ಕೆ.ಬಿ.ರಮೇಶನಾಯಕ
ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣ; ಕಾಮಗಾರಿಗೆ ಸಿದ್ಧತೆ
ಕಾಮಗಾರಿ ವಿಳಂಬ, ಹೆಚ್ಚುವರಿ ವೆಚ್ಚ ತಗ್ಗಿಸಲು ಚಿಂತನೆ
ಆರು ಪಥದ ರಸ್ತೆ ನಿರ್ಮಾಣಕ್ಕೆ ರೀ ಅಲೈನ್‌ಮೆಂಟ್
ಮೈಸೂರು: ದೇಶ-ವಿದೇಶಗಳ ಪ್ರವಾಸಿಗರು, ಉದ್ಯಮಿಗಳು ಮತ್ತು ಅಂತಾರಾಜ್ಯಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸಲು ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಬೇಕೆಂಬ ದಶಕಗಳ ಕನಸು ಕೊನೆಗೂ ನನಸಾಗುವ ಹಂತಕ್ಕೆ ಬಂದಿದ್ದು, ಏಕಕಾಲದಲ್ಲಿ ರನ್‌ವೇ ವಿಸ್ತರಣೆ, ಮೈಸೂರು-ನಂಜನಗೂಡು ನಡುವಿನ ಮಾರ್ಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೂಪಿಸಿರುವ ಮಾಸ್ಟರ್‌ಪ್ಲಾನ್‌ನಂತೆ ಕಾಮಗಾರಿ ಆರಂಭಕ್ಕೆ ತಯಾರಿ ನಡೆದಿದೆ.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳ ಉದ್ಯಮಿಗಳು ಹಾಗೂ ಪ್ರವಾಸಿಗರನ್ನು ಮೈಸೂರಿನತ್ತ ಆಕರ್ಷಿಸಲು ಮತ್ತು ನಂಜನಗೂಡು, ಅಡಕನಹಳ್ಳಿ, ತಾಂಡವಪುರ ಕೈಗಾರಿಕಾ ಪ್ರದೇಶಕ್ಕೆ ಬರುವ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ದೊಡ್ಡ ದೊಡ್ಡ ವಿಮಾನಗಳ ಹಾರಾಟದ ವ್ಯವಸ್ಥೆ ಮಾಡಬೇಕು ಎಂಬ ಕೂಗು ಮೇಲಿಂದ ಮೇಲೆ ಕೇಳಿಬಂದಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಈ ವ್ಯವಸ್ಥೆ ವಿಳಂಬವಾಗುತ್ತಲೇ ಇತ್ತು. ಕಳೆದ ಬಿಜೆಪಿ ಸರ್ಕಾರ ಭೂಸ್ವಾಧಿನ ಪ್ರಕ್ರಿಯೆಗೆ ೧೭೫ ಕೋಟಿ ರೂ. ನೀಡಿದ್ದರೆ, ಈಗಿನ ಸಿದ್ದರಾಮಯ್ಯ ಸರ್ಕಾರ ಉಳಿದ ಅನುದಾನವನ್ನು ನೀಡಿದ್ದರಿಂದಾಗಿ ೨೪೦ ಎಕರೆ ಭೂ ಸ್ವಾಧಿನ ಪ್ರಕ್ರಿಯೆ ಮುಗಿದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಭೂಮಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಇದರ ನಡುವೆ ಸ್ವಾಧಿನಪಡಿಸಿಕೊಂಡ ಭೂಮಿಯು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ದ ಸುಪರ್ದಿಗೆ ಸೇರುತ್ತಿದ್ದಂತೆಯೇ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
೨೦೪೭ರ ಅಂದಾಜಿನಂತೆ ೩,೨೦೦ ಮೀಟರ್ ರನ್‌ವೇ ಪ್ಲಾನ್: ಮೈಸೂರು ವಿಮಾನ ನಿಲ್ದಾಣದಲ್ಲಿ ಸದ್ಯ ೧,೭೪೦೩೦ ಮೀಟರ್ ರನ್‌ವೇ ಇದ್ದು, ಎಟಿಆರ್-೭೨ ಮಾದರಿಯ ವಿಮಾನಗಳು ಮಾತ್ರ ಹಾರಾಡುತ್ತಿವೆ. ಈಗ ರೂಪಿಸಿರುವ ಪ್ಲಾನ್‌ನಲ್ಲಿ ರನ್‌ವೇ ೨,೭೫೦೪೫ ಮೀಟರ್ ವಿಸ್ತರಣೆಯಾಗಲಿದೆ. ಈ ರನ್‌ವೇನಿಂದ ೩೨೦ ಆಸನಗಳ ಏರ್‌ಬಸ್, ೭೩೭ ಆಸನದ ಬೋಯಿಂಗ್ ವಿಮಾನಗಳೂ ಸೇರಿದಂತೆ ವಿವಿಧ ಮಾದರಿಯ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಲಿದೆ.
