ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅನತಿ ದೂರದಲ್ಲಿರುವ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಲರಾ ಪ್ರಕರಣಗಳು ತಗ್ಗಿದ್ದರೂ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ.
ಗ್ರಾಮದ ಇಬ್ಬರಿಗೆ ಕಾಲರಾ ಸೋಂಕು ದೃಢಪಟ್ಟಿದ್ದು ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವೈದ್ಯರು, ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಂ ಹೂಡಿ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ.
ಸಿದ್ದಲಿಂಗಪುರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಕಾಣಿಸಿಕೊಂಡು ಕಾಲರಾ ಭೀತಿ ಹರಡುತ್ತಿದ್ದಂತೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಎಲ್ಲರನ್ನೂ ಸಾಮೂಹಿಕ ತಪಾಸಣೆಗೆ ಒಳಪಡಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರು ಕೂಡ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಂತಿ, ಭೇದಿ ಕಾಣಿಸಿಕೊಳ್ಳದೆ ಇದ್ದರೂ ನಿಶ್ಯಕ್ತಿಗೆ ಸಿಲುಕದಂತೆ ಓಆರ್‌ಎಸ್ ಪ್ಯಾಕೆಟ್‌ಗಳನ್ನು ಗ್ರಾಮದಲ್ಲಿ ವಿತರಿಸಲಾಗಿದೆ.
ಟ್ಯಾಂಕರ್ ನೀರು ಪೂರೈಕೆ: ಕಲುಷಿತ ನೀರು ಸೇರಿರುವ ಬೋರ್‌ವೆಲ್‌ಗಳನ್ನು ಬಂದ್ ಮಾಡಿ ಟ್ಯಾಂಕರ್ ನೀರು ಪೂರೈಸಲಾಗಿದೆ. ಕೆಲವು ಬೋರ್‌ವೆಲ್‌ಗಳ ನೀರು ಸರಿಯಾಗಿದ್ದರೆ, ಹಲವು ಸರಿಯಾಗಿಲ್ಲ. ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎ.ಎಸ್. ರಂಜಿತ್ ಕುಮಾರ್ ಭೇಟಿ ನೀಡಿ ನೀರು ಸರಬರಾಜು ಆಗುವ ಪಾಯಿಂಟ್‌ಗಳನ್ನು ಪರಿಶೀಲಿಸಿದರು. ಗ್ರಾಮದಲ್ಲಿ ಕಾಲರಾ ಪ್ರಕರಣ ಕಾಣಿಸಿಕೊಂಡ ಮೇಲೆ ತಪಾಸಣೆ ಮಾಡುತ್ತಿದ್ದೇವೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ಹೇಳಿದರು.
ಗ್ರಾಮದಲ್ಲಿ ಏನೇನು ಸಮಸ್ಯೆ?:
ಸಿದ್ದಲಿಂಗಪುರ ಪ್ರಮುಖ ಗ್ರಾಮವಾದರೂ ಹಲವಾರು ಸಮಸ್ಯೆಗಳು ಕಾಡುತ್ತಿದೆ. ಮನೆಗಳ ತ್ಯಾಜ್ಯ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ನಿಂತ ನೀರಿನಿಂದ ಆರೋಗ್ಯ ಸಮಸ್ಯೆ ಬಾಧಿಸುತ್ತಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಓಣಿಯ ತುಂಬೆಲ್ಲ ದುರ್ಗಂಧ ಸೂಸುತ್ತಿರುವುದರಿಂದ ಹಲವು ಬಡಾವಣೆ ನಿವಾಸಿಗಳು ವಾಂತಿ, ಭೇದಿ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ.
ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಛತೆಗೆ ಗ್ರಹಣ ಹಿಡಿದಿದೆ. ರಸ್ತೆಯ ಬದಿಯಲ್ಲಿ ಕಸಕಡ್ಡಿಗಳ ರಾಶಿ ರಾರಾಜಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಪುರ ಗ್ರಾಮದ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲೇ ಇಲಾಖೆ ಸಿಬ್ಬಂದಿ ಜಾಗೃತರಾಗಿದ್ದಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ, ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ಮಾಡುವಂತಹ ಕೆಲಸ ನಡೆಯುತ್ತಿದೆ. ಯಾರಿಗಾದರೂ ರೋಗ ಲಕ್ಷಣಗಳು ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತೇವೆ.
-ಡಾ ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.
ಜಿಲ್ಲೆಯ ಕೆಲವೆಡೆ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿದ್ದ ಘಟನೆಗಳು ಜರುಗಿವೆ. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ.
-ರಾಮಕೃಷ್ಣ, ಸಿದ್ದಲಿಂಗಪುರ ಗ್ರಾಮಸ್ಥ
ಮಳೆಗಾಲ ಶುರುವಾಗಿರುವುದರಿಂದ ಮಳೆ ನೀರಿನೊಂದಿಗೆ ಹೂಳು ಸೇರಿಕೊಂಡು ಚರಂಡಿಗಳಲ್ಲಿ ಹೂಳು ತುಂಬಿದೆ. ಹೀಗಾಗಿ ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ತಕ್ಷಣವೇ ಅಧಿಕಾರಿಗಳು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು.
-ಕೆ.ರಾಮಕೃಷ್ಣ, ಸಿದ್ದಲಿಂಗಪುರ ಗ್ರಾಮಸ್ಥ
ಸಿದ್ದಲಿಂಗಪುರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರೊಂದಿಗೆ ಜಾಗೃತಿ ಮೂಡಿಸುವ ಕೆಲಸದೊಂದಿಗೆ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದೇವೆ. ಸಭೆ ಕರೆದು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಸ್ವಚ್ಛತೆಗೆ ಕ್ರಮ ಜರುಗಿಸಲಾಗುತ್ತದೆ.
-ಬಸವರಾಜು, ಸಿದ್ದಲಿಂಗಪುರ ಗ್ರಾಪಂ ಪಿಡಿಒ
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…
ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…