ಟಿ.ವಿ.ರಾಜೇಶ್ವರ
‘ವಿಶೇಷ ಹೂಡಿಕೆ ಪ್ರದೇಶ’ ಜಾರಿ: ರಚನೆಯಾಗದ ಆಡಳಿತ ಮಂಡಳಿ
ತೆರಿಗೆ ಸಂಗ್ರಹ ಬಿಟ್ಟು ಉಳಿದಂತೆ ಕಾರ್ಯಸೂಚಿ ಜಾರಿಗೆ ಸರ್ಕಾರದ ನಿರಾಸಕ್ತಿ
ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಕೈಗಾರಿಕಾ ಪ್ರದೇಶ
ಸಮಸ್ಯೆಗಳಿಗೆ ಪ್ರಾಧಿಕಾರ ರಚನೆಯೊಂದೇ ಪರಿಹಾರ
೧೯೮೮ರಲ್ಲೇ ಚಿಗುರಿದ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರದ ಕನಸು
ಮೈಸೂರು: ಬೆಂಗಳೂರು ನಂತರ ದೊಡ್ಡ ನಗರವಾಗಿ ಬೆಳೆಯುತ್ತಿರುವ ಹಾಗೂ ಕೈಗಾರಿಕೋದ್ಯಮಿಗಳಿಗೆ ಆಕರ್ಷಕ ತಾಣವಾಗಿರುವ ಮೈಸೂರು ಜಿಲ್ಲೆ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಮೈಸೂರಿನಲ್ಲಿ ೧೦ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ಕೈಗಾರಿಕೆಗಳು ಸಂಕಷ್ಟಗಳನ್ನು ಎದುರಿಸುತ್ತಿವೆ.
ಕೈಗಾರಿಕಾ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಸ್ಥಳೀಯ ಸಂಸ್ಥೆಗಳು ಇದ್ದಾಗ್ಯೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದವು. ಇದಕ್ಕೆ ಅಧಿಕಾರಶಾಹಿ ಹಾಗೂ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಕಾರಣ. ಜೊತೆಗೆ ಇಲ್ಲಿನಸಮಸ್ಯೆಗಳು ಒಂದೊಂದು ಇಲಾಖೆಗೆ ಸಂಬಂಧಿಸಿದ್ದಾಗಿವೆ. ಹೀಗಾಗಿ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಇದಕ್ಕೆ ಪ್ರಾಽಕಾರ ರಚನೆಯೊಂದೇ ಪರಿಹಾರ ಎಂಬುದು ಕೈಗಾರಿಕೋದ್ಯಮಿಗಳ ಅಭಿಪ್ರಾಯವಾಗಿತ್ತು.
ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವ ಸರ್ಕಾರದ ಘೋಷಣೆ ೨ ದಶಕಗಳ ಹಿಂದೆಯೇ ಆಗಿತ್ತು. ಆದರೆ ಪ್ರಾಧಿಕಾರ ರಚನೆ ಕೈಬಿಟ್ಟ ಸರ್ಕಾರ ಇದೇ ಮಾದರಿಯಲ್ಲಿ ‘ವಿಶೇಷ ಹೂಡಿಕೆ ಪ್ರದೇಶ’ (ಎಸ್ಐಆರ್) ಎಂಬ ಹೆಸರಿನಲ್ಲಿ ಹೊಸ ಶಾಸನಬದ್ಧ ಸಂಸ್ಥೆಯನ್ನು ರಚನೆ ಮಾಡಿತು. ಇದು ಏ.೧ರಿಂದ ಅಸ್ತಿತ್ವಕ್ಕೆ ಬಂದಿದ್ದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಿಲ್ಲ. ಆಡಳಿತ ಮಂಡಳಿಗೆ ಅಧ್ಯಕ್ಷರು, ಸದಸ್ಯರ ನೇಮಕವೂ ಆಗಿಲ್ಲ.
ತನ್ನದೇ ಆಡಳಿತ ಮಂಡಳಿಯನ್ನು ಹೊಂದುವ ಮೂಲಕ ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಮೈಸೂರಿನಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವುದಾಗಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಲ್ಲದೆ, ಅದಕ್ಕಾಗಿ ೧೦೦ ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದರು.
