ಗಿರೀಶ್ ಹುಣಸೂರು
ರಾಜ್ಯದ ೫.೫೫ ಕೋಟಿ ಮತದಾರರ ಪರಿಷ್ಕರಣೆ ನಡೆಸಲಿರುವ ಬಿಎಲ್‌ಒಗಳು
ಮೈಸೂರು:ಕಳೆದ ಎಲೆಕ್ಷನ್‌ನಲ್ಲಿ ಇದೇ ಬೂತ್‌ನಲ್ಲಿ ವೋಟ್ ಮಾಡಿದ್ದೆ, ಈಗ ನೋಡಿದ್ರೆ ಲಿಸ್ಟ್‌ನಲ್ಲಿ ನನ್ನ ಹೆಸರೇ ಇಲ್ಲ… ಹೋದ ಎಲೆಕ್ಷನ್ ಟೈಮಲ್ಲಿ ಆ ಬೀದಿ ಬಾಡಿಗೆ ಮನೇಲಿ ಇದ್ದೆವು. ಈಗ ಈ ಬೀದಿಗೆ ಶಿಫ್ಟ್ ಆಗಿದ್ದೇವೆ. ನಮ್ಮ ಕುಟುಂಬದವರ ಹೆಸರು ಅಲ್ಲಿನ ಪಟ್ಟಿಯಲ್ಲೂ ಇಲ್ಲ, ಇಲ್ಲಿನ ಪಟ್ಟಿಯಲ್ಲೂ ಇಲ್ಲ…, ನಮ್ದು ಸ್ವಂತ ಮನೆ ೫೦ ವರ್ಷಗಳಿಂದ ಅದೇ ಮನೇಲಿ ವಾಸ ಇದ್ದೇವೆ ನಮ್ಮ ಇಡೀ ಕುಟುಂಬದ ಹೆಸರು ಮತದಾರರ ಪಟ್ಟಿ ಯಿಂದ ನಾಪತ್ತೆಯಾಗಿದೆ. ನಾವೀಗ ಹೇಗೆ ವೋಟ್ ಮಾಡೋದು…, ಈ ರೀತಿಯ ವಾಗ್ವಾದ ಗಳು ಪ್ರತಿ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗಳ ಬಳಿ ಕಾಣುವುದು ಸಹಜ. ಮತದಾರರು ಗುರುತಿನ ಚೀಟಿ ಹಿಡಿದು ಆ ಬೂತ್‌ನಿಂದ ಈ ಬೂತ್‌ಗೆ ಎಡತಾಕುವ ದೃಶ್ಯ ಸಾಮಾನ್ಯ…
ಆದರೆ, ಇದೀಗ ದೇಶಾದ್ಯಂತ ಸದ್ದು ಮಾಡುತ್ತಾ ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯನ್ನು ೩ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ೧೬ ರಾಜ್ಯಗಳು ಮತ್ತು ೩ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆಯಲ್ಲೇ ಎಸ್‌ಐಆರ್ ಕೂಡ ಸೇರಿದೆ. ಈಗ ಎಚ್ಚರಿಕೆವಹಿಸದಿದ್ದರೆ ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮತದಾನದ ಹಕ್ಕು ಕಾಯ್ದುಕೊಳ್ಳಲು ಇದು ಸಕಾಲ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಂದರೇನು?: ಪ್ರಸ್ತುತ ಇರುವ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅದರಲ್ಲಿನ ತಪ್ಪುಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಎಸ್‌ಐಆರ್ ಎಂದು ಕರೆಯಲಾಗುತ್ತಿದೆ. ನಕಲಿ ಮತದಾರರನ್ನು ಪಟ್ಟಿಯಿಂದ ಕೈಬಿಡುವುದು, ಮೃತಪಟ್ಟಿರುವವರು, ಬೇರೆಡೆಗೆ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು ಹಾಗೂ ೨೦೨೬ರ ಅಕ್ಟೋಬರ್ ೧ಕ್ಕೆ ೧೮ವರ್ಷಗಳು ತುಂಬುವ ಯುವ ಮತದಾರರನ್ನು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸುವುದು ಈ ಪ್ರಕ್ರಿಯೆಯ ಮೂಲ ಉದ್ದೇಶವಾಗಿದೆ.
ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಹೇಗೆ?: ಬೂತ್‌ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಕುಟುಂಬದ ಸದಸ್ಯರ ಒಟ್ಟು ಸಂಖ್ಯೆ, ಮತದಾರರ ಗುರುತಿನ ಚೀಟಿ ವಿವರಗಳು, ಪ್ರಸ್ತುತ ವಾಸ ಹಾಗೂ ಗುರುತಿನ ಚೀಟಿಯಲ್ಲಿರುವ ವಿಳಾಸಗಳನ್ನು ತಾಳೆ ನೋಡುತ್ತಾರೆ. ಇದಲ್ಲದೆ ಮತದಾರರು ಸ್ವಯಂಪ್ರೇರಿತರಾಗಿ ಆನ್‌ಲೈನ್ ಮೂಲಕವೂ ತಮ್ಮ ವಿವರಗಳನ್ನು ಅಪ್‌ಡೇಟ್ ಮಾಡಲು ಅವಕಾಶವಿದೆ.
