸಿನಲ್ಲಿ ಹೋಮಿಯೋಪತಿ ಕಲಿತು ಹಳ್ಳಿಯ ಬಡಬಗ್ಗರಿಗೆ ಉಚಿತ ವೈದ್ಯಕೀಯ ಆರೈಕೆ ನೀಡತೊಡಗಿದರು. ಒಂದು ಔಷಧಿ ಅಂಗಡಿಯನ್ನೂ ತೆರೆದರು. ೨೦೧೫ರಲ್ಲಿ ಗ್ರಾಮೀಣ ಯುವಕರಿಗೆ ಮೊಬೈಲ್ ರಿಪೇರಿ, ಎಲೆಕ್ಟ್ರಿಕ್ ವಸ್ತುಗಳ ರಿಪೇರಿ, ಹೊಲಿಗೆ, ವೈದ್ಯಕೀಯ ಆರೈಕೆ ಮೊದಲಾದ ಉದ್ಯೋಗಗಳಲ್ಲಿ ತರಬೇತಿ ಕೊಟ್ಟು ಸಾವಿರಾರು ಜನ ತಮ್ಮ ಬದುಕಿಗೆ ದಾರಿ ಮಾಡಿಕೊಳ್ಳಲು ಸಹಾಯ ಮಾಡಿದರು. ಇವರಲ್ಲಿ ಅನೇಕರು ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಪಡೆದರೆ, ಹಲವರು ಸ್ವಉದ್ಯೋಗಗಳಲ್ಲಿ ನಿರತರಾದರು.

ಸುಧಾಂಶು ಬಿಸ್ವಾಸ್ ಸರ್ಕಾರ ಅಥವಾ ಯಾವುದೇ ಕಾರ್ಪೊರೇಟ್ ಕಂಪೆನಿಗಳ ಸಹಕಾರ, ಬೆಂಬಲವಿಲ್ಲದೆ ತಮ್ಮ ಸ್ವಂತ ಹಣದಿಂದ ಈ ಎಲ್ಲ ಚಟುವಟಿಕೆಗಳನ್ನು ನಡೆಸಿದರು. ತನ್ನೆಲ್ಲ ಹೋರಾಟ, ಕೆಲಸಗಳು ದೇಶದ ಜನತೆಗೆ ವಿನಾ ತನ್ನ ಸ್ವಂತ ಲಾಭಕ್ಕಲ್ಲ ಎಂದು ಹೇಳಿ ಸ್ವಾತಂತ್ರ್ಯ ಹೋರಾಟ ಗಾರರಿಗೆ ಕೊಡಲಾಗುವ ‘ತಾಮ್ರ ಪತ್ರ’ ಹಾಗೂ ನಿವೃತ್ತಿ ವೇತನವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಸುಧಾಂಶು ಬಿಸ್ವಾಸ್‌ರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ೨೦೧೮ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅದೇ ವರ್ಷ ಡಿಸೆಂಬರ್ ೬ ರಂದು ಸುಧಾಂಶು ಬಿಸ್ವಾಸ್ ನಿಧನರಾದರು. ಆದರೆ, ಅವರು ಪ್ರಾರಂಭಿಸಿದ ಶ್ರೀ ರಾಮಕೃಷ್ಣ ಸೇವಾ ಶ್ರಮದ ಚಟುವಟಿಕೆಗಳು ಅವರ ನಿಧನದ ನಂತರವೂ ಮುಂದುವರಿದಿವೆ. ಸುಧಾಂಶು ಬಿಸ್ವಾಸ್ ದತ್ತು ಪಡೆದಿದ್ದ ಆ ಆರು ಹೆಣ್ಣು ಮಕ್ಕಳು ತಮ್ಮ ಮಕ್ಕಳ ಮೂಲಕ ಸುಧಾಂಶುರವರ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ.

” ಸುಧಾಂಶು ಬಿಸ್ವಾಸ್ ತನ್ನೆಲ್ಲ ಹೋರಾಟ, ಕೆಲಸಗಳು ದೇಶದ ಜನತೆಗೆ ವಿನಾ ತನ್ನ ಸ್ವಂತ ಲಾಭಕ್ಕಲ್ಲ ಎಂದು ಹೇಳಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಲಾಗುವ ‘ತಾಮ್ರ ಪತ್ರ’ ಹಾಗೂ ನಿವೃತ್ತಿ ವೇತನವನ್ನು ಸ್ವೀಕರಿಸಲು ನಿರಾಕರಿಸಿದ್ದರು.”

ಪಂಜು ಗಂಗೊಳ್ಳಿ 

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

9 mins ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

2 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

3 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

4 hours ago