ಆದರೆ ೨ ದಶಕಗಳು ಕಳೆದರೂ ಬಜೆಟ್‌ನಲ್ಲಿ ಮಾಡಿರುವ ಘೋಷಣೆಯನ್ನುಅನುಷ್ಠಾನಗೊಳಿಸಲು ನಂತರ ಬಂದ ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ.ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದರೂ ಇದಕ್ಕೆ ಗಮನ ಹರಿಸಿರಲಿಲ್ಲ. ಈ ಭಾಗದ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘ ಸಂಸ್ಥೆಗಳ ವಿಶೇಷ ಆಸಕ್ತಿಯಿಂದಾಗಿ ‘ಹೆಬ್ಬಾಳು ವಿಶೇಷ ಹೂಡಿಕೆ ಪ್ರದೇಶ’ ಅಸ್ತಿತ್ವಕ್ಕೆ ಬಂದಿತು.
ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರದ ಕನಸು ನಿನ್ನೆ – ಮೊನ್ನೆಯದಲ್ಲ. ೧೯೮೮ರಲ್ಲೇ ಇದು ರೂಪು ತಳೆದಿತ್ತು. ಐಎಎಸ್ ಅಧಿಕಾರಿ ಅರವಿಂದ್ ಜಾಧವ್ ಅವರು ಕೈಗಾರಿಕಾ ಇಲಾಖೆ ನಿರ್ದೇಶಕರಾಗಿದ್ದಾಗ ೧೯೮೮ರಲ್ಲಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಕುರಿತು ಮೊದಲ ಸಭೆ ನಡೆಸಿ ಅಂದಿನ ಎಸ್. ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಇದು ಕಾರ್ಯಗತಗೊಂಡಿರಲಿಲ್ಲ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಶೇಷ ಆಸಕ್ತಿ ವಹಿಸಿ ೨೦೦೩ರ ಬಜೆಟ್‌ನಲ್ಲಿ ಪ್ರಾಧಿಕಾರ ರಚನೆ ಕುರಿತು ಘೋಷಣೆ ಮಾಡಿದ್ದರು. ಜೊತೆಗೆ ಅದೇ ವರ್ಷ ರಾಜ್ಯ ಸರ್ಕಾರ ಜಾರಿಗೊಳಿಸಿದ ಕರ್ನಾಟಕ ಪೌರಸಭೆ ಕಾಯ್ದೆ ೧೯೬೪ಕ್ಕೆ ತಿದ್ದುಪಡಿ ಮಾಡಿ ಕೈಗಾರಿಕಾ ಪಟ್ಟಣ ಪ್ರಾಽಕಾರ ರಚನೆ ಮಾಡುವ ಗೆಜೆಟ್ ಅನ್ನು ಹೊರಡಿಸಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ೨೦೨೦-೨೦೨೫ರ ಕೈಗಾರಿಕಾ ನೀತಿ ರೂಪುಗೊಂಡರೆ, ೨೦೨೧-೨೦೨೨ರ ಆಯವ್ಯಯದಲ್ಲಿಯೂ ಮತ್ತೆ ಮೈಸೂರಿನಕೈಗಾರಿಕಾ ಪ್ರದೇಶಗಳನ್ನು ಒಳಗೊಂಡಂತೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವ ಪ್ರಸ್ತಾಪ ಮಾಡಲಾಗಿತ್ತು.