ದೇಶಾದ್ಯಂತ ನವೀಕರಿಸಿದ ಮತ್ತು ನಿಖರವಾದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಎಸ್ ಐಆರ್ ೩ನೇ ಹಂತದ ಈ ಪ್ರಕ್ರಿಯೆಯಲ್ಲಿ ೩.೯೪ ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), ೩.೪೨ ಲಕ್ಷ ಬೂತ್‌ಮಟ್ಟದ ಏಜೆಂಟ್‌ಗಳ ಸಹಾಯದಿಂದ ಪ್ರತಿ ಮನೆ ಮನೆಗೆ ತೆರಳಿ ೩೬.೭೩ ಕೋಟಿ ಮತದಾರರನ್ನು ಭೇಟಿ ಮಾಡಲಿದ್ದಾರೆ.
ಭಾರತ ಚುನಾವಣಾ ಆಯೋಗದ ಆದೇಶದಂತೆ ಜೂನ್ ೨೦ ರಿಂದ ಅಕ್ಟೋಬರ್ ೭ರವರೆಗೆ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯಲಿದೆ. ರಾಜ್ಯದ ೫.೫೫ ಕೋಟಿ ಮತದಾರರ ವಿಶೇಷ ಪರಿಷ್ಕರಣೆ ನಡೆಯಲಿದ್ದು, ಇದಕ್ಕಾಗಿ ೫೯,೦೫೦ ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಒ), ೫,೯೦೫ ಮೇಲ್ವಿಚಾರಕರು, ೩೩೬ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ೨೨೪ ಮತದಾರರ ನೋಂದಣಾಧೀಕಾರಿಗಳು, ೩೧ಡಿಇಒಗಳು, ೪ ಎಡಿಇಒಗಳನ್ನು ನಿಯೋಜನೆ ಮಾಡಲಾಗಿದೆ. ಎಸ್‌ಐಆರ್‌ಗೆ ಪೂರ್ವಭಾವಿಯಾಗಿ ಮತದಾರರ ವಿವರಗಳನ್ನು ಹೋಲಿಸಿ, ಖಚಿತಪಡಿಸಿಕೊಳ್ಳುವ ಮ್ಯಾಪಿಂಗ್ ಕೆಲಸ ಪ್ರಗತಿಯಲ್ಲಿದೆ.
ಮ್ಯಾಪಿಂಗ್ ಪ್ರಕ್ರಿಯೆ ಆಧಾರದಲ್ಲಿ ರಾಜ್ಯದ ೫.೫೫ ಕೋಟಿ ಮತದಾರರಿಗೆ ಗಣತಿ ನಮೂನೆಗಳ ಎರಡು ಅರ್ಜಿಗಳನ್ನು ನೀಡಲಾಗುತ್ತದೆ. ಮತದಾರರು ಎರಡೂ ಅರ್ಜಿಗಳನ್ನು ಭರ್ತಿ ಮಾಡಿ, ಒಂದನ್ನು ಬಿಎಲ್‌ಒಗಳಿಗೆ ನೀಡಬೇಕು,ಮತ್ತೊಂದನ್ನು ತಮ್ಮಲ್ಲಿ ಇರಿಸಿಕೊಳ್ಳಬೇಕು. ಆ ಎರಡೂ ಅರ್ಜಿಗಳಿಗೂ ಬಿಎಲ್‌ಒ ಮತ್ತು ಮತದಾರರು ಕಡ್ಡಾಯವಾಗಿ ಸಹಿ ಮಾಡಬೇಕು. ಬಿಎಲ್ ಒಗಳು ಕ್ಯೂಆರ್‌ಕೋಡ್ ಸಹಿತ ಭಾಗಶಃ ಮುದ್ರಿತ ಅರ್ಜಿಯನ್ನು ಮತದಾರರಿಗೆ ತಲುಪಿಸಿ, ಭರ್ತಿಮಾಡಿದ ಅರ್ಜಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುತ್ತಾರೆ.