ಎರಡನೇ ಹಂತದಲ್ಲಿ ಅಂದರೆ ೨೦೪೭ಕ್ಕೆ ೩,೨೦೦ ಮೀಟರ್ ರನ್‌ವೇ ವಿಸ್ತರಿಸುವುದಕ್ಕೂ ಭೂಮಿಯನ್ನು ಕಾಯ್ದಿರಿಸಲಾಗಿದೆ. ರನ್‌ವೇ ವಿಸ್ತರಣೆ ಕಾಮಗಾರಿ ಮುಗಿದರೆ ಮೈಸೂರು ನಗರದಿಂದ ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಹೊಸದಿಲ್ಲಿ ಮೊದಲಾದ ನಗರಗಳಿಗೆ ನೇರವಾಗಿ ವಿಮಾನಯಾನ ಸೇವೆ ಒದಗಿಸಲಾಗುತ್ತದೆ. ಅಂತಾರಾಷ್ಟ್ರೀಯ ವಿಮಾನಗಳೂ ಮೈಸೂರು ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಹೋಗುವುದಕ್ಕೂ ಅವಕಾಶವಿರುವಂತೆ ಯೋಜನೆ ರೂಪಿಸಿರುವುದು ಕೈಗಾರಿಕಾ ವಲಯದಲ್ಲಿ ಸಂತಸ ಮೂಡಿಸಿದೆ.
ಮೈಸೂರು-ನಂಜನಗೂಡು ಮಾರ್ಗದಲ್ಲಿರುವ ಎಚ್‌ಟಿ ಮತ್ತು ಎಲ್‌ಟಿ ಮಾರ್ಗ(ವಿದ್ಯುತ್ ಮಾರ್ಗ)ವನ್ನು ಸ್ಥಳಾಂತರಿಸುವುದು, ಈಗಿರುವ ನೀರಾವರಿ ನಾಲೆಗಳನ್ನು ಬದಲಿ ಮಾರ್ಗದಲ್ಲಿ ಮರು ನಿರ್ಮಾಣ ಮಾಡುವುದು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಗ್ರಾಮೀಣ ರಸ್ತೆಗಳನ್ನು ಬದಲಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಽಕಾರವು ಈಗಿರುವ ಮೈಸೂರು ನಂಜನಗೂಡು ರಸ್ತೆಯಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಅಂಟಿಕೊಂಡಂತೆ ಇರುವ ಮಾರ್ಗವನ್ನು ಮುಚ್ಚಿ ಬೈಪಾಸ್ ರಸ್ತೆಯನ್ನು ಮಾಡಲು ರೀ ಅಲೈನ್‌ಮೆಂಟ್ ಪ್ಲಾನ್ ಮಾಡಿ ಅನುಮೋದನೆ ಪಡೆದುಕೊಂಡಿದೆ. ಅದರಂತೆ ಮೈಸೂರು ರಸ್ತೆಯಿಂದ ಹೊರಟು ಮರಸೆ, ಮಾಕನಹುಂಡಿ, ಚಿಕ್ಕೇಗೌಡನಹುಂಡಿ ಮಾರ್ಗವಾಗಿ ಆರು ಪಥದ ರಸ್ತೆಯನ್ನು ನಿರ್ಮಾಣ ಮಾಡಲಿದ್ದು, ಇದಕ್ಕಾಗಿ ಅಂದಾಜು ವೆಚ್ಚ ೮೦೦ ಕೋಟಿ ರೂ. ಅನುದಾನವನ್ನು ಎಚ್‌ಎಚ್‌ಎಐಗೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಭೂಮಿಗೆ ಬೆಲೆ ಹೆಚ್ಚಳ ಸಾಧ್ಯತೆ:
ವಿಮಾನ ನಿಲ್ದಾಣದ ರನ್‌ವೇಗಾಗಿ ಬೈಪಾಸ್ ರಸ್ತೆಯ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಕೊನೆಗೂ ಅಂತ್ಯವಾಗಿದ್ದು, ಮರಸೆ ಭಾಗದಿಂದ ಚಿಕ್ಕೇಗೌಡನಹುಂಡಿ ತನಕ ಮತ್ತೊಂದು ಬೈಪಾಸ್ ಹೈವೇ ನಿರ್ಮಾಣವಾದರೆ ಅಕ್ಕಪಕ್ಕದ ಭೂಮಿಗೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಎನ್‌ಎಚ್ ಹಾದು ಹೋಗುವ ಕಡೆಗಳಲ್ಲಿ ಈಗಾಗಲೇ ರಸ್ತೆಗೆ ಭೂ ಸ್ವಾಧಿನ ಕಾರ್ಯ ಮುಗಿದಿದೆ. ಮುಂದೆ ರಸ್ತೆಯ ಎಡ-ಬಲಭಾಗದಲ್ಲಿ ಹೋಟೆಲ್, ಪೆಟ್ರೋಲ್ ಬಂಕ್ ಮತ್ತಿತರ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುವ ಕಾರಣ ಒಂದಿಷ್ಟು ಬೆಲೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
” ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಅಗತ್ಯವಿರುವ ಭೂ ಸ್ವಾಧಿನ ಕಾರ್ಯ ಮುಗಿ ದಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರವಾಗಲಿದೆ. ಬೈಪಾಸ್ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಂದಾಜು ವೆಚ್ಚದಂತೆ ಅನುದಾನ ನೀಡಲು ಒಪ್ಪಿಗೆಯಾಗಿದೆ. ಶೀಘ್ರದಲ್ಲೇ ಎಲ್ಲ ಪ್ರಕ್ರಿಯೆಗಳು ಮುಗಿಯುವ ವಿಶ್ವಾಸವಿದೆ.”
-ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾಧಿಕಾರಿ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…
ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…
ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ…
ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…