ಇದಕ್ಕೆ ಪೂರಕವಾಗಿ ಮೈಸೂರು ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆಯ ಅನುಮೋದನೆಯೊಂದಿಗೆ ಕೈಗಾರಿಕಾ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಈ ಕುರಿತುಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೂ ಪ್ರಾಽಕಾರ ಕುರಿತುಸರ್ಕಾರದಿಂದ ಸ್ಪಷ್ಟ ನಿರ್ಧಾರ ಪ್ರಕಟವಾಗಿರಲಿಲ್ಲ. ಮೂಲಸೌಕರ್ಯಗಳಿಂದ ವಂಚಿತ: ಕೈಗಾರಿಕೆಗಳಿಂದ ಬರುವ ದೊಡ್ಡ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸುವ ಸ್ಥಳೀಯ ಸಂಸ್ಥೆಗಳು ಆ ಹಣವನ್ನು ಕೈಗಾರಿಕಾ ಪ್ರದೇಶಗಳ ಬೆಳವಣಿಗೆಗೆ ಬಳಸದೆ ತನ್ನ ವ್ಯಾಪ್ತಿಯ ಬೇರೆ ಜನವಸತಿ ಇರುವ ಬಡಾವಣೆಗಳ ಅಭಿವೃದ್ಧಿಗೆ ವಿನಿಯೋಗಿಸಿಕೊಂಡು ಬರುತ್ತಿದ್ದವು. ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಗಳಿಗೆ ಗಮನ ಹರಿಸುತ್ತಿರಲಿಲ್ಲ. ಇದರಿಂದ ಕೈಗಾರಿಕಾ ಪ್ರದೇಶಗಳು ರಸ್ತೆ, ಚರಂಡಿ, ಬೀದಿ ದೀಪ, ನೀರು, ತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಲ್ಲದೆ ಸೊರಗಿವೆ. ಇದೀಗ ಹೆಬ್ಬಾಳು ವಿಶೇಷ ಹೂಡಿಕೆ ಪ್ರದೇಶ ಜಾರಿಯಿಂದ ‘ಕೈಗಾರಿಕಾ ಪಟ್ಟಣ ಪ್ರಾಧಿಕಾರ’ದ ಕಲ್ಪನೆಯಂತೆ ಯೋಜನೆಗಳು ರೂಪುಗೊಳ್ಳಲಿವೆ.
ವಿಶೇಷ ಹೂಡಿಕೆ ಪ್ರದೇಶ ರಚನೆಯಿಂದ ಏನು ಲಾಭ?
* ವಿಶೇಷ ಹೂಡಿಕೆ ಪ್ರದೇಶ ರಚನೆಯು ಕೈಗಾರಿಕೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಪೂರಕವಾಗಲಿದೆ. ಕೈಗಾರಿಕೆಗಳಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಶೇ.೩೦ರಷ್ಟು ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಉಳಿದ ಶೇ.೭೦ರಷ್ಟು ತೆರಿಗೆ ಹಣವನ್ನು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ.
* ಮೀಸಲಿರಿಸಿದ ಜಾಗದಲ್ಲಿ ಶಾಲಾ ಕಾಲೇಜುಗಳು, ಆರೋಗ್ಯ ಕೇಂದ್ರ, ವಾಣಿಜ್ಯ ಸಂಕೀರ್ಣಗಳು, ಉದ್ಯಾನವನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯೋಜನೆ ರೂಪಿಸಬಹುದು.
* ‘ಹೆಬ್ಬಾಳು ವಿಶೇಷ ಹೂಡಿಕೆ ಪ್ರದೇಶ’ಕ್ಕೆ ಇಬ್ಬರು ಕೈಗಾರಿಕೋದ್ಯಮಿಗಳು ನಾಮನಿರ್ದೇಶನಗೊಳ್ಳುವುದರಿಂದ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಅವಕಾಶವಿದೆ. ಹಿರಿಯ ಅಧಿಕಾರಿಯನ್ನು ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡುವುದರಿಂದ ಹುದ್ದೆಯಲ್ಲಿ ಇರುವವರು ಇದರ ನಿರ್ವಹಣೆಯ ಜವಾಬ್ದಾರಿ ಹೊರುತ್ತಾರೆ.
* ಇಂಜಿನಿಯರ್‌ಗಳು ಅಂದಾಜು ಪಟ್ಟಿ ತಯಾರಿಸಿ ಆಡಳಿತ ಮಂಡಳಿ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ಕಾಮಗಾರಿ ನಡೆಸಬಹುದು. ಹೀಗಾಗಿ ಇದು ಸ್ಥಳೀಯ ಸಂಸ್ಥೆಗಳಂತೆಯೇ ಕಾರ್ಯ ನಿರ್ವಹಿಸಿ ತಮ್ಮ ವ್ಯಾಪ್ತಿಯ ಸೌಕರ್ಯಗಳನ್ನು ತಾವೇ ಕಲ್ಪಿಸಿಕೊಳ್ಳಲು ನೆರವಾಗಲಿದೆ.
* ವಾಕ್ -ಟು -ವರ್ಕ್ ಎಂಬ ಪರಿಕಲ್ಪನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನೂಕಲ್ಪಿಸಿಕೊಡಬೇಕೆಂಬ ಯೋಜನೆ ರೂಪಿಸಬಹುದು.
ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…
ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…
ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…
ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…