ಇಷ್ಟಾಗಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋದರೆ ಈ ಅರ್ಜಿಯ ಆಧಾರದಲ್ಲೇ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರ ತಪ್ಪಾಗಿ ನಮೂದಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅದನ್ನು ಪರಿಶೀಲಿಸಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟುಹೋಗಿದ್ದರೆ ಜಿಲ್ಲಾಧಿಕಾರಿ ಹಂತದ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲೂ ನ್ಯಾಯ ಸಿಗದಿದ್ದರೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ನೋಟಿಸ್ ಜಾರಿ: ಸೂಕ್ತ ದಾಖಲಾತಿಗಳಿಲ್ಲದ, ಎರಡೂ ಕಡೆಗಳ ಪಟ್ಟಿಗಳಲ್ಲಿ ಹೆಸರಿರುವ ಮತದಾರರಿಗೆ ಬಿಎಲ್ ಒಗಳು ನೋಟಿಸ್ ಜಾರಿ ಮಾಡುತ್ತಾರೆ. ಈ ರೀತಿ ನೋಟಿಸ್ ಪಡೆದ ಮತದಾರರು ಸಮರ್ಪಕ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ದಾಖಲಾತಿ ಸಲ್ಲಿಸಲಾಗುತ್ತದೆಯೋ ಆ ಹೆಸರನ್ನು ಉಳಿಸಿಕೊಂಡು ದಾಖಲಾತಿ ಸಲ್ಲಿಸದ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರು ತಾನಾಗಿಯೇ ರದ್ದಾಗಲಿದೆ. ೨೦೦೨ರ ಮತದಾರರ ಪಟ್ಟಿಯಲ್ಲಿ ನೀಡಿದ ಮಾಹಿತಿಗೂ ಈಗ ನೀಡುವ ಮಾಹಿತಿಗೂ ತಾಳೆಯಾಗದೇ ಇದ್ದಾಗ ನೋಟಿಸ್ ನೀಡಲಾಗುತ್ತದೆ. ಹೀಗಾಗಿ ನೋಟಿಸ್‌ಗೆ ಹೆದರಬೇಕಿಲ್ಲ. ನಿಮ್ಮ ಬಳಿ ಸಮರ್ಪಕ ದಾಖಲೆಗಳಿದ್ದರೆ ಸರಿಪಡಿಸಿಕೊಳ್ಳಬಹುದಾಗಿದೆ.
ಮತದಾರರ ಪಟ್ಟಿಯಲ್ಲಿನ ಹಳೆಯ ಹೆಸರು ಹಾಗೂ ವಿಳಾಸದ ಪುರಾವೆಗಾಗಿ ಸಲ್ಲಿಸಬಹುದಾದ ದಾಖಲೆಗಳು:
* ಪಾಸ್‌ಪೋರ್ಟ್
* ಆಧಾರ್ ಕಾರ್ಡ್
* ಪಡಿತರ ಚೀಟಿ
* ಮತದಾರರ ಗುರುತಿನ ಚೀಟಿ
* ಡ್ರೈವಿಂಗ್ ಲೈಸನ್ಸ್
* ವಿದ್ಯುತ್ ಬಿಲ್ (೩ ತಿಂಗಳಿಗಿಂತ ಹಳೆಯದಲ್ಲದ)
* ದೂರವಾಣಿ ಬಿಲ್ (೩ ತಿಂಗಳಿಗಿಂತ ಹಳೆಯದಲ್ಲದ)
* ಗ್ಯಾಸ್ ಬಿಲ್ (೩ ತಿಂಗಳಿಗಿಂತ ಹಳೆಯದಲ್ಲದ)
* ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳ ಗುರುತಿನ ಚೀಟಿಗಳು
* ಪ್ಯಾನ್ ಕಾರ್ಡ್
* ಜನನ ಪ್ರಮಾಣಪತ್ರ
* ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ
* ಪೋಷಕರ ಗುರುತಿನ ಚೀಟಿ (ಅಪ್ರಾಪ್ತರಿಗೆ)
* ಬಾಡಿಗೆ ಕರಾರು ಪತ್ರ (ಮಾಲೀಕರ ಪ್ಯಾನ್ ಕಾರ್ಡ್ ಪ್ರತಿ ಸಹಿತ)
” ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಜೂನ್ ೨೦ರಿಂದ ಆರಂಭವಾಗಲಿದ್ದು,ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಪಾರದರ್ಶಕವಾಗಿ ಪರಿಷ್ಕರಣೆ ಮಾಡಲಾಗುವುದು.”
ವಿ.ಅನ್ಬುಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ
ಪುನೀತ್ ಮಡಿಕೇರಿ ೨೦೨೭ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಹಾಕಿ ಉತ್ಸವಕ್ಕೆ ಸಿದ್ಧತೆ; ಟರ್ಫ್, ಹೊನಲು ಬೆಳಕಿನ ಪಂದ್ಯಾವಳಿಗೆ ಚಿಂತನೆ ಮಡಿಕೇರಿ: ೨೬ನೇ…
ಮಂಜು ಕೋಟೆ ಮೇವು, ಕುಡಿಯುವ ನೀರಿಗಾಗಿ ಬರುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಎಚ್.ಡಿ.ಕೋಟೆ: ಬಿಸಿಲಿನ ತಾಪಮಾನದಿಂದ ಮೇವು ಮತ್ತು ಕುಡಿಯುವ…
೧೦೦ ಕಿ.ಮೀ.ಹೆಚ್‌ಡಿಪಿಇ ಪೈಪ್ ಅಳವಡಿಕೆ ಪ್ರಗತಿಯಲ್ಲಿ; ಕಾವೇರಿ ನೀರು ಪೂರೈಸಲು ನಗರಸಭೆ ಕ್ರಮ ಪ್ರಸಾದ್ ಲಕ್ಕೂರು ಚಾಮರಾಜನಗರ: ನಗರದಲ್ಲಿ…
ಮಾಸ್ಕೋ: ಉಕ್ರೇನ್ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಈ ವೈಮಾನಿಕ…
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…